ಬೆಂಗಳೂರು: ಬಾಕ್ಸಿಂಗ್ ಲೆಜೆಂಡ್ ಮೇರಿ ಕೋಮ್(Mary Kom) ಇನ್ನು ಮುಂದೆ ಬಾಕ್ಸಿಂಗ್ ರಿಂಗ್ ನಲ್ಲಿ ಕಾಣಿಸಿಕೊಳ್ಳುವುದಿಲ್ಲ. 6 ಬಾರಿಯ ವಿಶ್ವ ಚಾಂಪಿಯನ್ ಮೇರಿ ಬಾಕ್ಸಿಂಗ್‌ಗೆ ವಿದಾಯ ಹೇಳಿದ್ದಾರೆ. ಈ ಮೂಲಕ ಭಾರತದ ಫೈಟಿಂಗ್ ಸ್ಪಿರಿಟ್ ಇತಿಹಾಸದ ಪುಟ ಸೇರಿದ್ದಾರೆ. ಬುಧವಾರ ತಡ ರಾತ್ರಿ ಒಲ್ಲದ ಮನಸ್ಸಿನಿಂದಲೇ ಅವರು ಬಾಕ್ಸಿಂಗ್‌ಗೆ ನಿವೃತ್ತಿ ಘೋಷಿಸಿದ್ದರು. ಬಾಕ್ಸಿಂಗ್ನಿಂದ ದೂರ ಆದರೂ, ಅವರ ಸಾಧನೆ ಅಭೂತಪೂರ್ವ ಮತ್ತು ಸ್ಫೂರ್ತಿದಾಯಕ. ಅವರನ್ನು ನಿಜವಾದ ಭಾರತ ರತ್ನ ಎಂದು ಕರೆದರೂ ತಪ್ಪಾಗಲಾರದು.
41ನೇ ವಯಸ್ಸಿನಲ್ಲಿ ಕೂಡ ಆಕೆ ಬಾಕ್ಸಿಂಗ್ ರಿಂಗಲ್ಲಿ ಚಿರತೆಯಂತೆ ಆಡುವುದನ್ನು ನೋಡುವಾಗ ರೋಮಾಂಚನ ಆಗುತ್ತದೆ. ಆದರೆ ದುರದೃಷ್ಟವಶಾತ್ ವಯಸ್ಸಿನ ಮಿತಿ ಮುಗಿದಿರುವುದರಿಂದ ನಾನು ನಿವೃತ್ತಿಯನ್ನು ಹೊಂದಲೇಬೇಕು. ನನ್ನ ಜೀವನದಲ್ಲಿ ಎಲ್ಲವನ್ನೂ ಸಾಧಿಸಿದ್ದೇನೆ ಎಂದು ಹೇಳುವ ಮೂಲಕ ಮೇರಿ ಕೋಮ್ ತಮ್ಮ ನಿವೃತ್ತಿ ಪ್ರಕಟಿಸಿದ್ದರು.
ಹಳ್ಳಿಯಿಂದ ಬೆಳೆದು ಬಂದ ಪ್ರತಿಭೆ
ಮೇರಿ ಬಾಕ್ಸಿಂಗ್ ಬದುಕು ಆರಂಭ ಆದದ್ದು ಮಣಿಪುರದ ಒಂದು ಪುಟ್ಟ ಹಳ್ಳಿಯಲ್ಲಿ. ಬಾಕ್ಸಿಂಗ್ನ ಆಕರ್ಷಣೆಗೆ ಬಲಿಯಾಗಿ ಮನೆಯವರಿಗೆ ಹೇಳದೆ ಬಾಕ್ಸಿಂಗ್ ಅಭ್ಯಾಸ ನಡೆಸಿದ್ದರು. ಬಾಕ್ಸಿಂಗ್ನ ಆರಂಭಿಕ ದಿನಗಳಲ್ಲೇ ಅವರು ತನ್ನದೇ ವಯಸ್ಸಿನ ಹುಡುಗರನ್ನು ಪಂಚಿಂಗ್ ಮೂಲಕ ಉರುಳಿ ಹಂತ ಹಂತವಾಗಿ ಮೇಲೆ ಬಂದಿದ್ದರು.
18ನೇ ಪ್ರಾಯದಲ್ಲಿ ಮಣಿಪುರ ರಾಜ್ಯದ ಬಾಕ್ಸಿಂಗ್ ಚಾಂಪಿಯನ್ ಆಗಿ ಮೂಡಿಬಂದ ಪಂದ್ಯವನ್ನು ಟಿವಿಯಲ್ಲಿ ನೋಡುತ್ತಿದ್ದ ಅಪ್ಪನಿಗೆ ಶಾಕ್ ಆಗಿತ್ತು. ಏಕೆಂದರೆ ಆಕೆ ಬಾಕ್ಸಿಂಗ್ ಸೇರಿದ್ದು, ಅಭ್ಯಾಸ ಮಾಡಿದ್ದು ಮನೆಯಲ್ಲಿ ಯಾರಿಗೂ ಗೊತ್ತೇ ಇರಲಿಲ್ಲ. ಸಿಟ್ಟು ಮಾಡಿಕೊಂಡ ಅಪ್ಪ ಬಾಕ್ಸಿಂಗ್ ಗ್ಲೌಸನ್ನು ಕಿತ್ತುಕೊಂಡು ಒಲೆಯ ಬೆಂಕಿಗೆ ಹಾಕಿದ್ದರು. ಆದರೆ, ನನ್ನ ಜೀವನ ಮುಂದೆ ಏನಿದ್ದರೂ ಬಾಕ್ಸಿಂಗ್ ಮಾತ್ರ ಎಂದು ಮೇರಿ ದಿಟ್ಟ ನಿರ್ಧಾರ ಕೈಗೊಂಡಿದ್ದರು. ಮೇರಿಯ ಹಠದ ಮುಂದೆ ಕೊನೆಗೆ ಮನೆಯವರೇ ಸೋಲನ್ನೊಪ್ಪಿಕೊಂಡರು.
ಇದನ್ನೂ ಓದಿ Mary Kom: ಬಾಕ್ಸಿಂಗ್‌ಗೆ ವಿದಾಯ ಹೇಳಿದ 6 ಬಾರಿ ವಿಶ್ವ ಚಾಂಪಿಯನ್ ಮೇರಿ ಕೋಮ್
6 ಬಾರಿಯ ಚಾಂಪಿಯನ್
ಒಟ್ಟು ಆರು ಬಾರಿ ಬಾಕ್ಸಿಂಗ್ ಸ್ಪರ್ಧೆಯಲ್ಲಿ ವಿಶ್ವ ಚಾಂಪಿಯನ್ ಪಟ್ಟ ಅಲಂಕರಿಸಿದ ಬೇರೆ ಯಾವ ಬಾಕ್ಸರ್ ಜಗತ್ತಿನಲ್ಲಿ ಇಲ್ಲ. ಇದ್ದರೆ ಅದು ಮೇರಿ ಕೋಮ್ ಮಾತ್ರ. ಅದರಲ್ಲಿ ಕೂಡ ಎರಡು ಬಾರಿ ವಿಶ್ವ ಚಾಂಪಿಯನ್ ಆದದ್ದು ಮದುವೆಯಾಗಿ ಎರಡು ಮಕ್ಕಳಾದ ಬಳಿಕ ಅಂದರೆ ನಂಬಲು ಸಾಧ್ಯವೇ ಇಲ್ಲ. ಮದುವೆ ಆದ ನಂತರ ತಮ್ಮ ಎಲ್ಲ ಆಸಕ್ತಿಗಳಿಗೆ ಎಳ್ಳು ನೀರು ಬಿಡುವ ಸಾವಿರಾರು ಹುಡುಗಿಯರಿಗೆ ಆಕೆ ನಿಜವಾದ ಸ್ಫೂರ್ತಿ. ಇವರ ಸಾಧನೆ ಕಂಡು ಅನೇಕ ಬಾಲಕಿಯರು ಬಾಕ್ಸಿಂಗ್ ಗ್ಲೌವ್ಸ್ ತೊಟ್ಟು ಅಂಗಣಕ್ಕೆ ಇಳಿದಿದ್ದಾರೆ.
ಒಲಿಂಪಿಕ್ ಪದಕ ವಿಜೇತೆ
ಮೇರಿ 2012ರ ಒಲಿಂಪಿಕ್ಸ್ ಕಂಚಿನ ಪದಕ ಗೆದ್ದ ಸಾಧಕಿಯೂ ಆಗಿದ್ದಾರೆ. ಐದು ಬಾರಿ ಏಷ್ಯನ್ ಚಾಂಪಿಯನ್ ಆಗಿರುವ ಅವರು 2014 ರ ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕವನ್ನು ಪಡೆದ ಭಾರತದ ಮೊದಲ ಮಹಿಳಾ ಬಾಕ್ಸರ್. ಪದ್ಮಶ್ರೀ, ಪದ್ಮಭೂಷಣ, ಪದ್ಮವಿಭೂಷಣ, ರಾಜೀವ್ ಗಾಂಧಿ ಖೇಲ್ ರತ್ನ… ಹೀಗೆ ಎಲ್ಲವೂ ಆಕೆಗೆ ದೊರೆತಾಗಿದೆ, ಭಾರತ ರತ್ನ ಒಂದು ಬಿಟ್ಟು! ಅದು ಕೂಡ ಮುಂದೆ ಒಲಿಯುವ ಎಲ್ಲ ಸಾಧ್ಯತೆ ಇದೆ. ಅಲ್ಲದೆ ಈ ಪ್ರಶ್ತಿಗೆ ಅವರು ಅರ್ಹರೂ ಕೂಡ ಆಗಿದ್ದಾರೆ. ಏನಿದ್ದರೂ ಮೇರಿ ಕೋಮ್ ಎನ್ನುವ ಫೈಟಿಂಗ್ ಸ್ಪಿರಿಟ್ ಇನ್ನು ಮುಂದೆ ಬಾಕ್ಸಿಂಗ್ ರಿಂಗಲ್ಲಿ ಕಾಣಿಸುವುದಿಲ್ಲ ಎನ್ನುವುದೇ ದೊಡ್ಡ ಶೂನ್ಯ ಭಾವ.
ಇಂಟರ್ನ್ಯಾಷನಲ್ ಬಾಕ್ಸಿಂಗ್ ಅಸೋಸಿಯೇಷನ್ (IBA) ನಿಯಮಗಳು ಪುರುಷ ಮತ್ತು ಮಹಿಳಾ ಬಾಕ್ಸರ್‌ಗಳು 40 ವರ್ಷ ವಯಸ್ಸಿನವರೆಗೆ ಮಾತ್ರ ಎಲೈಟ್ ಲೇವಲ್ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸುತ್ತವೆ. ಹಾಗಾಗಿ, ಮೇರಿ ಕೋಮ್ ತಮ್ಮ ಬಾಕ್ಸಿಂಗ್ ಕೈಗವಸುಗಳಿಗೆ ರೆಸ್ಟ್ ನೀಡಿದ್ದಾರೆ.