ಕೌಲಾಲಂಪುರ: ಇಲ್ಲಿ ನಡೆಯುತ್ತಿರುವ ಮಲೇಷ್ಯಾ ಮಾಸ್ಟರ್ ಬ್ಯಾಡ್ಮಿಂಟನ್(Malaysia Masters) ಟೂರ್ನಿಯಲ್ಲಿ ಭಾರತದ ಸ್ಟಾರ್ ಶಟ್ಲರ್ ಎಚ್.ಎಸ್. ಪ್ರಣಯ್ ಫೈನಲ್‌ಗೆ ಪ್ರವೇಶಿಸಿದ್ದಾರೆ. ಆದರೆ ಪದಕ ಭರವಸೆಯಾಗಿದ್ದ ಅನುಭವಿ ಆಟಗಾರ್ತಿ ಪಿ.ವಿ. ಸಿಂಧು ಸೆಮಿಫೈನಲ್‌ನಲ್ಲಿ ಸೋತು ಟೂರ್ನಿಯಿಂದ ಹೊರಬಿದ್ದಿದ್ದಾರೆ.
ಶನಿವಾರ ನಡೆದ ಸೆಮಿಫೈನಲ್ ಪಂದ್ಯದ ಮೊದಲ ಗೇಮ್ ವೇಳೆ ಪ್ರಣಯ್ ಅವರ ಎದುರಾಳಿ ಇಂಡೋನೇಷ್ಯಾದ ಕ್ರಿಸ್ಟಿಯನ್ ಆದಿನಾಥ ಅವರ ಎಡ ಮೊಣಕಾಲಿಗೆ ಗಂಭೀರ ಗಾಯವಾದ ಕಾರಣದಿಂದ ಪಂದ್ಯವನ್ನು ಅರ್ಧಕ್ಕೆ ನಿಲ್ಲಿಸಲಾಯಿತು. ಈ ವೇಳೆ 19-17ರ ಮುನ್ನಡೆಯಲ್ಲಿದ್ದ ಪ್ರಣಯ್ ಅವರು ನೇರವಾಗಿ ಫೈನಲ್ ಟಿಕೆಟ್ ಪಡೆದರು. ಇಂದು(ಭಾನುವಾರ) ನಡೆಯುವ ಫೈನಲ್‌ನಲ್ ಹಣಾಹಣಿಯಲ್ಲಿ ಪ್ರಣಯ್ ಚೀನಾದ ವೆಂಗ್ ಹಾಂಗ್ ಯಾಂಗ್ ಸವಾಲು ಎದುರಿಸಲಿದ್ದಾರೆ.
ಇದನ್ನೂ ಓದಿ Malaysia Masters: ಸೆಮಿಫೈನಲ್ಗೆ ಲಗ್ಗೆಯಿಟ್ಟ ಸಿಂಧು,ಪ್ರಣಯ್; ಶ್ರೀಕಾಂತ್ಗೆ ಸೋಲು
ಇದು ಪ್ರಸಕ್ತ ಋತುವಿನಲ್ಲಿ ಪ್ರಣಯ್ ಕಾಣುತ್ತಿರುವ ಮೊದಲ ಫೈನಲ್ ಆಗಿದೆ. ಕಳೆದ ವರ್ಷ ಸ್ವಿಸ್ ಓಪನ್ ಟೂರ್ನಿಯಲ್ಲಿ ರನ್ನರ್ ಅಪ್ ಆದ ಬಳಿಕ ಪ್ರಣಯ್ ಮೊದಲ ಸಲ ಪ್ರಶಸ್ತಿ ಸುತ್ತು ಪ್ರವೇಶಿಸಿದ್ದಾರೆ. ಗಾಯಗೊಂಡ ಆದಿನಾಥ 2019ರ ವಿಶ್ವ ಜೂನಿಯರ್ ಚಾಂಪಿಯನ್ ಆಗಿದ್ದಾರೆ.
ಸಿಂಧುಗೆ ಸೋಲು
ಪದಕ ಭರವಸೆಯಾಗಿದ್ದ ಅವಳಿ ಒಲಿಂಪಿಕ್ಸ್ ಪದಕ ವಿಜೇತೆ ಪಿ.ವಿ. ಸಿಂಧು ಅವರು ಸೆಮಿಫೈನಲ್ ಪಂದ್ಯದಲ್ಲಿ ಎಡವಿ ಸೋಲು ಕಂಡರು. ಇಂಡೋನೇಷ್ಯಾದ ಗ್ರೆಗೋ ರಿಯಾ ಮರಿಸ್ಕಾ ಟುಂಜುಂಗ್ ವಿರುದ್ಧ 14-21, 17-21 ನೇರ ಗೇಮ್‌ಗಳಿಂದ ಪರಾಭವಗೊಂಡರು. ಇದು ಟುಂಜುಂಗ್ ವಿರುದ್ಧ ಸಿಂಧು ಅನುಭವಿಸಿದ ಸತತ 2ನೇ ಸೋಲು. ಇದಕ್ಕೂ ಮೊದಲು ಈ ಇಂಡೋನೇಷ್ಯಾ ಆಟಗಾರ್ತಿ ವಿರುದ್ಧ ಸತತ 7 ಗೆಲುವು ಸಾಧಿಸಿದ ಹೆಗ್ಗಳಿಕೆ ಸಿಂಧು ಅವರದಾಗಿತ್ತು. ಆದರೆ ಇಲ್ಲಿ ಕೆಲ ಸ್ವಯಂ ತಪ್ಪುಗಳಿಂದ ಪಂದ್ಯದಲ್ಲಿ ಸೋಲು ಕಂಡರು.