ಚೆನ್ನೈ: ಅವಳಿ ಒಲಿಂಪಿಕ್ಸ್ ಪಕದ ವಿಜೇತೆ ಮನು ಭಾಕರ್(Manu Bhaker) ಅವರು ಚೆನ್ನೈಯಲ್ಲಿ ನಡೆದಿದ್ದ ಶಾಲಾ ಕಾರ್ಯಕ್ರಮವೊಂದಲ್ಲಿ ಪಾಲ್ಗೊಂಡಿದ್ದರು. ಕ್ರೀಡಾ ಸ್ಕಾಲರ್‌ಷಿಪ್ ವಿತರಣಾ ಕಾರ್ಯಕ್ರಮ ಇದಾಗಿತ್ತು. ಈ ವೇಳೆ ಅವರಿಗೆ ತಮಿಳುನಾಡಿನ ಕುರಿತಾದ ಹಲವು ಪ್ರಶ್ನೆಗಳನ್ನು ಕೇಳಲಾಯಿತು. ಇದರೊಲ್ಲೊಂದು ಪ್ರಶ್ನೆ, ತಮಿಳುನಾಡು ಮುಖ್ಯಮಂತ್ರಿ(Tamil Nadu CM) ಎಂ.ಕೆ. ಸ್ಟಾಲಿನ್(MK Stalin) ಗೊತ್ತೇ ಎಂಬುದಾಗಿತ್ತು. ಈ ಪ್ರಶ್ನೆಗೆ ಉತ್ತರಿಸಿದ ಮನು ಭಾಕರ್ ನನಗೆ ಅವರು ಯಾರೆಂದೆ ತಿಳಿದಿಲ್ಲ ಎಂದು ಹೇಳುವ ಮೂಲಕ ಜೋರಾಗಿ ನಕ್ಕರು. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದವರು ಕೂಡ ಮನು ಅವರ ಈ ಪ್ರತಿಕ್ರಿಯೆ ಕೇಳಿ ಜೋರಾಗಿ ನಕ್ಕರು. ಸದ್ಯ ಈ ವಿಡಿಯೊ ವೈರಲ್(viral video) ಆಗಿದೆ.
ತಮಿಳುನಾಡಿನ ವಿಶೇಷ ಖಾದ್ಯ ಪೊಂಗಲ್, ಮಧುರೈ ಮೀನಾಕ್ಷಿ ದೇವಸ್ಥಾನ, ಸಿನಿಮಾ ನಟ ವಿಜಯ್(Vijay) ತಿಳಿದಿದೆಯಾ? ಹೀಗೆ ಹಲವು ಪ್ರಶ್ನೆಗಳನ್ನು ಮನು ಭಾಕರ್ ಅವರಿಗೆ ಕೇಳಲಾಯಿತು. ನಟ ವಿಜಯ್ ಅವರನ್ನು ಹೊರತುಪಡಿಸಿ ಉಳಿದ ಯಾವುದರ ಬಗ್ಗೆಯೂ ತಿಳಿದಿಲ್ಲ ಎಂದು ಹೇಳಿದರು. ಅದರಲ್ಲೂ ಸಿಎಂ ಸ್ಟಾಲಿನ್ ತಿಳಿದಿಲ್ಲ ಎನ್ನುವ ಪ್ರತಿಕ್ರಿಯೆಯ ವಿಡಿಯೊ ಮಾತ್ರ ತುಂಬಾ ವೈರಲ್ ಆಗಿದೆ. ಸ್ಟಾಲಿನ್ ವಿರೋಧಿಗಳು ಈ ವಿಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಟ್ರೋಲ್ ಮಾಡಿದ್ದಾರೆ.
ಇದೇ ಕಾರ್ಯಕ್ರಮದಲ್ಲಿ ಮನು ಅವರು ವಿದ್ಯಾರ್ಥಿಗಳ ಜತೆಗೆ ಕತ್ರಿನಾ ಕೈಫ್ ಹೆಜ್ಜೆ ಹಾಕಿದ್ದ ಕಾಲಾ ಚಷ್ಮಾ(‘Kala Chashma’ Song) ಹಿಂದಿ ಹಾಡೊಂದಕ್ಕೆ ನೃತ್ಯ ಮಾಡಿದ್ದರು. ಈ ವಿಡಿಯೊ ಕೂಡ ವೈರಲ್ ಆಗಿತ್ತು. ಭರತನಾಟ್ಯ(Manu Bhaker Bharatnatyam) ಕಲಿಕೆಗಾಗಿ ಮನು ಭಾಕರ್ ತಮಿಳುನಾಡಿಗೆ ಆಗಮಿಸಿದ್ದರು. ತಮಿಳುನಾಡಿನ ಶಿಕ್ಷಕರೊಬ್ಬರ ಸಹಾಯದಿಂದ ಆನ್ಲೈನ್ನಲ್ಲಿಯೇ ಭರತನಾಟ್ಯವನ್ನು ಅಭ್ಯಾಸ ಮಾಡುತ್ತಿದ್ದ 22 ವರ್ಷದ ಮನು ಭಾಕರ್ ಇದೀಗ ಶೂಟಿಂಗ್ನಿಂದ ಮೂರು ತಿಂಗಳ ವಿಶ್ರಾಂತಿ ಪಡೆದು ನೇರವಾಗಿ ತರಗತಿಗೆ ಹಾಜರಾಗಿ ನೃತ್ಯ ಕಲಿಯಲಿದ್ದಾರೆ. ಜತೆಗೆ ವಯೋಲಿನ್ ಕಲಿಕೆ ಕೂಡ ಮಾಡಲಿದ್ದಾರೆ.
ಇದನ್ನೂ ಓದಿ Manu Bhaker: 3 ತಿಂಗಳ ರಜೆಯಲ್ಲಿ ಭರತನಾಟ್ಯ, ಕುದುರೆ ಸವಾರಿ, ಸ್ಕೇಟಿಂಗ್ ಕಲಿಯಲಿದ್ದಾರೆ ಮನು ಭಾಕರ್
ಪ್ಯಾರಿಸ್ನಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಮೊದಲ ಮಹಿಳಾ ಶೂಟರ್ ಎಂಬ ಹೆಗ್ಗಳಿಕೆಗೆ ಮನು ಭಾಕರ್ ಪಾತ್ರರಾಗಿದ್ದರು. ಜತೆಗೆ 12 ವರ್ಷಗಳ ಬಳಿಕ ಒಲಿಂಪಿಕ್ ಶೂಟಿಂಗ್ನಲ್ಲಿ ದೇಶಕ್ಕೆ ಪದಕ ಗೆದ್ದ ಸಾಧನೆ ಮಾಡಿದ್ದರು. ಭಾಕರ್(Manu Bhaker) ಅವರ ಜಾಹೀರಾತು ಮೌಲ್ಯದಲ್ಲಿ ಇದೀಗ ಭಾರೀ ಏರಿಕೆ ಕಂಡಿದೆ. ಮನು ಅವರ ಬ್ರ್ಯಾಂಡ್ ಮೌಲ್ಯ ಈಗ 1.5 ರೂ. ಆಗಿದೆ. ಅವರು ಪ್ರತಿ ಡಿಜಿಟಲ್ ಜಾಹೀರಾತಿಗೂ 30 ಲಕ್ಷ ರೂ. ಸಂಭಾವನೆ ಪಡೆಯಲಿದ್ದಾರೆ ಎನ್ನಲಾಗಿದೆ. ಪ್ರಮುಖವಾಗಿ ತಂಪು ಪಾನೀಯ, ಸ್ಕಿನ್ ಕೇರ್, ನ್ಯೂಟ್ರೀಷಿಯನ್ ಕಂಪನಿಗಳು ಮನು ಅವರನ್ನು ಸಂಪರ್ಕಿಸಿವೆ ಎಂದು ತಿಳಿದುಬಂದಿದೆ. ಕೆಲ ದಿನಗಳ ಹಿಂದೆ 40 ಕಂಪನಿಗಳು(40 brands chasing Manu Bhaker) ಮನು ಅವರನ್ನು ಸಂಪರ್ಕಿಸಿದ್ದವು ಎಂದು ವರದಿಯಾಗಿತ್ತು.