ಮುಂಬಯಿ: ನ್ಯಾಟ್ ಸೀವರ್ ಬ್ರಂಟ್ (72) ವಿಸ್ಫೋಟಕ ಬ್ಯಾಟಿಂಗ್ ಹಾಗೂ ಇಸ್ಸಿ ವಾಂಗ್ (15 ರನ್ಗೆ 4 ವಿಕೆಟ್) ಮಾರಕ ಬೌಲಿಂಗ್ ದಾಳಿಯಿಂದ ಮಿಂಚಿದ ಮುಂಬಯಿ ಇಂಡಿಯನ್ಸ್ ತಂಡ ಮಹಿಳೆಯರ ಪ್ರೀಮಿಯರ್ ಲೀಗ್ ನ(WPL 2023) ಪ್ಲೇ ಆಫ್ ಪಂದ್ಯದಲ್ಲಿ ಯುಪಿ ವಾರಿಯರ್ಸ್ ವಿರುದ್ಧ 72 ರನ್ಗಳ ಬೃಹತ್ ವಿಜಯ ದಾಖಲಿಸಿ ಫೈನಲ್ಗೆ ಪ್ರವೇಶ ಪಡೆಯಿತು. ಮಾರ್ಚ್ 26ರಂದು ನಡೆಯುವ ಫೈನಲ್ ಪಂದ್ಯದಲ್ಲಿ ಡೆಲ್ಲಿ ವಿರುದ್ಧ ಮುಂಬಯಿ ಪ್ರಶಸ್ತಿಗಾಗಿ ಸೆಣಸಾಡಲಿದೆ.
ಡಿವೈ ಪಾಟೀಲ್ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ ಹಣಾಹಣಿಯಲ್ಲಿ ಟಾಸ್ ಗೆದ್ದ ಯುಪಿ ತಂಡದ ನಾಯಕಿ ಅಲಿಸಾ ಹೀಲಿ ಫೀಲ್ಡಿಂಗ್ ಅಯ್ಕೆ ಮಾಡಿಕೊಂಡರು. ಅದರಂತೆ ಮೊದಲು ಬ್ಯಾಟ್ ಮಾಡಿದ ಮುಂಬಯಿ ತಂಡ ನಿಗದಿತ 20 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 182 ರನ್ ಬಾರಿಸಿತು. ಗುರಿ ಬೆನ್ನಟ್ಟಿದ ಯುಪಿ ತಂಡ 17.4 ಓವರ್ಗಳಲ್ಲಿ 110 ರನ್ಗಳಿಗೆ ಆಲ್ಔಟ್ ಆಯಿತು.
ದೊಡ್ಡ ಗುರಿಯನ್ನು ಬೆನ್ನಟ್ಟಲು ಹೊರಟ ಯುಪಿ ತಂಡ ಅದಕ್ಕೆ ಪೂರಕವಾಗಿ ಬ್ಯಾಟ್ ಮಾಡಲಿಲ್ಲ. 21 ರನ್ಗಳಿಗೆ ಮೊದಲ ಮೂರು ವಿಕೆಟ್ಗಳನ್ನು ನಷ್ಟ ಮಾಡಿಕೊಂಡು ಸಂಕಷ್ಟಕ್ಕೆ ಬಿತ್ತು. ಆರಂಭಿಕರಾದ ಅಲಿಸಾ ಹೀಲಿ (11), ಶ್ವೇತಾ ಸೆಹ್ರಾವತ್ (1) ಹಾಗೂ ತಾಹಿಲಾ ಮೆಗ್ರಾಥ್ (7) ಬೇಗನೆ ವಿಕೆಟ್ ಒಪ್ಪಿಸಿದರು. ಮಧ್ಯಮ ಕ್ರಮಾಂಕದಲ್ಲಿ ಕಿರಣ್ ನವಗಿರೆ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿ 43 ರನ್ ಬಾರಿಸಿ ತಂಡಕ್ಕೆ ಚೈತನ್ಯ ತುಂಬಿದರು. ಆದರೆ, ಉಳಿದ ಆಟಗಾರ್ತಿಯರಿಂದ ಹೆಚ್ಚಿನ ನೆರವು ಲಭಿಸದ ಕಾರಣ ತಂಡಕ್ಕೆ ಸೋಲು ಎದುರಾಯಿತು. ಗ್ರೇಸ್ ಹ್ಯಾರಿಸ್ 14 ರನ್ಗೆ ಔಟಾದರೆ, ದೀಪ್ತಿ ಶರ್ಮಾ ಕೊಡುಗೆ 16 ರನ್.
ಸೀವರ್ ಭರ್ಜರಿ ಬ್ಯಾಟಿಂಗ್
ಇನಿಂಗ್ಸ್ ಆರಂಭಿಸಿದ ಯಸ್ತಿಕ ಭಾಟಿಯಾ (21) ಹಾಗೂ ಹೇಲಿ ಮ್ಯಾಥ್ಯೂಸ್ (26) ಮೊದಲ ವಿಕೆಟ್ಗೆ 31 ರನ್ ಬಾರಿಸಿದರು. ಆದರೆ, ಮೂರನೇ ಕ್ರಮಾಂಕದಲ್ಲಿ ಆಡಲು ಇಳಿದ ನ್ಯಾಟ್ ಸೀವರ್ 38 ಎಸೆತಗಳಲ್ಲಿ 9 ಫೋರ್ ಹಾಗೂ 2 ಸಿಕ್ಸರ್ಗಳ ನೆರವಿನಿಂದ 72 ರನ್ ಬಾರಿಸಿದರು.
ಇದನ್ನೂ ಓದಿ : WPL 2023 : ಯುಪಿ ವಾರಿಯರ್ಸ್ ಕ್ಯಾಂಪ್ನಲ್ಲಿ ಪತ್ನಿಯ ಬರ್ತ್ಡೇ ಆಚರಿಸಿಕೊಂಡ ಆಸ್ಟ್ರೇಲಿಯಾ ವೇಗಿ ಸ್ಟಾರ್ಕ್!
ನಾಯಕಿ ಹರ್ಮನ್ಪ್ರೀತ್ ಕೌರ್ 14 ರನ್ಗಳಿಗೆ ವಿಕೆಟ್ ಒಪ್ಪಿಸಿದರೆ ಕೊನೆಯಲ್ಲಿ ಅಮೇಲಿಯಾ ಕೆರ್ 19 ಎಸೆತಗಳಿಗೆ 29 ರನ್ ಬಾರಿಸಿದರು. ಪೂಜಾ ವಸ್ತ್ರಾಕರ್ 4 ಎಸೆತಗಳಿಗೆ 11 ರನ್ ಕೊಡುಗೆ ಕೊಟ್ಟರು. ಯುಪಿ ಪರ ಬೌಲಿಂಗ್ನಲ್ಲಿ ಸೋಫಿ ಎಕ್ಲೆಸ್ಟೋನ್ 39 ರನ್ಗಳಿಗೆ ಎರಡು ವಿಕೆಟ್ ಉರುಳಿಸಿದರು.