Site icon Vistara News

Sachin Tendulkar: ಕ್ರಿಕೆಟ್‌ ದೇವರು ಸಚಿನ್‌ ತೆಂಡೂಲ್ಕರ್‌ ಮನೆ ಎದುರು ಬೃಹತ್ ಪ್ರತಿಭಟನೆ; ಕಾರಣ?

Protest At Sachin Tendulkar House

Massive Protest Outside Sachin Tendulkar's House; What is the reason?

ಮುಂಬೈ: ಭಾರತೀಯ ಕ್ರಿಕೆಟ್‌ ದಂತಕತೆ, ಕ್ರಿಕೆಟ್‌ ದೇವರು, ಭಾರತ ರತ್ನ ಪುರಸ್ಕೃತ ಸಚಿನ್‌ ತೆಂಡೂಲ್ಕರ್‌ (Sachin Tendulkar) ಅವರ ನಿವಾಸದ ಎದುರು ಮಹಾರಾಷ್ಟ್ರದ ಆಡಳಿತಾರೂಢ ಸರ್ಕಾರದ ಮೈತ್ರಿಪಕ್ಷವಾದ ಪ್ರಹಾರ ಜನಶಕ್ತಿ ಪಕ್ಷದ (PJP) ನಾಯಕ ಓಂಪ್ರಕಾಶ್‌ ಬಾಬಾರಾವ್‌ (ಬಚ್ಚು ಕಡು) ನೇತೃತ್ವದಲ್ಲಿ ಭಾರಿ ಪ್ರತಿಭಟನೆ ನಡೆಸಲಾಗಿದೆ. ಸಚಿನ್‌ ತೆಂಡೂಲ್ಕರ್‌ ಅವರು ಆನ್‌ಲೈನ್‌ ಗೇಮ್‌ (Online Game) ಜಾಹೀರಾತಿನಲ್ಲಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಓಂಪ್ರಕಾಶ್‌ ಬಾಬಾರಾವ್‌ ನೇತೃತ್ವದಲ್ಲಿ ಭಾರಿ ಪ್ರತಿಭಟನೆ ನಡೆಸಿ, ಸಚಿನ್‌ ತೆಂಡೂಲ್ಕರ್‌ ವಿರುದ್ಧ ಘೋಷಣೆ ಕೂಗಲಾಗಿದೆ.

ಮುಂಬೈನಲ್ಲಿರುವ ಸಚಿನ್‌ ತೆಂಡೂಲ್ಕರ್‌ ನಿವಾಸದ ಎದುರು ಓಂಪ್ರಕಾಶ್‌ ಬಾಬಾರಾವ್‌ ಹಾಗೂ ನೂರಾರು ಕಾರ್ಯಕರ್ತರು ಜಮಾಯಿಸಿ ಆಟಗಾರನ ವಿರುದ್ಧ ಘೋಷಣೆ ಕೂಗಿದರು. ಸಚಿನ್‌ ತೆಂಡೂಲ್ಕರ್‌ ವಿರುದ್ಧದ ಪೋಸ್ಟರ್‌ಗಳನ್ನು ಹಿಡಿದು ಆಕ್ರೋಶ ಕೂಗಿದರು. ಇದೇ ವೇಳೆ ಪೊಲೀಸರು ಪ್ರತಿಭಟನಾನಿರತರನ್ನು ಬಂಧಿಸಿ, ಬಾಂದ್ರಾ ಪೊಲೀಸ್‌ ಠಾಣೆಗೆ ಕರೆದೊಯ್ದು, ಬಳಿಕ ಬಿಡುಗಡೆ ಮಾಡಿದರು.

ಭಾರಿ ಪ್ರತಿಭಟನೆ

ಇದೇ ವೇಳೆ ಮಾತನಾಡಿದ ಓಂಪ್ರಕಾಶ್‌ ಬಾಬಾರಾವ್‌, “ಸಚಿನ್‌ ತೆಂಡೂಲ್ಕರ್‌ ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಅವರು ಯುವಕರಿಗೆ ಮಾದರಿಯಾಗಬೇಕು. ಅದು ಬಿಟ್ಟು ಯುವಕರು ಆನ್‌ಲೈನ್‌ ಗೇಮಿಂಗ್‌ನಲ್ಲಿ ತೊಡಗಿಸಿಕೊಂಡು, ದುಡ್ಡು ಕಳೆದುಕೊಳ್ಳಲು ಸಚಿನ್‌ ತೆಂಡೂಲ್ಕರ್‌ ಅವರು ಪ್ರಚೋದನೆ ನೀಡುತ್ತಿದ್ದಾರೆ. ಇನ್ನು 15 ದಿನದಲ್ಲಿ ಸಚಿನ್‌ ತೆಂಡೂಲ್ಕರ್‌ ಅವರು ಇಂತಹ ಜಾಹೀರಾತಿನಿಂದ ಹಿಂದೆ ಸರಿಯಬೇಕು. ಜಾಹೀರಾತನ್ನು ನಿಲ್ಲಿಸಬೇಕು. ಇಲ್ಲದಿದ್ದರೆ ಭಾರತರತ್ನ ಪ್ರಶಸ್ತಿಯನ್ನು ಹಿಂದಿರುಗಿಸಬೇಕು” ಎಂದು ಆಗ್ರಹಿಸಿದರು.

ಇದನ್ನೂ ಓದಿ: Sachin Tendulkar: ಚುನಾವಣಾ ಆಯೋಗದ ‘ನ್ಯಾಷನಲ್ ಐಕಾನ್’ ಆಗಿ ಸಚಿನ್​ ತೆಂಡೂಲ್ಕರ್​ ನೇಮಕ

ಇದೇ ಸಚಿನ್‌ ಜಾಹೀರಾತು

ಏನಿದು ಪ್ರಕರಣ?

ಸಚಿನ್‌ ತೆಂಡೂಲ್ಕರ್‌ ಅವರು ಪೇಟಿಎಂ ಫಸ್ಟ್‌ ಗೇಮ್‌ ಎಂಬ ಆನ್‌ಲೈನ್‌ ಗೇಮಿಂಗ್‌ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಾರೆ. ಆನ್‌ಲೈನ್‌ ಮೂಲಕ ಗೇಮ್‌ ಆಡುವುದು, ಗೇಮ್‌ ಆಡಿ ಹಣ ಗಳಿಸುವುದು ಜಾಹೀರಾತಿನ ಸಾರಾಂಶವಾಗಿದೆ. ಇದಕ್ಕಾಗಿ ಸಚಿನ್‌ ತೆಂಡೂಲ್ಕರ್‌ ಅವರು 300 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ ಎಂಬುದು ಕೂಡ ಆರೋಪವಾಗಿದೆ. ಇದೇ ಕಾರಣಕ್ಕಾಗಿ ಸಚಿನ್‌ ತೆಂಡೂಲ್ಕರ್‌ ಅವರ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ. ಈಗಾಗಲೇ ರೋಹಿತ್‌ ಶರ್ಮಾ ಸೇರಿ ಹಲವು ಕ್ರಿಕೆಟಿಗರು ಇಂತಹ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಾರೆ.

Exit mobile version