Site icon Vistara News

Miami Open 2024: ಚೊಚ್ಚಲ ಮಿಯಾಮಿ ಓಪನ್ ಪ್ರಶಸ್ತಿ ಗೆದ್ದ ಬೋಪಣ್ಣ-ಎಬ್ಡೆನ್‌ ಜೋಡಿ

Miami Open 2024

ಭಾರತದ ಖ್ಯಾತ ಟೆನಿಸ್​ ಆಟಗಾರ ರೋಹನ್ ಬೋಪಣ್ಣ(Rohan Bopanna) ಮತ್ತು ಅವರ ಆಸ್ಟ್ರೇಲಿಯನ್‌ ಜತೆಗಾರ ಮ್ಯಾಥ್ಯೂ ಎಬ್ಡೆನ್‌(Matthew Ebden) ಅವರು ಮಿಯಾಮಿ ಓಪನ್ ಟೆನಿಸ್ ಟೂರ್ನಿಯ(Miami Open 2024) ಪುರುಷರ ಡಬಲ್ಸ್‌ ಫೈನಲ್‌ನಲ್ಲಿ ಗೆಲುವು ದಾಖಲಿಸಿ ಚೊಚ್ಚಲ ಟ್ರೋಫಿಯನ್ನು ಎತ್ತಿ ಹಿಡಿದಿದ್ದಾರೆ. ಇದು ಬೋಪಣ್ಣ-ಮ್ಯಾಥ್ಯೂ ಜೋಡಿಗೆ ಈ ವರ್ಷ ಒಲಿದ 2ನೇ ಪ್ರಮುಖ ಪ್ರಶಸ್ತಿಯಾಗಿದೆ. ಇದಕ್ಕೂ ಮುನ್ನ ಆಸ್ಟ್ರೇಲಿಯಾ ಓಪನ್​ ಟೂರ್ನಿಯಲ್ಲಿ ಪ್ರಶಸ್ತಿ ಒಲಿದಿತ್ತು.

ಶನಿವಾರ ತಡರಾತ್ರಿ ನಡೆದ ಫೈನಲ್‌ನಲ್ಲಿ ಬೋಪಣ್ಣ ಮತ್ತು ಎಬ್ಡೆನ್ ಜೋಡಿ ವಿಶ್ವದ 2ನೇ ಶ್ರೇಯಾಂಕಿತ ಕ್ರೊವೇಷಿಯಾದ ಇವಾನ್‌ ಡೊಡಿಗ್‌-ಅಮೆರಿಕದ ಆಸ್ಟಿನ್‌ ಕ್ರಾಜಿಕೆಕ್‌ ವಿರುದ್ಧ  6-7 (3), 6-3, 10-6 ಅಂತರದಿಂದ ಗೆದ್ದು ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು. ಒಂದು ಗಂಟೆ 42 ನಿಮಿಷಗಳ ಕಾಲ ಈ ಹೋರಾಟ ನಡೆಯಿತು. ವಿಶ್ವ ಕ್ರಮಾಂಕದಲ್ಲಿ ಎರಡನೇ ಸ್ಥಾನದಲ್ಲಿದ್ದ ಬೋಪಣ್ಣ, ಈ ಗೆಲುವಿನ ಮೂಲಕ ಮತ್ತೆ ಅಗ್ರಸ್ಥಾನ ಪಡೆದುಕೊಂಡಿದ್ದಾರೆ.

ಕಳೆದ ಆಸ್ಟ್ರೇಲಿಯನ್ ಓಪನ್ ಗೆಲುವಿನ ನಂತರ, 44 ವರ್ಷದ ಬೋಪಣ್ಣ ಎಟಿಪಿ ಶ್ರೇಯಾಂಕದಲ್ಲಿ ವಿಶ್ವದ ನಂ.1 ಸ್ಥಾನಕ್ಕೆ ಏರಿದ್ದರು. ಕೊಡಗು ಮೂಲದವರಾದ ಬೋಪಣ್ಣ ಪಾಲಿಗೆ ಇದು 14ನೇ ಎಟಿಪಿ ಮಾಸ್ಟರ್ಸ್ ಫೈನಲ್ ಹಾಗೂ ಮಯಾಮಿ ಟೂರ್ನಿಯ ಮೊದಲ ಫೈನಲ್ ಪಂದ್ಯವಾಗಿತ್ತು.

ಬೋಪಣ್ಣ ಅವರು ಈವರೆಗೆ 25 ಡಬಲ್ಸ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಮಿಯಾಮಿ ಓಪನ್‌ ಎಟಿಪಿ 1000 ಟೆನಿಸ್‌(Miami Open 2024) ಟೂರ್ನಿಯ ಫೈನಲ್‌ ಪ್ರವೇಶಿಸಿಸುವ ಮೂಲಕ ಎಲ್ಲಾ 9 ಎಟಿಪಿ ಮಾಸ್ಟರ್ಸ್‌ ಟೂರ್ನಿಗಳಲ್ಲಿ ಫೈನಲ್‌ಗೇರಿದ 2ನೇ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಇದೀಗ ತಮ್ಮ ಚೊಚ್ಚಲ ಪ್ರಯತ್ನದಲ್ಲೇ ಪ್ರಶಸ್ತಿಗೆ ಮುತ್ತಿಕ್ಕಿದ್ದಾರೆ.

ಇದನ್ನೂ ಓದಿ Rohan Bopanna: ಪ್ರಧಾನಿ ಮೋದಿಗೆ ವಿಶೇಷ ಉಡುಗೊರೆ ನೀಡಿದ ರೋಹನ್ ಬೋಪಣ್ಣ

ಸೆಮಿಫೈನಲ್‌ನಲ್ಲಿ ಅಗ್ರ ಶ್ರೇಯಾಂಕಿತ ಇಂಡೋ-ಆಸೀಸ್‌ ಜೋಡಿ, ಸ್ಪೇನ್‌ನ ಗ್ರಾನೊಲೆರ್ಸ್‌ ಹಾಗೂ ಅರ್ಜೆಂಟೀನಾದ ಜೆಬಲ್ಲೊಸ್‌ ವಿರುದ್ಧ 6-1, 6-4 ಅಂತರದಲ್ಲಿ ಗೆಲುವು ಸಾಧಿಸಿತ್ತು. ಫೈನಲ್​ನಲ್ಲಿಯೂ​ ಇದೇ ಜೋಶ್​ನಲ್ಲಿ ಆಡಿ ಮೇಲುಗೈ ಸಾಧಿಸಿತು. ಇದೇ ವರ್ಷ ನಡೆದ ಆಸ್ಟ್ರೇಲಿಯಾ ಓಪನ್​ ಟೆನಿಸ್​ ಟೂರ್ನಿಯಲ್ಲಿ(Australian Open 2024) ಅಭೂತಪೂರ್ವ ಸಾಧನೆ ತೋರಿದ ಬೋಪಣ್ಣ ಜೋಡಿ ಪರುಷರ ಡಬಲ್ಸ್​ ಫೈನಲ್​ ಪಂದ್ಯದಲ್ಲಿ ಗೆದ್ದು ಚೊಚ್ಚಲ ಆಸ್ಟ್ರೇಲಿಯಾ ಓಪನ್​ ಪ್ರಶಸ್ತಿ ಎತ್ತಿ ಹಿಡಿದಿದ್ದರು. ಈ ಮೂಲಕ ಓಪನ್​ ಯುಗದಲ್ಲಿ ಗ್ರ್ಯಾನ್‌ ಸ್ಲಾಮ್‌ ಟ್ರೋಫಿ ಗೆದ್ದ ಅತಿ ಹಿರಿಯ ಟೆನಿಸಿಗ ಎನಿಸಿಕೊಂಡಿದ್ದರು.

ರೋಹನ್ ಬೋಪಣ್ಣ ಅವರು ಈ ಪ್ರಶಸ್ತಿಯೊಂದಿಗೆ ಮಾಸ್ಟರ್ಸ್ 1000 ಪ್ರಶಸ್ತಿಯನ್ನು ಗೆದ್ದ ಅತ್ಯಂತ ಹಿರಿಯ ಆಟಗಾರ ಎಂಬ ತಮ್ಮದೇ ಆದ ದಾಖಲೆಯನ್ನು ಮತ್ತೆ ತಿದ್ದಿ ಬರೆದರು. ಕಳೆದ ವರ್ಷ ಕ್ಯಾಲಿಫೋರ್ನಿಯಾದಲ್ಲಿ ನಡೆದ ಇಂಡಿಯನ್ ವೆಲ್ಸ್ ಮಾಸ್ಟರ್ಸ್ ಗೆದ್ದು ಈ ದಾಖಲೆ ಬರೆದಿದ್ದರು. ಆಗ ಅವರಿಗೆ 43 ವರ್ಷವಾಗಿತ್ತು. ಇದೀಗ 44 ನೇ ವರ್ಷದಲ್ಲಿ ಮತ್ತೊಂದು ಮಾಸ್ಟರ್ಸ್ 1000 ಪ್ರಶಸ್ತಿಯನ್ನು ಗೆದ್ದು ತಮ್ಮದೇ ದಾಖಲೆಯನ್ನು ಮುರಿದಿದ್ದಾರೆ. ಈ ಮೂಲಕ ವಯಸ್ಸು ಕೇವಲ ಸಂಖ್ಯೆ ಎಂದು ಮತ್ತೊಮ್ಮೆ ಸಾಬೀತುಪಡಿಸಿದರು.

Exit mobile version