ಮುಂಬಯಿ: ಗ್ಲೆನ್ ಮ್ಯಾಕ್ಸ್ವೆಲ್ ಅವರ ವಿಶ್ವ ದಾಖಲೆಯ ದ್ವಿಶತಕದ (ಅಜೇಯ 201 ರನ್) ನೆರವು ಪಡೆದ ಆಸ್ಟ್ರೇಲಿಯಾ ತಂಡ ಅಫಘಾನಿಸ್ತಾನ ವಿರುದ್ಧದ ತನ್ನ ವಿಶ್ವ ಕಪ್ ಪಂದ್ಯದಲ್ಲಿ (ICC World Cup 2023) 3 ವಿಕೆಟ್ ಗೆಲುವು ಸಾಧಿಸಿದೆ. ಈ ಮೂಲಕ ಪ್ಯಾಟ್ ಕಮಿನ್ಸ್ ನೇತೃತ್ವದ ಆಸೀಸ್ ಬಳಗ ವಿಶ್ವ ಕಪ್ನ ಸೆಮಿಫೈನಲ್ಗೆ ಪ್ರವೇಶ ಪಡೆದಿದ್ದು, ದಕ್ಷಿಣ ಆಫ್ರಿಕಾಗೆ ಎದುರಾಗಲಿದೆ. ಇದು ವಿಶ್ವ ಕಪ್ ಇತಿಹಾಸದಲ್ಲಿ ಆಸ್ಟ್ರೇಲಿಯಾ ತಂಡ ಚೇಸ್ ಮಾಡಿದ ಗರಿಷ್ಠ ಮೊತ್ತವೂ ಆಗಿದೆ. 91 ರನ್ಗಳಿಗೆ 7 ವಿಕೆಟ್ ಕಳೆದುಕೊಂಡಿದ್ದ ಆಸ್ಟ್ರೇಲಿಯಾ ತಂಡ ಮ್ಯಾಕ್ಸ್ವೆಲ್ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಮುರಿಯದ ಏಳನೇ ವಿಕೆಟ್ಗೆ 202 ರನ್ ಪೇರಿಸುವ ಮೂಲಕ ಗೆಲುವು ದಾಖಲಿಸಿತು. ಇದು ಹಾಲಿ ವಿಶ್ವ ಕಪ್ನಲ್ಲಿ ಮೂಡಿ ಬಂದ ಮತ್ತೊಂದು ಅಚ್ಚರಿಯ ಫಲಿತಾಂಶವಾಗಿದೆ. ಅಲ್ಲದೆ, ಈ ಗೆಲುವು ಆಸ್ಟ್ರೇಲಿಯಾ ತಂಡದ ಪಾಲಿಗೆ ಹಾಗೂ ಮ್ಯಾಕ್ಸ್ವೆಲ್ಗೆ ಐತಿಹಾಸಿಕ ದಾಖಲೆ.
GREATEST ODI KNOCK OF ALL-TIME. 🔥🫡🐐 pic.twitter.com/ZO9fmKhz3p
— Johns. (@CricCrazyJohns) November 7, 2023
ಆಸ್ಟ್ರೇಲಿಯಾ ತಂಡ 49 ರನ್ಗಳಿಗೆ 4 ವಿಕೆಟ್ ಕಳೆದುಕೊಂಡಿದ್ದ ವೇಳೆ ಆಡಲು ಬಂದ ಗ್ಲೆನ್ ಮ್ಯಾಕ್ಸ್ವೆಲ್ ಕೊನೆ ತನಕ ಅಜೇಯರಾಗಿ ಉಳಿದು ತಂಡವನ್ನು ಗೆಲ್ಲಿಸಿಕೊಟ್ಟರು. ತಾನು ಎದುರಿಸಿದ ಮೊದಲ ಎಸೆತದಲ್ಲಿಯೇ ಡಿಆರ್ಎಸ್ ಮನವಿ ಎದುರಿಸಿದ ಗ್ಲೆನ್ ಮ್ಯಾಕ್ಸ್ವೆಲ್ ಅಲ್ಲಿಂದ 128 ಎಸೆತಗಳನ್ನು ಎದುರಿಸಿ 21 ಫೋರ್ ಹಾಗೂ 10 ಸಿಕ್ಸರ್ಗಳ ನೆರವಿನಿಂದ ದ್ವಿಶತಕ ಬಾರಿಸಿ ಗೆಲುವು ತಂದುಕೊಟ್ಟರು. ಅದಕ್ಕಿಂತ ಮೊದಲು ನೂರ್ ಅಹಮದ್ ಎಸೆತದಲ್ಲಿ ಅಂಪೈರ್ ನೀಡಿದ್ದ ಎಲ್ಬಿಡಬ್ಲ್ಯು ಔಟ್ ವಿರುದ್ದ ಡಿಆರ್ಎಸ್ ಪಡೆದುಕೊಂಡು ಅಲ್ಲೂ ಬಚಾವಾಗಿದ್ದರು. ಎಲ್ಲದಕ್ಕಿಂತ ಮುಖ್ಯವಾಗಿ ಆಫ್ಘನ್ ತಂಡದ ಮುಜೀಬ್ ಉರ್ ರಹಮಾನ್ ಅವರು ಮ್ಯಾಕ್ಸ್ವೆಲ್ ಅವರ ಕ್ಯಾಚೊಂದನ್ನು ಕೈ ಚೆಲ್ಲುವ ಮೂಲಕ ಅವರಿಗೆ ಜೀವದಾನ ಕೊಟ್ಟಿದ್ದರು. ಅದರನ್ನು ಸದ್ಬಳಕೆ ಮಾಡಿಕೊಂಡ ಮ್ಯಾಕ್ಸ್ವೆಲ್ ಇತಿಹಾಸವನ್ನೇ ಸೃಷ್ಟಿಸಿದರು. ಮತ್ತೊಂದು ತುದಿಯಲ್ಲಿ 68 ಎಸೆತಗಳನ್ನು ಎದುರಿಸಿದ ನಾಯಕ ಪ್ಯಾಟ್ ಕಮಿನ್ಸ್ 12 ರನ್ ಮಾತ್ರ ಬಾರಿಸಿದರೂ ಅವರು ಕೊಟ್ಟ ಜತೆಯಾಟವೂ ಗೆಲುವಿಗೆ ಪ್ರಮುಖ ಕಾರಣವಾಯಿತು.
ಇಲ್ಲಿನ ವಾಂಖೆಡೆ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಅಫಘಾನಿಸ್ತಾನ ತಂಡ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಅಂತೆಯೇ ಉತ್ತಮವಾಗಿ ಬ್ಯಾಟ್ ಮಾಡಿ ನಿಗದಿತ 50 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 291 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ತಂಡ ಇನ್ನೂ 19 ಎಸೆತಗಳು ಬಾಕಿ ಇರುವಂತೆಯೇ 7 ವಿಕೆಟ್ ನಷ್ಟಕ್ಕೆ 293 ರನ್ ಬಾರಿಸಿ ಗೆಲುವು ಸಾಧಿಸಿತು. ಇದು ಮುಂಬೈ ಸ್ಟೇಡಿಯಮ್ನಲ್ಲಿ ಗರಿಷ್ಠ ರನ್ ಚೇಸ್ ಗೆಲುವಾಗಿದೆ. ಒಂದು ಹಂತದಲ್ಲಿ ಅಫಘಾನಿಸ್ತಾನ ತಂಡ ಗೆಲುವಿನ ವಿಶ್ವಾಸದಲ್ಲಿತ್ತು. ಆದರೆ, ಈ ಸೋಲು ಹಶ್ಮತುಲ್ಲಾ ಶಾಹಿದಿ ನೇತೃತ್ವದ ತಂಡಕ್ಕೆ ನಿಜವಾಗಿಯೂ ಹೃದಯ ಒಡೆದಂಥ ಅನುಭವಾಗಿದೆ.
ಈ ಸುದ್ದಿಯನ್ನೂ ಓದಿ: ICC World Cup 2023 : ಆಸೀಸ್ ವಿರುದ್ಧ ಶತಕ ಬಾರಿಸಿ ಹೊಸ ದಾಖಲೆ ಬರೆದ ಆಫ್ಘನ್ ಆಟಗಾರ
ಗೆಲುವಿನ ಶ್ರೇಯಸ್ಸು ಮ್ಯಾಕ್ಸ್ವೆಲ್ಗೆ
ಆಸ್ಟ್ರೇಲಿಯಾ ತಂಡದ ಚೇಸಿಂಗ್ನಲ್ಲಿ ಮ್ಯಾಕ್ಸ್ವೆಲ್ ಮತ್ತು ಕಮಿನ್ಸ್ ಹೊರತುಪಡಿಸಿ ಉಳಿದವರ ಕೊಡುಗೆ ಏನೂ ಇಲ್ಲ. ಟ್ರಾವಿಡ್ ಹೆಡ್ ಶೂನ್ಯಕ್ಕೆ ಔಟಾದರೆ ವಾರ್ನರ್ 18 ರನ್ ಬಾರಿಸಿದ್ದರು. ಮಾರ್ಷ್ 24 ರನ್ ಹಾಗೂ ಲಾಬುಶೇನ್ 14 ರನ್ ಕೊಡುಗೆ ಕೊಟ್ಟರು. ಇಂಗ್ಲಿಸ್ ಶೂನ್ಯಕ್ಕೆ ಪೆವಿಲಿಯನ್ ಹಾದಿ ಹಿಡಿದರು. ಸ್ಟೊಯ್ನಿಸ್ ಹಾಗೂ 6 ರನ್ಗೆ ಸೀಮಿತಗೊಂಡರೆ ಸ್ಟಾರ್ಕ್ 3 ರನ್ಗೆ ಔಟಾದರು. ಹೀಗಾಗಿ ಗೆಲುವಿನ ಸಂಪೂರ್ಣ ಕೊಡುಗೆ ಮ್ಯಾಕ್ಸ್ವೆಲ್ಗೆ ಸೇರುತ್ತದೆ.
ಕಾಲು ನೋವು, ಬೆನ್ನು ನೋವು
ಮ್ಯಾಕ್ಸ್ವೆಲ್ ಶತಕ ಬಾರಿಸಿದ ತಕ್ಷಣ ಬೆನ್ನು ನೋವಿಗೆ ಒಳಗಾದರು. ಬಳಿಕ ಅವರು ಅದಕ್ಕೆ ಮೈದಾನದಲ್ಲೇ ಫಿಸಿಯೊಗಳ ಮೂಲಕ ಆರೈಕೆ ಮಾಡಿಸಿಕೊಂಡರು. ಬಳಿಕ ಅವರು ಕಾಲು ನೋವಿಗೆ ಒಳಗಾದರು. ಪದೇ ಪದೇ ನೋವಿಗೆ ಒಳಗಾಗಿ ಮೈದಾನದಲ್ಲಿ ರನ್ಗಾಗಿ ಓಡಲು ಸಾಧ್ಯವೇ ಇಲ್ಲ ಎಂಬ ಪರಿಸ್ಥಿತಿಗೆ ಒಳಗಾದರು. ಮುಂಬಯಿಯ ಬಿಸಿಲಿನಲ್ಲಿ ಆಡಿದ್ದ ಅವರಿಗೆ ಬ್ಯಾಟಿಂಗ್ನ ಕೊನೇ ಹಂತದಲ್ಲಿ ನಡೆಯಲೂ ಸಾಧ್ಯವಾಗಲಿಲ್ಲ. ಆದರೂ ಕೆಚ್ಚೆದೆಯಿಂದ ಹೋರಾಡಿ ಗೆದ್ದರು. ಬರೇ ಫೋರ್, ಸಿಕ್ಸರ್ಗಳ ಮೂಲಕ ತಂಡಕ್ಕೆ ಏಕಾಂಗಿಯಾಗಿ ಗೆಲುವು ತಂದುಕೊಟ್ಟರು.
ಆಫ್ಘನ್ ಉತ್ತಮ ಪ್ರದರ್ಶನ
ಅದಕ್ಕಿಂತ ಮೊದಲು ಬ್ಯಾಟ್ ಮಾಡಿದ ಅಫಘಾನಿಸ್ತಾನ ತಂಡವೂ ಉತ್ತಮ ಪ್ರದರ್ಶನ ನೀಡಿತು. ಆರಂಭಿಕ ಬ್ಯಾಟರ್ ಇಬ್ರಾಹಿಂ ಜದ್ರಾನ್ ಅವರ ಅಜೇಯ 129 ರನ್ಗಳ ಮೂಲಕ ಉತ್ತಮ ಮೊತ್ತವನ್ನೇ ಪೇರಿಸಿತು. ತಂಡದ ಪ್ರತಿಯೊಬ್ಬ ಬ್ಯಾಟರ್ ಕೂಡ ಉತ್ತಮ ಲಯದೊಂದಿಗೆ ಆಡಿದರು. ರಹ್ಮನುಲ್ಲಾ ಗುರ್ಬಜ್ 21 ರನ್, ರಹ್ಮತ್ ಶಾ 30 ರನ್, ಹಶ್ಮತುಲ್ಲಾ ಶಾಹಿದಿ 26 ರನ್, ಒಮರ್ಜೈ 22 ರನ್, ನಬಿ 12 ರನ್ ಹಾಗೂ ರಶೀದ್ ಖಾನ್ 35 ರನ್ ಬಾರಿಸಿದ್ದರು.