ಲಕ್ನೊ: ಬೌಲಿಂಗ್ ಹಾಗೂ ಬ್ಯಾಟಿಂಗ್ನಲ್ಲಿ ಸಮರ್ಥ ಪ್ರದರ್ಶನ ನೀಡಿದ ಲಕ್ನೊ ಸೂಪರ್ ಜಯಂಟ್ಸ್ ತಂಡ ಐಪಿಎಲ್ 16ನೇ ಆವೃತ್ತಿಯ (IPL 2023) 10ನೇ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ 5 ವಿಕೆಟ್ ವಿಜಯ ಸಾಧಿಸಿತು. ಈ ಮೂಲಕ ಹಿಂದಿನ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ 12 ರನ್ಗಳ ಸೋಲಿಗೆ ಸಮಾಧಾನ ಹೇಳಿಕೊಂಡಿತು. ಏತನ್ಮಧ್ಯೆ, ಸನ್ರೈಸರ್ಸ್ ಹೈದರಾಬಾದ್ ಬಳಗ ಹಾಲಿ ಆವೃತ್ತಿಯಲ್ಲಿ ಆಡಿರುವ ಎರಡೂ ಪಂದ್ಯಗಳಲ್ಲಿ ಸೋಲಿಗೆ ಒಳಗಾಯಿತು. ಆಲ್ರೌಂಡ್ ಕೃಣಾಲ್ ಪಾಂಡ್ಯ ಬೌಲಿಂಗ್ನಲ್ಲಿ 18 ರನ್ ನೀಡಿ 3 ವಿಕೆಟ್ ಕಬಳಿಸುವ ಜತೆ ಬ್ಯಾಟಿಂಗ್ನಲ್ಲಿ 34 ರನ್ ಬಾರಿಸಿ ಲಕ್ನೊ ತಂಡದ ಗೆಲುವಿನ ರೂವಾರಿ ಎನಿಸಿಕೊಂಡಿದ್ದರು.
ಇಲ್ಲಿನ ಭಾರತ ರತ್ನ ಶ್ರೀ ಅಟಲ್ಬಿಹಾರಿ ವಾಜಪೇಯಿ ಏಕನಾ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ ಹಣಾಹಣಿಯಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಸನ್ ರೈಸರ್ಸ್ ಹೈದರಾಬಾದ್ ತಂಡ ನಿಗದಿತ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 121 ಬಾರಿಸಿತು. ಗುರಿ ಬೆನ್ನಟ್ಟಿದ ಲಕ್ನೊ ಬಳಗ 16 ಓವರ್ಗಳಲ್ಲಿ 5 ವಿಕೆಟ್ ಕಳೆದಕೊಂಡು 127 ರನ್ ಬಾರಿಸಿ ಜಯಶಾಲಿಯಾಯಿತು.
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಸನ್ರೈಸರ್ಸ್ ಹೈದರಾಬಾದ್ ಪರ ಆರಂಭಿಕರಾಗಿ ಬ್ಯಾಟ್ ಮಾಡಲು ಇಳಿದ ಕನ್ನಡಿಗ ಮಯಾಂಕ್ ಅಗರ್ವಾಲ್ ಮತ್ತೊಮ್ಮೆ ವೈಫಲ್ಯ ಕಂಡರು. 7 ಎಸೆತಗಳಲ್ಲಿ 8 ರನ್ ಬಾರಿಸಿದ ಅವರು ಪೆವಿಲಿಯನ್ ಕಡೆಗೆ ಮರಳಿದರು. ಮತ್ತೊಬ್ಬ ಆರಂಭಿಕ ಬ್ಯಾಟರ್ ಸ್ವಲ್ಪ ಹೊತ್ತು ಕ್ರೀಸ್ ಕಾಯ್ದುಕೊಂಡರೂ ಅವರೂ ಟಿ20 ಮಾದರಿಗೆ ಪೂರಕವಾಗಿ ಬ್ಯಾಟ್ ಬೀಸಲಿಲ್ಲ. ಮೂರನೇ ಕ್ರಮಾಂಕದಲ್ಲಿ ಬಂದ ರಾಹುಲ್ ತ್ರಿಪಾಠಿಯೂ ನಿಧಾನಗತಿಯ ಬ್ಯಾಟಿಂಗ್ ಶೈಲಿಯನ್ನು ಒಪ್ಪಿಕೊಂಡರು.
ಇವೆಲ್ಲದರ ನಡುವೆ ಹೈದರಾಬಾದ್ ತಂಡದ ಆಟಗಾರರು ಲಕ್ನೊ ಸ್ಪಿನ್ನರ್ಗಳ ಜಾಲಕ್ಕೆ ಬೀಳಲು ತೊಡಗಿದರು. ಹಾಲಿ ಆವೃತ್ತಿಯಲ್ಲಿ ಮೊದಲ ಪಂದ್ಯವಾಡುತ್ತಿರುವ ನಾಯಕ ಏಡೆನ್ ಮಾರ್ಕ್ರಮ್ ಶೂನ್ಯಕ್ಕೆ ಔಟಾದರೆ, ಇಂಗ್ಲೆಂಡ್ನ ಸ್ಫೋಟಕ ಬ್ಯಾಟರ್ ಹ್ಯಾರಿ ಬ್ರೂಕ್ 3 ರನ್ಗೆ ಸೀಮಿತಗೊಂಡರು.
ಸತತವಾಗಿ ವಿಕೆಟ್ಗಳು ಪತನಗೊಂಡ ಬಳಿಕ ರಾಹುಲ್ ತ್ರಿಪಾಠಿ ಹಾಗೂ ವಾಷಿಂಗ್ಟನ್ ಸುಂದರ್ (16) ನಿಧಾನಗತಿಯಲ್ಲಿ ಆಡಲು ಆರಂಭಿಸಿದರು. ಈ ಜೋಡಿ ಆರನೇ ವಿಕೆಟ್ಗೆ 39 ರನ್ ಬಾರಿಸಿ ತಂಡಕ್ಕೆ ಸ್ವಲ್ಪ ಮಟ್ಟಿಗೆ ಆಧಾರವಾದರು. ತ್ರಿಪಾಠಿ ವಿಕೆಟ್ ಪತನಗೊಂಡ ಸ್ವಲ್ಪ ಹೊತ್ತಿನಲ್ಲೇ ವಾಷಿಂಗ್ಟನ್ ಸುಂದರ್ ಕೂಡ ಪೆವಿಲಿಯನ್ಗೆ ಮರಳಿದರು ಆ ಬಳಿಕ ಹೈದರಾಬಾದ್ ತಂಡದ ಎರಡು ವಿಕೆಟ್ಗಳು ಉರುಳಿದವು.
ಇದನ್ನೂ ಓದಿ: IPL 2023 : ಕೈಬೆರಳಿಗೆ ಗಾಯ, ಜೋಸ್ ಬಟ್ಲರ್ ಮುಂದಿನ ಪಂದ್ಯಕ್ಕೆ ಅಲಭ್ಯ?
ಕೊನೇ ಹಂತದಲ್ಲಿ ಭರ್ಜರಿಯಾಗಿ ಬ್ಯಾಟ್ ಬೀಸಿದ ಅಬ್ದುಲ್ ಸಮದ್ 10 ಎಸೆತಗಳಿಗೆ 21 ರನ್ ಬಾರಿಸಿದರು. ಅವರಲ್ಲಿ ಎರಡು ಸಿಕ್ಸರ್ ಹಾಗೂ ಒಂದು ಫೋರ್ ಸೇರಿಕೊಂಡಿತ್ತು.
ಲಕ್ನೊ ತಂಡದ ಪರ ಬೌಲಿಂಗ್ನಲ್ಲಿ ಕೃಣಾಲ್ ಪಾಂಡ್ಯ ಅದ್ಭುತ ಪ್ರದರ್ಶನ ನೀಡಿದರು. 4 ಓವರ್ಗಳ ಸ್ಪೆಲ್ನಲ್ಲಿ 18 ರನ್ ನೀಡಿ 3 ವಿಕೆಟ್ ಕಬಳಿಸಿದ ಅವರು ಲಕ್ನೊ ತಂಡದ ಮುನ್ನಡೆಗೆ ಕಾರಣರಾದರು. ರವಿ ಬಿಷ್ಣೋಯಿ ಹಾಗೂ ಯಶ್ ಠಾಕೂರ್ ತಲಾ ಒಂದು ವಿಕೆಟ್ ತಮ್ಮದಾಗಿಸಿಕೊಂಡರೆ ಅಮಿತ್ ಮಿಶ್ರಾ 4 ಓವರ್ಗಳಲ್ಲಿ 23 ರನ್ ನೀಡಿ 2 ವಿಕೆಟ್ ತಮ್ಮದಾಗಿಸಿಕೊಂಡರು.