ಪ್ಯಾರಿಸ್: ಇತ್ತೀಚೆಗಷ್ಟೇ ಅರ್ಜೆಂಟೀನಾ ವಿಶ್ವ ಕಪ್ ವಿಜೇತ ತಂಡದ ನಾಯಕ ಲಿಯೋನೆಲ್ ಮೆಸ್ಸಿ(Lionel Messi) ಅವರು ಪ್ಯಾರಿಸ್ ಸೇಂಟ್ ಜರ್ಮನ್ ತಂಡ ತೊರೆದ ಬಳಿಕ ಸೌದಿ ಅರೇಬಿಯಾ ಕ್ಲಬ್ ಪರ ಆಡಲಿದ್ದಾರೆ ಎಂದು ವರದಿಯಾಗಿತ್ತು. ಆದರೆ ಇದೀಗ ಮೆಸ್ಸಿ ಅವರು ತಮ್ಮ ಹಳೆಯ ತಂಡವಾದ ಬಾರ್ಸಿಲೋನಾ(Barcelona) ಪರ ಮತ್ತೆ ಆಡುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. ಈ ವಿಚಾರವನ್ನು ಸ್ವತಃ ಬಾರ್ಸಿಲೋನಾ ಕ್ಲಬ್ ಅಧ್ಯಕ್ಷ ಜೋನ್ ಲಾಪೊರ್ಟ(Joan Laporta) ಹೇಳಿದ್ದಾರೆ.
ಕಣ್ಣೀರಿಡುತ್ತಲೇ ಬಾರ್ಸಿಲೋನಾ ತಂಡ ತೊರಿದಿದ್ದ ಮೆಸ್ಸಿ
ಬಾರ್ಸಿಲೋನಾ ಪರ 21 ವರ್ಷಗಳ ಸುದೀರ್ಘ ನಂಟು ಹೊಂದಿದ್ದ ಲಿಯೋನೆಲ್ ಮೆಸ್ಸಿ ಅವರು 2021ರಲ್ಲಿ ಈ ಕ್ಲಬ್ಗೆ ಕಣ್ಣೀರು ಸುರಿಸುತ್ತಲೇ ತಮ್ಮ ವಿದಾಯವನ್ನು ಸಾರಿದ್ದರು. “ನನ್ನ ಬದುಕನ್ನೇ ಇಲ್ಲಿ ಕಳೆದಿದ್ದೇನೆ. ಇದನ್ನು ಬಿಟ್ಟು ಹೋಗುವುದು ನನ್ನ ಬದುಕಿನಲ್ಲೇ ಅತ್ಯಂತ ಕಠಿಣ ನಿರ್ಧಾರ. ಇದಕ್ಕೆ ನಾನಿನ್ನೂ ಮಾನಸಿಕವಾಗಿ ಸಜ್ಜುಗೊಂಡಿಲ್ಲ’ ಎಂದು ಮೆಸ್ಸಿ ಕಣ್ಣೀರು ಸುರಿಸುತ್ತಲೇ ಹೇಳಿದ್ದರು. ಬಾರ್ಸಿಲೋನಾ ಪರ ಸರ್ವಾಧಿಕ 682 ಗೋಲು ಬಾರಿಸಿದ ದಾಖಲೆಯನ್ನು ಮೆಸ್ಸಿ ಹೊಂದಿದ್ದಾರೆ. ಭಾರೀ ನಷ್ಟದಲ್ಲಿರುವ ಈ ಕ್ಲಬ್ ಮೆಸ್ಸಿಯಂಥ ತಾರಾ ಆಟಗಾರನಿಗೆ ದೊಡ್ಡ ಮೊತ್ತ ನೀಡುವ ಸ್ಥಿತಿಯಲ್ಲಿಲ್ಲ ಎಂದು ಅಂದು ಸೂಕ್ಷ್ಮವಾಗಿ ತಿಳಿಸಿತ್ತು. ಇದಾಗ ಬಳಿಕ ಮೆಸ್ಸಿ ಅವರು ತಂಡ ತೊರಿದಿದ್ದರು. ಆದರೆ ಇದೀಗ ಮತ್ತೆ ಮೆಸ್ಸಿ ಅವರನ್ನು ಕ್ಲಬ್ಗೆ ಕರೆತರಲು ಕ್ಲಬ್ ಅಧ್ಯಕ್ಷ ಜೋನ್ ಲಾಪೊರ್ಟ ಸಿದ್ಧತೆ ನಡೆಸಿದ್ದಾರೆ.
ಈ ಬಗ್ಗೆ ಮಾತನಾಡಿದ ಕ್ಲಬ್ ಅಧ್ಯಕ್ಷ ಜೋನ್ ಲಾಪೊರ್ಟ, “ನಾವು ಮೆಸ್ಸಿ ಅವರನ್ನು ಮತ್ತೆ ತಂಡಕ್ಕೆ ಸೇರಿಸಿಕೊಳ್ಳಲು ಗರಿಷ್ಠ ಪ್ರಯತ್ನ ನಡೆಸುತ್ತಿದ್ದೇವೆ” ತಿಳಿಸಿದ್ದಾರೆ. ಮೆಸ್ಸಿ ಅವರು ಇತ್ತೀಚೆಗಷ್ಟೆ ಅನಧಿಕೃತವಾಗಿ, ತಂಡಕ್ಕೆ ತಿಳಿಸದೇ 2 ದಿನಗಳ ಕಾಲ ಸೌದಿ ಅರೇಬಿಯಕ್ಕೆ ತೆರಳಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ್ದ ಪಿಎಸ್‌ಜಿ ತಂಡ ಮೆಸ್ಸಿಗೆ ಎರಡು ವಾರಗಳ ನಿಷೇಧ ಹಾಕಲಾಗಿತ್ತು. ಇದರ ಬೆನ್ನಲ್ಲೇ ಮೆಸ್ಸಿ ಅವರು ಸೌದಿ ತಂಡಕ್ಕೆ ವಲಸೆ ಹೋಗುವ ಸಾಧ್ಯತೆಯಿದೆ ಎಂದು ಸುದ್ದಿ ಹಬ್ಬಿತ್ತು. ಆದರೆ ಇದೀಗ ಬಾರ್ಸಿಲೋನಾ ತಂಡಕ್ಕೆ ಸೇರಲಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ.
ಇದನ್ನೂ ಓದಿ Lionel Messi: ಸೌದಿ ಅರೇಬಿಯಾ ಕ್ಲಬ್ ಸೇರಲಿದ್ದಾರೆ ಲಿಯೋನೆಲ್ ಮೆಸ್ಸಿ!
ಮೆಸ್ಸಿ ಅವರ ಪ್ಯಾರಿಸ್ ಸೇಂಟ್-ಜರ್ಮೈನ್ ತಂಡದೊಂದಿಗಿನ ಒಪ್ಪಂದ ಮುಂದಿನ ತಿಂಗಳ ಕೊನೆಯಲ್ಲಿ ಮುಕ್ತಾಯಗೊಳ್ಳುತ್ತದೆ. ಇದಾದ ಬಳಿಕ ಅವರು ತಮ್ಮ ಒಪ್ಪಂದವನ್ನು ಮುಂದುವರಿಸಲು ಆಸಕ್ತಿ ತೋರಿಲ್ಲ. ಸದ್ಯ ಮುಂದಿನ ದಿನಗಳಲ್ಲಿ ಮೆಸ್ಸಿ ಯಾವ ತಂಡ ಸೇರಲಿದ್ದಾರೆ ಎಂದು ಕಾದು ನೋಡಬೇಕಿದೆ.