Site icon Vistara News

MI vs RR: ಅಜೇಯ ರಾಜಸ್ಥಾನ್​ ಸವಾಲು ಗೆದ್ದೀತೇ ಪಾಂಡ್ಯ ಸಾರಥ್ಯದ ಮುಂಬೈ?

MI vs RR

ಮುಂಬಯಿ: ಒಂದೆಡೆ ಸತತ ಸೋಲು ಕಂಡಿರುವ ಮುಂಬೈ ಇಂಡಿಯನ್ಸ್(MI vs RR)​ ಮತ್ತೊಂದೆಡೆ ಸತತ ಗೆಲುವು ಸಾಧಿಸಿರುವ ರಾಜಸ್ಥಾನ್​ ರಾಯಲ್ಸ್​ ಸೋಮವಾದ ಐಪಿಎಲ್(IPL 2024) ಪಂದ್ಯದಲ್ಲಿ ಕಣಕ್ಕಿಳಿಯಲಿದೆ. ಒಂದೊಮ್ಮೆ ಹಾರ್ದಿಕ್​ ಪಾಂಡ್ಯ ನೇತೃತ್ವದ ಮುಂಬೈ ಮತ್ತೆ ಸೋಲು ಕಂಡರೆ ಹ್ಯಾಟ್ರಿಕ್​ ಸೋಲಿಗೆ ತುತ್ತಾಗಲಿದೆ. ಈ ಅವಮಾನದಿಂದ ಪಾರಾದೀತೇ ಎನ್ನುವುದು ಪಂದ್ಯದ ಕೌತುಕ!.

ಮುಂಬೈಗೆ ತವರಿನ ಪಂದ್ಯ


ಈಗಾಗಲೇ ಎಲ್ಲ ಫ್ರಾಂಚೈಸಿಗಳು ಕೂಡ ತಮ್ಮ ತವರಿನ ಪಂದ್ಯದಲ್ಲಿ ಗೆದ್ದು ಬೀಗಿದೆ. ಇದೀಗ ಮುಂಬೈ(Mumbai Indians) ಕೂಡ ತನ್ನ ತವರಿನಲ್ಲಿ ಮೊದಲ ಗೆಲುವು ಸಾಧಿಸುವ ಯೋಚನೆಯಲ್ಲಿದೆ. ಆದರೆ, ನಾಯಕ ಪಾಂಡ್ಯ ಪ್ರಯೋಗಕ್ಕೆ ಒತ್ತ ನೀಡಬಾರದು. ಈಗಾಗಲೇ ಹಲವು ಪ್ರಯೋಗ ನಡೆಸಿ ಅನುಭವಿಸಿದ ಸೋಲಿನಿಂದ ಪಾಠ ಕಲಿಯಬೇಕು. ತಾನೇ ಶ್ರೇಷ್ಠ ಎನ್ನುವ ಅಹಂ ಬದಿಗಿಟ್ಟರೆ ತಂಡ ಗೆಲುವಿನ ಹಳಿ ಏರಬಹುದು. ಇನಿಂಗ್ಸ್​ನ ಮೊದಲ ಓವರ್​ ಜಸ್​ಪ್ರೀತ್​ ಬುಮ್ರಾಗೆ ನೀಡಬೇಕು. ಇದು ಮಾತ್ರವಲ್ಲದೆ ತಂಡದ ಎಲ್ಲ ಆಟಗಾರರು ಕೂಡ ತಮ್ಮ ಮನಸ್ತಾಪಗಳನ್ನು ಬಿಟ್ಟು ಸಂಘಟಿತ ಪ್ರದರ್ಶನತ ಕಡೆ ಗಮನಹರಿಸಬೇಕಿದೆ.

ಮುಂಬೈ ತಂಡದ ಬ್ಯಾಟಿಂಗ್​ ಮತ್ತು ಬೌಲಿಂಗ್​ ಕೂಡ ಸುಧಾರಣೆ ಕಾಣಬೇಕಿದೆ. ಕಳೆದ ಹೈದರಾಬಾದ್​ ವಿರುದ್ಧದ ಪಂದ್ಯದಲ್ಲಿ ಬುಮ್ರಾ ಹೊರತುಪಡಿಸಿ ಉಳಿದ ಎಲ್ಲ ಬೌಲರ್​ ಕೂಡ 50 ಕ್ಕಿಂತ ಅಧಿಕ ರನ್​ ಬಿಟ್ಟುಕೊಟ್ಟಿದ್ದರು. ಹೀಗಾಗಿ ಈ ಪಂದ್ಯದಲ್ಲಿ ಇವರೆಲ್ಲ ತಮ್ಮ ಎಸೆತಗಳಿಗೆ ಸಾಣೆ ಹಿಡಿಯುವುದು ಅನಿವಾರ್ಯವಾಗಿದೆ.

ಸಿಡಿಯಬೇಕಿದೆ ಜೈಸ್ವಾಲ್​-ಬಟ್ಲರ್​


ಸಂಜು ಸ್ಯಾಮ್ಸನ್​ ಸಾರಥ್ಯದ ರಾಜಸ್ಥಾನ್​ ​ರಾಯಲ್ಸ್ (Rajasthan Royals) ತಂಡ ಆಡಿದ 2 ಪಂದ್ಯಗಳನ್ನು ಗೆದಿದ್ದರೂ ಕೂಡ ತಂಡದ ಪ್ರಮುಖ ಆಟಗಾರರಾದ ಜಾಸ್​ ಬಟ್ಲರ್​ ಮತ್ತು ಯಶಸ್ವಿ ಜೈಸ್ವಾಲ್​ ಇನ್ನೂ ಫಾರ್ಮ್​ಗೆ ಮರಳುವಲ್ಲಿ ಯಶಸ್ಸು ಕಂಡಿಲ್ಲ. ಈ ಒಂದು ಚಿಂತೆ ತಂಡಕ್ಕೆ ಈಗಲೂ ಕಾಡುತ್ತಿದೆ. ಹೀಗಾಗಿ ಉಭಯ ಆಟಗಾರರು ಮುಂಬೈ ವಿರುದ್ಧದ ಪಂದ್ಯದಲ್ಲೇ ನಿತರೀಕ್ಷಿತ ಬ್ಯಾಟಿಂಗ್​ ಪ್ರದರ್ಶನ ತೋರುವ ಮೂಲಕ ತಂಡದ ಆತ್ಮವಿಶ್ವಾದ ಹೆಚ್ಚಿಸಬೇಕಿದೆ. ಉಳಿದಂತೆ ತಂಡದಲ್ಲಿ ಮೇಜರ್​ ಕೊರತೆಗಳಿಲ್ಲ. ಅನುಭವಿ ಅಶ್ವಿನ್​ ಬೌಲಿಂಗ್​ ಜತೆಗೆ ಟಿ20 ಶೈಲಿಗೆ ತಕ್ಕ ಪ್ರದರ್ಶನ ಕೂಡ ತೋರುತ್ತಿದ್ದಾರೆ. ಟ್ರೆಂಟ್​ ಬೌಲ್ಟ್​, ಸಂದೀಪ್​ ಶರ್ಮ ಕೂಡ ಉತ್ತಮ ಬೌಲಿಂಗ್​ ನಡೆಸುತ್ತಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ರಿಯಾನ್​ ಪರಾಗ್​ ತಂಡಕ್ಕೆ ಆಸರೆಯಾಗುವ ಮೂಲಕ ಗಮನ ಸೆಳೆಯುತ್ತಿದ್ದಾರೆ ಒಟ್ಟಾರೆಯಾಗಿ ರಾಜಸ್ಥಾನ್​ ಸಂಘಟಿತ ಪ್ರದರ್ಶನ ತೋರುತ್ತಿದೆ.

ಇದನ್ನೂ ಓದಿ IPL 2024: ಆರ್​ಸಿಬಿ ಸೋಲಿಗೆ ವಿರಾಟ್​ ಕೊಹ್ಲಿಯೇ ಕಾರಣ ಎಂದ ಮಾಜಿ ಆಟಗಾರ

ಮುಖಾಮುಖಿ


ಇತ್ತಂಡಗಳು ಇದುವರೆಗಿನ ಐಪಿಎಲ್​ ಪಂದ್ಯಾವಳಿಯಲ್ಲಿ ಒಟ್ಟು 28 ಬಾರಿ ಮುಖಾಮುಖಿಯಾಗಿವೆ. ಈ ಪೈಕಿ ಮುಂಬೈ 15 ಪಂದ್ಯ, ರಾಜಸ್ಥಾನ್​ 12 ಪಂದ್ಯಗಳನ್ನು ಗೆದ್ದಿದೆ. 1 ಪಂದ್ಯ ಫಲಿತಾಂಶವಿಲ್ಲದೆ ಕೊನೆಗೊಂಡಿದೆ. ಕಳೆದ ಆವೃತ್ತಿಯಲ್ಲಿ ಆಡಿದ ಒಂದು ಪಂದ್ಯದಲ್ಲಿ ಮುಂಬೈ ತಂಡವೇ ಗೆದ್ದು ಬೀಗಿತ್ತು.

ಸಂಭಾವ್ಯ ಆಡುವ ಬಳಗ


ಮುಂಬೈ ಇಂಡಿಯನ್ಸ್​:
ಇಶಾನ್ ಕಿಶನ್ (ವಿಕೆಟ್​ ಕೀಪರ್​), ರೋಹಿತ್ ಶರ್ಮಾ, ನಮನ್ ಧೀರ್, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ (ನಾಯಕ), ಟಿಮ್ ಡೇವಿಡ್, ಜೆರಾಲ್ಡ್ ಕೋಟ್ಜಿ, ಶಮ್ಸ್ ಮುಲಾನಿ, ಪಿಯೂಷ್ ಚಾವ್ಲಾ, ಜಸ್​ಪ್ರೀತ್​ ಬುಮ್ರಾ, ರೊಮಾರಿಯೋ ಶೆಫರ್ಡ್.

ರಾಜಸ್ಥಾನ್​ ರಾಯಲ್ಸ್​: ಯಶಸ್ವಿ ಜೈಸ್ವಾಲ್, ಜೋಸ್ ಬಟ್ಲರ್, ಸಂಜು ಸ್ಯಾಮ್ಸನ್ (ನಾಯಕ/ವಿಕಿ), ರಿಯಾನ್ ಪರಾಗ್, ಶಿಮ್ರಾನ್ ಹೆಟ್ಮೆಯರ್, ಧ್ರುವ್ ಜುರೆಲ್, ರವಿಚಂದ್ರನ್ ಅಶ್ವಿನ್, ಟ್ರೆಂಟ್ ಬೌಲ್ಟ್, ಯುಜ್ವೇಂದ್ರ ಚಾಹಲ್, ಸಂದೀಪ್ ಶರ್ಮಾ, ಅವೇಶ್ ಖಾನ್.

ಪಂದ್ಯ ಆರಂಭ: ರಾತ್ರಿ 7.30ಕ್ಕೆ. ಪ್ರಸಾರ; ಸ್ಟಾರ್​ ಸ್ಪೋರ್ಟ್​, ಸ್ಥಳ; ವಾಂಖೆಡೆ ಕ್ರಿಕೆಟ್​ ಸ್ಟೇಡಿಯಂ ಮುಂಬಯಿ

Exit mobile version