ನವದೆಹಲಿ: ಭಾರತದ ಖ್ಯಾತ ಟೇಬಲ್ ಟೆನಿಸ್(Indian table tennis player) ಆಟಗಾರ್ತಿ ಮಣಿಕಾ ಬಾತ್ರಾ(Manika Batra) ಪ್ಯಾರಿಸ್ ಒಲಿಂಪಿಕ್ಸ್(Paris Olympics 2024)ನಲ್ಲಿ ಪದಕ ಗೆಲ್ಲುವುದೇ ನನ್ನ ಪ್ರಮುಖ ಗುರಿ ಎಂದಿದ್ದಾರೆ. ಜತೆಗೆ ಕಳೆದ ಟೋಕಿಯೋದಲ್ಲಿ ಮಾಡಿದ ತಪ್ಪನ್ನು ಮತ್ತೆ ಮಾಡಲಾರೆ ಎಂದು ಹೇಳಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿದ ಮಣಿಕಾ ಬಾತ್ರಾ, “ಕಳೆದ ಒಲಿಂಪಿಕ್ಸ್ ವೇಳೆ ಕೆಲವು ತಪ್ಪುಗಳಾದವು. ಈಗ ನನ್ನ ಮನಸ್ಥಿತಿ ಬದಲಾಗಿದೆ. ಹೆಚ್ಚು ಆತ್ಮವಿಶ್ವಾಸದಿಂದ ಇದ್ದೇನೆ. ಈ ಬಾರಿ ಎಚ್ಚರಿಕೆಯಿಂದ ಮತ್ತು ಎಲ್ಲ ಪೂರ್ವ ಸಿದ್ಧತೆಯೊಂದಿಗೆ ಆಡುವ ಮೂಲಕ ಪದಕವೊಂದನ್ನು ಗೆಲ್ಲುವುದು ನನ್ನ ಪ್ರಮುಖ ಗುರಿ” ಎಂದು ಹೇಳಿದ್ದಾರೆ. ಈ ಬಾರಿ ಒಟ್ಟು ಟೇಬಲ್ ಟೆನಿಸ್‌ನಲ್ಲಿ 8 ಮಂದಿ ಆಟಗಾರರು ಕಣಕ್ಕಿಳಿಯಲಿದ್ದಾರೆ.
ಟೋಕಿಯೊದಲ್ಲಿ ನಡೆದಿದ್ದ ಒಲಿಂಪಿಕ್ಸ್‌ನಲ್ಲಿ ಮಣಿಕಾ ಬಾತ್ರಾ ಮಹಿಳಾ ಸಿಂಗಲ್ಸ್‌ನಲ್ಲಿ 3ನೇ ಸುತ್ತಿನಲ್ಲಿ ಸೋಲು ಕಂಡು ಟೂರ್ನಿಯಿಂದ ಹೊರಬಿದ್ದಿದ್ದರು. ಗೋಲ್ಡ್‌ಕೋಸ್ಟ್ ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಚಿನ್ನ ಗೆಲ್ಲುವ ಮೂಲಕ ಮಣಿಕಾ ಎಲ್ಲರ ಗಮನ ಸೆಳೆದಿದ್ದರು. ಏಷ್ಯಾ ಕಪ್ ಟೇಬಲ್ ಟೆನಿಸ್(Asian Cup Table Tennis) ಟೂರ್ನಿಯಲ್ಲಿ ಪದಕ ಗೆದ್ದ ಭಾರತದ ಮೊದಲ ಆಟಗಾರ್ತಿ ಎಂಬ ಹಿರಿಮೆಯೂ ಇವರದ್ದಾಗಿದೆ. ಕಂಚಿನ ಪದಕ ಜಯಿಸಿದ್ದರು.
ಈ ಬಾರಿಯ ಒಲಿಂಪಿಕ್ಸ್‌ನಲ್ಲಿ 117 ಕ್ರೀಡಾಪಟುಗಳು ಪದಕ ನಿರೀಕ್ಷೆಯೊಂದಿಗೆ ಸ್ಪರ್ಧಿಸಲಿದ್ದಾರೆ. ಕಳೆದ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತದ 119 ಮಂದಿ ಕ್ರೀಡಾಪಟುಗಳು ಪ್ರತಿನಿಧಿಸಿದ್ದರು.
ಅಥ್ಲೆಟಿಕ್ಸ್ನಲ್ಲಿ 29 ಸ್ಪರ್ಧಿಗಳು ಭಾರತವನ್ನು ಪ್ರತಿನಿಧಿಸಲಿದ್ದಾರೆ. 18 ಪುರುಷರು ಹಾಗೂ 11 ಮಹಿಳೆಯರು ಸೇರಿದ್ದಾರೆ. ಆರಂಭದಲ್ಲಿ ಅಥ್ಲೀಟ್ಗಳ ಸಂಖ್ಯೆ 30 ಇತ್ತು. ಆದರೆ ವನಿತಾ ಶಾಟ್‌ಪುಟರ್ ಅಭಾ ಖತುವಾ ಗೈರಿನಿಂದ 29ಕ್ಕೆ ಇಳಿಯಿತು. ಆದರೆ ಅವರನ್ನು ಕೈಬಿಟ್ಟ ಬಗ್ಗೆ ಯಾವುದೇ ಕಾರಣ ಅಥವಾ ವಿವರಣೆ ನೀಡಲಾಗಿಲ್ಲ. 29 ಸದಸ್ಯರನ್ನು ಒಳಗೊಂಡ ಟ್ರ್ಯಾಕ್ ಆ್ಯಂಡ್ ಫೀಲ್ಡ್ ತಂಡಕ್ಕೆ ಟೋಕಿಯೊ ಒಲಿಂಪಿಕ್ ಚಿನ್ನದ ಪದಕ ವಿಜೇತ, ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಅವರು ನಾಯಕನಾಗಿದ್ದಾರೆ.
ಶೂಟಿಂಗ್ನಲ್ಲಿ ಒಟ್ಟು 21 ಮಂದಿ ಸ್ಥಾನ ಪಡೆದಿದ್ದಾರೆ. 10 ಮಂದಿ ಪುರುಷರು ಹಾಗೂ 11 ಮಂದಿ ಮಹಿಳಾ ಸ್ಪರ್ಧಿಗಳು ಕಾಣಿಸಿಕೊಂಡಿದ್ದಾರೆ. ಹಾಕಿ ತಂಡದಲ್ಲಿ 19 ಆಟಗಾರರಿದ್ದಾರೆ. ಟೇಬಲ್ ಟೆನಿಸ್‌ನಲ್ಲಿ 8 ಮಂದಿ ಆಟಗಾರರು, ಬ್ಯಾಡ್ಮಿಂಟನ್ನಲ್ಲಿ 7 ಮಂದಿ ಕಣಕ್ಕಿಳಿಯಲಿದ್ದಾರೆ. ಅವಳಿ ಒಲಿಂಪಿಕ್ ಪದಕ ಗೆದ್ದ ಪಿ.ವಿ. ಸಿಂಧು ಮೇಲೆ ಹ್ಯಾಟ್ರಿಕ್ ಪದಕವೊಂದನ್ನು ನಿರೀಕ್ಷೆ ಮಾಡಲಾಗಿದೆ. ಉಳಿದಂತೆ ಕುಸ್ತಿ, ಆರ್ಚರಿ ಮತ್ತು ಬಾಕ್ಸಿಂಗ್‌ನಲ್ಲಿ ತಲಾ 6 ಮಂದಿ ಸ್ಪರ್ಧಿಸಲಿದ್ದಾರೆ.
ಗಾಲ್ಫ್ನಲ್ಲಿ 4, ಟೆನಿಸ್‌ನಲ್ಲಿ 3, ಈಜು ಮತ್ತು ಹಾಯಿದೋಣಿಯಲ್ಲಿ ತಲಾ ಇಬ್ಬರು ಕಣಕ್ಕಿಳಿಯಲಿದ್ದಾರೆ. ಈಕ್ವೇಸ್ಟ್ರಿಯನ್(ಕುದುರೆ ಸವಾರಿ), ಜೂಡೋ, ರೋಯಿಂಗ್ ಮತ್ತು ವೇಟ್‌ಲಿಫ್ಟಿಂಗ್‌ನಲ್ಲಿ ಒಬ್ಬರಷ್ಟೇ ಸ್ಪರ್ಧಿಸಲಿದ್ದಾರೆ. ಪಿ.ವಿ.ಸಿಂಧು(PV Sindhu) ಮತ್ತು ಹಿರಿಯ ಟೇಬಲ್ ಟೆನಿಸ್ ಆಟಗಾರ ಶರತ್ ಕಮಲ್(Sharath Kamal) ಉದ್ಘಾಟನಾ ಸಮಾರಂಭದಲ್ಲಿ ಭಾರತದ ಧ್ವಜಧಾರಿಯಾಗಲಿದ್ದಾರೆ.