ದುಬೈ: ಅರ್ಜೆಂಟೀನಾ ತಂಡದ ನಾಯಕ, ಇಂಟರ್ ಮಿಯಾಮಿ ತಂಡದ ಆಟಗಾರ ಲಿಯೋನೆಲ್ ಮೆಸ್ಸಿ(Lionel Messi), ಅವರು ಮತ್ತೆ ನಿವೃತ್ತಿಯ ಸುಳಿವು(Lionel Messi Retirement) ನೀಡಿದ್ದಾರೆ. ಮುಂದಿನ ವರ್ಷ ಇಂಟರ್ ಮಿಯಾಮಿಯೊಂದಿಗಿನ(Inter Miami) ಒಪ್ಪಂದ ಮುಗಿಯುತ್ತಿದ್ದಂತೆ ಫುಟ್ಬಾಲ್ನಿಂದ ದೂರ ಸರಿಯುವ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ.
“ಸದ್ಯದ ಮಟ್ಟಿಗೆ, ನನ್ನ ಪಾಲಿಗೆ ನಾನಾಡುತ್ತಿರುವ ಕೊನೆಯ ಕ್ಲಬ್ ಇದಾಗಿರಲಿದೆ” ಎಂದು ಹೇಳುವ ಮೂಲಕ ಮೆಸ್ಸಿ ತಮ್ಮ ನಿವೃತ್ತಿಯ ಸುಳಿವನ್ನು ಬಿಟ್ಟುಕೊಟ್ಟಿದ್ದಾರೆ. ಇದೇ ಜೂನ್ ಜೂನ್ 24ರಂದು ಮೆಸ್ಸಿ 37ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲಿದ್ದಾರೆ.
ಕತಾರ್ ಫಿಫಾ ವಿಶ್ವಕಪ್ ಬಳಿಕ ನಿವೃತ್ತಿ ನೀಡುವುದಾಗಿ ಮೆಸ್ಸಿ ಘೋಷಿಸಿದ್ದರು. ಆದರೆ ವಿಶ್ವ ಕಪ್ ಗೆದ್ದ ಬಳಿಕ ತಮ್ಮ ನಿರ್ಧಾರವನ್ನು ಬದಲಿಸಿ ಸದ್ಯ ನಿವೃತ್ತಿಯಾಗುವ ಯೋಚನೆ ನನ್ನ ಮುಂದಿಲ್ಲ, ಆರ್ಜೆಂಟೀನಾ ಪರ ಒಬ್ಬ ಚಾಂಪಿಯನ್ ಆಟಗಾರನಂತೆ ಇನ್ನೂ ಆಟ ಮುಂದು ವರಿಸುವ ಯೋಚನೆ ನನ್ನ ಮುಂದಿದೆ ಎಂದು ಹೇಳಿದ್ದರು. ಆದರೆ ಈ ಬಾರಿ ಲಿಯೋನೆಲ್ ಮೆಸ್ಸಿ ನಿವೃತ್ತಿ ಘೋಷಿಸುವುದು ಪಕ್ಕಾ ಎಂಬತ್ತಿದೆ.
2004ರಿಂದ 2021ರ ವರೆಗೂ ಬಾರ್ಸಿಲೋನಾ ಫುಟ್ಬಾಲ್ ಕ್ಲಬ್ ಪ್ರತಿನಿಧಿಸಿದ್ದ ಲಿಯೋನೆಲ್ ಮೆಸ್ಸಿ, 2021ರಿಂದ 2023ರ ವರೆಗೆ ಪ್ಯಾರಿಸ್ ಸೈಂಟ್ ಜರ್ಮೈನ್ ತಂಡದ ಪರ ಆಡಿದ್ದರು. ಇದಾದ ಬಳಿಕ ಕಳೆದ ವರ್ಷ ಇಂಟರ್ ಮಿಯಾಮಿ ಕ್ಲಬ್ಗೆ 2 ವರ್ಷಗಳ ಅವಧಿಯ ಒಪ್ಪಂದಕ್ಕೆ ತಂಡ ಸೇರಿದ್ದರು.
ಇದನ್ನೂ ಓದಿ Lionel Messi: ಲಿಯೋನೆಲ್ ಮೆಸ್ಸಿಯ ಜೆರ್ಸಿ ನಿವೃತ್ತಿ ಮಾಡಲು ಎಎಫ್‌ಎ ನಿರ್ಧಾರ!
ವಿಶ್ವಕಪ್ ಗೆದ್ದ ಬಳಿಕ ಮೆಸ್ಸಿ ಅವರು, “ಫುಟ್ಬಾಲ್ ಆರಂಭಿಸಿದಾಗ ನಾನು ಈ ಮಟ್ಟದ ಸಾಧನೆ ತೋರುತ್ತೇನೆ ಎಂದು ಎಂದಿಗೂ ನಾನು ಊಹಿಸಿರಲಿಲ್ಲ. ಫುಟ್ಬಾಲ್ ವೃತ್ತಿಜೀವನದಲ್ಲಿದ್ದ ಒಂದೇ ಕೊರಗು ವಿಶ್ವ ಕಪ್ ಗೆಲ್ಲುವುದಾಗಿತ್ತು. ಇದೂ ಕೂಡ ನೆರವೇರಿದೆ. ಎಲ್ಲ ಪ್ರತಿಷ್ಠಿತ ಟೂರ್ನಿಗಳಲ್ಲಿಯೂ ಕಪ್ ಗೆದ್ದಿರುವ ನನಗೆ ಇನ್ನೇನು ಆಸೆಗಳು ಉಳಿದಿಲ್ಲ” ಎಂದು ಹೇಳಿದ್ದರು.
ಲಿಯೋನೆಲ್ ಮೆಸ್ಸಿ(Lionel Messi) ಅವರಿಗೆ ಅರ್ಜೆಂಟೀನಾದ ಫುಟ್ಬಾಲ್ ಸಂಸ್ಥೆ (ಎಎಫ್‌ಎ) ವಿಶೇಷ ಗೌರವ ಸೂಚಿಸಲು ನಿರ್ಧಾರವೊಂದನ್ನು ಕೈಗೊಂಡಿದೆ. ಮೆಸ್ಸಿ ವಿದಾಯದ ಬಳಿಕ ಅವರ ಜೆರ್ಸಿ ನಂ.10 ಕ್ಕೂ ನಿವೃತ್ತಿ ಘೋಷಿಸಲು ಮುಂದಾಗಿದೆ.
‘ಮೆಸ್ಸಿಯ ಗೌರವಾರ್ಥವಾಗಿ ನಾವು ಅವರೊಂದಿಗೆ ಅವರ ಜೆರ್ಸಿಗೂ ವಿದಾಯ ಹೇಳುತ್ತೇವೆ. ಹೊಸದಾಗಿ ತಂಡಕ್ಕೆ ಸೇರುವ ಯುವ ಆಟಗಾರರಿಗೆ 10ನೇ ಸಂಖ್ಯೆಯ ಜೆರ್ಸಿಯನ್ನು ನೀಡಲಾಗುವುದಿಲ್ಲ. ಇದು ಲೆಜೆಂಡರಿ ಫುಟ್ಬಾಲ್ ಆಟಗಾರ ಮೆಸ್ಸಿಗಾಗಿ ನಾವು ಮಾಡಬಹುದಾದ ಚಿಕ್ಕ ಕೊಡುಗೆ” ಎಂದು ಎಎಫ್‌ಎ ಅಧ್ಯಕ್ಷ ಕ್ಲಾಡಿಯೊ ತಾಪಿಯಾ ಕೆಲ ತಿಂಗಳುಗಳ ಹಿಂದೆ ಹೇಳಿದ್ದರು. ಅರ್ಜೆಂಟೀನಾದ ದಿಗ್ಗಜ ಆಟಗಾರ ಡಿಯಾಗೋ ಮರಡೋನಾಗೂ ಸಗದಂತಹ ಮನ್ನಣೆ ಮೆಸ್ಸಿಗೆ ಸಿಗುವ ನಿರೀಕ್ಷೆ ಇದೆ. ಮರಡೋನಾ ಅವರ ಜೆರ್ಸಿಗೂ ವಿದಾಯದ ಗೌರವ ಸೂಚಿಸಲು ಅರ್ಜೆಂಟೀನಾ ಫುಟ್ಬಾಲ್ ಸಂಸ್ಥೆ ನಿರ್ಧರಿಸಿತ್ತು. ಆದರೆ ಅರ್ಜೆಂಟೀನಾದ ಪ್ರಸ್ತಾಪವನ್ನು ಅಂತಾರಾಷ್ಟ್ರೀಯ ಫುಟ್ಬಾಲ್ ಒಕ್ಕೂಟ ತಿರಸ್ಕರಿಸಿತ್ತು.