Site icon Vistara News

ಶೋಯೆಬ್ ಮಲಿಕ್​ ಮೊದಲ ಪತ್ನಿ ಯಾರು?; ಇವರು ಕೂಡ ಭಾರತದವರೇ!

Ayesha Siddiqui

ಬೆಂಗಳೂರು: ಪಾಕಿಸ್ತಾನ ಕ್ರಿಕೆಟ್​ ತಂಡದ ಮಾಜಿ ಆಟಗಾರ ಶೋಯೆಬ್‌ ಮಲಿಕ್‌(Shoaib Malik first wife) ಅವರು ಸನಾ ಜಾವೇದ್‌ ಅವರನ್ನು ಮದುವೆಯಾಗಿದ್ದಾರೆ. ಈ ಮೂಲಕ ಭಾರತದ ಟೆನಿಸ್‌ ತಾರೆ ಸಾನಿಯಾ ಮಿರ್ಜಾ(Sania Mirza)  ಹಾಗೂ ಶೋಯೆಬ್‌ ನಡುವಿನ 13 ವರ್ಷದ ದಾಂಪತ್ಯವು ಕೊನೆಗೊಂಡಂತಾಗಿದೆ. ಇದು ಮಲಿಕ್‌ ಅವರಿಗೆ ಮೂರನೇ ಮದುವೆ. ಇದೀಗ ಅವರ ಮೊದಲ ಪತ್ನಿ ಯಾರು?, ಯಾವ ದೇಶದವರು? ಈಗ ಎಲ್ಲಿದ್ದಾರೆ? ಹೀಗೆ ಹಲವು ಪಶ್ನೆಗಳು ಅನೇಕರಲ್ಲಿ ಮೂಡಿದೆ. ಇದಕ್ಕೆ ಉತ್ತರ ಇಲ್ಲಿದೆ.

ಹೌದು, ಸಾನಿಯಾ ಮಿರ್ಜಾ ಅವರನ್ನು ಮದುವೆಯಾಗುವ ಮುನ್ನವೇ ಶೋಯೆಬ್‌ ಮಲಿಕ್​ಗೆ ಮದುವೆಯಾಗಿತ್ತು. ಅಚ್ಚರಿ ಎಂದರೆ ಅವರ ಮೊದಲ ಪತ್ನಿಯೂ ಕೂಡ ಭಾರತದವರೇ ಆಗಿದ್ದರು. ಅವರ ಹೆಸರು ಆಯೇಶಾ ಸಿದ್ದಿಕಿ(Ayesha Siddiqui). ಇವರು ಕೂಡ ಹೈದರಾಬಾದ್​ ಮೂಲದವರಾಗಿದ್ದರು.

ayesha siddiqui and malik


ಶೋಯೆಬ್ ಮತ್ತು ಆಯೇಶಾ ಸಿದ್ದಿಕಿ 2002ರಲ್ಲಿ ಮದುವೆಯಾಗಿದ್ದರು ಎಂದು ಹೇಳಲಾಗಿದೆ. ಸಾನಿಯಾ ಮಿರ್ಜಾ ಅವರನ್ನು ಶೋಯೆಬ್ ಮದುವೆಯಾಗಲು ಮುಂದಾದಾಗ ಈ ವಿಚಾರ ಬೆಳಕಿಗೆ ಬಂದಿತ್ತು. ಮಲಿಕ್​ ತನ್ನ ಮೊದಲ ಪತ್ನಿಯಿಂದ ವಿಚ್ಛೇದನ ಪಡೆಯದೆ ಸಾನಿಯಾ ಅವರನ್ನು ಮದುವೆಯಾಗಲು ಹೊರಟಿದ್ದಾರೆ ಎಂದು ವರದಿಯಾಗಿತ್ತು. ಅಲ್ಲದೆ 2002ರಲ್ಲಿ ವಿವಾಹವಾಗಿದ್ದರ ಕೆಲ ವಿಡಿಯೊ ತುಣುಕುಗಳು ಮತ್ತು ಫೋಟೊಗಳು ವೈರಲ್​ ಆಗಿತ್ತು.

ಆಯೇಶಾ ಸಿದ್ದಿಕಿ ಕೂಡ ಮಲಿಕ್ ತನ್ನನ್ನು ಈಗಾಗಲೇ ಮದುವೆಯಾಗಿದ್ದಾನೆ ಎಂದು ಹೇಳಿಕೊಂಡಿದ್ದರು. ಇದು ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಮೋಸ ಮಾಡಿದ್ದಕ್ಕಾಗಿ ಆಯೇಶಾ ಪೊಲೀಸ್ ದೂರು ನೀಡಿ ಶೋಯೆಬ್ ಮಲಿಕ್‌ನಿಂದ ವಿಚ್ಛೇದನ ಪಡೆಯಲು 15 ಕೋಟಿ ಜೀವನಾಂಶವನ್ನು ಪಡೆದಿದ್ದರು ಎಂದು ವರದಿಯೊಂದು ತಿಳಿಸಿದೆ. ಆಯೇಶಾ ವೃತ್ತಿಯಲ್ಲಿ ಶಿಕ್ಷಕಿಯಾಗಿದ್ದರು.

ayesha siddiqui and malik


ಆಯೇಶಾಗೆ 2010ರಲ್ಲಿ ವಿಚ್ಛೇದನ ನೀಡಿದ ಅದೇ ವರ್ಷ ಸಾನಿಯಾ ಮಿರ್ಜಾ ಅವರನ್ನು ಶೋಯೆಬ್‌ ಮಲಿಕ್‌ ಮದುವೆಯಾಗಿದ್ದರು. ಈ ಜೋಡಿಯ ವಿವಾಹ ಹೈದರಾಬಾದ್‌ನ ತಾಜ್‌ ಕೃಷ್ಣಾ ಹೋಟೆಲ್‌ನಲ್ಲಿ ಹೈದರಾಬಾದ್‌ ಮುಸ್ಲಿಂ ಸಮುದಾಯದ ಸಂಪ್ರದಾಯದಂತೆ ನಡೆದಿತ್ತು. ಇವರಿಗೆ ಇಜಾನ್‌ ಎಂಬ ಪುತ್ರನಿದ್ದಾನೆ. ಇದೀಗ ಮಲಿಕ್​ ಸಾನಿಯಾಗೂ ಕೈ ಕೊಟ್ಟು ಮೂರನೇ ಮದುವೆಯಾಗಿದ್ದಾರೆ.

ಶೋಯೆಬ್‌ ಮಲಿಕ್‌ ಹಾಗೂ ಪಾಕಿಸ್ತಾನದ ನಟಿ ಆಯೇಷಾ ಒಮರ್ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿಗಳು ಕೂಡ ಇದಕ್ಕೂ ಮೊದಲು ಕೇಳಿಬಂದಿದ್ದವು. ಆದರೆ, ವಿಚ್ಛೇದನದ ಕುರಿತು ಸಾನಿಯಾ ಮಿರ್ಜಾ ಆಗಲಿ, ಶೋಯೆಬ್‌ ಮಲಿಕ್‌ ಆಗಲಿ, ಇದುವರೆಗೆ ಯಾವುದೇ ಸ್ಪಷ್ಟನೆ ನೀಡಿಲ್ಲ. ಆದರೀಗ, ಶೋಯೆಬ್‌ ಮಲಿಕ್‌ ಅವರು ಸನಾ ಜಾವೇದ್‌ ಅವರನ್ನು ಮದುವೆಯಾಗುವ ಮೂಲಕ ಎಲ್ಲ ವದಂತಿಗಳಿಗೆ ತೆರೆ ಎಳೆದಿದ್ದಾರೆ.

Exit mobile version