ಮುಂಬಯಿ: ಟೂರ್ನಿಯುದ್ದಕ್ಕೂ ಅತ್ಯುತ್ತಮ ಪ್ರದರ್ಶನ ನೀಡಿದ ಎಂಐ ನ್ಯೂಯಾರ್ಕ್ ತಂಡವು (Major league cricket) ಟೆಕ್ಸಾಸ್‌ನ ಗ್ರ್ಯಾಂಡ್ ಪ್ರೈರೀ ಸ್ಟೇಡಿಯಂನಲ್ಲಿ ನಡೆದ ಮೇಜರ್ ಲೀಗ್ ಕ್ರಿಕೆಟ್ (ಎಂಎಲ್ಸಿ) ಉದ್ಘಾಟನಾ ಆವೃತ್ತಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಫೈನಲ್ ಪಂದ್ಯದಲ್ಲಿ ಸಿಯಾಟೆಲ್ ಒರ್ಕಾಸ್ ತಂಡವನ್ನು ಸೋಲಿಸುವ ಮೂಲಕ ಚಾಂಪಿಯನ್ಪಟ್ಟ ಅಲಂಕರಿಸಿತು.
ಎಂಐ ನ್ಯೂಯಾರ್ಕ್ ತಂಡವು ಫೈನಲ್ ಪಂದ್ಯದಲ್ಲಿ 184 ರನ್ಗಳ ಗೆಲುವಿನ ಸವಾಲನ್ನು ಪಡೆದಿತ್ತು. ಕೇವಲ 16 ಓವರ್‌ಗಳಲ್ಲಿ ಬೆನ್ನಟ್ಟಿ 6 ವಿಕೆಟ್ಗಳ ಗೆಲುವು ಸಾಧಿಸಿತು. ನಾಯಕ ನಿಕೋಲಸ್ ಪೂರನ್ ಅಜೇಯ ಶತಕದೊಂದಿಗೆ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು.
ಅಮೆರಿಕದ ಕ್ರಿಕೆಟ್ ಮಂಡಳಿಯಿಂದ (ಯುಎಸ್ಎ ಕ್ರಿಕೆಟ್) ಮಾನ್ಯತೆ ಪಡೆದ ಅಮೆರಿಕದ ಟಿ20 ಲೀಗ್ ಆಗಿರುವ ಮೇಜರ್ ಲೀಗ್ ಕ್ರಿಕೆಟ್ (ಎಂಎಲ್ಸಿ) ಉದ್ಘಾಟನಾ ಆವೃತ್ತಿಯ ಪಂದ್ಯಗಳನ್ನು ಎರಡು ಸ್ಥಳಗಳಲ್ಲಿ ಆಯೋಜಿಸಲಾಯಿತು. ಟೆಕ್ಸಾಸ್‌ನ ಗ್ರ್ಯಾಂಡ್ ಪ್ರೈರೀ ಸ್ಟೇಡಿಯಂ ಮತ್ತು ಮೋರಿಸ್‌ವಿಲ್ಲೆಯ ಚರ್ಚ್ ಸ್ಟ್ರೀಟ್ ಪಾರ್ಕ್ನಲ್ಲಿ ಜುಲೈ 13ರಿಂದ 30ರವರೆಗೆ ಟೂರ್ನಿ ನಡೆಯಿತು. ಮೊದಲ ಆವೃತ್ತಿಯು ಆರು ತಂಡಗಳನ್ನು ಒಳಗೊಂಡಿತ್ತು.
ಮೇಜರ್ ಲೀಗ್ ಕ್ರಿಕೆಟ್ ಅಮೆರಿಕದಲ್ಲಿ ಆರಂಭಗೊಂಡಿರುವ ಟಿ20 ಕ್ರಿಕೆಟ್ ಲೀಗ್ ಆಗಿದೆ. ಜುಲೈ 13ರಂದು ಉದ್ಘಾಟನೆಗೊಂಡಿತು. ಅಂತೆಯೇ ಫೈನಲ್ ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಎಮ್ಐ ತಂಡ ಚಾಂಪಿಯನ್ಪಟ್ಟ ಅಲಂಕರಿಸಿತು. ಗೆಲುವಿನ ಕುರಿತು ಮಾತನಾಡಿ ತಂಡದ ಮಾಲಕಿ ನೀತಾ ಎಂ. ಅಂಬಾನಿ ಇದೊಂದು ‘ನಂಬಲಾಗದ ಮತ್ತು ರೋಮಾಂಚನಕಾರಿ’ ಅನುಭವ ಎಂದು ವಿವರಿಸಿದರು.
ವಿಶ್ವದ ಕೆಲವು ಅತ್ಯುತ್ತಮ ಆಟಗಾರರ ಪ್ರದರ್ಶನದ ಮೂಲಕ ಪ್ರಭಾವ ಶ್ಲಾಘಿಸಿದ ಅವರು ‘ಹಬ್ಬದಂಥ ವಾತಾವರಣ ಮೇಜರ್ ಲೀಗ್ ಟೂರ್ನಿಯ ವೇಳೆ ಕಂಡುಬಂತು. ಈ ಪ್ರದೇಶದಲ್ಲಿ ಕ್ರಿಕೆಟ್ ಅಭಿವೃದ್ಧಿಯ ನಿಟ್ಟಿನಲ್ಲಿ ಎಂಎಲ್ಸಿ ಟೂರ್ನಿ ಒಂದು ಮಹತ್ವದ ಹೆಜ್ಜೆ ಎಂದು ನಾನು ಭಾವಿಸುತ್ತೇನೆ. ಕ್ರೀಡೆಯು ಸಮಾಜದ ತಳಹದಿಯಾಗಿರಬಹುದು ಮತ್ತು ವಿಶೇಷವಾಗಿ ಅಮೆರಿಕದಲ್ಲಿ ಇದು ಸಂಸ್ಕೃತಿಯ ದೊಡ್ಡ ಭಾಗವಾಗಿದೆ. ಆದ್ದರಿಂದ, ನಾವು ಎಂಎಲ್‌ಸಿಯೊಂದಿಗೆ ಕೈಜೋಡಿಸುವುದು ಮತ್ತು ಈ ಪ್ರದೇಶದಲ್ಲಿ ಕ್ರಿಕೆಟ್ ಬೆಳವಣಿಗೆ ಮತ್ತು ಅಭಿವೃದ್ಧಿಯಲ್ಲಿ ನಮ್ಮ ಪಾತ್ರವನ್ನು ನಿರ್ವಹಿಸುವುದು ಅದ್ಭುತವಾಗಿದೆ ಎಂದು ಹೇಳಿದರು.
ಐದು ಲೀಗ್‌ಗಳಲ್ಲಿ ಅಸ್ತಿತ್ವವನ್ನು ಹೊಂದಿರುವ ಮುಂಬೈ ಇಂಡಿಯನ್ಸ್, ನಿಜವಾದ ಜಾಗತಿಕ ಫ್ರಾಂಚೈಸಿ ಆಗಿದೆ. ಇದರ ಹಿಂದಿನ ದೂರದೃಷ್ಟಿಯ ಬಗ್ಗೆ ಮಾತನಾಡಿದ ನೀತಾ ಎಂ. ಅಂಬಾನಿ ವಿಶ್ವದಾದ್ಯಂತ ಕ್ರಿಕೆಟ್ ಬೆಳವಣಿಗೆಯನ್ನು ನೋಡುವುದು ಅದ್ಭುತವಾಗಿದೆ ಮತ್ತು ವಿಶೇಷವಾಗಿ ಎಂಐ ತಂಡವು ಯುಎಇ, ದಕ್ಷಿಣ ಆಫ್ರಿಕಾ ಬಳಿಕ ಈಗ ಅಮೆರಿಕದಲ್ಲಿ ನೆಲೆಯೂರಿದೆ. ನಮ್ಮಲ್ಲಿ ಮಹಿಳಾ ತಂಡವೂ ಇದೆ ಎಂಬುದೇ ಹೆಮ್ಮೆಯ ಸಂಗತಿ ಎಂದು ಹೇಳಿದರು.
ಇದನ್ನೂ ಓದಿ : IPL 2024 : ಸ್ಟಾರ್ ಆಟಗಾರರ ಜೇಬಿಗೆ ಬೀಳಲಿದೆ ಇನ್ನಷ್ಟು ಹಣ; ದೊಡ್ಡದಾಗಲಿದೆ ಐಪಿಎಲ್ ತಂಡಗಳ ಪರ್ಸ್
ನೀತಾ ಎಂ. ಅಂಬಾನಿ ಅವರು ಎಂಐನ ಅನನ್ಯ ‘ಒಂದು ಕುಟುಂಬ’ (#OneFamily) ಎಂಬ ಪರಿಕಲ್ಪನೆ ಮತ್ತು ಅದು ಏನನ್ನು ಸೂಚಿಸುತ್ತದೆ ಎಂಬುದರ ಕುರಿತು ಮಾತನಾಡಿದರು. ‘ನಾವು ಎಂಐ ತಂಡವನ್ನು ಒಂದು ಕುಟುಂಬ ಎಂದು ನಾವು ನಂಬುತ್ತೇವೆ. ಅದು ನಮ್ಮ ನೀತಿಯಾಗಿದೆ. ಇದು ಕೇವಲ ಆಟಗಾರರು ಮತ್ತು ಸಹಾಯಕ ಸಿಬ್ಬಂದಿಯನ್ನು ಮಾತ್ರ ಒಳಗೊಂಡಿರುವುದಿಲ್ಲ. ಜತೆಗೆ ನಮ್ಮ ಅಭಿಮಾನಿಗಳೂ ಇದರಲ್ಲಿ ಸೇರಿದ್ದಾರೆ. ಅವರ ಕೊಡುಗೆಯಿಂದಾಗಿಯೇ ಇಂದು ಎಂಐ ತಂಡವನ್ನು ಜಾಗತಿಕ ಬ್ರ್ಯಾಂಡ್ ಆಗಿ ರೂಪಿಸಲು ಸಾಧ್ಯವಾಗಿದೆ. ಎಲ್ಲರಿಗೂ ಶಿಕ್ಷಣ ಮತ್ತು ಕ್ರೀಡೆ ಎಂಬುದು ನಮಗೆ ಪ್ರಮುಖ ಅಭಿಯಾನಗಳಲ್ಲಿ ಒಂದಾಗಿದೆ. ಈ ಅಭಿಯಾನವು ಹಿಂದುಳಿದ ಹಿನ್ನೆಲೆಯಿಂದ ಬಂದ ಭಾರತದ 22 ದಶಲಕ್ಷ ಮಕ್ಕಳನ್ನು ಬೆಂಬಲಿಸಿದೆ. ಹಾಗಾಗಿ ಅವರೆಲ್ಲರನ್ನೂ ಒಂದು ಕುಟುಂಬ ಮತ್ತು ಎಂಐ ಕುಟುಂಬ ಎಂದು ಕರೆಯಲು ನಮಗೆ ತುಂಬಾ ಹೆಮ್ಮೆಯಾಗುತ್ತಿದೆ’ ಎಂದರು.