Site icon Vistara News

IPL 2023 : ಐಪಿಎಲ್​ನಲ್ಲಿ ವಿಶೇಷ ದಾಖಲೆ ಬರೆದ ಮಹೇಂದ್ರ ಸಿಂಗ್​ ಧೋನಿ, ಏನದು?

There is no way Dhoni will play in the next edition, says former teammate

#image_title

ಚೆನ್ನೈ : ಚೆನ್ನೈ ಸೂಪರ್​ ಕಿಂಗ್ಸ್​ ತಂಡ ನಾಯಕ ಮಹೇಂದ್ರ ಸಿಂಗ್ ಧೋನಿ ಬುಧವಾರ (ಏಪ್ರಿಲ್​ 12ರಂದು) ಐಪಿಎಲ್​ನಲ್ಲಿ ವಿಶೇಷ ದಾಖಲೆಯೊಂದನ್ನು ಮಾಡಿದ್ದಾರೆ. ಇದು ಯಾರೂ ಮಾಡದ ದಾಖಲೆ ಹಾಗೂ ಅದನ್ನು ಮುರಿಯುವುದು ಅಷ್ಟು ಸುಲಭವೂ ಅಲ್ಲ. ಅಂಥ ವಿಶೇಷ ಸಾಧನೆ ಮಾಡಿದ್ದಾರೆ ಮಹೇಂದ್ರ ಸಿಂಗ್​ ಧೋನಿ. ಈ ಪಂದ್ಯದಲ್ಲಿ ಧೋನಿ ನೇತೃತ್ವದ ಚೆನ್ನೈ ತಂಡ ರಾಜಸ್ಥಾನ್​ ರಾಯಲ್ಸ್​ ವಿರುದ್ಧ ಮೂರು ರನ್​ಗಳಿಂದ ಸೋಲು ಕಂಡಿದೆ. ಹೀಗಾಗಿ ದಾಖಲೆಯ ಪಂದ್ಯವನ್ನು ಸ್ಮರಣೀಯ ಮಾಡಿಕೊಳ್ಳುವ ಅವಕಾಶವನ್ನು ನಷ್ಟ ಮಾಡಿಕೊಂಡಿದ್ದಾರೆ ಮಹೇಂದ್ರ ಸಿಂಗ್​ ಧೋನಿ.

ಈ ಪಂದ್ಯಕ್ಕೆ ಮೊದಲು ಟಾಸ್​ಗಾಗಿ ಬಂದ ಮಹೇಂದ್ರ ಸಿಂಗ್ ಧೋನಿ ಐಪಿಎಲ್​ನಲ್ಲಿ ಚೆನ್ನೈ ಸೂಪರ್​ ಕಿಂಗ್ಸ್ ತಂಡದ 200 ಪಂದ್ಯಗಳಿಗೆ ನಾಯಕತ್ವ ವಹಿಸಿದ ದಾಖಲೆ ಮಾಡಿದರು. ಈ ಸಾಧನೆಯನ್ನು ಈ ಹಿಂದೆ ಯಾರೂ ಮಾಡಿಲ್ಲ. ಹೀಗಾಗಿ ಅವರ ಪಾಲಿಗೆ ಇದು ವಿಶೇಷ ಸಾಧನೆ ಎನಿಸಿಕೊಂಡಿದೆ. ಚೆನ್ನೈ ಸೂಪರ್​ ಕಿಂಗ್ಸ್ ತಂಡ ಸೇರಿಕೊಂಡ ದಿನದಿಂದಲೂ ಆ ತಂಡದ ನಾಯಕರಾಗಿದ್ದ ಮಹೇಂದ್ರ ಸಿಂಗ್​ ಧೋನಿ ನಾಲ್ಕು ಬಾರಿ ಟ್ರೋಫಿಯನ್ನೂ ಗೆದ್ದಿದ್ದಾರೆ. ಈ ಮೂಲಕವೂ ಯಶಸ್ವಿ ನಾಯಕ ಎಂಬ ಪಟ್ಟವನ್ನು ತಮ್ಮದಾಗಿಸಿಕೊಂಡಿದ್ದಾರೆ.

ಎರಡು ತಂಡಗಳ ನೇತೃತ್ವ

ಮಹೇಂದ್ರ ಸಿಂಗ್​ ಧೋನಿ ಈಗ ಚೆನ್ನೈ ಸೂಪರ್​ ಕಿಂಗ್ಸ್ ತಂಡದ ನಾಯಕ. ಹಾಗೆಂದು ಅವರು ಚೆನ್ನೈ ತಂಡಕ್ಕೆ ಮಾತ್ರ ನಾಯಕರಾಗಿದ್ದಲ್ಲ. ರೈಸಿಂಗ್ ಪುಣೆ ಜಯಂಟ್ಸ್ ತಂಡದ ಪರ 14 ಪಂದ್ಯಗಳ ನೇತೃತ್ವ ವಹಿಸಿದ್ದರು. ಬೆಟ್ಟಿಂಗ್​ ಹಗರಣದ ಹಿನ್ನೆಲೆಯಲ್ಲಿ ಚೆನ್ನೈ ಸೂಪರ್​ ಕಿಂಗ್ಸ್​ ತಂಡ ಬ್ಯಾನ್​ ಆಗಿತ್ತು. ಈ ವೇಳೆ ಧೋನಿ ರೈಸಿಂಗ್​ ಪುಣೆ ಜಯಂಟ್ಸ್​ ತಂಡದ ಪರವಾಗಿ ಆಡಿದ್ದರು. ಅಲ್ಲೂ ಅವರಿಗೆ ನಾಯಕತ್ವ ನೀಡಲಾಗಿತ್ತು. ಹೀಗಾಗಿ ಒಟ್ಟು 214 ಪಂದ್ಯಗಳಿಗೆ ನೇತೃತ್ವ ವಹಿಸಿದ ಸಾಧನೆ ಮಾಡಿದ್ದಾರೆ ಧೋನಿ. ಇಷ್ಟು ಪಂದ್ಯಗಳಲ್ಲಿ ಧೋನಿ 125 ಪಂದ್ಯಗಳಲ್ಲಿ ಗೆಲುವು, 89 ಪಂದ್ಯಗಳಲ್ಲಿ ಸೋಲು ಅನುಭವಿಸಿದ್ದಾರೆ.

ಎರಡನೇ ಸ್ಥಾನ ಯಾರಿಗೆ?

ಐಪಿಎಲ್​ನಲ್ಲಿ ಅತಿ ಹೆಚ್ಚು ಪಂದ್ಯಗಳಿಗೆ ನಾಯಕತ್ವ ವಹಿಸಿರುವ ಪಟ್ಟಿಯಲ್ಲಿ ಎರಡನೇ ಸ್ಥಾನ ಮುಂಬಯಿ ಇಂಡಿಯನ್ಸ್ ಕ್ಯಾಪ್ಟನ್​ ರೋಹಿತ್​ ಶರ್ಮಾ ಅವರಿದ್ದಾರೆ. ರೋಹಿತ್​ ಶರ್ಮಾ 146 ಪಂದ್ಯಗಳಲ್ಲಿ ಮುಂಬಯಿ ಇಂಡಿಯನ್ಸ್ ತಂಡವನ್ನು ಮುನ್ನಡೆಸಿದ್ದಾರೆ. ರೋಹಿತ್ ಕೂಡ ಐಪಿಎಲ್​ನ ಯಶಸ್ವಿ ನಾಯಕ. ಅವರು ಐದು ಬಾರಿ ಟ್ರೋಫಿ ಗೆದ್ದಿದ್ದಾರೆ.

ಇದನ್ನೂ ಓದಿ : LGM Movie: LGM ಸಿನಿಮಾದ ಫಸ್ಟ್ ಲುಕ್ ಬಿಡುಗಡೆ ಮಾಡಿದ ಕ್ಯಾಪ್ಟನ್ ಕೂಲ್ ಧೋನಿ, ಇವರೇ ಚಿತ್ರದ ನಿರ್ಮಾಪಕರು

ಆರ್​ಸಿಬಿ ನಾಯಕರಾಗಿದ್ದ ವಿರಾಟ್​ ಕೊಹ್ಲಿ ಈ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದುಕೊಂಡಿದ್ದಾರೆ. ಅವರು 140 ಪಂದ್ಯಗಳಲ್ಲಿ ಆರ್​ಸಿಬಿ ತಂಡವನ್ನು ಮುನ್ನಡೆಸಿದ್ದರು. ವಿರಾಟ್​ ಕೊಹ್ಲಿ ಕಳೆದ ವರ್ಷದಿಂದ ಆರ್​​ಸಿಬಿ ತಂಡದ ನಾಯಕತ್ವ ವಹಿಸಿಕೊಂಡಿಲ್ಲ. ಫಾಫ್​ ಡು ಪ್ಲೆಸಿಸ್​ ಆರ್​ಸಿಬಿ ತಂಡದ ನಾಯಕರಾಗಿದ್ದಾರೆ. ಆದರೆ ವಿರಾಟ್​ ಕೊಹ್ಲಿ ಐಪಿಎಲ್​ನಲ್ಲಿ ವಿಶೇಷ ಸಾಧನೆ ಮಾಡಿಲ್ಲ. ಒಂದೇ ಒಂದು ಟ್ರೋಫಿ ಕೂಡ ಗೆದ್ದಿಲ್ಲ.

Exit mobile version