ಮುಂಬಯಿ : ಆರ್ಥಿಕ ಸಂಕಷ್ಟದಲ್ಲಿರುವ ಭಾರತ ತಂಡದ ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿಗೆ (Indian Cricketer) ಮಹಾರಾಷ್ಟ್ರದ ಉದ್ಯಮಿಯೊಬ್ಬರು ತಿಂಗಳಿಗೆ ಒಂದು ಲಕ್ಷ ರೂಪಾಯಿ ಸಂಬಳದ ನೌಕರಿಯ ಭರವಸೆ ಕೊಟ್ಟಿದ್ದಾರೆ. ಸಹ್ಯಾದ್ರಿ ಇಂಡಸ್ಟ್ರಿ ಗ್ರೂಪ್ ಮಾಲೀಕರು ತಮ್ಮ ಹಣಕಾಸು ವಿಭಾಗದಲ್ಲಿ ಮಾಜಿ ಕ್ರಿಕೆಟಿಗನಿಗೆ ಉದ್ಯೋಗ ಕಲ್ಪಿಸಿದ್ದಾರೆ ಎಂಬುದಾಗಿ ವರದಿಯಾಗಿದೆ.
ಕಾಂಬ್ಳಿ ಇತ್ತೀಚೆಗೆ ಸಂದರ್ಶನವೊಂದರಲ್ಲಿ ತಾವು ಆರ್ಥಿಕ ಸಮಸ್ಯೆ ಎದುರಿಸುತ್ತಿರುವುದಾಗಿ ಅಳಲು ತೋಡಿಕೊಂಡಿದ್ದರು. ಬಿಸಿಸಿಐ ನೀಡುತ್ತಿರುವ ಪಿಂಚಣಿಯಿಂದ ನನ್ನ ಜೀವನ ಸಾಗುತ್ತಿದೆ. ಸಚಿನ್ ತೆಂಡೂಲ್ಕರ್ ಸೇರಿದಂತೆ ಸಾಕಷ್ಟು ಮಂದಿಗೆ ನನ್ನ ಸಮಸ್ಯೆ ಗೊತ್ತಿದೆ. ಅದರೆ ಯಾರು ನೆರವಿಗೆ ಬರುತ್ತಿಲ್ಲ ಎಂದು ಹೇಳಿದ್ದರು. ಈ ಇದು ದೊಡ್ಡ ಮಟ್ಟದ ಸುದ್ದಿಗೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ಸಹ್ಯಾದ್ರಿ ಗುಂಪಿನ ಮಾಲೀಕರು ಉದ್ಯೋಗದ ಭರವಸೆ ನೀಡಿದ್ದಾರೆ.
ಉತ್ತಮ ಕ್ರಿಕೆಟಿಗರಾಗಿದ್ದ ವಿನೋದ್ ಕಾಂಬ್ಳಿ ೨೦೦೦ರಲ್ಲಿ ಕೊನೇ ಅಂತಾರಾಷ್ಟ್ರೀಯ ಪಂದ್ಯ ಆಡಿದ್ದರು. ಅದಕ್ಕಿಂತ ಮೊದಲು ಭಾರತ ಪರ ೧೭ ಟೆಸ್ಟ್ ಹಾಗೂ ೧೦೪ ಏಕ ದಿನ ಪಂದ್ಯಗಳಲ್ಲಿ ಪಾಲ್ಗೊಂಡಿದ್ದರು. ೨೦೧೧ರಲ್ಲಿ ನಿವೃತ್ತಿ ಘೋಷಿಸಿದ ಅವರಿಗೆ ಬಿಸಿಸಿಐನಿಂದ ಪ್ರತಿ ತಿಂಗಳು ೩೦ ಸಾವಿರ ರೂಪಾಯಿ ಪಿಂಚಣಿ ಬರುತ್ತಿದೆ. ಆ ಬಳಿಕ ೨೦೧೯ರಲ್ಲಿ ಮುಂಬಯಿ ಕ್ರಿಕೆಟ್ ಲೀಗ್‌ನ ತಂಡವೊಂದರ ಕೋಚ್ ಆಗಿದ್ದರು. ಬಳಿಕ ಬಾಲ್ಯದ ಗೆಳೆಯ ಸಚಿನ್ ತೆಂಡೂಲ್ಕರ್ ಮುಂಬಯಿಯ ನೆರುಲ್‌ನಲ್ಲಿರುವ ತೆಂಡೂಲ್ಕರ್ ಮಿಡ್ಲ್‌ಸೆಕ್ಸ್ ಗ್ಲೋಬಲ್ ಅಕಾಡೆಮಿಯಲ್ಲಿ ಕೊಚಿಂಗ್ ಹುದ್ದೆ ಕೊಡಿಸಿದ್ದರು. ಅದು ಮನೆಗಿಂತ ದೂರವಾಗಿದೆ ಎಂಬ ಕಾರಣಕ್ಕೆ ಅವರು ಹೋಗಿರಲಿಲ್ಲ.
ಸಂದರ್ಶನದಲ್ಲಿ ಅವರು ತಾವು ಮುಂಬಯಿ ಕ್ರಿಕೆಟ್ ಸಂಸ್ಥೆಗೆ ನೆರವು ನೀಡುವಂತೆ ಹಲವು ಬಾರಿ ಮನವಿ ಮಾಡಿದ್ದೆ ಎಂದು ಹೇಳಿದ್ದಾರೆ. ಆದರೆ, ಅವರಿಂದ ಯಾವುದೇ ನೆರವು ಲಭಿಸುತ್ತಿಲ್ಲ ಎಂದು ಹೇಳಿದ್ದರು.
ಇದನ್ನೂ ಓದಿ | Vinod Kambli | ಸಚಿನ್‌ಗೆ ಎಲ್ಲ ಗೊತ್ತಿದೆ, ಆದರೆ… ಆರ್ಥಿಕ ಸಂಕಷ್ಟ ಬಿಚ್ಚಿಟ್ಟ ವಿನೋದ್ ಕಾಂಬ್ಳಿ!