ಹೈದರಾಬಾದ್: ಟ್ರಾವಿಸ್ ಹೆಡ್(89*) ಮತ್ತು ಅಭಿಷೇಕ್ ಶರ್ಮ(75*) ಅವರ ಸುಂಟರಗಾಳಿ ಬ್ಯಾಟಿಂಗ್ಗೆ ತತ್ತರಿಸಿದ ಲಕ್ನೋ ಸೂಪರ್ ಜೈಂಟ್ಸ್(LSG vs SRH) 10 ವಿಕೆಟ್ಗಳ ಅಂತರದ ಹೀನಾಯ ಸೋಲಿಗೆ ತುತ್ತಾಗಿದೆ. ಈ ಸೋಲಿನಿಂದ ರಾಹುಲ್ ಪಡೆಯ ಪ್ಲೇ ಆಫ್ ಹಾದಿ ದುರ್ಗಮವಾಗಿದೆ.
ಇಲ್ಲಿನ ರಾಜೀವ್ ಗಾಂಧಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದು ಆಮೆ ಗತಿಯ ಬ್ಯಾಟಿಂಗ್ ನಡೆಸಿದ ಲಕ್ನೋ ಸೂಪರ್ ಜೈಂಟ್ಸ್ ನಿಗದಿತ 20 ಓವರ್ಗಳಲ್ಲಿ 4 ವಿಕೆಟ್ಗೆ 165 ರನ್ ಬಾರಿಸಿತು. ಈ ಮೊತ್ತವನ್ನು ಬೆನ್ನಟ್ಟಿದ ಹೈದರಾಬಾದ್ ಯಾವುದೇ ವಿಕೆಟ್ ನಷ್ಟವಿಲ್ಲದೆ ಕೇವಲ 9.4 ಓವರ್ಗಳಲ್ಲಿ 167 ರನ್ ಬಾರಿಸಿ ಭರ್ಜರಿ 10 ವಿಕೆಟ್ ಅಂತರದ ಗೆಲುವು ಸಾಧಿಸಿತು.
ಚೇಸಿಂಗ್ ವೇಳೆ ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿದ ಹೆಡ್ ಮತ್ತು ಅಭಿಷೇಕ್ ಲಕ್ನೋ ಬೌಲರ್ಗಳನ್ನು ನಿರ್ದಾಕ್ಷಿಣ್ಯವಾಗಿ ಮನಬಂದಂತೆ ದಂಡಿಸಿದರು. ಹೆಡ್ 16 ಎಸೆತಗಳಲ್ಲಿ ಅರ್ಧಶತಕ ಪೂರ್ತಿಗೊಳಿಸಿದರು. ಇದು ಈ ಆವೃತ್ತಿಯಲ್ಲಿ ಹೆಡ್ 16 ಎಸೆತಗಳಿಂದ ಬಾರಿಸಿದ ಮೂರನೇ ಅರ್ಧಶತಕವಾಗಿದೆ. ಅಭಿಷೇಕ್ ಶರ್ಮ 19 ಎಸೆತಗಳಲ್ಲಿ ಅರ್ಧಶತಕ ಬಾರಿಸಿದರು. ಅದರಲ್ಲೂ ಹೆಡ್ ಕನ್ನಡಿಗ ಕೃಷ್ಣಪ್ಪ ಗೌತಮ್ ಅವರಿಗೆ ಸಿಕ್ಸರ್ ಮತ್ತು ಬೌಂಡರಿಗಳ ಮೂಲಕ ಚಳಿ ಬಿಡಿಸಿದರು. 2 ಓವರ್ಗೆ 29 ರನ್ ಬಿಟ್ಟುಕೊಟ್ಟರು. 30 ಎಸೆತ ಎದುರಿಸಿದ ಹೆಡ್ ತಲಾ 8 ಸಿಕ್ಸರ್ ಮತ್ತು ಬೌಂಡರಿ ಸಿಡಿಸಿ ಅಜೇಯ 89 ರನ್ ಬಾರಿಸಿದರು. ಅಭಿಷೇಕ್ ಶರ್ಮ 8 ಬೌಂಡರಿ ಮತ್ತು 6 ಸಿಕ್ಸರ್ ನೆರವಿನಿಂದ ಅಜೇಯ 75 ರನ್ ಬಾರಿಸಿ ತಂಡದ ಜಯ ಸಾರಿದರು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಲಕ್ನೋ ತಂಡದ ಪವರ್ ಪ್ಲೇ ವೈಫಲ್ಯ ಈ ಪಂದ್ಯದಲ್ಲಿಯೂ ಮುಂದುವರಿಯಿತು. ರನ್ ಗಳಿಸಲು ಪರದಾಡಿದ ಕ್ವಿಂಟನ್ ಡಿ ಕಾಕ್(2) ರನ್ಗೆ ವಿಕೆಟ್ ಕಳೆದುಕೊಂಡರೆ, ಇದರ ಬೆನ್ನಲ್ಲೇ ಮಾರ್ಕಸ್ ಸ್ಟೋಯಿನಿಸ್ 3 ರನ್ ಗಳಿಸಿ ಪೆವಿಲಿಯನ್ ಕಡೆಗೆ ನಡೆದರು. 21 ರನ್ಗೆ 2 ವಿಕೆಟ್ ಕಳೆದುಕೊಂಡು ತಂಡ ಸಂಕಷ್ಟಕ್ಕೆ ಸಿಲುಕಿತು. ಪವರ್ ಪ್ಲೇಯಲ್ಲಿ ದಾಖಲಾದದ್ದು ಕೇವಲ 27 ರನ್ ಮಾತ್ರ. ಇದು ತಂಡದ ಬೃಹತ್ ಮೊತ್ತಕ್ಕೆ ಹಿನ್ನಡೆಯಾಯಿತು.
ನಾಯಕ ರಾಹುಲ್ ಕೂಡ ಅತ್ಯಂತ ರಕ್ಷಣಾತ್ಮಕ ಆಟಕ್ಕೆ ಒತ್ತು ಕೊಟ್ಟು 33 ಎಸೆತಗಳಿಂದ 29 ರನ್ ಬಾರಿಸಿದರು. ಬಾರಿಸಿದ್ದು ತಲಾ ಒಂದು ಸಿಕ್ಸರ್ ಮತ್ತು ಬೌಂಡರಿ ಮಾತ್ರ. 4ನೇ ವಿಕೆಟ್ಗೆ ಆಡಲು ಬಂದ ಕೃಣಾಲ್ ಪಾಂಡ್ಯ ಮಧ್ಯಮ ಕ್ರಮಾಂದಲ್ಲಿ ಸಣ್ಣ ಮಟ್ಟದ ಹೋರಾಟ ಸಂಘಟಿಸಿ 2 ಸಿಕ್ಸರ್ ಸಿಡಿಸಿ 24 ರನ್ ಗಳಿಸಿ ಪ್ಯಾಟ್ ಕಮಿನ್ಸ್ ಅವರ ನೇರ ಥ್ರೋಗೆ ರನೌಟ್ ಆದರು. ತೀವ್ರ ಸಂಕಷ್ಟಕ್ಕೆ ಸಿಲುಕಿದ್ದ ತಂಡಕ್ಕೆ ಆಸರೆಯಾದದ್ದು ಆಯುಷ್ ಬದೋನಿ ಮತ್ತು ನಿಕೋಲಸ್ ಪೂರನ್. ಉಭಯ ಆಟಗಾರರು ಹೈದರಾಬಾದ್ ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಎದುರಿಸಿ ನಿಂತು 5ನೇ ವಿಕೆಟ್ಗೆ ಮುರಿಯದ 99 ರನ್ಗಳ ಅತ್ಯಮೂಲ್ಯ ಜತೆಯಾಟ ನಡೆಸಿದರು. ಹೀಗಾಗಿ ತಂಡ 150ರ ಗಡಿ ದಾಡಿತು.
ಬದೋನಿ 30 ಎಸೆತ ಎದುರಿಸಿ 55 ರನ್ ಬಾರಿಸುವ ಮೂಲಕ ಅರ್ಧಶತಕ ಪೂರ್ತಿಗೊಳಿಸಿದರು. ನಿಕೋಲಸ್ ಪೂರನ್ 26 ಎಸೆತಗಳಿಂದ 48 ರನ್ ಗಳಿಸಿದರು. ಹೈದರಾಬಾದ್ ಪರ ಅನುಭವಿ ಭುವನೇಶ್ವರ್ ಕುಮಾರ್ 2 ವಿಕೆಟ್ ಪಡೆದರೆ, ಕಮಿನ್ಸ್ 1 ವಿಕೆಟ್ ಕಿತ್ತರು. ಹುಟ್ಟುಹಬ್ಬದ ದಿನವೇ ಕಮಿನ್ಸ್ಗೆ ಭರ್ಜರಿ ಗೆಲುವಿನ ಉಡುಗೊರೆ ದೊರೆತಿದೆ.