ಮೀರ್‌ಪುರ : ಆರಂಭಿಕ ಹಿನ್ನಡೆಯ ಹೊರತಾಗಿಯೂ ಕಳೆದ ಪಂದ್ಯದ ಹೀರೊ ಮೆಹೆದಿ ಹಸನ್ (೧೦೦*) ಅವರ ಸಮಯೋಚಿತ ಶತಕ ಹಾಗೂ ಮಹಮದುಲ್ಲಾ (77) ಅವರ ಅರ್ಧ ಶತಕದ ನೆರವು ಪಡೆದ ಆತಿಥೇಯ ಬಾಂಗ್ಲಾದೇಶ ತಂಡ ಏಕ ದಿನ ಸರಣಿಯ ಎರಡನೇ ಪಂದ್ಯದಲ್ಲಿ ಪ್ರವಾಸಿ ಭಾರತ ತಂಡಕ್ಕೆ ೨೭೨ ರನ್‌ಗಳ ಗೆಲುವಿನ ಗುರಿಯನ್ನೊಡ್ಡಿದೆ.
ಮೀರ್‌ಪುರದ ಶೇರ್ ಬಾಂಗ್ಲಾ ಕ್ರಿಕೆಟ್ ಸ್ಟೇಡಿಯಮ್‌ನಲ್ಲಿ ಬುಧವಾರ ನಡೆದ ಹಣಾಹಣಿಯಲ್ಲಿ ಟಾಸ್ ಗೆದ್ದ ಬಾಂಗ್ಲಾದೇಶ ತಂಡ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡು ನಿಗದಿತ ೫೦ ಓವರ್‌ಗಳಲ್ಲಿ ೭ ವಿಕೆಟ್ ನಷ್ಟಕ್ಕೆ ೨೭೧ ರನ್ ಪೇರಿಸಿತು.
ಇನಿಂಗ್ಸ್ ಆರಂಭಿಸಿದ ಬಾಂಗ್ಲಾದೇಶ ತಂಡದ ಆರಂಭಿಕರಾದ ಅನ್ಮುಲ್ ಹಕ್ (೧೧) ಹಾಗೂ ಲಿಟನ್ ದಾಸ್ (೦೭) ಬೇಗನೆ ಪೆವಿಲಿಯನ್‌ಗೆ ಮರಳುವ ಮೂಲಕ ಆಘಾತ ಎದುರಿಸಿತು. ನಜ್ಮುಲ್ ಹೊಸೈನ್ (೨೧) ಹಾಗೂ ಶಕಿಬ್ ಅಲ್ ಹಸನ್ (೦೮) ಕೂಡ ತಂಡಕ್ಕೆ ನೆರವಾಗಲಿಲ್ಲ. ಅಫಿಫ್ ಹೊಸೈನ್ ಕೂಡ ಶೂನ್ಯ ಸುತ್ತಿದರು.
ಒಂದು ಹಂತದಲ್ಲಿ ೬೯ ರನ್‌ಗಳಿಗೆ ೬ ವಿಕೆಟ್ ಕಳೆದುಕೊಂಡು ಕನಿಷ್ಠ ಮೊತ್ತಕ್ಕೆ ಆಲ್‌ಔಟ್ ಸ್ಥಿತಿಗೆ ತಲುಪಿದ್ದ ಬಾಂಗ್ಲಾದೇಶ ತಂಡ ಆ ಬಳಿಕ ಚೈತನ್ಯ ಪಡೆದು ೨೦೩ ರನ್ ಪೇರಿಸಿತು. ಅದರಲ್ಲೂ ಮೆಹೆದಿ ಹಸನ್ ೮೩ ಎಸೆತಗಳಲ್ಲಿ ೪ ಸಿಕ್ಸರ್, ೮ ಫೋರ್ ಸಮೇತ ಅಜೇಯ ಶತಕ ಬಾರಿಸಿ ಭಾರತಕ್ಕೆ ಸವಾಲೊಡ್ಡಿದರು. ಅಂತೆಯೇ ಭಾರತ ತಂಡದ ಬೌಲಿಂಗ್ ಸ್ಲಾಗ್ ಓವರ್‌ಗಳಲ್ಲಿ ಮತ್ತೊಮ್ಮೆ ವೈಫಲ್ಯ ಕಂಡಿತು.
ಭಾರತ ಪರ ಬೌಲಿಂಗ್‌ನಲ್ಲಿ ಮೊಹಮ್ಮದ್ ಸಿರಾಜ್ ೭೩ ರನ್‌ಗಳಿಗೆ ೦೨ ವಿಕೆಟ್ ಕಬಳಿಸಿದರೆ, ವಾಷಿಂಗ್ಟನ್ ಸುಂದರ್ ೩೭ ರನ್‌ಗಳಿಗೆ ೩ ವಿಕೆಟ್ ಕಬಳಿಸಿದರು.
ಸ್ಕೋರ್ ವಿವರ : ಬಾಂಗ್ಲಾದೇಶ ೫೦ ಓವರ್‌ಗಳಲ್ಲಿ ೭ ವಿಕೆಟ್‌ಗೆ ೨೭೧ (ಮಹಮದುಲ್ಲಾ ೭೭,ಮೆಹೆದಿ ಹಸನ್ ೧೦೦* ವಾಷಿಂಗ್ಟನ್ ಸುಂದರ್‌೩೭ಕ್ಕೆ೩, ಮೊಹಮ್ಮದ್ ಸಿರಾಜ್ ೭೩ಕ್ಕೆ೨).
ಇದನ್ನೂ ಓದಿ | INDvsBAN | ಏಳು ವರ್ಷದ ಬಳಿಕ ಬಾಂಗ್ಲಾದೇಶ ತಂಡಕ್ಕೆ ಮಂಡಿಯೂರಿದ ಭಾರತ ತಂಡ