ಪ್ಯಾರಿಸ್: ಭಾನುವಾರವಷ್ಟೇ 10 ಮೀಟರ್ ಮಹಿಳಾ ಏರ್ ಪಿಸ್ತೂಲ್ ವಿಭಾಗದಲ್ಲಿ ಕಂಚಿನ(Bronze Medalist Manu Bhaker) ಪದಕ ಗೆದ್ದು ಇತಿಹಾಸ ನಿರ್ಮಿಸಿದ್ದ ಶೂಟರ್ ಮನು ಭಾಕರ್(Manu Bhaker) ಇದೀಗ ಮತ್ತೊಂದು ಕಂಚಿನ ಪದಕ ಗೆದ್ದು ಐತಿಹಾಸಿಕ ಸಾಧನೆಯೊಂದನ್ನು ಮಾಡಿದ್ದಾರೆ.
ಮಂಗಳವಾರ ನಡೆದ 10 ಮೀ. ಏರ್ ಪಿಸ್ತೂಲ್ ಮಿಶ್ರ ತಂಡ ವಿಭಾಗದ ಸ್ಪರ್ಧೆಯಲ್ಲಿ ಸರಬ್ಜೋತ್ ಸಿಂಗ್ ಜತೆಗೂಡಿ ಮನು ಭಾಕರ್ ಕಂಚಿನ ಪದಕ ಗೆಲ್ಲುವ ಮೂಲಕ ಒಂದೇ ಒಲಿಂಪಿಕ್ಸ್‌ನಲ್ಲಿ ಎರಡು ಪದಕ ಜಯಿಸಿದ ಭಾರತದ ಮೊದಲ ಕ್ರೀಡಾಪಟು ಎಂಬ ಐತಿಹಾಸಿಕ ಸಾಧನೆ ಮಾಡಿದರು. ಭಾರತೀಯ ಜೋಡಿ ದಕ್ಷಿಣ ಕೊರಿಯಾದ ಯೆ ಜಿನ್ ಒಹ್ ಮತ್ತು ವೊನೊಹೊ ಲೀ ವಿರುದ್ಧ 16-10 ಅಂಕಗಳಿಂದ ಗೆದ್ದು ಕಂಚಿನ ಪದಕ ತನ್ನದಾಗಿಸಿಕೊಂಡಿತು.
22 ವರ್ಷದ ಮನು ಭಾಕರ್ ಈ ಬಾರಿಯ ಒಲಿಂಪಿಕ್ಸ್ ಪದಕ ನಿರೀಕ್ಷೆಯ ಕ್ರೀಡಾಪಟುಗಳ ಪಟ್ಟಿಯಲ್ಲಿ ಒಬ್ಬರಾಗಿ ಕಾಣಿಸಿಕೊಂಡಿದ್ದರು. ಇದೀಗ ಭಾರತೀಯರು ನಿರೀಕ್ಷೆ ಮಾಡಿದಂತೆ ಅವರು ಒಂದಲ್ಲ 2 ಪದಕ ಗೆದ್ದು ತಮ್ಮ ಮೇಲಿಟ್ಟ ನಿರೀಕ್ಷೆಯನ್ನು ಹುಸಿಯಾಗದಂತೆ ನೋಡಿಕೊಂಡಿದ್ದಾರೆ.
ಕಳೆದ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವ ಕನಸಿನೊಂದಿಗೆ ಟೋಕಿಯೋಗೆ ಆಗಮಿಸಿದ್ದ ಮನು ಭಾಕರ್ಗೆ ಅದೃಷ್ಟ ಕೈಕೊಟ್ಟಿತ್ತು. ಕೂಟದ ಮೊದಲ ಸ್ಪರ್ಧೆಯಲ್ಲೇ ಅವರ ಪಿಸ್ತೂಲ್ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಕಾರಣ ಅವರಿಗೆ ಫೈನಲ್ಗೇರುವ ಅವಕಾಶ ಕೈತಪ್ಪಿತ್ತು. ಮೊದಲ ಸುತ್ತಿನಲ್ಲಿ ಎದುರಾಗ ಈ ಆಘಾತದಿಂದ ಚೇತರಿಕೊಳ್ಳದ ಮನು ಆ ಬಳಿಕ ಆಡಿದ 2 ಸ್ಪರ್ಧೆಗಳಲ್ಲಿಯೂ ಏಕಾಗ್ರತೆ ಸಾಧಿಸಲು ವಿಫಲರಾಗಿ ಸೋಲು ಕಂಡಿದ್ದರು. ಇದು ಅವರ ಪದಾರ್ಪಣ ಒಲಿಂಪಿಕ್ಸ್ ಕೂಟವಾಗಿತ್ತು. ಅಂದಿನ ಸೋಲಿನಿಂದ ಮನನೊಂದು ಶೂಟಿಂಗ್ಗೆ ವಿದಾಯ ಹೇಳಲು ಬಯಸಿದ್ದ ಮನು ತಂದೆಯ ಆತ್ಮವಿಶ್ವಾಸದ ಮಾತಿನಂತೆ ಶೂಟಿಂಗ್ನಲ್ಲಿ ಮುಂದುವರಿದಿದ್ದರು. ಈ ಬಾರಿ ಪ್ಯಾರಿಸ್ನಲ್ಲಿ 2 ಪದಕ ಗೆದ್ದು ಭಾರತೀಯ ಒಲಿಂಪಿಕ್ಸ್ ಕ್ರೀಡಾ ಇತಿಹಾಸದಲ್ಲಿ ತಮ್ಮ ಹೆಸರನ್ನು ದಾಖಲಿಸಿದ್ದಾರೆ.
ಮೋದಿ ಅಭಿನಂದನೆ
ಪದಕ ಗೆದ್ದ ಸರಬ್ಜೋತ್ ಸಿಂಗ್ ಮತ್ತು ಮನು ಭಾಕರ್ಗೆ ಪ್ರಧಾನಿ ನರೇಂದ್ರ ಮೋದಿ ಟ್ವಿಟರ್ ಎಕ್ಸ್ನಲ್ಲಿ ಅಭಿನಂದನೆ ಸಲ್ಲಿದ್ದಾರೆ. ‘ಒಲಿಂಪಿಕ್ಸ್‌ನಲ್ಲಿ ನಮ್ಮ ಶೂಟರ್‌ಗಳು ನಮ್ಮನ್ನು ಹೆಮ್ಮೆ ಪಡಿಸುವುದನ್ನು ಮುಂದುವರೆಸಿದ್ದಾರೆ! ಇಬ್ಬರೂ ಶೂಟರ್‌ಗಳು ಉತ್ತಮ ಕೌಶಲ್ಯ ಮತ್ತು ಟೀಮ್ ವರ್ಕ್ ತೋರಿದ್ದಾರೆ. ನಿಮ್ಮ ಈ ಸಾಧನೆಯಿಂದ ಭಾರತ ಸಂತಸಗೊಂಡಿದೆ. 2ನೇ ಪದಕ ಗೆದ್ದ ಮನು ಅವರಿಗೆ ವಿಶೇಷ ಅಭಿನಂದನೆಗಳು” ಎಂದು ಮೋದಿ ಬರೆದುಕೊಂಡಿದ್ದಾರೆ.