ದೋಹಾ : ಅರ್ಜೆಂಟೀನಾ ತಂಡ ಫಿಫಾ ಫುಟ್ಬಾಲ್ ವಿಶ್ವ ಕಪ್ (FIFA World Cup) ಗೆದ್ದಿದ್ದು, ನಾಯಕ ಲಿಯೋನೆಲ್ ಮೆಸ್ಸಿಗೆ ವಿದಾಯದ ಟ್ರೋಫಿ ಎಂದೇ ಹೇಳಲಾಗುತ್ತಿತ್ತು. ಆದರೆ, ಫುಟ್ಬಾಲ್ ಸ್ಟಾರ್ ನಾನು ವಿದಾಯ ಹೇಳಿಲ್ಲ. ಇನ್ನೂ ಆಡುತ್ತೇನೆ ಎಂಬುದಾಗಿ ಹೇಳಿದ್ದಾರೆ. ಇದು ಅವರ ಅಭಿಮಾನಿಗಳ ಪಾಲಿಗೆ ಖುಷಿಯ ವಿಚಾರ. ಹಾಗಾದರೆ ಅರ್ಜೆಂಟೀನಾ ತಂಡದ ನಾಯಕ ನಿರ್ಧಾರ ಬದಲಿಸಲು ಕಾರಣವೇನು? ವಿಶ್ವ ಗೆದ್ದ ಖುಷಿಯಲ್ಲಿ ಈ ರೀತಿ ಹೇಳಿದರೇ? ಖಂಡಿತವಾಗಿಯೂ ಇಲ್ಲ.
ವಾಸ್ತವದಲ್ಲಿ ಲಿಯೋನೆಲ್ ಮೆಸ್ಸಿ ರಾಷ್ಟ್ರೀಯ ತಂಡಕ್ಕೆ ವಿದಾಯ ಹೇಳುತ್ತೇನೆ ಎಂದು ಎಲ್ಲೂ ಘೋಷಿಸಿರಲಿಲ್ಲ. ಬದಲಾಗಿ ಅವರು ಇದು ನನ್ನ ಕೊನೇಯ ವಿಶ್ವ ಕಪ್ ಆಗಿರಬಹುದು ಎಂಬುದಾಗಿ ಹೇಳಿದ್ದರು. ನಾಲ್ಕನೇ ವಿಶ್ವ ಕಪ್ ಆಡುತ್ತಿದ್ದ ಅವರಿಗೆ ಇನ್ನೊಂದು ಟೂರ್ನಿಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗದೇ ಹೋಗಬಹುದು ಎಂದು ಅನಿಸಿತ್ತು. ಅದಕ್ಕಾಗಿ ಅವರು ಮುಂದಿನ ವಿಶ್ವ ಕಪ್ಗೆ ನನ್ನ ಲಭ್ಯತೆ ಅನುಮಾನ ಎಂಬರ್ಥದಲ್ಲಿ ಹೇಳಿದ್ದರು. ಒಟ್ಟಿನಲ್ಲಿ ಅವರು ನಿರ್ಧಾರ ಬದಲಿಸಿದ್ದಾರೆ ಎಂದು ಹೇಳುವುದಕ್ಕಿಂತ, ನಿವೃತ್ತಿ ಘೋಷಣೆ ಮಾಡಿಲ್ಲ ಎಂದು ಹೇಳುವುದೇ ಸರಿ.
ಲಿಯೋನೆಲ್ ಮೆಸ್ಸಿಗೆ ಈಗ 34 ವರ್ಷ. ಮುಂದಿನ ವಿಶ್ವ ಕಪ್ಗೆ ಇನ್ನೂ ನಾಲ್ಕು ವರ್ಷ ಕಾಯಬೇಕು. ಅಷ್ಟರಲ್ಲಿ ಅವರಿಗೆ 39 ವರ್ಷವಾಗುತ್ತದೆ. ಆಧುನಿಕ ಕ್ರೀಡಾ ಜಗತ್ತಿನ ತೀವ್ರತೆಗೆ 39ನೇ ವರ್ಷದಲ್ಲಿ ಫಿಟ್ನೆಸ್ ಕಾಪಾಡಿಕೊಳ್ಳುವುದು ಕಷ್ಟ. ಹೀಗಾಗಿ ಅವರು ಮುಂದಿನ ವಿಶ್ವ ಕಪ್ ಆಡುವುದಿಲ್ಲ ಎಂಬ ಅರ್ಥದಲ್ಲಿ ಮಾತನಾಡಿದ್ದರು. ಒಂದು ವೇಳೆ ಅರ್ಜೆಂಟೀನಾ ವಿಶ್ವ ಕಪ್ ಗೆಲ್ಲದೇ ಹೋಗಿದ್ದರೆ ಅವರು ನಿರಾಸೆಯಲ್ಲಿ ವಿದಾಯ ಹೇಳುತ್ತಿದ್ದರು. ಆದರೀಗ ಟ್ರೋಫಿ ಗೆದ್ದಿದ್ದಾರೆ. ದೇಶದ ಜನರ ಅಭಿಮಾನ ಗಿಟ್ಟಿಸಿದ್ದಾರೆ. ಇನ್ನೊಂದಿಷ್ಟು ವರ್ಷ ಆಡಿದರೆ ಏನೂ ಆಗುವುದಿಲ್ಲ. ಹೀಗಾಗಿ ಅವರು ತಮ್ಮ ನಿರ್ಧಾರವನ್ನು ಹೇಳಿದ್ದಾರೆ.
ಇಲ್ಲ ಇನ್ನೂ ನಿವೃತ್ತಿ ಹೇಳಿಲ್ಲ. ನಾನು ಅರ್ಜೆಂಟೀನಾ ರಾಷ್ಟ್ರೀಯ ತಂಡದ ಪರವಾಗಿ ಆಡುತ್ತೇನೆ. ಚಾಂಪಿಯನ್ ಆಗಿ ಆಟ ಮುಂದುವರಿಸುತ್ತೇನೆ ಎಂಬುದಾಗಿ ಅವರು ಹೇಳಿದ್ದಾರೆ.
ಇದನ್ನೂ ಓದಿ | FIFA World Cup | ಆಹಾ! ಎಂಥ ‘ಚೆಂದಾ’ಟ!! ಮೆಸ್ಸಿ ಮ್ಯಾಜಿಕ್, ಅರ್ಜೆಂಟೀನಾಗೆ ವಿಶ್ವಕಪ್ ಕಿರೀಟ