Site icon Vistara News

IPL 2023 : ನ್ಯೂಜಿಲ್ಯಾಂಡ್​ನ ಆಲ್​​ರೌಂಡರ್​ ಮೈಕೆಲ್ ಬ್ರೇಸ್​ವೆಲ್​ ಆರ್​ಸಿಬಿ ಬಳಗ ಸೇರ್ಪಡೆ

Michael Bracewell of New Zealand joined the RCB team

#image_title

ಬೆಂಗಳೂರು: ಐಪಿಎಲ್ (IPL 2023)​ ಆರಂಭಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಉಳಿದೆದೆ. ಹೀಗಾಗಿ ಎಲ್ಲ ಫ್ರಾಂಚೈಸಿಗಳು ಸಿದ್ದತೆ ನಡೆಸಿಕೊಳ್ಳುತ್ತಿವೆ. ಏತನ್ಮಧ್ಯೆ, ಆರ್​ಸಿಬಿ ತಂಡಕ್ಕೊಂದು ಆಘಾತ ಎದುರಾಗಿತ್ತು. 3.2 ಕೋಟಿ ರೂಪಾಯಿ ಕೊಟ್ಟು ಖರೀದಿ ಮಾಡಿದ್ದ ಇಂಗ್ಲೆಂಡ್​ನ ಸ್ಫೋಟಕ ಬ್ಯಾಟರ್ ವಿಲ್ ಯಂಗ್​ ಗಾಯದ ಸಮಸ್ಯೆಗೆ ಒಳಗಾಗಿದ್ದರು. ಹೀಗಾಗಿ ಆರ್​ಸಿಬಿ ಮ್ಯಾನೇಜ್ಮೆಂಟ್​ಗೆ ಆತಂಕ ಎದುರಾಗಿತ್ತು. ಆ ಸ್ಥಾನಕ್ಕೊಂದು ಪರ್ಯಾಯ ಆಟಗಾರನನ್ನು ತಂಡ ಹುಡುಕಿದೆ. ಅವರೇ ನ್ಯೂಜಿಲ್ಯಾಂಡ್​ನ ಮೈಕೆಲ್​ ಬ್ರೇಸ್​ವೆಲ್​.

ವಿಲ್​ ಯಂಗ್​ ಇಂಗ್ಲೆಂಡ್​ ತಂಡದ ಬಾಂಗ್ಲಾದೇಶ ಪ್ರವಾಸದ ಭಾಗವಾಗಿದ್ದರು. ಆದರೆ, ಅಲ್ಲಿ ಅವರು ಗಾಯಕ್ಕೆ ಒಳಗಾಗಿದ್ದರು. ಅವರ ಸುಧಾರಣೆಗೆ ದೀರ್ಘ ಅವಧಿ ಬೇಕಾಗುತ್ತದೆ. ಹೀಗಾಗಿ ಐಪಿಎಲ್​ ಪೂರ್ತಿ ಟೂರ್ನಿಗೆ ಲಭ್ಯರಾಗುವುದು ಅನುಮಾನ ಎನಿಸಿತ್ತು. ಇದೀಗ ಅದಕ್ಕೆ ಪರಿಹಾರ ಎಂಬಂತೆ ಬ್ರೇಸ್​ವೆಲ್ ಅವರನ್ನು ಖರೀದಿ ಮಾಡಿದೆ ಆರ್​ಸಿಬಿ. ಅಂದ ಹಾಗೆ ಬ್ರೇಸ್ ವೆಲ್​ ಅವರು ಐಪಿಎಲ್​ ಮಿನಿ ಹರಾಜಿನಲ್ಲಿ ಅನ್​ಸೋಲ್ಡ್ ಆಗಿದ್ದರು. ಯಾವುದೇ ತಂಡ ಅವರನ್ನು ಖರೀದಿ ಮಾಡಿರಲಿಲ್ಲ. ಅವರು ಒಂದು ಕೋಟಿ ರೂಪಾಯಿ ಮೂಲ ಬೆಲೆ ಇಟ್ಟುಕೊಂಡಿದ್ದರು. ಫ್ರಾಂಚೈಸಿಗಳಲ್ಲಿ ದುಡ್ಡು ಖಾಲಿಯಾಗಿದ್ದ ಕಾರಣ ಅವರನ್ನು ಯಾರೂ ತೆಗೆದುಕೊಂಡಿರಲಿಲ್ಲ. ಹೀಗಾಗಿ ಅವರನ್ನು ಆರ್​ಸಿಬಿ ತನ್ನ ತೆಕ್ಕೆಗೆ ಮೂಲ ಬೆಲೆಗೆ ತನ್ನದಾಗಿಸಿಕೊಂಡಿದೆ.

ಅಂದ ಹಾಗೆ ಭಾರತ ಹಾಗೂ ನ್ಯೂಜಿಲೆಂಡ್‌ ನಡುವಣ ಏಕದಿನ ಸರಣಿಯಲ್ಲಿ ಮಿಂಚಿನ ಬ್ಯಾಟಿಂಗ್‌ ಮೂಲಕ ಅವರು ಗಮನ ಸೆಳೆದಿದ್ದರು. ಹೈದರಾಬಾದ್‌ ಪಂದ್ಯದಲ್ಲಿ ಅವರು ಭರ್ಜರಿ ಶತಕ ಸಿಡಿಸಿದ್ದರು. ಈ ಸರಣಿಯ ಮೂರೂ ಪಂದ್ಯಗಳಿಂದ ಅವರು 144.63ರ ಸ್ಟ್ರೈಕ್‌ ರೇಟ್‌ನಲ್ಲಿ 188 ರನ್‌ ಗಳಿಸಿದ್ದರು. ಆ ಮೂಲಕ ಶುಭಮನ್‌ ಗಿಲ್ ಬಳಿಕ ಈ ಸರಣಿಯಲ್ಲಿ ಅತಿ ಹೆಚ್ಚು ರನ್‌ ಗಳಿಸಿದ ಎರಡನೇ ಬ್ಯಾಟ್ಸ್‌ಮನ್‌ ಎನಿಸಿಕೊಂಡಿದ್ದರು.

ಇದನ್ನೂ ಓದಿ : Jasprit Bumrah: ಶಸ್ತ್ರಚಿಕಿತ್ಸೆಗಾಗಿ ನ್ಯೂಜಿಲ್ಯಾಂಡ್​ ತಲುಪಿದ ಜಸ್​ಪ್ರೀತ್​ ಬುಮ್ರಾ

32ರ ಪ್ರಾಯದ ಮೈಕಲ್‌ ಬ್ರೇಸ್‌ವೆಲ್‌ ಅವರು ನ್ಯೂಜಿಲ್ಯಾಂಡ್​ ತಂಡದ ಪ್ರಮುಖ ಆಟಗಾರರಾಗಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿಯೂ ಉತ್ತಮ ದಾಖಲೆ ಹೊಂದಿದ್ದಾರೆ. ತಮ್ಮ ವೃತ್ತಿ ಜೀವನದಲ್ಲಿ 117 ಟಿ20 ಪಂದ್ಯಗಳಾಡಿರುವ ಅವರು, 133.48 ಸ್ಟ್ರೈಕ್‌ ರೇಟ್‌ನಲ್ಲಿ 2284 ರನ್‌ ಗಳಿಸಿದ್ದಾರೆ. ಇದರಲ್ಲಿ ಅವರು ಒಂದು ಶತಕ ಹಾಗೂ 13 ಅರ್ಧಶತಕಗಳು ಸೇರಿಕೊಂಡಿವೆ. ಇದರ ಜೊತೆಗೆ 20 ಅಂತಾರಾಷ್ಟ್ರೀಯ ವಿಕೆಟ್‌ಗಳು ಸೇರಿದಂತೆ ಒಟ್ಟು 40 ವಿಕೆಟ್‌ಗಳನ್ನು ಕಬಳಿಸಿದ್ದಾರೆ.

ಮೈಕೆಲ್​ ಬ್ರೇಸ್​ವೆಲ್​ ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ತಂಡಕ್ಕೆ ಆಯ್ಕೆಯಾಗಿದ್ದರು. ಐಪಿಎಲ್​ನಲ್ಲಿ ಅವಕಾಶ ಪಡೆದುಕೊಂಡಿರುವ ಕಾರಣ ಅವರರನ್ನು ತಂಡದಿಂದ ಕೈ ಬಿಡಲಾಗಿದೆ. ರಚಿನ್​ ರವೀಂದ್ರಗೆ ಅವಕಾಶ ಕೊಡಲಾಗಿದೆ. ಐಪಿಎಲ್​ಗಾಗಿ ಅವರೆಲ್ಲರೂ ಭಾರತಕ್ಕೆ ಬರುವ ಕಾರಣ ಕೇನ್​ ವಿಲಿಯಮ್ಸನ್​, ಟಿಮ್​ ಸೌಥಿ, ಡೆವೋನ್​ ಕಾನ್ವೆ ಹಾಗೂ ಮಿಚೆಲ್ ಸ್ಯಾಂಟ್ನರ್​ ಕೂಡ ನ್ಯೂಜಿಲ್ಯಾಂಡ್​ ಏಕ ದಿನ ತಂಡದಲ್ಲಿ ಆಡುತ್ತಿಲ್ಲ.

Exit mobile version