Site icon Vistara News

Shahrukh khan ಕೊಟ್ಟಿದ್ದ ಆಫರ್‌ ತಿರಸ್ಕರಿಸಿದ್ದರು ಈ ಕೋಚ್‌

sharukh khan

ಬೆಂಗಳೂರು: ಮಧ್ಯ ಪ್ರದೇಶ ತಂಡ ಇತ್ತೀಚೆಗೆ ಮುಕ್ತಾಯಗೊಂಡ ರಣಜಿ ಟ್ರೋಫಿ ಮುಡಿಗೇರಿಸಿಕೊಳ್ಳುವುದಕ್ಕೆ ಆ ತಂಡದ ಕೋಚ್‌ ಚಂದ್ರಕಾಂತ್‌ ಪಂಡಿತ್‌ ಅವರ ಶ್ರಮವೇ ಪ್ರಧಾನ ಪಾತ್ರ ವಹಿಸಿದೆ ಎಂದು ಹಿರಿಯ ಕ್ರಿಕೆಟಿಗರನೇಕರು ಕೊಂಡಾಡಿದ್ದಾರೆ. ಕೋಚಿಂಗ್‌ ವೃತ್ತಿಯಲ್ಲಿ ಅಪಾರ ಅನುಭವ ಹೊಂದಿರುವ ಅವರಿಗೆ ಹಿಂದೊಮ್ಮೆ ಐಪಿಎಲ್‌ನ ಕೆಕೆಆರ್‌ ತಂಡದ ಮಾಲೀಕ Shahrukh khan ಆಫರ್‌ ಕೊಟ್ಟಿದ್ದರೂ, ಅದನ್ನವರು ತಿರಸ್ಕರಿಸಿದ್ದಾರಂತೆ.

ಚಂದ್ರಕಾಂತ್‌ ಪಂಡಿತ್‌ ದೇಶೀಯ ಕ್ರಿಕೆಟ್‌ನ ರಾಜ ಎಂದೇ ಕರೆಯುವ ರಣಜಿ ಟ್ರೋಫಿ ಕೋಚಿಂಗ್‌ನಲ್ಲಿ ಭರ್ಜರಿ ಯಶಸ್ಸು ಪಡೆದವರು. ಅವರು ತರಬೇತಿ ನೀಡಿದ್ದ ತಂಡಗಳು ಆರು ಭಾರಿ ಟ್ರೋಫಿ ಗೆದ್ದಿದೆ. ಮೂರು ಬಾರಿ ಮುಂಬಯಿ ತಂಡ, ಎರಡು ಬಾರಿ ವಿದರ್ಭ ತಂಡ ಹಾಗೂ ಇದೀಗ ಮಧ್ಯ ಪ್ರದೇಶ ಚಾಂಪಿಯನ್ ಪಟ್ಟ ಪಡೆದುಕೊಂಡಿದೆ. ಕೋಚಿಂಗ್‌ ವೃತ್ತಿಯಲ್ಲಿ ಅಪಾರ ಸಾಧನೆ ಮಾಡಿರುವ ಹೊರತಾಗಿಯೂ ಅವರು ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆದಿರಲಿಲ್ಲ. ಎಲ್ಲದಕ್ಕಿಂತ ಮಿಗಿಲಾಗಿ ಭಾರತೀಯ ಕ್ರಿಕೆಟಿಗರ ಆದಾಯ ಹೆಚ್ಚಿಸುತ್ತಿರುವ ಐಪಿಎಲ್‌ನಲ್ಲೂ ಅವಕಾಶ ಪಡೆದಿಲ್ಲ. ಅಚ್ಚರಿಯೆಂದರೆ ಅವರಿಗೆ ಈ ಬಗ್ಗೆ ಕೊಂಚವೂ ಬೇಸರವಿಲ್ಲ. ನಾನೇ ಅವಕಾಶ ತಿರಸ್ಕರಿಸಿದ್ದೆ ಎಂದು ಹೇಳುತ್ತಿದ್ದಾರೆ.

ಶಾರುಖ್‌ ಮನೆಯಲ್ಲಿ ಭೇಟಿ

೨೦೧೨ರ ಐಪಿಎಲ್‌ಗೆ ಮೊದಲು ನಾನು ಕೋಲ್ಕೊತಾ ನೈಟ್‌ ರೈಡರ್ಸ್‌ ತಂಡದ ಮಾಲೀಕರಾಗಿರುವ ಶಾರುಖ್‌ ಖಾನ್‌ ಅವರ ಮನೆಯಲ್ಲಿ ಕೋಲ್ಕೊತಾ ನೈಟ್‌ ರೈಡರ್ಸ್‌ ತಂಡವನ್ನು ಭೇಟಿಯಗಿದ್ದೆ. ಈ ವೇಳೆ ಕೋಚಿಂಗ್‌ ವಿಭಾಗವನ್ನು ಸೇರಿಕೊಳ್ಳುವಂತೆ ಕೋರಿಕೊಂಡಿದ್ದರು. ಆದರೆ, ಅದು ನನ್ನ ಶೈಲಿಯ ಕ್ರಿಕೆಟ್ ಅಲ್ಲ ಎಂಬುದಾಗಿ ಹೇಳಿ ಅವರ ಮನವಿ ತಿರಸ್ಕರಿಸಿದೆ ಎಂದು ಪಂಡಿತ್‌ ಹೇಳಿದ್ದಾರೆ.

“೨೦೧೨ ಐಪಿಎಲ್‌ಗೆ ಮೊದಲು ಶಾರುಖ್‌ ಖಾನ್‌ ಅವರನ್ನು ಭೇಟಿಯಾಗುವಂತೆ ಹೇಳಿದ್ದರು. ಅದರಂತೆ ಅವರ ಮನೆಗೆ ಹೋಗಿದ್ದೆ. ಈ ವೇಳೆ ತಂಡದ ಕೋಚಿಂಗ್‌ ವಿಭಾಗ ಸೇರಿಕೊಳ್ಳುವಂತೆ ಹೇಳಿದರು. ಆದರೆ, ವಿದೇಶಿ ಕೋಚ್‌ಗಳ ಅಡಿಯಲ್ಲಿ ಕೆಲಸ ಮಾಡುವುದು ನನಗೆ ಇಷ್ಟವಿರಲಿಲ್ಲ;” ಎಂದು ಚಂದ್ರಕಾಂತ್‌ ಪಂಡಿತ್‌ ರಣಜಿ ಟ್ರೋಫಿ ಗೆಲುವಿನ ಬಳಿಕ ಹೇಳಿದ್ದಾರೆ.

“ನಾನು ತರಬೇತಿ ನೀಡಿರುವ ತಂಡಗಳು ಗೆದ್ದಿರುವ ಪ್ರತಿಯೊಂದು ಟ್ರೋಫಿಗಳು ನನಗೆ ಅತ್ಯಂತ ಪ್ರಮುಖ. ಆದರೆ, ಮಧ್ಯ ಪ್ರದೇಶ ತಂಡ ಗೆದ್ದಿರುವ ಪ್ರಶಸ್ತಿ ಹೆಚ್ಚಿನ ಖುಷಿ ನೀಡಿದೆ. ೨೩ ವರ್ಷಗಳ ಹಿಂದೆ ನಾನು ಮಧ್ಯ ಪ್ರದೇಶ ತಂಡದ ನಾಯಕನಾಗಿದ್ದ ವೇಳೆ ತಂಡಕ್ಕೆ ಟ್ರೋಫಿ ಗೆದ್ದು ಕೊಡಲು ಸಾಧ್ಯವಾಗಿರಲಿಲ್ಲ. ಇದೀಗ ಆ ಆಸೆಯೂ ಈಡೆರಿದೆ ಹಾಗೂ ಈ ಪ್ರಶಸ್ತಿಯೊಂದಿಗೆ ಹೆಚ್ಚು ಭಾವನಾತ್ಮಕ ಸಂಬಂಧ ಇದೆ,” ಎಂದು ಚಂದ್ರಕಾಂತ್‌ ಪಂಡಿತ್‌ ಹೇಳಿದ್ದಾರೆ.

1991ರಲ್ಲಿ ಮಧ್ಯ ಪ್ರದೇಶ ತಂಡ ಕೊನೇ ಬಾರಿ ಫೈನಲ್‌ಗೇರಿತ್ತು. ಆ ಪಂದ್ಯದಲ್ಲಿ ಕರ್ನಾಟಕ ವಿರುದ್ಧ ಸೋಲು ಕಂಡಿತ್ತು. ಅದು ಪಂಡಿತ್‌ ಅವರ ಕೊನೇ ವೃತ್ತಿಪರ ಪಂದ್ಯವಾಗಿದೆ.

ಇದನ್ನೂ ಓದಿ: Ranji Trophy 2022 | ಐದು ದಶಕಗಳ ನಂತರ ರಣಜಿ ಟ್ರೋಫಿ ಗೆದ್ದ ಮಧ್ಯಪ್ರದೇಶ

Exit mobile version