Site icon Vistara News

Mary Kom: ಬಾಕ್ಸಿಂಗ್​ ನಿವೃತ್ತಿ ಸುಳ್ಳು ಸುದ್ದಿ; ಸ್ಪಷ್ಟನೆ ನೀಡಿದ ಮೇರಿ ಕೋಮ್​

Mary Kom

ನವದೆಹಲಿ: 6 ಬಾರಿಯ ವಿಶ್ವ ಚಾಂಪಿಯನ್ ಮೇರಿ ಕೋಮ್(Mary Kom)​ ಅವರು ಬಾಕ್ಸಿಂಗ್​ಗೆ ವಿದಾಯ ಹೇಳಿದ್ದಾರೆ ಎನ್ನುವ ಸುದ್ದಿ ಎಲ್ಲಡೆ ಹರಿದಾಡುತ್ತಿರುವಾಗಲೇ ಈ ಸುದ್ದಿಯನ್ನು ಸ್ವತಃ ಮೇರಿ ಕೋಮ್ ತಳ್ಳಿಹಾಕಿದ್ದಾರೆ. ನಾನು ಇನ್ನೂ ನಿವೃತ್ತಿ ಘೋಷಿಸಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಇಂಟರ್ನ್ಯಾಷನಲ್ ಬಾಕ್ಸಿಂಗ್ ಅಸೋಸಿಯೇಷನ್ (IBA) ನಿಯಮಗಳ ಪ್ರಕಾರ ಪುರುಷ ಮತ್ತು ಮಹಿಳಾ ಬಾಕ್ಸರ್‌ಗಳು 40 ವರ್ಷ ವಯಸ್ಸಿನವರೆಗೆ ಮಾತ್ರ ಎಲೈಟ್ ಲೇವಲ್ ಬಾಕ್ಸಿಂಗ್‌ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸುತ್ತವೆ. ಹಾಗಾಗಿ 41 ವರ್ಷದ ಮೇರಿ ಕೋಮ್ ಬುಧವಾರ ತಡರಾತ್ರಿ​ ಬಾಕ್ಸಿಂಗ್​ಗೆ ನಿವೃತ್ತಿ ಘೋಷಿಸಿದ್ದಾರೆ ಎಂದು ಎಲ್ಲ ಮಾಧ್ಯಮಗಳು ವರದಿ ಮಾಡಿತ್ತು.

“ದುರದೃಷ್ಟವಶಾತ್ ವಯಸ್ಸಿನ ಮಿತಿ ಮುಗಿದಿರುವುದರಿಂದ ನಾನು ನಿವೃತ್ತಿಯನ್ನು ಹೊಂದಲೇಬೇಕು. ನನ್ನ ಜೀವನದಲ್ಲಿ ಎಲ್ಲವನ್ನೂ ಸಾಧಿಸಿದ್ದೇನೆ” ಎಂದು ಹೇಳುವ ಮೂಲಕ ಮೇರಿ ಕೋಮ್​ ತಮ್ಮ ನಿವೃತ್ತಿ ಪ್ರಕಟಿಸಿದ್ದರು ಎಂದು ಸುದ್ದಿಯಾಗಿತ್ತು. ಆದರೆ ಇದೀಗ ತಾನು ನಿವೃತ್ತಿಯಾಗಿಲ್ಲ ಇದು ಸುಳ್ಳು ಸುದ್ದಿ ಎಂದು ಮೇರಿ ಕೋಮ್​ ಹೇಳಿದ್ದಾರೆ.

“ನಾನು ಬಾಕ್ಸಿಂಗ್​ನಿಂದ ನಿವೃತ್ತಿಯಾಗಿಲ್ಲ. ನ್ನನ ಹೇಳಿಕೆಯನ್ನು ತಪ್ಪಾಗಿ ಉಲ್ಲೇಖಿಸಲಾಗಿದೆ. ನಾನು ನಿವೃತ್ತಿ ಘೋಷಿಸಲು ಬಯಸಿದಾಗ ವೈಯಕ್ತಿಕವಾಗಿ ಮಾಧ್ಯಮಗಳ ಮುಂದೆ ಬರುತ್ತೇನೆ. ನಿವೃತ್ತಿ ಘೋಷಿಸಿದ್ದೇನೆ ಎಂದು ಕೆಲವು ಮಾಧ್ಯಮಗಳಲ್ಲಿ ವರದಿ ಮಾಡಿದೆ. ಇದು ನಿಜವಲ್ಲ. ನಾನು ದಿಬ್ರುಗಢ್‌ನಲ್ಲಿ ಶಾಲಾ ಕಾರ್ಯಕ್ರಮಕ್ಕೆ ಹಾಜರಾಗಿದ್ದೆ, ಅದರಲ್ಲಿ ನಾನು ಮಕ್ಕಳನ್ನು ಪ್ರೇರೇಪಿಸುತ್ತಿದ್ದೆ. ಈ ವೇಳೆ ನನಗೆ ಇನ್ನೂ ಕ್ರೀಡೆಯಲ್ಲಿ ಸಾಧನೆ ಮಾಡುವ ಹಸಿವಿದೆ. ಆದರೆ, ಒಲಿಂಪಿಕ್ಸ್‌ನಲ್ಲಿನ ವಯಸ್ಸಿನ ಮಿತಿಯು ನನಗೆ ಭಾಗವಹಿಸಲು ಅವಕಾಶ ನೀಡುವುದಿಲ್ಲ. ಆಡುವ ಹಸಿವು ನನ್ನಲ್ಲಿ ಈಗಲೂ ಇದೆ” ಎ.ದು ಹೇಳಿದ್ದೆ ಇದನ್ನೇ ಕೆಲವರು ತಪ್ಪಾಗಿ ಅರ್ಥ ಮಾಡಿಕೊಂಡು ನಾನು ನಿವೃತ್ತಿಯಾಗಿದ್ದೇನೆ ಎಂದು ಹೇಳಿದ್ದಾರೆ. ಇದು ಸುಳ್ಳು ನಿವೃತ್ತಿಯನ್ನು ಘೋಷಿಸಿದಾಗ ನಾನು ಎಲ್ಲರಿಗೂ ತಿಳಿಸುತ್ತೇನೆ ಎಂದು ನಿವೃತ್ತಿಯ ಸುದ್ದಿಯನ್ನು ಮೇರಿ ಕೋಮ್​ ತಳ್ಳಿ ಹಾಕಿದ್ದಾರೆ.

ಮೇರಿ 2012ರ ಒಲಿಂಪಿಕ್ಸ್ ಕಂಚಿನ ಪದಕ ಗೆದ್ದ ಸಾಧಕಿಯೂ ಆಗಿದ್ದಾರೆ. ಐದು ಬಾರಿ ಏಷ್ಯನ್ ಚಾಂಪಿಯನ್ ಆಗಿರುವ ಅವರು 2014 ರ ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕವನ್ನು ಪಡೆದ ಭಾರತದ ಮೊದಲ ಮಹಿಳಾ ಬಾಕ್ಸರ್. ಪದ್ಮಶ್ರೀ, ಪದ್ಮಭೂಷಣ, ಪದ್ಮವಿಭೂಷಣ, ರಾಜೀವ್ ಗಾಂಧಿ ಖೇಲ್​ ರತ್ನ ಪ್ರಶಸ್ತಿಯನ್ನು ಕೂಡ ಪಡೆದಿದ್ದಾರೆ.

Exit mobile version