ಪ್ಯಾರಿಸ್: ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ(paris olympics) 10 ಮೀಟರ್ ಮಹಿಳಾ ಏರ್ ಪಿಸ್ತೂಲ್ ವಿಭಾಗದಲ್ಲಿ ಕಂಚಿನ(Bronze Medalist Manu Bhaker) ಪದಕ ಗೆದ್ದು ಭಾರತೀಯರ ಮನಗೆದ್ದ ಮನು ಭಾಕರ್(Manu Bhaker) ಇದೀಗ ಮತ್ತೊಮ್ಮೆ ಭಾರತೀಯರ ಹೃದಯ ಗೆದ್ದಿದ್ದಾರೆ. ಅವರು ಭಾರತದ ರಾಷ್ಟ್ರಗೀತೆಯನ್ನು ವಯಲಿನ್ ಮೂಲಕ ನುಡಿಸಿದ ವಿಡಿಯೊವೊಂದು ವೈರಲ್ ಆಗಿದೆ.
ವೈರಲ್ ಆಗುತ್ತಿರುವ ವಿಡಿಯೊದಲ್ಲಿ ಮನು ಭಾಕರ್ ಅವರು ಸ್ವಿಮ್ಮಿಂಗ್ ಪೂಲ್ ಬಳಿ ಕುಳಿತು ವಯಲಿನ್ ಮೂಲಕ ರಾಷ್ಟ್ರಗೀತೆ ಜನ ಗಣ ಮನವನ್ನು ಬಹಳ ಇಂಪಾಗಿ ನುಡಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವರದಿಯಾದ ಪ್ರಕಾರ ಮನು ಕಂಚಿನ ಪದಕ ಗೆದ್ದ ಬಳಿಕ ವಯಲಿನ್ ನಡಿಸಿದ್ದು ಎನ್ನಲಾಗಿದೆ. ಆದರೆ, ಈ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿಲ್ಲ.
ಕಂಚಿನ ಪದಕ ಗೆಲ್ಲುವ ಮೂಲಕ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಮೊದಲ ಮಹಿಳಾ ಶೂಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಜತೆಗೆ 12 ವರ್ಷಗಳ ಬಳಿಕ ಒಲಿಂಪಿಕ್ ಶೂಟಿಂಗ್ನಲ್ಲಿ ದೇಶಕ್ಕೆ ಪದಕ ಗೆದ್ದ ಸಾಧನೆ ಮಾಡಿದ್ದರು. ಇಂದು ನಡೆಯುವ 10 ಮೀಟರ್ ಏರ್ ಪಿಸ್ತೂಲ್ ಮಿಶ್ರ ತಂಡ ಸ್ಪರ್ಧೆಯಲ್ಲಿ(Paris Olympics) ಸರಬ್ಜೊತ್ ಸಿಂಗ್ ಜತೆ ಕಂಚಿನ ಪದಕದ ಪ್ಲೇ ಆಫ್ ಸುತ್ತಿನಲ್ಲಿ ಮನು ಕಣಕ್ಕಿಳಿಯಲಿದ್ದಾರೆ. ಭಾರತದ ಈ ಜೋಡಿ ಕೊರಿಯಾದ ಒಹ್ ಯೆ ಜಿನ್-ಲೀ ವೊನ್ಹೊ ವಿರುದ್ಧ ಸ್ಪರ್ಧೆಗೆ ಇಳಿಯಲಿದ್ದಾರೆ.
ಕಳೆದ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವ ಕನಸಿನೊಂದಿಗೆ ಟೋಕಿಯೋಗೆ ಆಗಮಿಸಿದ್ದ ಮನು ಭಾಕರ್ಗೆ ಅದೃಷ್ಟ ಕೈಕೊಟ್ಟಿತ್ತು. ಕೂಟದ ಮೊದಲ ಸ್ಪರ್ಧೆಯಲ್ಲೇ ಅವರ ಪಿಸ್ತೂಲ್ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಕಾರಣ ಅವರಿಗೆ ಫೈನಲ್ಗೇರುವ ಅವಕಾಶ ಕೈತಪ್ಪಿತ್ತು. ಮೊದಲ ಸುತ್ತಿನಲ್ಲಿ ಎದುರಾಗ ಈ ಆಘಾತದಿಂದ ಚೇತರಿಕೊಳ್ಳದ ಮನು ಆ ಬಳಿಕ ಆಡಿದ 2 ಸ್ಪರ್ಧೆಗಳಲ್ಲಿಯೂ ಏಕಾಗ್ರತೆ ಸಾಧಿಸಲು ವಿಫಲರಾಗಿ ಸೋಲು ಕಂಡಿದ್ದರು. ಇದು ಅವರ ಪದಾರ್ಪಣ ಒಲಿಂಪಿಕ್ಸ್ ಕೂಟವಾಗಿತ್ತು. ಆಗ ಅವರಿಗೆ ಕೇವಲ 19 ವರ್ಷ ವಯಸ್ಸಾಗಿತ್ತು. ಅಂದಿನ ನಿರಾಸೆಯನ್ನು ಈ ಬಾರಿ ಪ್ಯಾರಿಸ್ನಲ್ಲಿ ಪದಕ ಗೆಲ್ಲುವ ಮೂಲಕ ನೀಗಿಸಿಕೊಂಡರು.
ಇದನ್ನೂ ಓದಿ Paris Olympics: ಮನು ಭಾಕರ್-ಸರಬ್ಜೊತ್ ಸಿಂಗ್ ಕಂಚಿನ ನಿರೀಕ್ಷೆ; ಭಾರತದ ಇಂದಿನ ಸ್ಪರ್ಧೆಗಳ ವಿವರ ಹೀಗಿದೆ
ಹರಿಯಾಣದ 22 ವರ್ಷದ ಮನು ಭಾಕರ್ ಕಳೆದ ಅರ್ಹತಾ ಸುತ್ತಿನಲ್ಲಿ ಒಟ್ಟು 580 ಅಂಕ ಕಲೆ ಹಾಕಿ 3ನೇ ಸ್ಥಾನದೊಂದಿಗೆ ಫೈನಲ್ಗೆ ಪ್ರವೇಶಿಸಿದ್ದರು. ಈ ಬಾರಿಯ ಒಲಿಂಪಿಕ್ಸ್ ಪದಕ ನಿರೀಕ್ಷೆಯ ಕ್ರೀಡಾಪಟುಗಳಲ್ಲಿ ಮನು ಭಾಕರ್ ಕೂಡ ಕಾಣಿಸಿಕೊಂಡಿದ್ದರು. ಭಾರತೀಯರು ನಿರೀಕ್ಷೆ ಮಾಡಿದಂತೆ ಅವರು ಪದಕ ಗೆದ್ದು ಅವರ ಮೇಲಿಟ್ಟ ನಂಬಿಕೆಯನ್ನು ಉಳಿಸಿಕೊಂಡಿದ್ದಾರೆ.