Site icon Vistara News

Mary Kom: ಒಂದೇ ತಾಸಿನಲ್ಲಿ 2 ಕೆಜಿ ತೂಕ ಇಳಿಸಿ ಚಿನ್ನ ಗೆದ್ದಿದ್ದ ಬಾಕ್ಸರ್​ ಮೇರಿ ಕೋಮ್

Mary Kom

Mary Kom: Mary Kom loses 2 kg in 1 hour to qualify for tournament, wins gold

ನವದೆಹಲಿ: ದೇಹತೂಕ ಕಾಪಾಡಿಕೊಳ್ಳಲು ವಿಫಲವಾದ ಹಿನ್ನಲೆಯಲ್ಲಿ ಒಲಿಂಪಿಕ್ಸ್ ಕೂಟದಿಂದ ಭಾರತದ ಮಹಿಳಾ ಕುಸ್ತಿಪಟು ವಿನೇಶ್ ಫೋಗಟ್(vinesh phogat) ಅನರ್ಹಗೊಂಡಿರುವ ವಿಚಾರ ಈಗಾಗಲೇ ಎಲ್ಲರಿಗೂ ತಿಳಿದಿದೆ. ಅಗತ್ಯಕ್ಕಿಂತ 100 ಗ್ರಾಂ ಹೆಚ್ಚು ತೂಕ ಹೊಂದಿದ್ದ ಕಾರಣ ಅವರನ್ನು ಫೈನಲ್ ಸ್ಪರ್ಧೆಯಲ್ಲಿ ಆಡದಂತೆ ಅನರ್ಹಗೊಳಿಸಲಾಗಿತ್ತು. ಆರು ಬಾರಿಯ ವಿಶ್ವ ಚಾಂಪಿಯನ್ ಮತ್ತು 2012 ರ ಒಲಿಂಪಿಕ್ ಕಂಚಿನ ಪದಕ ವಿಜೇತೆ, ಭಾರತದ ಖ್ಯಾತ ಬಾಕ್ಸಿಂಗ್​ ತಾರೆ ಮೇರಿ ಕೋಮ್(Mary Kom) ಕೂಡ ಹಿಂದೊಮ್ಮೆ ತೂಕದ ಸಮಸ್ಯೆಯಿಂದ ಅನರ್ಹಗೊಳ್ಳುವ ಭೀತಿಯನ್ನು ಎದುರಿಸಿದ್ದರಂತೆ. ಈ ವಿಚಾರವನ್ನು ಅವರೇ ಈಗ ಬಹಿರಂಗಪಡಿಸಿದ್ದಾರೆ.

ವಿನೇಶ್ ಫೋಗಟ್ ಘಟನೆಯ ಬಳಿಕ ಸಂದರ್ಶನವೊಂದರಲ್ಲಿ ಮಾತನಾಡಿದ ಖ್ಯಾತ ಮಹಿಳಾ ಬಾಕ್ಸರ್ ಮೇರಿ ಕೋಮ್, 2018ರಲ್ಲಿ ಪೊಲೆಂಡ್‌ನ ಗ್ಲಿವೈಸ್‌ನಲ್ಲಿ ನಡೆದಿದ್ದ ಮಹಿಳೆಯರ 13ನೇ ಸಿಲೆಸಿಯನ್ ಓಪನ್ ಬಾಕ್ಸಿಂಗ್ ಪಂದ್ಯಾವಳಿಯಲ್ಲಿ ನನಗೆ ತೂಕದ ಸಮಸ್ಯೆ ಎದುರಾಗಿತ್ತು. ನಾನು ಸ್ಪರ್ಧಿಸುವ ವಿಭಾಗದಲ್ಲಿ 48 ಕೆಜಿ ತೂಕದ ಮಿತಿ ಇತ್ತು. ಅದಕ್ಕಿಂತ ಒಂದೆರಡು ಕಿಲೋಗ್ರಾಂಗಳಷ್ಟು ಹೆಚ್ಚಿನ ತೂಕ ಹೊಂದಿದ್ದೆ. ಹೀಗಾಗಿ ಅನರ್ಹದ ಭೀತಿ ಎದುರಿಸಿದ್ದೆ. ಆದರೆ, ನಾನು ಸತತವಾಗಿ ಒಂದು ಗಂಟೆ ಸ್ಕಿಪ್ಪಿಂಗ್ ಮಾಡಿದ ನಂತರ ತೂಕವನ್ನು ಇಳಿಸಲು ಸಾಧ್ಯವಾಯಿತು” ಎಂದು ಮೇರಿ ಕೋಮ್‌ ಅಂದಿನ ಘಟನೆಯನ್ನು ಮೆಲುಕು ಹಾಕಿದ್ದಾರೆ.

ಇದನ್ನೂ ಓದಿ Paris Olympics: ಶ್ರೀಜೇಶ್​ಗೆ ಸಿಗಲಿ ಗೆಲುವಿನ ವಿದಾಯ; ಇಂದು ಭಾರತ-ಸ್ಪೇನ್​ ಕಂಚಿನ ಕಾದಾಟ

ಚಿನ್ನ ಗೆದ್ದಿದ್ದ ಕೋಮ್​


ಅಚ್ಚರಿ ಎಂದರೆ ಕೋಮ್​ ಒಂದು ಗಂಟೆಯ ಅವಧಿಯಲ್ಲಿ 2 ಕೆಜಿ ತೂಕ ಇಳಿಸಿ ಫೈನಲ್​ನಲ್ಲಿ ಚಿನ್ನದ ಪದಕ ಜಯಿಸಿದ್ದರು. ತೂಕ ಇಳಿಸುವ ಸಲುವಾಗಿ ಸತತ 1 ಗಂಟೆಗಳ ಕಾಲ ಅವರು ಸ್ಕಿಪ್ಪಿಂಗ್ ನಡೆಸಿದ್ದಾಗಿ ​ ಹೇಳಿಕೊಂಡಿದ್ದಾರೆ.

ಬೆಳ್ಳಿ ಪದಕ್ಕಕೆ ಮನವಿ ಮಾಡಿದ ವಿನೇಶ್​


ವಿನೇಶ್ ಫೋಗಟ್ ತಮ್ಮನ್ನು ಅನರ್ಹ ಮಾಡಿದ ನಿರ್ಧಾರದ ವಿರುದ್ಧ ಕೋರ್ಟ್ ಆಫ್ ಆರ್ಬಿಟ್ರೇಷನ್ ಫಾರ್ ಸ್ಪೋರ್ಟ್ಸ್ (ಸಿಎಎಸ್)ಗೆ ಮೇಲ್ಮನವಿ ಸಲ್ಲಿಸಿದ್ದಾರೆ. ಜಂಟಿ ಬಳ್ಳಿಪದಕವನ್ನು ನೀಡುವಂತೆ ಕೋರಿದ್ದಾರೆ. ಗುರುವಾರ ಈ ಮೇಲ್ಮನವಿ ಬಗ್ಗೆ ಮಧ್ಯಂತರ ತೀರ್ಪು ನೀಡುವ ನಿರೀಕ್ಷೆ ಇದ್ದು, ಮೂಲ ನಿರ್ಧಾರವನ್ನು ಬದಲಿಸುವ ಸಾಧ್ಯತೆಯೂ ಇದೆ. ಒಲಿಂಪಿಕ್ ಕೂಟದ ಕಟ್ಟುನಿಟ್ಟಿನ ಸಂರಚನೆ ಕಾರಣದಿಂದಾಗಿ ಚಿನ್ನದ ಪದಕಕ್ಕೆ ಸ್ಪರ್ಧಿಸುವ ಅವಕಾಶವನ್ನು ನೀಡುವ ಸಾಧ್ಯತೆ ಕಡಿಮೆ. ಏಕೆಂದರೆ ಚಿನ್ನದ ಪದಕಕ್ಕಾಗಿ ಇರುವ ಸ್ಪರ್ಧೆಯ ಮರು ವೇಳಾಪಟ್ಟಿ ಸಿದ್ಧಪಡಿಸುವುದು ಸವಾಲುದಾಯಕ. ಆದರೆ ಅಧಿಕೃತ ಪ್ರಸಾರಸಂಸ್ಥೆಯಾಗಿರುವ ಜಿಯೊಸಿನಿಮಾ ಪ್ರಕಾರ, ವಿನೇಶ್ ಜಂಟಿ ಬೆಳ್ಳಿಪದಕಕ್ಕಾಗಿ ಮನವಿ ಸಲ್ಲಿಸಿದ್ದಾರೆ.

ಸಿಎಎಸ್ ಎನ್ನುವುದು 1984ರಲ್ಲಿ ಸ್ಥಾಪಿತವಾದ ಸ್ವತಂತ್ರ ಸಂಸ್ಥೆಯಾಗಿದ್ದು, ಕ್ರೀಡಾಸಂಬಂಧಿ ವ್ಯಾಜ್ಯಗಳನ್ನು ಮಧ್ಯಸ್ಥಿಕೆ ಮೂಲಕ ಬಗೆಹರಿಸುತ್ತದೆ. ಸ್ವಿಡ್ಜರ್ಲೆಂಡ್ ನ ಲೌಸನ್ ನಲ್ಲಿ ಕೇಂದ್ರ ಕಚೇರಿ ಹೊಂದಿರುವ ಸಿಎಎಸ್, ನ್ಯೂಯಾರ್ಕ್ ಹಾಗೂ ಸಿಡ್ನಿಯಲ್ಲಿ ಹೆಚ್ಚುವರಿ ನ್ಯಾಯಾಲಯಗಳನ್ನು ಹೊಂದಿದ್ದು, ಒಲಿಂಪಿಕ್ ಆತಿಥ್ಯ ವಹಿಸುವ ದೇಶಗಳಲ್ಲಿ ತಾತ್ಕಾಲಿಕ ಕೋರ್ಟ್ ಗಳನ್ನು ಹೊಂದಿರುತ್ತದೆ.

Exit mobile version