ನವದೆಹಲಿ: 6 ಬಾರಿಯ ವಿಶ್ವ ಚಾಂಪಿಯನ್, ಭಾರತದ ಖ್ಯಾತ ಬಾಕ್ಸರ್ ಮೇರಿ ಕೋಮ್(Mary Kom) ಅವರು ಮುಂಬರುವ ಒಲಿಂಪಿಕ್ಸ್ 2024 ರ ಪ್ಯಾರಿಸ್ ಒಲಿಂಪಿಕ್ಸ್ಗೆ(Paris Olympics) ನೇಮಿಸಿದ್ದ ಭಾರತದ ಚೆಫ್-ಡಿ-ಮಿಷನ್(chef-de-mission) ಹುದ್ದೆಯಿಂದ ಕೆಳಗಿಳಿದಿದ್ದಾರೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ. ವೈಯಕ್ತಿಕ ಕಾರಣಗಳನ್ನು ಉಲ್ಲೇಖಿಸಿ ಅವರು ಈ ಹುದ್ದೆಯಿಂದ ಕೆಳಗಿಳಿದಿರುವುದಾಗಿ ಪಿಟಿಐ ತನ್ನ ವರದಿಯಲ್ಲಿ ತಿಳಿಸಿದೆ.
‘ಬದ್ಧತೆಯಿಂದ ಹಿಂದೆ ಸರಿಯಲು ಮುಜುಗರವಾಗುತ್ತಿದೆ, ಆದರೆ ನನಗೆ ಯಾವುದೇ ಆಯ್ಕೆಯಿಲ್ಲ’ ”ಎಂದು ಕೋಮ್ ಹೇಳಿರುವುದಾಗಿ ಪಿಟಿಐಗೆ ವರದಿ ಮಾಡಿದೆ. ಚೆಫ್-ಡಿ-ಮಿಷನ್ ಆಗಿ ಮೇರಿ ಕೋಮ್ ಒಲಿಂಪಿಕ್ ಕ್ರೀಡಾಕೂಟದಲ್ಲಿ ರಾಷ್ಟ್ರೀಯ ತಂಡದ ಮುಖ್ಯಸ್ಥರಾಗಿದ್ದರು. ಕೋಮ್ ಅವರು ತಂಡದ ನಾಯಕ ಮತ್ತು ಪ್ರತಿನಿಧಿಯಾಗಿ ಸೇವೆ ಸಲ್ಲಿಸಬೇಕಾಗಿತ್ತು, ಕ್ರೀಡಾಕೂಟದಲ್ಲಿ ತಮ್ಮ ದೇಶದ ಭಾಗವಹಿಸುವಿಕೆಯ ಎಲ್ಲಾ ಅಂಶಗಳನ್ನು ಸಂಘಟಿಸುವ ಮತ್ತು ನಿರ್ವಹಿಸುವ ಜವಾಬ್ದಾರಿಯನ್ನು ಹೊಂದಿದ್ದರು.
Embarrassing to retreat from a commitment, but I am left with no choice: Mary Kom after stepping down as India's chef-de-mission for Olympics
— Press Trust of India (@PTI_News) April 12, 2024
ಚೆಫ್-ಡಿ-ಮಿಷನ್ ಎಂದರೇನು?
ಕ್ರೀಡಾಪಟುಗಳ ಮೇಲ್ವಿಚಾರಣೆ ಮಾಡುವುದು, ಪ್ರಯಾಣದ ವ್ಯವಸ್ಥೆಗಳನ್ನು ಸಂಯೋಜಿಸುವುದು, ಆತಿಥೇಯ ದೇಶದ ಒಲಿಂಪಿಕ್ ಸಂಘಟನಾ ಸಮಿತಿಯೊಂದಿಗೆ ಸಂಪರ್ಕ ಸಾಧಿಸುವುದು, ಒಲಿಂಪಿಕ್ ನಿಯಮಗಳು ಮತ್ತು ನಿಬಂಧನೆಗಳ ಅನುಸರಣೆಯನ್ನು ಖಚಿತಪಡಿಸಿಕೊಳ್ಳುವುದು, ಉದ್ಭವಿಸಬಹುದಾದ ಯಾವುದೇ ಸಮಸ್ಯೆಗಳು ಅಥವಾ ವಿವಾದಗಳನ್ನು ನಿಭಾಯಿಸುವುದು ಮತ್ತು ಕ್ರೀಡಾಕೂಟದುದ್ದಕ್ಕೂ ಕ್ರೀಡಾಪಟುಗಳು ಮತ್ತು ತಂಡದ ಅಧಿಕಾರಿಗಳಿಗೆ ಬೆಂಬಲ ಮತ್ತು ಮಾರ್ಗದರ್ಶನವನ್ನು ಒದಗಿಸುವುದು. ತಮ್ಮ ದೇಶದ ಅಥ್ಲೀಟ್‌ಗಳು ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಲು ಮತ್ತು ಯಶಸ್ವಿಯಾಗಲು ಉತ್ತಮವಾದ ವಾತಾವರಣವನ್ನು ಹೊಂದುಲೆಂದು ಶೆಫ್-ಡಿ-ಮಿಷನ್ ಎನ್ನುವ ವಿಶೇಷ ಯೋಜನೆಯನ್ನು ಜಾರಿಗೆ ತರಲಾಗಿತ್ತು. ಇದಕ್ಕೆ ಮೇರಿ ಕೋಮ್ ಅವರನ್ನು ಮುಖ್ಯಸ್ಥರನ್ನಾಗಿ ಮಾಡಲಾಗಿತ್ತು. ಇದೀಗ ಅವರು ಈ ಜವಾಬ್ದಾರಿಯಿಂದ ಹಿಂದೆ ಸರಿದಿರುವುದಾಗಿ ತಿಳಿದುಬಂದಿದೆ.
ಮೇರಿ 2012ರ ಒಲಿಂಪಿಕ್ಸ್ ಕಂಚಿನ ಪದಕ ಗೆದ್ದ ಸಾಧಕಿಯೂ ಆಗಿದ್ದಾರೆ. ಐದು ಬಾರಿ ಏಷ್ಯನ್ ಚಾಂಪಿಯನ್ ಆಗಿರುವ ಅವರು 2014 ರ ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕವನ್ನು ಪಡೆದ ಭಾರತದ ಮೊದಲ ಮಹಿಳಾ ಬಾಕ್ಸರ್. ಪದ್ಮಶ್ರೀ, ಪದ್ಮಭೂಷಣ, ಪದ್ಮವಿಭೂಷಣ, ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಯನ್ನು ಕೂಡ ಪಡೆದಿದ್ದಾರೆ.
ಇತ್ತೀಚೆಗೆ ಮೇರಿ ಕೋಮ್ ಅವರು ಬಾಕ್ಸಿಂಗ್ನಿಂದ ನಿವೃತ್ತಿಯಾಗಿದ್ದಾರೆ ಎಂಬ ಸುದ್ದಿ ಬಾರಿ ಸದ್ದು ಮಾಡಿತ್ತು. ಬಳಿಕ ಕೋಮ್ ಅವರೇ ತಮ್ಮ ನಿವೃತ್ತಿ ವರದಿಯನ್ನು ತಳ್ಳಿ ಹಾಕಿದ್ದರು. ಇಂಟರ್ನ್ಯಾಷನಲ್ ಬಾಕ್ಸಿಂಗ್ ಅಸೋಸಿಯೇಷನ್ (IBA) ನಿಯಮಗಳ ಪ್ರಕಾರ ಪುರುಷ ಮತ್ತು ಮಹಿಳಾ ಬಾಕ್ಸರ್‌ಗಳು 40 ವರ್ಷ ವಯಸ್ಸಿನವರೆಗೆ ಮಾತ್ರ ಎಲೈಟ್ ಲೇವಲ್ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸುತ್ತವೆ. ಹಾಗಾಗಿ 41 ವರ್ಷದ ಮೇರಿ ಕೋಮ್ ಬಾಕ್ಸಿಂಗ್ಗೆ ನಿವೃತ್ತಿ ಘೋಷಿಸಿದ್ದಾರೆ ಎಂದು ಎಲ್ಲ ಮಾಧ್ಯಮಗಳು ವರದಿ ಮಾಡಿತ್ತು.