Site icon Vistara News

Malaysia Masters Final: ಮಲೇಷ್ಯಾ ಮಾಸ್ಟರ್ಸ್ ಫೈನಲ್​ನಲ್ಲಿ ಸೋಲು ಕಂಡ ಪಿ.ವಿ.ಸಿಂಧು

Malaysia Masters Final

Malaysia Masters Final: PV Sindhu lost in Malaysia Masters Final

ಕೌಲಾಲಂಪುರ: ಕಳೆದೆರಡು ವರ್ಷಗಳಿಂದ ಪ್ರಶಸ್ತಿ ಬರ ಎದುರಿಸುತ್ತಿದ್ದ ಭಾರತದ ತಾರಾ ಶಟ್ಲರ್ ಪಿ.ವಿ.ಸಿಂಧು(PV Sindhu)ಗೆ ಮತ್ತೆ ನಿರಾಸೆ ಉಂಟಾಗಿದೆ. ಭಾನುವಾರ ಇಲ್ಲಿ ನಡೆದ ಮಲೇಷ್ಯಾ ಮಾಸ್ಟರ್ಸ್ ಸೂಪರ್ 500 ಬ್ಯಾಡ್ಮಿಂಟನ್(Malaysia Masters final) ಟೂರ್ನಿಯ ಫೈನಲ್‌ನಲ್ಲಿ ಚೀನಾದ ವಾಂಗ್‌ ಝಿ ಯಿ ವಿರುದ್ಧ ಸೋಲು ಕಂಡಿದ್ದಾರೆ.

ಭಾನುವಾರ ನಡೆದ ಮಹಿಳಾ ಸಿಂಗಲ್ಸ್​ನ ಮೂರು ಗೇಮ್​ಗಳ ಮ್ಯಾರಥಾನ್‌ ಫೈನಲ್‌ ಸೆಣಸಾಟದಲ್ಲಿ 5ನೇ ಶ್ರೇಯಾಂಕದ, 15ನೇ ರ್‍ಯಾಂಕ್‌ನ ಸಿಂಧು ಚೀನಾದ ದ್ವಿತೀಯ ಶ್ರೇಯಾಂಕದ ಹಾಗೂ 7ನೇ ರ್‍ಯಾಂಕ್‌ನ ವಾಂಗ್‌ ಝಿ ಯಿ ವಿರುದ್ಧ 21-16, 5-21, 21-16 ಗೇಮ್​ಗಳ ಅಂತರದಿಂದ ಸೋಲು ಕಂಡರು. ಇದು ವಾಂಗ್‌ ಝಿ ಯಿ(Wang Zhi Yi) ವಿರುದ್ಧ ಸಿಂಧುಗೆ ಎದುರಾದ 2ನೇ ಸೋಲಾಗಿದೆ. ಒಟ್ಟು 4 ಬಾರಿ ಉಭಯ ಆಟಗಾರ್ತಿಯರು ಮುಖಾಮುಖಿಯಾಗಿದ್ದಾರೆ.

ಇದನ್ನು ಓದಿ ಪಿ.ವಿ ಸಿಂಧು-ನೀರಜ್ ಚೋಪ್ರಾ ಮಧ್ಯೆ ಪ್ರೇಮಾಂಕುರ? ಅನುಮಾನ ಹುಟ್ಟಿಸಿದ​ ಪೋಸ್ಟ್​!

ಮೊದಲ ಗೇಮ್​ನಲ್ಲಿ ಅತ್ಯಂತ ಜೋಶ್​ನಿಂದ ಆಡಿದ ಸಿಂಧು 21-16 ಗೇಮ್​ಗಳ ಅಂತರದಿಂದ ಗೆದ್ದು ಮುನ್ನಡೆ ಸಾಧಿಸಿದರು. ಆದರೆ, ದ್ವಿತೀಯ ಗೇಮ್​ನಲ್ಲಿ ತಿರುಗಿ ಬಿದ್ದ ವಾಂಗ್‌ ಝಿ ತಮ್ಮ ಬಲಿಷ್ಠ ಹೊಡೆತಗಳ ಮೂಲಕ 21-5 ಅಂತರದ ಗೆಲುವು ಸಾಧಿಸಿ ಪಂದ್ಯವನ್ನು 1-1 ಸಮಬಲಕ್ಕೆ ತಂದರು. ಅಂತಿಮ ಹಾಗೂ ನಿರ್ಣಾಯಕ ಗೇಮ್‌ನಲ್ಲಿ ಇವರಿಬ್ಬರ ನಡುವೆ ತೀವ್ರ ಪೈಪೋಟಿಯೇ ನಡೆಯಿತು. ಆರಂಭದಲ್ಲಿ ಭಾರೀ ಹಿನ್ನಡೆಯಲ್ಲಿದ್ದ ವಾಂಗ್‌ ಝಿ ಆ ಬಳಿಕ ಸತತವಾಗಿ ಅಂಕಗಳಿಸಿ 14-13 ಮುನ್ನಡೆ ಕಾಯ್ದುಕೊಂಡರು. ಆನಂತರವೂ ಸತತ ಅಂಕಗಳಿಂದ ಪಂದ್ಯವನ್ನು ಗೆದ್ದು ಬೀಗಿದರು.

ಸಿಂಧು 2022ರಲ್ಲಿ ಸ್ವಿಸ್ ಓಪನ್, ಸಿಂಗಾಪೂರ ಓಪನ್, ಸೆಯ್ಯದ್ ಮೋದಿ ಇಂಟರ್‌ನ್ಯಾಷನಲ್ ಟೂರ್ನಿಯಲ್ಲಿ ಗೆದ್ದಿದ್ದರು. ಆ ಬಳಿಕ ಯಾವುದೇ ಟೂರ್ನಿಯಲ್ಲಿ ಚಾಂಪಿಯನ್ ಆಗಿಲ್ಲ. ಕಳೆದ ವರ್ಷ ಸ್ಪೇನ್ ಮಾಸ್ಟರ್ಸ್ ಫೈನಲ್‌ಗೇರಿ ಸೋತಿದ್ದರು. ಕಳೆದ ವರ್ಷ ಮೊಣಕಾಲಿನ ಗಾಯಕ್ಕಾಗಿ ವಿಶ್ರಾಂತಿ ಪಡೆದು, ಚೇತರಿಸಿಕೊಂಡ ಬಳಿಕ ಅವರಿಗೆ ಫಾರ್ಮ್‌ ಕಂಡುಕೊಳ್ಳಲು ಸಾಧ್ಯವಾಗಿರಲಿಲ್ಲ. ಮಲೇಷ್ಯಾ ಮಾಸ್ಟರ್ಸ್ ಮೂಲಕ 2 ವರ್ಷಗಳ ಬಳಿಕ ಪ್ರಶಸ್ತಿಯೊಂದನ್ನು ಗೆಲ್ಲುವ ಇರಾದೆಯಲ್ಲಿದ್ದ ಸಿಂಧುಗೆ ಫೈನಲ್​ನಲ್ಲಿ ವಾಂಗ್‌ ಝಿ ಅಡಗಾಲಿಕ್ಕಿದರು.

ಶನಿವಾರ ರಾತ್ರಿ ನಡೆದಿದ್ದ ಮಹಿಳಾ ಸಿಂಗಲ್ಸ್​ ವಿಭಾಗದ ತೀವ್ರ ಪೈಪೋಟಿಯ ಸೆಮಿಫೈನಲ್‌ ಸೆಣಸಾಟದಲ್ಲಿ 5ನೇ ಶ್ರೇಯಾಂಕದ ಸಿಂಧು ಥಾಯ್ಲೆಂಡ್‌ನ‌ 20ನೇ ಶ್ರೇಯಾಂಕದ ಆಟಗಾರ್ತಿ ಬುಸಾನನ್‌(Busanan Ongbamrungphan) ವಿರುದ್ಧ 13-21, 21-16, 21-12 ಅಂತರದಿಂದ ಗೆಲುವು ಸಾಧಿಸಿದ್ದರು. ಕ್ವಾರ್ಟರ್​ ಫೈನಲ್‌ ಪಂದ್ಯದಲ್ಲಿ ವಿಶ್ವ ನಂ.6, ಚೀನಾದ ಹ್ಯಾನ್‌ ಯು ವಿರುದ್ಧ ತೀವ್ರ ಹೋರಾಟ ನಡೆಸಿ ಸಿಂಧು 21-13, 14-21, 21-12ಅಂತರದಲ್ಲಿ ಗೆಲುವು ಸಾಧಿಸಿದ್ದರು.

Exit mobile version