ಮೊಹಾಲಿ: ಪಂಜಾಬ್ ಕಿಂಗ್ಸ್ ಹಾಗೂ ಲಕ್ನೊ ಸೂಪರ್ ಜಯಂಟ್ಸ್ ತಂಡಗಳ ನಡುವೆ ಐಪಿಎಲ್ 16ನೇ ಅವೃತ್ತಿಯ 38ನೇ ಪಂದ್ಯ ನಡೆಯಲಿದೆ. ಬಲಿಷ್ಠ ಲಕ್ನೊ ಸೂಪರ್ ಜಯಂಟ್ಸ್ಗೆ ಈ ಪಂದ್ಯವನ್ನು ವಶಪಡಿಸಿಕೊಳ್ಳುವ ಮೂಲಕ ಗೆಲುವಿನ ಹಳಿಗೆ ಮರಳುವ ತವಕವಾದರೆ, ಪಂಜಾಬ್ ಕಿಂಗ್ಸ್ ತಂಡಕ್ಕೆ ಮತ್ತೊಂದು ಅಬ್ಬರದ ಪ್ರದರ್ಶನ ನೀಡುವ ಮೂಲಕ ಅಂಕಪಟ್ಟಿಯಲ್ಲಿ ಮೇಲಕ್ಕೇರುವ ಉದ್ದೇಶವಿದೆ. ಮೊಹಾಲಿಯ ಐ.ಎಸ್ ಬಿಂದ್ರಾ ಕ್ರೀಡಾಂಗಣದಲ್ಲಿ ಸಂಜೆ 7.30ಕ್ಕೆ ಈ ಪಂದ್ಯ ನಡೆಯಲಿದೆ.
ಗುಜರಾತ್ ಟೈಟನ್ಸ್ ವಿರುದ್ಧದ ಪಂದ್ಯದಲ್ಲಿ ಲಕ್ನೊ ತಂಡ ಏಳು ರನ್ಗಳ ವಿರೋಚಿತ ಸೋಲು ಎದುರಿಸಿತ್ತು. ಹೀಗಾಗಿ ಪ್ಲೇಆಫ್ ಹಾದಿಯಲ್ಲಿ ಉತ್ತಮ ಹೆಜ್ಜೆ ಇಡಬೇಕಾದರೆ ಈ ಪಂದ್ಯದಲ್ಲಿ ಗೆಲುವು ಸಾಧಿಸಬೇಕಾಗಿದೆ. ಮುಂಬೈ ಇಂಡಿಯನ್ಸ್ ವಿರುದ್ಧ ಸ್ಫೋಟಕ ಪ್ರದರ್ಶನ ನೀಡಿದ್ದ ಸ್ಯಾಮ್ ಕರ್ರನ್ ಮುಂದಾಳತ್ವದ ಪಂಜಾಬ್ ಕಿಂಗ್ಸ್ 13 ರನ್ ಗಳ ಗೆಲುವು ಸಾಧಿಸಿತ್ತು. ಏತನ್ಮಧ್ಯೆ, ಹಾಲಿ ಆವೃತ್ತಿಯ ಐಪಿಎಲ್ನ ಮೊದಲ ಚರಣದಲ್ಲಿ ಪಂಜಾಬ್ ಕಿಂಗ್ಸ್ ತಂಡ ಲಕ್ನೊ ವಿರುದ್ಧ 2 ವಿಕೆಟ್ಗಳ ವಿಜಯ ಸಾಧಿಸಿತ್ತು. ಅದಕ್ಕೂ ಸೇಡು ತೀರಿಸಿಕೊಳ್ಳುವುದಕ್ಕೆ ಲಖನೌ ತಂಡ ಮುಂದಾಗಲಿದೆ.
ಭುಜದ ನೋವಿನ ಕಾರಣಕ್ಕೆ ಹಿಂದಿನಪಂದ್ಯದಲ್ಲಿ ಆಡಿಲ್ಲ. ಈ ಪಂದ್ಯಕ್ಕೆ ಅವರು ಲಭ್ಯರಾಗುವ ಸಾಧ್ಯತೆಗಳಿಗೆ ಎಂದು ತಂಡದ ಮೂಲಗಳು ತಿಳಿಸಿವೆ. ಪಂಜಾಬ್ ತಂಡದ ಆರಂಭಿಕ ಬ್ಯಾಟರ್ಗಳಾದ ಪ್ರಭ್ಸಿಮ್ರಾನ್ಸಿಂಗ್ ಹಾಗೂ ಮ್ಯಾಥ್ಯೂ ಶಾರ್ಟ್ ಉತ್ತಮವಾಗಿ ಆಡಿದತೆ ತಂಡಕ್ಕೆ ಗೆಲುವು ಸುಲಭ. ಲಕ್ನೊ ತಂಡದ ಬ್ಯಾಟರ್ಗಳಿಗಿಂತ ಬೌಲರ್ಗಳು ಹೆಚ್ಚು ಪ್ರಭಾವ ಬೀರುತ್ತಿದ್ದಾರೆ. ಬೌಲಿಂಗ್ಗೆ ನೆರವಾಗುವ ಪಿಚ್ನಲ್ಲಿ ಅವರೂ ಉತ್ತಮ ಪ್ರದರ್ಶನ ನೀಡುವ ಸಾಧ್ಯತೆಗಳಿವೆ.
ಪಿಚ್ ಹೇಗಿದೆ?
ಮೊಹಾಲಿಯಲ್ಲಿರುವ ಪಂಜಾಬ್ ಕ್ರಿಕೆಟ್ ಅಸಿಸೋಷನ್‌ನ ಐ.ಎಸ್ ಬಿಂದ್ರಾ ಕ್ರೀಡಾಂಗಣದಲ್ಲಿ ಈ ಹಿಂದೆ ನಡೆದ ಪಂದ್ಯದಲ್ಲಿ ಬ್ಯಾಟರ್ಗಳು ಹಾಗೂ ಬೌಲರ್ಗಳಿಬ್ಬರಿಗೂ ಸಮಾನ ಅನುಕೂಲ ಸಿಕ್ಕಿದೆ. ಹೊಸ ಚೆಂಡಿನಲ್ಲಿ ವೇಗಿಗಳಿಗೆ ಅನುಕೂಲವಾದರೂ ಪಂದ್ಯ ಸಾಗುತ್ತಿದ್ದಂತೆ ಬ್ಯಾಟರ್ಗಳು ಪ್ರಾಬಲ್ಯ ಮೆರೆದಿದ್ದಾರೆ. ದೊಡ್ಡ ಮೈದಾನದಲ್ಲಿ ಬೌಂಡರಿ, ಸಿಕ್ಸರ್ಗಳನ್ನು ಬಾರಿಸುವುದು ಸುಲಭವಲ್ಲವಾದರೂ ಚೆಂಡು ಹಳೆದಾಗುತ್ತಿದ್ದಂತೆ ಬ್ಯಾಟರ್ಗಳಿಗೆ ಸ್ಫೋಟಕ ಬ್ಯಾಟ್ ಮಾಡಲು ಅನುಕೂಲ ಸಿಗುತ್ತದೆ.
ತಂಡಗಳು ಇಂತಿವೆ
ಲಕ್ನೊ ಸೂಪರ್ ಜಯಂಟ್ಸ್: ಕೆ.ಎಲ್ ರಾಹುಲ್ (ನಾಯಕ), ಕೈಲ್ ಮೇಯರ್ಸ್, ಕೃಣಾಲ್ ಪಾಂಡ್ಯ, ನಿಕೋಲಸ್ ಪೂರನ್, ಆಯುಷ್ ಬದೋನಿ, ಮಾರ್ಕಸ್ ಸ್ಟೋಯ್ನಿಸ್, ದೀಪಕ್ ಹೂಡ, ರವಿ ಬಿಷ್ಣೋಯ್, ಅವೇಶ್ ಖಾನ್, ನವೀನ್ ಉಲ್ ಹಕ್, ಯಧುವೀರ್ ಸಿಂಗ್.
ಪಂಜಾಬ್ ಕಿಂಗ್ಸ್: ಮ್ಯಾಥ್ಯೂ ಶಾರ್ಟ್, ಶಿಖರ್ ಧವನ್ (ನಾಯಕ), ಪ್ರಭಸಿಮ್ರನ್ ಸಿಂಗ್, ಲಿಯಾಮ್ ಲಿವಿಂಗ್‌ಸ್ಟೋನ್, ಹರ್ಪೀತ್ ಸಿಂಗ್, ಸ್ಯಾಮ್ ಕರ್ರನ್, ಜಿತೇಶ್ ಶರ್ಮಾ, ಶಾರುಖ್ ಖಾನ್, ಹರಪ್ರೀತ್ ಬ್ರಾರ್, ರಾಹುಲ್ ಚಹರ್, ಅರ್ಷದೀಪ್ ಸಿಂಗ್.