Site icon Vistara News

MI vs SRH: ಹೈದರಾಬಾದ್​ಗೆ ಗೆಲುವಿನ ‘ಸನ್​ರೈಸ್​’; ಮುಂಬೈಗೆ ಸತತ 2ನೇ ಸೋಲು

Shahbaz Ahmed celebrates nabbing Ishan Kishan

ಹೈದರಾಬಾದ್​: ಮುತ್ತಿನ ನಗರಿ ಹೈದರಾಬಾದ್​ನಲ್ಲಿ ಬುಧವಾರ ಸಿಕ್ಸರ್​ಗಳ ಸುರಿಮಳೆಯೇ ಸುರಿಯಿತು. ಮುಂಬೈ ಇಂಡಿಯನ್ಸ್​ ಮತ್ತು ಸನ್​ರೈಸರ್ಸ್​ ಹೈದರಾಬಾದ್​ ತಂಡಗಳ ಆಟಗಾರರು ತಮ್ಮ ಸ್ಫೋಟಕ ಬ್ಯಾಟಿಂಗ್​ ಮೂಲಕ ಈ ಸಿಕ್ಸರ್​ಗಳ ಮಳೆಗೆ ಕಾರಣರಾದರು. ಅಂತಿಮವಾಗಿ ಪಂದ್ಯದಲ್ಲಿ ತವರಿನ ತಂಡವಾದ ಸನ್​ರೈಸರ್ಸ್​ ಹೈದರಾಬಾದ್ 31 ರನ್​ ಅಂತರದಿಂದ ಗೆದ್ದು ಬೀಗಿತು​. ಮುಂಬೈ ಸತತ 2ನೇ ಸೋಲಿನ ಅವಮಾನಕ್ಕೆ ಸಿಲುಕಿತು.

ಇಲ್ಲಿನ ರಾಜೀವ್​ ಗಾಂಧಿ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್​ ಸೋತು ಬ್ಯಾಟಿಂಗ್​ಗೆ ಇಳಿಸಲ್ಪಟ್ಟ ಆತಿಥೇಯ ಸನ್​ರೈಸರ್ಸ್ ಹೈದರಾಬಾದ್​ ವಿಸ್ಫೋಟಕ ಬ್ಯಾಟಿಂಗ್​ ಮೂಲಕ ನಿಗದಿತ 20 ಓವರ್​ಗಳಲ್ಲಿ ಕೇವಲ 3 ವಿಕೆಟ್​ಗೆ 277 ರನ್​ ಬಾರಿಸಿತು. ಈ ದೊಡ್ಡ ಮೊತ್ತವನ್ನು ಅಷ್ಟೇ ದಿಟ್ಟ ರೀತಿಯಲ್ಲಿ ಬೆನ್ನಟ್ಟಿಕೊಂಡು ಹೋದ ಮುಂಬೈ ಅಂತಿಮವಾಗಿ 5 ವಿಕೆಟ್​ಗೆ 246 ರನ್​ ಗಳಿಸಲಷ್ಟೇ ಶಕ್ತವಾಗಿ ಶರಣಾಯಿತು. ಒಟ್ಟಾರೆಯಾಗಿ ಈ ಪಂದ್ಯದಲ್ಲಿ 523 ರನ್​ ದಾಖಲಾಯಿತು. ಇದು ಐಪಿಎಲ್​ನಲ್ಲಿ 2 ತಂಡಗಳು ಸೇರಿ ಬಾರಿಸಿದ ಗರಿಷ್ಠ ಮೊತ್ತದ ದಾಖಲೆ. ಈ ಹಿಂದೆ 2010ರಲ್ಲಿ ಚೆನ್ನೈ ಮತ್ತು ಕೆಕೆಆರ್​ ನಡುವಣ ಪಂದ್ಯದಲ್ಲಿ 469 ರನ್​ ಹರಿದು ಬಂದಿತ್ತು.

ದೊಡ್ಡ ಮೊತ್ತವನ್ನು ಬೆನ್ನಟ್ಟಿದ ಮುಂಬೈಗೆ ಆರಂಭಿಕರಾದ ಇಶಾನ್​ ಕಿಶನ್​ ಮತ್ತು ಮುಂಬೈ ಪರ 200ನೇ ಪಂದ್ಯದಲ್ಲಿ ಆಡಲಿಳಿದ ಮಾಜಿ ನಾಯಕ ರೋಹಿತ್​ ಶರ್ಮ ಆಕ್ರಮಣಕಾರಿ ಬ್ಯಾಟಿಂಗ್​ ಮೂಲಕ ಉತ್ತಮ ಅಡಿಪಾಯ ನಿರ್ಮಿಸಿದರು. ಇವರಿಬ್ಬರ ಬ್ಯಾಟಿಂಗ್​ ಆರ್ಭಟದಿಂದ ತಂಡ ಕೇವಲ ಮೂರು ಓವರ್​ಗೆ ವಿಕೆಟ್​ ನಷ್ಟವಿಲ್ಲದೆ 50 ರನ್​ ಕಲೆಹಾಕಿತು.

ಆದರೆ, ಉಭಯ ಆಟಗಾರರ ಈ ಬ್ಯಾಟಿಂಗ್​ ಜೋಶ್​ ಹೆಚ್ಚು ಹೊತ್ತು ಸಾಗಲಿಲ್ಲ. ಅಬ್ದುಲ್​ ಸಮದ್​ ಅವರಿಂದ ಒಂದು ಜೀವದಾನ ಪಡೆದರೂ ಕೂಡ ರೋಹಿತ್​ ಈ ಅವಕಾಶವನ್ನು ಬಳಸಿಕೊಳ್ಳುವಲ್ಲಿ ಎಡವಿದರು. 26 ರನ್​ ಗಳಿಸಿ ನಾಯಕ ಕಮಿನ್ಸ್​ಗೆ ವಿಕೆಟ್​ ಒಪ್ಪಿಸಿದರು. ಇಶಾನ್​ ಕಿಶನ್​ 13 ಎಸೆತಗಳಿಂದ 34 (4 ಸಿಕ್ಸರ್​, 3 ಬೌಂಡರಿ) ರನ್​ ಬಾರಿಸಿದರು. ಬಳಿಕ ಬಂದ ನಮನ್ ಧೀರ್ ಮತ್ತು ತಿಲಕ್​ ವರ್ಮ ಕೂಡ ಬಿರುಸಿನ ಆಟವಾಡಿ ತಂಡದ ಗೆಲುವಿಗೆ ಶಕ್ತಿ ಮೀರಿ ಪ್ರಯತ್ನಪಟ್ಟರು. ಮುಂಬೈ 10 ಓವರ್​ಗೆ 140 ರನ್​ ಗಡಿ ದಾಡಿದ ವೇಳೆ ಈ ಬೃಹತ್​ ಮೊತ್ತವನ್ನು ಕೂಡ ಚೇಸಿಂಗ್​ ಮಾಡಿ ಗೆಲ್ಲುವ ಸೂಚನೆ ನೀಡಿತು. ಆದರೆ ಉಭಯ ಆಟಗಾರರ ವಿಕೆಟ್​ ಪತನದ ಬಳಿಕ ಹೈದರಾಬಾದ್​ ಬೌಲರ್​ಗಳು ಲಯಬದ್ಧ ಬೌಲಿಂಗ್​ ನಡೆಸಿ ಪಂದ್ಯವನ್ನು ಹಿಡಿತಕ್ಕೆ ತಂದರು.

ಮೊದಲು ಬ್ಯಾಟಿಂಗ್​ಗೆ ಇಳಿದ ಹೈದರಾಬಾದ್​ ಪರ ಅಗರ್ವಾಲ್(11)​ ಹೊರತುಪಡಿಸಿ ಉಳಿದ ಎಲ್ಲ ಬ್ಯಾಟರ್​ಗಳು ಜಿದ್ದಿಗೆ ಬಿದ್ದವರಂತೆ ಬ್ಯಾಟ್​ ಬೀಸಿ ಗಮನಸೆಳೆದರು. ಅದರಲ್ಲೂ 2ನೇ ವಿಕೆಟ್​ಗೆ ಜತೆಯಾದ ಅಭಿಷೇಕ್​ ಶರ್ಮಾ ಮತ್ತು ಆರಂಭಕಾರ ಟ್ರಾವಿಸ್​ ಹೆಡ್​ ಪೈಪೋಟಿಗೆ ಬಿದ್ದವರಂತೆ ಬ್ಯಾಟಿಂಗ್​ ನಡೆಸಿ ಮುಂಬೈ ಬೌಲರ್​ಗಳನ್ನು ನಿರ್ದಾಕ್ಷಿಣ್ಯವಾಗಿ ಮನಬಂದಂತೆ ದಂಡಿಸಿದರು. ಉಭಯ ಆಟಗಾರರ ಈ ಬ್ಯಾಟಿಂಗ್​ ಆರ್ಭಟಕ್ಕೆ ಮುಂಬೈ ​7 ಓವರ್​ ಆಗುವ ಮುನ್ನವೇ 100ರ ಗಡಿ ದಾಟಿತು.

ಇದನ್ನೂ ಓದಿ IPL 2024: ಐಪಿಎಲ್​ನಲ್ಲಿ ದಾಖಲೆ ನೂತನ ಬರೆದ ಹೈದರಾಬಾದ್; ಆರ್​ಸಿಬಿ ರೆಕಾರ್ಡ್ ಉಡೀಸ್​​

ತಿಲಕ್​ ವರ್ಮಾ(64) ಮತ್ತು ನಮನ್ ಧೀರ್(30) ರನ್​ ಗಳಿಸಿದರು. ಬಳಿಕ ಬಂದ ನಾಯಕ ಹಾರ್ದಿಕ್​ ಪಾಂಡ್ಯ(24) ಹಾಗೂ ಟಿಮ್​ ಡೇವಿಡ್(42*)​ ರನ್​ ಬಾರಿಸಿದರೂ ತಂಡವನ್ನು ಗೆಲುವಿನ ದಡ ಸೇರಿಸುವಲ್ಲಿ ವಿಫಲರಾದರು. ಹೈದರಾಬಾದ್​ ಪರ ನಾಯಕ ಕಮಿನ್ಸ್​ ಹಾಗೂ ಉನಾದ್ಕತ್​ ತಲಾ 2 ವಿಕೆಟ್​ ಪಡೆದರು.

ಬೌಲರ್​ಗಳನ್ನು ಚಿಂದಿ ಮಾಡಿದ ಹೆಡ್​-ಅಭಿಷೇಕ್

ವಿಶ್ವಕಪ್​ ಹೀರೊ ಟ್ರಾವಿಸ್​ ಹೆಡ್​ ಕೇವಲ 18 ಎಸೆತಗಳಲ್ಲಿ ಅರ್ಧಶತಕ ಬಾರಿಸಿದರೆ, ಇವರ ಜತೆಗಾರ ಅಭಿಷೇಕ್​ ಶರ್ಮ 16 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದರು. ಈ ಜೋಡಿ ದ್ವಿತೀಯ ವಿಕೆಟ್​ಗೆ 68 ರನ್​ ಒಟ್ಟುಗೂಡಿಸಿತು. ಹೆಡ್​ 24 ಎಸೆತಗಳಿಂದ 9 ಬೌಂಡರಿ ಮತ್ತು 3 ಸಿಕ್ಸರ್​ ನೆರವಿನಿಂದ 62 ರನ್​ ಬಾರಿಸಿದರು. ಅಭಿಷೇಕ್​ ಶರ್ಮಾ 23 ಎಸೆತ ಎದುರಿಸಿ 7 ಸೊಗಸಾದ ಸಿಕ್ಸರ್​ ಮತ್ತು 3 ಬೌಂಡರಿ ಸಿಡಿಸಿ 63 ರನ್​ ಕಲೆಹಾಕಿದರು. ಈ ಮೊತ್ತ ಬಾರಿಸಲು ಅವರು ಎದುರಿಸಿದ್ದು ಕೇವಲ 23 ಎಸೆತ. ಉಭಯ ಆಟಗಾರರ ಈ ಬ್ಯಾಟಿಂಗ್​ ಆರ್ಭಟದ ಮುಂದೆ ಮುಂಬೈ ತಂಡದ ಬೌಲಿಂಗ್​ ಸಂಪೂರ್ಣ ಹಳಿ ತಪ್ಪಿತು. ಹೆಡ್​ ಮತ್ತು ಅಭಿಷೇಕ್​ ಹೈದರಾಬಾದ್​ ಪರ ಅತಿ ಕಡಿಮೆ ಎಸೆತದಲ್ಲಿ ಅರ್ಧಶತಕ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ಕ್ರಮವಾಗಿ ಮೊದಲೆಡರು ಸ್ಥಾನ ಪಡೆದರು.

ಮತ್ತೆ ಸಿಡಿದ ಕ್ಲಾಸೆನ್​


ಕಳೆದ ಕೆಕೆಆರ್​ ವಿರುದ್ಧ ಅಸಾಮಾನ್ಯ ಬ್ಯಾಟಿಂಗ್​ ಪ್ರದರ್ಶನ ತೋರಿದ್ದ ಹೆನ್ರಿಚ್​ ಕ್ಲಾಸೆನ್​ ಈ ಪಂದ್ಯದಲ್ಲಿಯೂ ಸಿಡಿದು ನಿಂತರು. ಕ್ರೀಸ್​ಗಿಳಿದ ಮೊದಲ ಎಸೆತದಿಂದಲೇ ಬಿರುಸಿನ ಬ್ಯಾಟಿಂಗ್​ಗೆ ಒತ್ತುಕೊಟ್ಟ ಅವರು ಮೈದಾನದ ಮೂಲೆ ಮೂಲೆಗೂ ಸಿಕ್ಸರ್​ ಮತ್ತು ಬೌಂಡರಿ ಬಾರಿಸಿ ತವರಿನ ಅಭಿಮಾನಿಗಳಿಗೆ ಬರಪೂರ ರಂಜನೆ ನೀಡಿದರು. ಇವರಿಗೆ ಏಡನ್​ ಮಾರ್ಕ್ರಮ್​ ಕೂಡ ಉತ್ತಮ ಸಾಥ್​ ನೀಡಿದರು. ತಾನೇನು ಕಮ್ಮಿ ಇಲ್ಲ ಎನ್ನುವಂತೆ ಕ್ಲಾಸೆನ್ ಕೂಡ 22 ಎಸೆತಗಳಲ್ಲಿ ಅರ್ಧಶತಕ ಪೂರ್ತಿಗೊಳಿಸಿದರು. ಮುಂಬೈ ಪರ ಜಸ್​​ಪ್ರೀತ್​ ಬುಮ್ರಾ ಅವರನ್ನು ಬಿಟ್ಟು ಉಳಿದೆಲ್ಲ ಬೌಲರ್​ಗಳು ದುಬಾರಿಯಾದರು. ನಾಯಕ ಪಾಂಡ್ಯ ಒಂದು ವಿಕೆಟ್​ ಕಿತ್ತರೂ ಕೂಡ 46 ರನ್​ ಬಿಟ್ಟುಕೊಟ್ಟರು.

ಚೊಚ್ಚಲ ಐಪಿಎಲ್​ ಪಂದ್ಯವನ್ನಾಡಿದ ದಕ್ಷಿಣ ಆಫ್ರಿಕಾದ 17 ವರ್ಷದ ಕ್ವೆನಾ ಮಫಕಾ ಅವರಂತೂ ಸರಿಯಾಗಿ ರನ್​ ಹೊಡೆಸಿಕೊಂಡರು. 4 ಓವರ್​ ಎಸೆದು 66 ರನ್​ ಬಿಟ್ಟುಕೊಟ್ಟರು. ಸ್ಪಿನ್ನರ್​ ಪಿಯೂಷ್ ಚಾವ್ಲಾ ಕೇವಲ 2 ಓವರ್​ಗೆ 34 ರನ್​ ಚಚ್ಚಿಸಿಕೊಂಡರು. ಕ್ಲಾಸೆನ್​ 34 ಎಸೆತದಿಂದ ಅಜೇಯ 80 ರನ್​ ಬಾರಿಸಿದರು. ಸಿಡಿದ್ದು 7 ಸಿಕ್ಸರ್​ ಮತ್ತು 4 ಬೌಂಡರಿ. ಮಾರ್ಕ್ರಮ್ ಕೂಡ 42 ರನ್​ ಬಾರಿಸಿ ಅಜೇಯರಾಗಿ ಉಳಿದರು.

ದಾಖಲೆ ಬರೆದ ಹೈದರಾಬಾದ್​


ಹೈದರಾಬಾದ್​ ತಂಡ ಈ ಬೃಹತ್​ ಮೊತ್ತವನ್ನು ಬಾರಿಸುವ ಮೂಲಕ ಐಪಿಎಲ್​(IPL 2024) ಇತಿಹಾಸದಲ್ಲೇ ಅತ್ಯಧಿಕ ರನ್​ ಪೇರಿಸಿದ ಮೊದಲ ತಂಡ ಎಂಬ ದಾಖಲೆ ಬರೆಯಿತು. ಈ ಮೂಲಕ ಆರ್​ಸಿಬಿ ಹೆಸರಿನಲ್ಲಿದ ದಾಖಲೆಯನ್ನು ಮುರಿಯಿತು. ಆರ್​ಸಿಬಿ 2013ರಲ್ಲಿ ಪುಣೆ ವಾರಿಯರ್ಸ್​ ವಿರುದ್ಧ 5 ವಿಕೆಟ್​ಗೆ 263 ರನ್​ ಬಾರಿಸಿತ್ತು. ಇದೀಗ ಸನ್​ರೈಸರ್ಸ್​ 3 ವಿಕೆಟ್​ಗೆ 277 ರನ್​ ಬಾರಿಸುವ ಕಳೆದ 11 ವರ್ಷಗಳಿಂದ ಆರ್​ಸಿಬಿ ಹೆಸರಿನಲ್ಲಿ ದಾಖಲೆಯನ್ನು ಮೀರಿ ನಿಂತಿದೆ.

Exit mobile version