ಲಖನೌ: ಲಕ್ನೊ ಸೂಪರ್ ಜೈಂಟ್ಸ್ ತಂಡದ ತಂಡದ ನಾಯಕ ಕೆ. ಎಲ್ ರಾಹುಲ್ ಹಾಲಿ ಆವೃತ್ತಿಯ ಐಪಿಎಲ್ನಲ್ಲಿ (IPL 2023) ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿಲ್ಲ. ಈ ಬಗ್ಗೆ ಟೀಕೆಗಳು ವ್ಯಕ್ತಗೊಳ್ಳುತ್ತಿವೆ. ಆದಾಗ್ಯೂ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಅವರು 55 ಎಸೆತಗಳಲ್ಲಿ 74 ರನ್ ಬಾರಿಸಿ ಏಕಾಂಗಿ ಹೋರಾಟ ನಡೆಸಿದ್ದರು. ಈ ಪಂದ್ಯದಲ್ಲೂ ಅವರು ಸ್ಟ್ರೈಕ್ ರೇಟ್ ಹೇಳುವ ಮಟ್ಟಕ್ಕೂ ಇರಲಿಲ್ಲ. ಈ ಹಿನ್ನೆಲೆಯಲ್ಲಿ ಮಾತನಾಡಿದ ಲಕ್ನೊ ಸೂಪರ್ ಜೈಂಟ್ಸ್ ತಂಡದ ಫೀಲ್ಡಿಂಗ್ ಕೋಚ್ ಜಾಂಟಿ ರೋಡ್ಸ್, ನಾಯಕತ್ವದಿಂದ ರಾಹುಲ್ ಪ್ರದರ್ಶನಕ್ಕೆ ಅಡಚಣೆಯಾಗಿಲ್ಲ ಎಂದು ಹೇಳಿದ್ದಾರೆ.
ಕೆ. ಎಲ್ ರಾಹುಲ್ ಲಕ್ನೊ ಸೂಪರ್ ಜೈಂಟ್ಸ್ ತಂಡಕ್ಕೆ 2022ರಲ್ಲಿ ನಾಯಕರಾಗಿದ್ದರು. ಉದ್ಘಾಟನಾ ವರ್ಷದಲ್ಲಿ ಅವರು ತಂಡವನ್ನು ಪ್ಲೇಆಫ್ ಹಂತಕ್ಕೆ ಕೊಂಡೊಯ್ದಿದ್ದರು. ಕಳೆದ ವರ್ಷ ಅವರು ಉತ್ತಮ ಬ್ಯಾಟಿಂಗ್ ಪ್ರದರ್ಶನವನ್ನೂ ನೀಡಿದ್ದರು. ತಂಡದ ಗೆಲುವುಗಳಿಗೆ ಅವರ ಬ್ಯಾಟಿಂಗ್ ಕೂಡ ನೆರವು ಕೊಟ್ಟಿತ್ತು. ಆದರೆ, ಹಾಲಿ ಆವೃತ್ತಿಯಲ್ಲಿ ಮಿತಿ ಮೀರಿದ ಎಚ್ಚರಿಕೆಯಲ್ಲಿ ಆಡುತ್ತಿರುವ ಅವರ ಬ್ಯಾಟ್ನಿಂದ ರನ್ಗಳು ಹೊರಹೊಮ್ಮುತ್ತಿಲ್ಲ. ಹೀಗಾಗಿ ನಾಯಕತ್ವವೇ ಅವರಿಗೆ ಹೊರೆಯಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಈ ವಾದವನ್ನು ಜಾಂಟಿ ರೋಡ್ಸ್ ನಿರಾಕರಿಸಿದ್ದಾರೆ. ನಾಯಕ ಅಂದರೆ ತಂಡದ ಉತ್ತಮ ಪ್ರದರ್ಶನಕ್ಕೆ ಮುಂದಾಳತ್ವ ವಹಿಸುವವರು. ಅವರು ಯಾವತ್ತೂ ಯಶಸ್ಸು ಕಾಣುತ್ತಿರಬೇಕು. ಅಂತೆಯೇ ರಾಹುಲ್ ಕೂಡ ಈ ಹಿಂದಿನ ಎಲ್ಲ ಐಪಿಎಲ್ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು. ಹಾಗೆಂದು ಈ ಬಾರಿ ಅವರಿಗೆ ನಾಯಕತ್ವದ ಹೊರೆ ಬಿದ್ದಿಲ್ಲ. ಬಲಿಷ್ಠ ಬ್ಯಾಟರ್ಗಳು ಅನೇಕ ಬಾರಿ ನಾಯಕತ್ವವನ್ನು ಹೊತ್ತುಕೊಳ್ಳುವಲ್ಲಿ ವೈಫಲ್ಯ ಕಂಡಿದ್ದಾರೆ. ಆದರೆ ರಾಹುಲ್ ಉತ್ತಮವಾಗಿ ತಂಡವನ್ನು ನಿರ್ವಹಣೆ ಮಾಡುತ್ತಿದ್ದು ನೋಡಲು ಖುಷಿಯಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ನಾಯಕ ಉತ್ತಮ ರೀತಿಯಲ್ಲಿ ರನ್ ಗಳಿಸುತ್ತಿರುವಾಗ, ಅವನು ಆಡುವ ರೀತಿ ಇತರರಿಗೆ ಮಾದರಿ ಎನಿಸುತ್ತದೆ. ಅದೇ ರೀತಿ ರಾಹುಲ್ ಬಾರಿಸಿರುವ ಅರ್ಧ ಶತಕ ಇತರ ಬ್ಯಾಟರ್ಗಳಿಗೆ ಪ್ರೇರಣೆ ನೀಡಿದೆ. ರಾಹುಲ್ ನೆಟ್ಸ್‌ನಲ್ಲಿ ಅಮೋಘವಾಗಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಅಂತೆಯೇ ಸದ್ಯದಲ್ಲಿಯೇ ಶತಕ ಬಾರಿಸಲಿದ್ದಾರೆ ಎಂದು ಹೇಳಿದರು.
ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಏನಾಯಿತು?
ಬೌಲರ್ಗಳ ಪರಾಕ್ರಮ ಹಾಗೂ ಸಿಕಂದರ್ ರಾಜಾ (57) ಅವರ ಅರ್ಧ ಶತಕದ ನೆರವು ಪಡೆದ ಪಂಜಾಬ್ ಕಿಂಗ್ಸ್ ತಂಡ ಐಪಿಎಲ್ನ 21ನೇ ಪಂದ್ಯದಲ್ಲಿ ಲಕ್ನೊ ಸೂಪರ್ ಜೈಂಟ್ಸ್ ವಿರುದ್ಧ 2 ವಿಕೆಟ್ ವಿಜಯ ಸಾಧಿಸಿದೆ. ಇದರೊಂದಿಗೆ ಕಳೆದ ಎರಡು ಪಂದ್ಯಗಳ ಸೋಲಿನ ಬಳಿಕ ಪಂಜಾಬ್ ತಂಡ ಗೆಲುವಿನ ಹಳಿಗೆ ಮರಳಿತು. ಅತ್ತ ಹಿಂದಿನ ಪಂದ್ಯದಲ್ಲಿ ಆರ್ಸಿಬಿ ವಿರುದ್ಧ ಕೊನೇ ಎಸೆತದಲ್ಲಿ ಗೆಲುವು ಪಡೆದಿದ್ದ ಲಕ್ನೊ ತಂಡ, ತವರಿನ ಮೈದಾನದಲ್ಲಿ ಸೋಲು ನಿರಾಸೆ ಎದುರಿಸಿತು. ಕಾಯಂ ನಾಯಕ ಶಿಖರ್ ಧವನ್ ಅನುಪಸ್ಥಿತಿಯಲ್ಲಿ ತಂಡವನ್ನು ಮುನ್ನಡೆಸಿದ್ದ ಸ್ಯಾಮ್ ಕರ್ರನ್ ಗೆಲುವಿನ ದಡ ಮುಟ್ಟಿಸಿ ಸಂಭ್ರಮಿಸಿದರು.
ಭಾರತರತ್ನ ಅಟಲ್ಬಿಹಾರಿ ವಾಜಪೇಯಿ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ ಹಣಾಹಣಿಯಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಕೆ. ಎಲ್ ರಾಹುಲ್ ನೇತೃತ್ವದ ಲಖನೌ ಸೂಪರ್ ಜೈಂಟ್ಸ್ ತಂಡ ನಿಗದಿತ 20 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 159 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಪಂಜಾಬ್ ಕಿಂಗ್ಸ್ ಬಳಗ 19.3 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 161 ರನ್ ಬಾರಿಸಿ ಜಯ ಸಾಧಿಸಿತು.