ಚೆನ್ನೈ: ಕ್ರಿಕೆಟ್ ದಿಗ್ಗಜ ಮಹೇಂದ್ರ ಸಿಂಗ್ ಧೋನಿ ಮಾಡಿದ್ದೆಲ್ಲ ರೆಕಾರ್ಡ್. ಟೀಮ್ ಇಂಡಿಯಾದ ಆಟಗಾರನಾಗಿ, ನಾಯಕರಾಗಿ ಹಲವಾರು ದಾಖಲೆಗಳನ್ನು ಬರೆದಿದ್ದ ಅವರೀಗ ಐಪಿಎಲ್ನಲ್ಲೂ ಸಾಲು ಸಾಲು ದಾಖಲೆಗಳನ್ನು ಸೃಷ್ಟಿಸುತ್ತಿದ್ದಾರೆ. ಕೆಲವೇ ದಿನಗಳ ಹಿಂದೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕರಾಗಿ 200 ಪಂದ್ಯಗಳನ್ನು ಪೂರೈಸಿದ್ದ ಅವರೀಗ ಐಪಿಎಲ್ ಇತಿಹಾಸದಲ್ಲಿ ಮತ್ತೊಂದು ದಾಖಲೆ ಮಾಡಿದ್ದಾರೆ. ಸನ್ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಅವರ ಈ ದಾಖಲೆ ಸೃಷ್ಟಿಸಿದ್ದಾರೆ.
ಮಹೇಂದ್ರ ಸಿಂಗ್ ಧೋನಿ ಸನ್ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ 200 ವಿಕೆಟ್ಗಳನ್ನು ಪಡೆದ ರೆಕಾರ್ಡ್ ಮಾಡಿದ್ದಾರೆ. ಎಸ್ಆರ್ಎಚ್ ಬ್ಯಾಟರ್ ವಾಷಿಂಗ್ಟನ್ ಸುಂದರ್ ಅವರನ್ನು ಔಟ್ ಮಾಡುವ ಮೂಲಕ ಅವರು ದಾಖಲೆ ಮಾಡಿದರು. ಐಪಿಎಲ್ನಲ್ಲಿ ಈ ಸಾಧನೆ ಮಾಡಿದ ಮೊದಲ ವಿಕೆಟ್ಕೀಪರ್ ಎಂಬ ಹೆಗ್ಗಳಿಕೆಯನ್ನು ಮಹೇಂದ್ರ ಸಿಂಗ್ ಧೋನಿ ತಮ್ಮದಾಗಿಸಿಕೊಂಡಿದ್ದಾರೆ.
41 ವರ್ಷದ ಮಹೇಂದ್ರ ಸಿಂಗ್ ಧೋನಿ ಯುವ ಆಟಗಾರರೂ ನಾಚುವಂತೆ ಪ್ರದರ್ಶ ನೀಡುತ್ತಿದ್ದಾರೆ. ಬ್ಯಾಟಿಂಗ್ನಲ್ಲಿ ವಿಸ್ಫೋಟಕ ಸಿಕ್ಸರ್ ಬಾರಿಸುತ್ತಿರುವ ಅವರು ವಿಕೆಟ್ ಕೀಪಿಂಗ್ನಲ್ಲೂ ಕ್ಷಿಪ್ರ ಪ್ರದರ್ಶನ ನೀಡುತ್ತಿದ್ದಾರೆ. ಅತ್ಯಂತ ಚುರುಕಿನಿಂದ ಸ್ಟಂಪ್ ಔಟ್ ಮಾಡುತ್ತಿದ್ದಾರೆ. ಎಸ್ಆರ್ಎಚ್ ವಿರುದ್ಧದ ಪಂದ್ಯದಲ್ಲಿ ಒಂದು ಕ್ಯಾಚ್, ಒಂದು ಸ್ಟಂಪ್ ಹಾಗೂ ಒಂದು ರನ್ಔಟ್ ಮಾಡಿದ್ದಾರೆ. ಈ ಮೂಲಕ ಅವರು 200 ವಿಕೆಟ್ಗಳನ್ನು ಪಡೆದ ದಾಖಲೆ ಮಾಡಿದ್ದಾರೆ.
ಸ್ಪಿನ್ ಬೌಲರ್ ಮಹೀಶ್ ತೀಕ್ಷಣ ಅವರ ಬೌಲಿಂಗ್ನಲ್ಲಿ ಎಸ್ಆರ್ಎಚ್ ನಾಯಕ ಏಡೆನ್ ಮಾರ್ಕ್ರಮ್ ಅವರ ಕ್ಯಾಚ್ ಪಡೆದ ಧೋನಿ, ಜಡೇಜಾ ಎಸೆತದಲ್ಲಿ ಮುನ್ನುಗ್ಗಿ ಹೊಡೆಯಲು ಹೋದ ಮಯಾಂಕ್ ಅಗರ್ವಾಲ್ ಅವರನ್ನು ಸ್ಪಂಟ್ ಮಾಡಿದ್ದರು. ಅದೇ ರೀತಿ ಆಲ್ರೌಂಡರ್ ವಾಷಿಂಗ್ಟನ್ ಸುಂದರ್ ಅವರನ್ನು ಮನಮೋಹಕ ರನ್ಔಟ್ ಮೂಲಕ ಔಟ್ ಮಾಡಿದ್ದರು.
ಇದನ್ನೂ ಓದಿ : Twitter Blue Tick: ಕೊಹ್ಲಿ, ಧೋನಿ ಸೇರಿ ಹಲವು ಕ್ರಿಕೆಟಿಗರ ಟ್ವಿಟರ್ ಖಾತೆಯಿಂದ ಮಾಯವಾದ ಬ್ಲ್ಯೂ ಟಿಕ್; ಕಾರಣ ಏನು?
ಅಂತಾರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ ಅತಿ ಹೆಚ್ಚು ಕ್ಯಾಚ್ ಪಡೆದ ವಿಕೆಟ್ ಕೀಪರ್‌ಗಳ ಸಾಲಿನಲ್ಲೂ ಎಂಎಸ್ ಧೋನಿ (208) ಮುಂಚೂಣಿಯಲ್ಲಿದ್ದಾರೆ. ದಕ್ಷಿಣ ಆಫ್ರಿಕಾದ ಕ್ವಿಂಟನ್ ಡಿ ಕಾಕ್ (207), ಭಾರತದ ದಿನೇಶ್ ಕಾರ್ತಿಕ್ (205), ಪಾಕಿಸ್ತಾನದ ಕಮ್ರಾನ್ ಅಕ್ಮಲ್ (172) ಹಾಗೂ ವೆಸ್ಟ್ ಇಂಡೀಸ್‌ನ ದಿನೇಶ್ ರಾಮ್ದಿನ್ (150) ಟಾಪ್ 5 ಸ್ಥಾನದಲ್ಲಿ ಗುರುತಿಸಿಕೊಂಡಿದ್ದಾರೆ.
ಚೆನ್ನೈ ತಂಡಕ್ಕೆ ಸುಲಭ ಜಯ
ಟಿಂಗ್ ಹಾಗೂ ಬೌಲಿಂಗ್ನಲ್ಲಿ ಸಂಪೂರ್ಣ ವೈಫಲ್ಯ ಕಂಡ ಸನ್ ರೈಸರ್ಸ್ ಹೈದರಾಬಾದ್ ತಂಡ ಐಪಿಎಲ್ ಐಪಿಎಲ್ 16ನೇ ಆವೃತ್ತಿಯ 29ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 7 ವಿಕೆಟ್ಗಳಿಂದ ಸೋಲು ಕಂಡಿತು. ಚೆನ್ನೈ ತಂಡದ ಪರ ರವೀಂದ್ರ ಜಡೇಜಾ (22 ರನ್ಗಳಿಗೆ 3 ವಿಕೆಟ್) ಬೌಲಿಂಗ್ನಲ್ಲಿ ಪ್ರಭಾವಿ ಪ್ರದರ್ಶನ ನೀಡಿದರೆ, ಬ್ಯಾಟಿಂಗ್ನಲ್ಲಿ 77 ರನ್ ಬಾರಿಸಿದ ಡೆವೋನ್ ಕಾನ್ವೆ ಸುಲಭ ವಿಜಯದ ನೇತೃತ್ವ ವಹಿಸಿದರು. ಇದು ಚೆನ್ನೂ ಸೂಪರ್ ಕಿಂಗ್ಸ್ ತಂಡಕ್ಕೆ ಸತತ ಎರಡನೇ ಗೆಲುವಾಗಿದ್ದು ಹಾಳಿ ಆವೃತ್ತಿಯಲ್ಲಿ ಆಡಿದ ಏಳು ಪಂದ್ಯಗಳಲ್ಲಿ ನಾಲ್ಕನೇ ವಿಜಯವಾಗಿದೆ. ಅತ್ತ ಎಸ್ಆರ್ಎಚ್ ತಂಡ ಆಡಿರುವ ಆರು ಪಂದ್ಯಗಳಲ್ಲಿ ಸತತ ಎರಡನೇ ಹಾಗೂ ಒಟ್ಟು ನಾಲ್ಕನೇ ಪರಾಜಯಕ್ಕೆ ಒಳಗಾಯಿತು.
ಚೆಪಾಕ್ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆಯುತ್ತಿರುವ ಹಣಾಹಣಿಯಲ್ಲಿ ಟಾಸ್ ಗೆದ್ದ ಚೆನ್ನೈ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಅಂತೆಯೇ ಮೊದಲು ಬ್ಯಾಟ್ ಮಾಡಿದ ಸನ್ರೈಸರ್ಸ್ ಹೈದರಾಬಾದ್ ಬಳಗ 20 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 134 ರನ್ ಬಾರಿಸಿತು. ಸಾಧಾರಣ ಗುರಿ ಬೆನ್ನಟ್ಟಿದ ಚೆನ್ನೈ ತಂಡ 18.4 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 138 ರನ್ ಬಾರಿಸಿ ಗೆಲುವು ತನ್ನದಾಗಿಸಿಕೊಂಡಿತು