Site icon Vistara News

Malaysia Masters: ಕ್ವಾರ್ಟರ್​ ಫೈನಲ್​ ಪ್ರವೇಶಿಸಿದ ಸಿಂಧು, ಶ್ರೀಕಾಂತ್‌, ಪ್ರಣಯ್​

Malaysia Masters

#image_title

ಕೌಲಾಲಂಪುರ: ಅವಳಿ ಒಲಿಂಪಿಕ್​ ಪದಕ ವಿಜೇತೆ ಪಿ.ವಿ. ಸಿಂಧು, ಶ್ರೀಕಾಂತ್‌ ಮತ್ತು ಎಚ್‌. ಎಸ್‌. ಪ್ರಣಯ್‌ ಅವರು ಉತ್ತಮ ಪ್ರದರ್ಶನ ತೋರುವ ಮೂಲಕ ಮಲೇಷ್ಯ ಮಾಸ್ಟರ್ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಕ್ವಾರ್ಟರ್​ ಫೈನಲ್​ಗೆ ಲಗ್ಗೆಯಿಟ್ಟಿದ್ದಾರೆ. ಈ ಮೂಲಕ ಭಾರತಕ್ಕೆ ಪದಕ ಭರವಸೆ ಮೂಡಿಸಿದ್ದಾರೆ. ಆದರೆ ಯುವ ಆಟಗಾರ ಲಕ್ಷ್ಯ ಸೇನ್​ ಸೋತು ಟೂರ್ನಿಯಿಂದ ನಿರ್ಗಮಿಸಿದ್ದಾರೆ.

ಗುರುವಾರ ಇಲ್ಲಿ ನಡೆದ ಮಹಿಳಾ ಸಿಂಗಲ್ಸ್​ ವಿಭಾಗದ ಸ್ಪರ್ಧೆಯಲ್ಲಿ ಆರನೇ ಶ್ರೇಯಾಂಕದ ಸಿಂಧು ಅವರು ಜಪಾನಿನ ಆಯಾ ಒಹೋರಿ ವಿರುದ್ಧ 21-16, 21-11 ಗೇಮ್​ಗಳಿಂದ ಗೆದ್ದು ಬೀಗಿದರು. ಆರಂಭದಿಂದಲೇ ಆಕ್ರಮಣ ಆಟಕ್ಕೆ ಒತ್ತು ಕೊಟ್ಟ ಸಿಂಧು ಎದುರಾಳಿ ವಿರುದ್ಧ ಸುಲಭ ಗೆಲುವು ದಾಖಲಿಸಿದರು. ಕಳೆದ ಪಂದ್ಯದಲ್ಲಿ ಸಿಂಧು ಡೆನ್ಮಾರ್ಕ್‌ನ ಲಿನೆ ಕ್ರಿಸ್ಟೋಫ‌ರ್ಸನ್‌ ಅವರನ್ನು 21-13, 17-21, 21-18 ಗೇಮ್‌ಗಳಿಂದ ಸೋಲಿಸಿದ್ದರು.

ಇದನ್ನೂ ಓದಿ Malaysia Masters: ಪ್ರಧಾನ ಸುತ್ತು ಪ್ರವೇಶಿಸಿದ ಮಾಳವಿಕಾ, ಅಶ್ಮಿತಾ

ಪುರುಷರ ಸಿಂಗಲ್ಸ್​ ವಿಭಾಗದ ಹಣಾಹಣಿಯಲ್ಲಿ ಕಿದಂಬಿ ಶ್ರೀಕಾಂತ್‌ ಅವರು 21-19, 21-19 ಅಂತರದಿಂದ ಥಾಯ್ಲೆಂಡಿನ ಕುನ್ಲಾವುತ್​ ವಿಟಿಸರ್ನ್ ಅವರನ್ನು ಮಣಿಸುವಲ್ಲಿ ಯಶಸ್ವಿಯಾದರು. ಮೊದಲ ಸುತ್ತಿನ ಪಂದ್ಯದಲ್ಲಿ ಶ್ರೀಕಾಂತ್​ ಫ್ರಾನ್ಸ್‌ನ ಜೂನಿಯರ್‌ ಪೊಪೋವ್‌ ಅವರನ್ನು ಹಿಮ್ಮಟ್ಟಿಸಿದ್ದರು. ದಿನದ ಮತ್ತೊಂದು ಪುರುಷರ ಸಿಂಗಲ್ಸ್​ನಲ್ಲಿ ಎಚ್‌.ಎಸ್‌. ಪ್ರಣಯ್‌ ಚೀನಾದ ಶಿ ಫೆಂಗ್‌ ಲಿ ಎದುರು 13-21, 21-16, 21-11 ಪ್ರಯಾಸದ ಗೆಲುವು ಕಂಡರು. ಅತ್ಯಂತ ಜಿದ್ದಾಜಿದ್ದಿನಿಂದ ನಡೆದ ಈ ಹೋರಾಟದಲ್ಲಿ ಮೊದಲ ಗೇಮ್​ನಲ್ಲಿ ಪ್ರಣಯ್‌ ಹಿನ್ನಡೆ ಕಂಡರು. ಆದರೆ ಮುಂದಿನ ಎರಡು ನಿರ್ಣಾಯಕ ಗೇಮ್​ಗಳಲ್ಲಿ ತಿರುಗಿ ಬಿದ್ದು ಪಂದ್ಯವನ್ನು ತಮ್ಮ ಕೈವಶ ಮಾಡಿಕೊಂಡರು. ಆದರೆ ಭರವಸೆಯ ಆಟಗಾರನಾಗಿದ್ದ ಲಕ್ಷ್ಯ ಸೇನ್ ಅವರು ಅಗುಂಸ್​ ನಾ ಲಾಂಗ್​ ವಿರುದ್ಧ ​14-21, 19-21 ನೇರ ಗೇಮ್​ಗಳ ಅಂತರದಿಂದ ಸೋತು ನಿರಾಸೆ ಮೂಡಿಸಿದರು.

Exit mobile version