Site icon Vistara News

IPL 2023 : ಬೃಹತ್ ಗೆಲುವಿನ ಬಳಿಕ ಲಕ್ನೊ ತಂಡಕ್ಕೆ ಆಘಾತ; ಪ್ರಮುಖ ಆಲ್​ರೌಂಡರ್​ಗೆ ಗಾಯ

Lucknow suffered a shock after a massive win; Injury to key all-rounder

ಸ್ಟೊಯ್ನಿಸ್

ಲಖನೌ: ಐಪಿಎಲ್​ನ 37ನೇ (IPL 2023) ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಲಕ್ನೋ ಸೂಪರ್ ಜೈಂಟ್ಸ್ ತಂಡದ 56 ರನ್​ಗಳ ಗೆಲುವಿನಲ್ಲಿ ಗೆಲುವಿನಲ್ಲಿ ಆಲ್​ರೌಂಡರ್​ ಮಾರ್ಕಸ್​ ಸ್ಟೋಯ್ನಿಸ್​ ಪ್ರಮುಖ ಪಾತ್ರ ವಹಿಸಿದ್ದರು. ಆಸ್ಟ್ರೇಲಿಯಾದ ಆಲ್​ರೌಂಡರ್​ 40 ಎಸೆತಗಳಲ್ಲಿ 6 ಬೌಂಡರಿ ಮತ್ತು 5 ಸಿಕ್ಸರ್​​ಗಳೊಂದಿಗೆ 72 ರನ್ ಗಳಿಸಿದ್ದರು. ಇದರೊಂದಿಗೆ ಲಕ್ನೊ ತಂಡ 20 ಓವರ್​​ಗಳಲ್ಲಿ 5 ವಿಕೆಟ್ ನಷ್ಟಕ್ಕೆ 257 ರನ್​ ಬಾರಿಸಿತ್ತು. ಇದು ಐಪಿಎಲ್ ಇತಿಹಾಸದಲ್ಲಿ ಎರಡನೇ ಅತಿ ಹೆಚ್ಚು ಮೊತ್ತ. ಆದರೆ ಪಂದ್ಯ ಮುಗಿದ ಬಳಿಕ ಗೆಲುವಿನ ರೂವಾರಿ ಮಾರ್ಕಸ್ ಸ್ಟೋಯ್ನಿಸ್​ ತಮ್ಮ ಎಡ ತೋರುಬೆರಳಿಗೆ ಪೆಟ್ಟಾದ ಕಾರಣ ಸ್ಕ್ಯಾನ್​ಗೆ ಒಳಗಾಗುವುದಾಗಿ ಹೇಳಿದ್ದಾರೆ. ಒಂದು ವೇಳೆ ಅವರ ಗಾಯ ಗಂಭೀರವಾಗಿದ್ದರೆ ಎಲ್​ಎಸ್​ಜಿ ತಂಡಕ್ಕೆ ಟೂರ್ನಿಯಲ್ಲಿ ದೊಡ್ಡ ಹಿನ್ನಡೆ ಉಂಟಾಗಲಿದೆ.

ಎಲ್ಎಸ್​ಜಿ ತಂಡದ ಮುಂದಿನ ಪಂದ್ಯಕ್ಕೆ ಸ್ಟೊಯ್ನಿಸ್​ ಲಭ್ಯತೆ ಇನ್ನೂ ಖಚಿತವಾಗಿಲ್ಲ. ಕೈ ಬೆರಳಿನ ಸ್ಕ್ಯಾನ್​ ವರದಿ ಬಂದ ಬಳಿಕ ಇದು ಸ್ಪಷ್ಟವಾಗಲಿದೆ. ಪಂಜಾಬ್ ವಿರುದ್ಧದ ಪಂದ್ಯದಲ್ಲಿ ನಾಯಕ ಶಿಖರ್ ಧವನ್ ಅವರ ಅಮೂಲ್ಯ ವಿಕೆಟ್ ಅನ್ನು ಸ್ಟೋಯ್ನಿಸ್​ ಕಬಳಿಸಿದ್ದರು. ಅಥರ್ವ ಟೈಡೆ ಹೊಡೆದ ಚೆಂಡನ್ನು ತಡೆಯಲು ಪ್ರಯತ್ನಿಸುವಾಗ ಅವರ ಎಡ ತೋರುಬೆರಳಿಗೆ ಪೆಟ್ಟಾಗಿತ್ತು. ಹೀಗಾಗಿ 1.5 ಓವರ್ ಎಸೆದು ಪೆವಿಲಿಯನ್​ಗೆ ಮರಳಿದ್ದರು.

“ಬೆರಳಿಗೆ ಹೆಚ್ಚು ಗಾಯಗಳೇನೂ ಆಗಿಲ್ಲ. ನೋವು ಕೂಡ ಇಲ್ಲ. ಇನ್ನೀಗ ಸ್ಕ್ಯಾನ್​ ಮಾಡಿಸಿಕೊಂಡ ಬಳಿಕ ಮುಂದಿನ ನಿರ್ಧಾರ ಕೈಗೊಳ್ಳುವೆ ಎಂದು ಸ್ಟೊಯ್ನಿಸ್​ ಪಂದ್ಯದ ಬಳಿಕ ಹೇಳಿದರು.

ಆಯುಷ್ ಬದೋನಿ(24 ಎಸೆತಗಳಲ್ಲಿ 43 ರನ್) ಅವರೊಂದಿಗೆ ಮೂರನೇ ವಿಕೆಟ್​ಗೆ ಸ್ಟೋಯ್ನಿಸ್​ 47 ಎಸೆತಗಳಲ್ಲಿ 89 ರನ್ ಬಾರಿಸಿದ್ದರು. ಈ ಜೋಡಿಯು ಎಲ್​ಎಸ್​ಜಿ ತಂಡಕ್ಕೆ ದಾಖಲೆಯ ಮೊತ್ತ ಪೇರಿಸಲು ನೆರವಾಗಿತ್ತು. ಸಾಮಾನ್ಯವಾಗಿ, ಸ್ಟೋಯ್ನಿಸ್ ಕೆಳ ಕ್ರಮಾಂಕದಲ್ಲಿ ಬ್ಯಾಟ್ ಮಾಡುತ್ತಾರೆ. ಆದರೆ ಪಿಬಿಕೆಎಸ್ ವಿರುದ್ಧ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟ್​ ಮಾಡಿದ್ದರು.

ಇದನ್ನೂ ಓದಿ : IPL 2023 : ಪಂಜಾಬ್ ವಿರುದ್ಧ ದೊಡ್ಡ ಅಂತರದ ಗೆಲುವು ಸಾಧಿಸಿದರೂ ರಾಹುಲ್​ಗೆ ಆಗಿಲ್ಲ ಸಮಾಧಾನ

“ಸ್ವಲ್ಪ ಕೆಳಕ್ರಮಾಂಕದಲ್ಲಿ ಬ್ಯಾಟ್​ ಮಾಡುವುದು ನನ್ನ ಜವಾಬ್ದಾರಿಯಾಗಿದೆ. ಆದರೆ ಯಾವುದೇ ಕ್ರಮಾಂಕದಲ್ಲಿ ಬ್ಯಾಟ್​ ಮಾಡುವುದು ಕೂಡ ನನಗೆ ಇಷ್ಟ. ಅದೇ ರೀತಿ ಮೊದಲ ಓವರ್​, ಕೊನೇ ಓವರ್ ಸೇರಿದಂತೆ ಎಲ್ಲಿ ಬೇಕಾದರೂ ಬೌಲಿಂಗ್ ಮಾಡಬಲ್ಲೆ. ತಂಡಕ್ಕೆ ಏನು ಬೇಕೋ ಅದನ್ನು ಮಾಡುವುದಕ್ಕೆ ಸಂತಸವಾಗುತ್ತದೆ ಎಂದು ಸ್ಟೊಯ್ನಿಸ್ ಹೇಳಿದ್ದಾರೆ.

ಮೊದಲ ದಿನ ನೆಟ್ಸ್​ನಲ್ಲಿ ಸ್ವಿಂಗ್​ ಬೌಲಿಂಗ್ ಮಾಡುತ್ತಿದ್ದೆ. ಇದರಿಂದ ಬೌಲಿಂಗ್ ಕೋಚ್ ನನ್ನ ಬಳಿಯಿಂದ ಮೊದಲ ಓವರ್​ ಹಾಕಿಸುವ ತೀರ್ಮಾನ ಕೈಗೊಂಡರು. ಸಾಮಾನ್ಯವಾಗಿ ನನ್ನ ತವರು ಮೈದಾನದ ಪಿಚ್​ನಲ್ಲಿ ಚೆನ್ನಾಗಿ ಬೌಲಿಂಗ್ ಮಾಡಲು ಇಚ್ಛಿಸುತ್ತೇನೆ. ಆದರೆ, ಫ್ಲ್ಯಾಟ್​ ಪಿಚ್​ನಲ್ಲಿ ಬ್ಯಾಟ್​ ಮಾಡುವುದಕ್ಕೆ ಯಾರಿಗೂ ಇಷ್ಟ ಇರುವುದಿಲ್ಲ ಸ್ಟೊಯ್ನಿಸ್​ ಹೇಳಿದ್ದಾರೆ.

Exit mobile version