ಪ್ಯಾರಿಸ್: 2022ರ ಫಿಫಾ ವಿಶ್ವ ಕಪ್ ಚಾಂಪಿಯನ್ ಅರ್ಜೆಂಟೀನಾ ತಂಡದ ಸ್ಟಾರ್ ಆಟಗಾರ ಲಿಯೋನೆಲ್ ಮೆಸ್ಸಿ ಫ್ರಾನ್ಸ್‌ನ ಪ್ಯಾರಿಸ್ ಸೈಂಟ್-ಜರ್ಮೈನ್ (ಪಿಎಸ್‌ಜಿ) ಫುಟ್ಬಾಲ್ ಕ್ಲಬ್‌ನಲ್ಲಿಯೇ ಮುಂದುವರಿಯುವುದಾಗಿ ವರದಿಯಾಗಿದೆ.
ಮುಂದಿನ ಸೀಸನ್ ವೇಳೆ ಪ್ಯಾರಿಸ್ ಸೈಂಟ್ ಜರ್ಮೈನ್ ಫುಟ್ಬಾಲ್ ಕ್ಲಬ್ ಜತೆಗಿನ ಮೆಸ್ಸಿ ಒಪ್ಪಂದದ ಅವಧಿ ಅಂತ್ಯಗೊಳ್ಳಲಿದೆ. ಆದರೆ ಮೆಸ್ಸಿ ಇನ್ನೂ ಒಂದು ವರ್ಷ ಒಪ್ಪಂದವನ್ನು ವಿಸ್ತರಿಸಲಿದ್ದಾರೆಂದು ಹೇಳಲಾಗಿದೆ. ಈ ಮೂಲಕ ಫ್ರಾನ್ಸ್ ತಂಡದ ಚಾಂಪಿಯನ್ಸ್ ಲೀಗ್ ಗೆಲುವಿಗಾಗಿ ಶ್ರಮಿಸಲಿದ್ದಾರೆ.
ವಿಶ್ವ ಕಪ್ ಗೆಲುವಿನ ಬಳಿಕ ವಿಶ್ರಾಂತಿಯಲ್ಲಿರುವ ಮೆಸ್ಸಿ ತಮ್ಮ ವಿಶ್ರಾಂತಿಯ ಅವಧಿ ಮುಗಿದ ನಂತರ ಪ್ಯಾರಿಸ್ ಸೈಂಟ್ ಜರ್ಮೈನ್ ಅಧ್ಯಕ್ಷ ನಾಸೆರ್ ಅಲ್-ಖೆಲೈಪಿ ಮತ್ತು ಕ್ಲಬ್‌ನ ಇತರ ಉನ್ನತ ಅಧಿಕಾರಿಗಳೊಂದಿಗೆ ಚರ್ಚಿಸಲಿದ್ದಾರೆ ಎಂದು ತಿಳಿದು ಬಂದಿದೆ. ಬಾರ್ಸಿಲೋನಾ ಕ್ಲಬ್ ತೊರೆದ ಬಳಿಕ 2021 ರಲ್ಲಿ ಮೆಸ್ಸಿ ಎರಡು ಸೀಸನ್ಗೆ ಪಿಎಸ್‌ಜಿ ಕಬ್ಲ್ ಪರ ಆಡುವ ಒಪ್ಪಂದಕ್ಕೆ ಸಹಿ ಮಾಡಿದ್ದ್ದರು.
ಲಿಯೋನೆಲ್ ಮೆಸ್ಸಿ ಅವರು ವಿಶ್ವ ಕಪ್ ಫುಟ್ಬಾಲ್ ಟೂರ್ನಿ ಆರಂಭಕ್ಕೂ ಮುನ್ನ ಇದು ನನ್ನ ಅಂತಿಮ ವಿಶ್ವ ಕಪ್ ಕೂಟ ಇದಾದ ಬಳಿಕ ವಿದಾಯ ಘೋಷಿಸುವುದಾಗಿ ಹೇಳಿದ್ದರು. ಆದರೆ ಫೈನಲ್ನಲ್ಲಿ ಗೆದ್ದ ಬಳಿಕ ಇನ್ನು ಕೆಲ ವರ್ಷಗಳ ಕಾಲ ತಂಡಕ್ಕಾಗಿ ಆಡಲಿದ್ದೇನೆ ಎಂದು ಹೇಳಿ ತನ್ನ ನಿವೃತ್ತಿ ನಿರ್ಧಾರವನ್ನು ಬದಲಿಸಿದ್ದರು. ಇದೀಗ ಪಿಎಸ್‌ಜಿ ಜತೆಗಿನ ಒಪ್ಪಂದವನ್ನು ಮುಂದುವರಿಸುವ ಮೂಲಕ ಮತ್ತಷ್ಟು ವರ್ಷಗಳ ಕಾಲ ಫುಟ್ಬಾಲ್ ಆಡುವ ಸುಳಿವು ನೀಡಿದ್ದಾರೆ.
ಇದನ್ನೂ ಓದಿ | Fifa World Cup | ಕಾಂತಾರ ಕ್ಲೈಮ್ಯಾಕ್ಸ್ ರೀತಿ ಮೆಸ್ಸಿಯನ್ನು ಕೂಗಿ ಎಬ್ಬಿಸಿದ ಮರಡೋನಾ!