Site icon Vistara News

Malaysia Masters: ಚಿನ್ನದ ಪದಕಕ್ಕೆ ಕೊರಳೊಡ್ಡಿದ ಪ್ರಣಯ್

BWF Malaysia Masters

ಕೌಲಾಲಂಪುರ: ಭಾರತದ ಸ್ಟಾರ್‌ ಶಟ್ಲರ್‌ ಎಚ್‌.ಎಸ್‌. ಪ್ರಣಯ್‌ ಅವರು ಮಲೇಷ್ಯಾ ಮಾಸ್ಟರ್ ಬ್ಯಾಡ್ಮಿಂಟನ್‌(Malaysia Masters) ಟೂರ್ನಿಯಲ್ಲಿ ಚಿನ್ನದ ಪದಕ್ಕೆ ಕೊರಳೊಡ್ಡಿದ್ದಾರೆ. ಈ ಮೂಲಕ ಚೊಚ್ಚಲ ಬಿಡಬ್ಲ್ಯುಎಫ್ ವರ್ಲ್ಡ್ ಟೂರ್‌ ಪ್ರಶಸ್ತಿಯೊಂದಿಗೆ ಮಿನುಗಿದ್ದಾರೆ.

ಭಾನುವಾರ ರಾತ್ರಿ ಇಲ್ಲಿ ನಡೆದ ಅತ್ಯಂತ ಜಿದ್ದಾಜಿದ್ದಿನ ಪುರುಷರ ಸಿಂಗಲ್ಸ್‌ ಫೈನಲ್​ನಲ್ಲಿ ಎಚ್‌.ಎಸ್‌. ಪ್ರಣಯ್‌ 21-19, 13-21, 21-18ರಿಂದ ಚೀನದ ವೆಂಗ್‌ ಹಾಂಗ್‌ ಯಾಂಗ್‌ ಅವರನ್ನು ಮಣಿಸಿದರು. ಇದರೊಂದಿಗೆ ಅವರ 6 ವರ್ಷಗಳ ಪ್ರಶಸ್ತಿ ಬರ ನೀಗಿತು. ಜತೆಗೆ ಭಾರತಕ್ಕೆ ವರ್ಷದ ಮೊದಲ ಬ್ಯಾಡ್ಮಿಂಟನ್‌ ಸಿಂಗಲ್ಸ್‌ ಪ್ರಶಸ್ತಿ ಒಲಿಯಿತು.

94 ನಿಮಿಷಗಳ ಕಾಲ ಸಾಗಿದ ಈ ಮ್ಯಾರಥಾನ್​ ಹೋರಾಟದಲ್ಲಿ ಮೊದಲ ಗೇಮ್​ನಲ್ಲಿ 2 ಅಂಕಗಳ ಅಂತರದಲ್ಲಿ ಗೆಲುವು ದಾಖಲಿಸಿದರು. ಆದರೆ ದ್ವಿತೀಯ ಗೇಮ್‌ನಲ್ಲಿ ತಿರುಗಿ ಬಿದ್ದ ವೆಂಗ್‌ ಹಾಂಗ್‌ ಯಾಂಗ್‌ 7 ಅಂಕಗಳ ಅಂತರದಿಂದ ಗೆದ್ದು ಪಂದ್ಯವನ್ನು ಸಮಬಲಕ್ಕೆ ತಂದರು. ಅಂತಿಮ ಹಾಗೂ ನಿರ್ಣಾಯಕ ಗೇಮ್​ನಲ್ಲಿ ಉಭಯ ಆಟಗಾರರ ಮಧ್ಯೆ ಗೆಲುವಿಗಾಗಿ ತೀವ್ರ ಪೈಪೋಟಿ ನಡೆಯಿತು. ಛಲ ಬಿಡದ ಪ್ರಣಯ್​ ಅಂತಿಮವಾಗಿ ಗೆದ್ದು ಪದಕಕ್ಕೆ ಮುತ್ತಿಕ್ಕಿದರು. 2022ರ ಏಷ್ಯನ್‌ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ಜಯಿಸಿದ್ದ ವೆಂಗ್‌ ಹಾಂಗ್‌ ಯಾಂಗ್‌ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟರು.

ಪ್ರಣಯ್‌ ಅವರು 2017ರ ಯುಎಸ್‌ ಓಪನ್‌ ಗ್ರ್ಯಾನ್‌ಪ್ರಿ ಚಿನ್ನದ ಪದಕ ಗೆದ್ದ ಬಳಿಕ ಪ್ರಶಸ್ತಿಯ ಬರಗಾಲದಲ್ಲಿದ್ದರು. ಕಳೆದ ವರ್ಷ ಸ್ವಿಸ್‌ ಓಪನ್‌ ಫೈನಲ್‌ ಪ್ರವೇಶಿಸಿದರೂ ಪ್ರಶಸ್ತಿ ಗೆಲ್ಲುವಲ್ಲಿ ವಿಫಲರಾಗಿದ್ದರು. ಬಳಿಕ ಮಲೇಷ್ಯಾ ಮತ್ತು ಸಿಂಗಾಪುರ್‌-1000 ಕೂಟದ ಸೆಮಿಫೈನಲ್‌ನಲ್ಲೇ ಮುಗ್ಗರಿಸಿದ್ದರು. ಇದೆಲ್ಲ ಸೋಲಿಗೂ ಮಲೇಷ್ಯಾ ಮಾಸ್ಟರ್ ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲುವ ಮೂಲಕ ಮತ್ತೆ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಂಡಿದ್ದಾರೆ. ಈ ಟೂರ್ನಿಯಲ್ಲಿ ಪ್ರಣಯ್​ ಬಲಿಷ್ಠ ಆಟಗಾರರಿಗೆ ಸೋಲುಣಿಸಿದ್ದರು. ಅದರಲ್ಲಿ ವಿಶ್ವದ 5ನೇ ರ್‍ಯಾಂಕಿಂಗ್‌ ಆಟಗಾರ ಚೌ ತೀನ್‌ ಚೆನ್‌, ಆಲ್‌ ಇಂಗ್ಲೆಂಡ್‌ ಚಾಂಪಿಯನ್‌ ಲೀ ಶಿ ಫೆಂಗ್‌ ಹಾಗೂ ಜಪಾನ್‌ನ ಬಲಿಷ್ಠ ಆಟಗಾರ ಕೆಂಟ ನಿಶಿಮೊಟೊ ಒಳಗೊಂಡಿದ್ದರು.

ಇದನ್ನೂ ಓದಿ Malaysia Open | ಮಲೇಷ್ಯಾ ಓಪನ್‌ ಬ್ಯಾಡ್ಮಿಂಟನ್‌; ಸೆಮಿಫೈನಲ್​ನಲ್ಲಿ ಸೋಲು ಕಂಡ ಸಾತ್ವಿಕ್‌-ಚಿರಾಗ್‌ ಜೋಡಿ!

“ಈ ಪ್ರಶಸ್ತಿ ಗೆದ್ದ ಬಳಿಕ ನನ್ನಲ್ಲಿ ಮತ್ತಷ್ಟು ಆತ್ಮವಿಶ್ವಾಸ ಮೂಡಿದೆ. ಮುಂದಿನ ವರ್ಷ ಪ್ಯಾರಿಸ್​ನಲ್ಲಿ ನಡೆಯುವ ಒಲಿಂಪಿಕ್ಸ್​ ದೃಷ್ಟಿಯಿಂದ ನನಗೆ ಸಿಕ್ಕ ಅಮೂಲ್ಯ ಗೆಲುವು ಇದಾಗಿದೆ. ಇನ್ನೂ ಕೂಡ ಕಠಿಣ ಅಭ್ಯಾಸದ ಅಗತ್ಯವಿದೆ. ಒಟ್ಟಾರೆ ಇಲ್ಲಿ ಬಲಾಡ್ಯ ಆಟಗಾರರನ್ನು ಮಣಿಸಿದ್ದು ಸಂತಸ ತಂದಿದೆ” ಎಂದು ಪ್ರಶಸ್ತಿ ಗೆದ್ದ ಬಳಿಕ ಪ್ರಣಯ್​ ಹೇಳಿದರು.

Exit mobile version