ಮೊಹಾಲಿ : ಪ್ರವಾಸಿ ಆಸ್ಟ್ರೇಲಿಯಾ ಹಾಗೂ ಭಾರತ ತಂಡದ ನಡುವಿನ ಟಿ೨೦ ಸರಣಿಯ ಮೊದಲ ಪಂದ್ಯ ಚಂಡಿಗಢದ ಐಎಸ್ ಬಿಂದ್ರಾ ಕ್ರಿಕೆಟ್ ಸ್ಟೇಡಿಯಮ್‌ನಲ್ಲಿ ಮಂಗಳವಾರ (ಸೆಪ್ಟೆಂಬರ್ ೨೦) ನಡೆಯಲಿದೆ. ಈ ಪಂದ್ಯ ಸೇರಿದಂತೆ ಮೂರು ಪಂದ್ಯಗಳ ಸರಣಿಯಲ್ಲಿ ಭಾರತ ತಂಡದ ಪ್ರದರ್ಶನದ ಬಗ್ಗೆ ಕ್ರಿಕೆಟ್ ಅಭಿಮಾನಿಗಳ ಗಮನ ನೆಟ್ಟಿದೆ. ಯಾಕೆಂದರೆ, ಟೀಮ್ ಇಂಡಿಯಾದ ಸದ್ಯದ ಆತಂಕವಾಗಿರುವ ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ವೈಫಲ್ಯದ ಸುಧಾರಣೆಗೆ ಉತ್ತಮ ಅವಕಾಶವಾಗಿದೆ. ಅದೇ ರೀತಿ ತಂಡದ ನೆರವಿಗೆ ಸದಾ ನಿಲ್ಲಬಲ್ಲ ಅರನೇ ಬೌಲರ್ ಯಾರು ಎಂಬುದನ್ನೂ ಪತ್ತೆ ಹಚ್ಚುವುದಕ್ಕೂ ಒಂದು ಚಾನ್ಸ್.
ಆಸೀಸ್ ವಿರುದ್ಧದ ಸರಣಿಯು ಮುಂದಿನ ಟಿ೨೦ ವಿಶ್ವ ಕಪ್‌ಗೆ ಉತ್ತಮ ಅಭ್ಯಾಸ ಪಂದ್ಯವಾಗಲಿದ್ದು, ಆಡುವ ಬಳಗದಲ್ಲಿ ಅವಕಾಶ ಪಡೆದುಕೊಂಡ ಆಟಗಾರರು ತಮ್ಮತಮ್ಮ ಸ್ಥಾವನ್ನು ಭದ್ರಪಡಿಸಿಕೊಳ್ಳುವಂಥ ಪ್ರದರ್ಶನ ನೀಡಬೇಕಾಗುತ್ತದೆ. ಟಿ೨೦ ಮಾದರಿಯಲ್ಲಿ ಕ್ರಮಾಂಕ ಬದಲಾವಣೆಗೆ ಸಾಕಷ್ಟು ಅವಕಾಶಗಳು ಇರುತ್ತವೆ. ಆದರೆ, ಟಿ೨೦ ವಿಶ್ವ ಕಪ್ ಹಿನ್ನೆಲೆಯಲ್ಲಿ ಎಲ್ಲರ ಬ್ಯಾಟಿಂಗ್ ಸಾಮರ್ಥ್ಯ ಈ ಸರಣಿಯಲ್ಲಿ ಪರೀಕ್ಷೆಗೆ ಒಳಪಡಲಿದೆ.
ಗಾಯದ ಸಮಸ್ಯೆಯಿಂದ ಕಳೆದ ಕೆಲವು ಸರಣಿಗಳಲ್ಲಿ ಭಾರತ ತಂಡದ ಸೇವೆ ಕಳೆದುಕೊಂಡಿದ್ದ ಜಸ್‌ಪ್ರಿತ್ ಬುಮ್ರಾ ಹಾಗೂ ಹಾರ್ದಿಕ್ ಪಾಂಡ್ಯ ತಂಡಕ್ಕೆ ಮರಳಿದ್ದಾರೆ. ಇವರಿಬ್ಬರನ್ನು ವಿಶ್ವ ಕಪ್‌ಗೆ ಮುಂಚೂಣಿ ಬೌಲರ್‌ಗಳೆಂದೇ ಬಿಂಬಿಸಲಾಗುತ್ತಿದೆ. ಹೀಗಾಗಿ ಈ ವೇಗಿಗಳ ಪ್ರದರ್ಶನದ ಬಗ್ಗೆ ಆಯ್ಕೆಗಾರರು ಕ್ಷಕಿರಣ ಬೀರಲಿದ್ದಾರೆ.
ಆರಂಭಿಕರ ಆತಂಕ
ಭಾರತ ತಂಡ ಕಳೆದ ಏಷ್ಯಾ ಕಪ್‌ನಲ್ಲಿ ಉತ್ತಮವಾಗಿ ಬ್ಯಾಟ್ ಮಾಡಿತ್ತು. ಆದಾಗ್ಯೂ ಆರಂಭಿಕ ಬ್ಯಾಟರ್‌ಗಳಾದ ರೋಹಿತ್ ಶರ್ಮ ಹಾಗೂ ಕೆ. ಎಲ್ ರಾಹುಲ್ ಅವರ ರನ್ ಗಳಿಕೆಯಲ್ಲಿ ಹಿಂದಕ್ಕೆ ಬಿದ್ದಿದ್ದರು. ಈ ವಿಭಾಗದ ಆತಂಕ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲೂ ಟೀಮ್ ಇಂಡಿಯಾಗೆ ಎದುರಾಗಲಿದೆ. ವಿರಾಟ್ ಕೊಹ್ಲಿ ಫಾರ್ಮ್‌ಗೆ ಮರಳಿರುವುದು ಟೀಮ್ ಇಂಡಿಯಾಗೆ ಖುಷಿಯ ಸಂಗತಿಯಾಗಿದ್ದು, ಈ ಸರಣಿಯಲ್ಲಿ ಮತ್ತೊಮ್ಮೆ ಮಿಂಚುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮಧ್ಯಮ ಕ್ರಮಾಂಕದಲ್ಲಿ ಸೂರ್ಯಕುಮಾರ್ ಯಾದವ್ ಇನ್ನಷ್ಟು ಜವಾಬ್ದಾರಿ ಮೆರೆಯಬೇಕಾಗಿದೆ. ಆದರೆ ರಿಷಭ್ ಪಂತ್‌ಗೆ ತಮ್ಮ ಬ್ಯಾಟಿಂಗ್ ಕಲೆಯನ್ನು ಪ್ರದರ್ಶಿಸಲು ಇದು ಸಕಾಲ ಎನಿಸಿಕೊಂಡಿದೆ. ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡರಲ್ಲೂ ನೆರವಾಗುವ ವಿಶ್ವಾಸ ಮೂಡಿಸಿದ್ದಾರೆ. ರವೀಂದ್ರ ಜಡೇಜಾ ಅವರ ಅಲಭ್ಯತೆಯಲ್ಲಿ ಅವರ ಸ್ಥಾನ ಯಾರು ತುಂಬುವರು ಎಂಬುದು ಕುತೂಹಲದ ಸಂಗತಿ. ಹೂಡಾ ಏಷ್ಯಾ ಕಪ್‌ನಲ್ಲಿ ಅವಕಾಶ ಪಡೆದುಕೊಂಡಿದ್ದ ಹೊರತಾಗಿಯೂ ಅವರ ಬ್ಯಾಟ್‌ನಿಂದ ಹೆಚ್ಚು ರನ್ ಬಂದಿರಲಿಲ್ಲ. ಹೀಗಾಗಿ ಅವರ ಸಾಮರ್ಥ್ಯ ಪರೀಕ್ಷೆಯೂ ನಡೆಯಬಹುದು.
ಬುಮ್ರಾ ಹಾಗೂ ಹರ್ಷಲ್ ಜತೆ ಹಾರ್ದಿಕ್ ಪಾಂಡ್ಯ ವೇಗದ ಬೌಲಿಂಗ್ ಆಯ್ಕೆಯಾಗಿದ್ದಾರೆ. ಅಕ್ಷರ್ ಪಟೇಲ್ ಹಾಗೂ ಯಜ್ವೇಂದ್ರ ಚಹಲ್ ಸ್ಪಿನ್ ಬೌಲಿಂಗ್ ವಿಭಾಗದ ನೇತೃತ್ವ ವಹಿಸಲಿದ್ದಾರೆ.
ಆಸ್ಟ್ರೇಲಿಯಾ ತಂಡ ಪ್ರಮುಖ ಆಟಗಾರರ ಅಲಭ್ಯತೆಯೊಂದಿಗೆ ಭಾರತಕ್ಕೆ ಪ್ರವಾಸ ಬಂದಿದೆ. ಪ್ರವಾಸಿ ಬಳಗಕ್ಕೂ ಮುಂದಿನ ವಿಶ್ವ ಕಪ್‌ಗೆ ಸಿದ್ಧವಾಗುವ ಗುರಿಯಿದೆ. ಇತ್ತೀಚೆಗೆ ಏಕ ದಿನ ಮಾದರಿಗೆ ವಿದಾಯ ಹೇಳಿರುವ ಆರೋನ್ ಫಿಂಚ್ ತಂಡದ ನೇತೃತ್ವ ವಹಿಸಿಕೊಂಡಿದ್ದಾರೆ. ಡೇವಿಡ್ ವಾರ್ನರ್, ಮಿಚೆಲ್ ಸ್ಟಾರ್ಕ್, ಮಾರ್ಕ್ ಸ್ಟೋಯ್ನಿಸ್, ಮಿಚೆಲ್ ಮಾರ್ಷ್ ಪ್ರವಾಸಿ ತಂಡದಲ್ಲಿ ಇಲ್ಲ. ಲೀಗ್ ಕ್ರಿಕೆಟ್‌ನಲ್ಲಿ ಪ್ರಭಾ ಬೀರುತ್ತಿರುವ ಟಿಮ್ ಡೇವಿಡ್ ಈ ಸರಣಿಯಲ್ಲಿ ತಮ್ಮ ಸಾಮರ್ಥ್ಯ ಪ್ರದರ್ಶನ ಮಾಡಲಿದ್ದಾರೆ.
ಸಂಭಾವ್ಯ ತಂಡಗಳು
ಉಭಯ ತಂಡಗಳ ಸಂಭಾವ್ಯ ಇಲೆವೆನ್
ಭಾರತ: ರೋಹಿತ್ ಶರ್ಮ, ಕೆ.ಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್, ಅಕ್ಷರ್ ಪಟೇಲ್, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಜಸ್‌ಪ್ರಿತ್ ಬುಮ್ರಾ ಮತ್ತು ಯಜ್ವೇಂದ್ರ ಚಹಲ್.
ಆಸ್ಟ್ರೇಲಿಯಾ : ಆರೋನ್ ಫಿಂಚ್, ಮ್ಯಾಥ್ಯೂ ವೇಡ್, ಸ್ಟೀವ್ ಸ್ಮಿತ್, ಗ್ಲೆನ್ ಮ್ಯಾಕ್ಸ್‌ವೆಲ್, ಕ್ಯಾಮೆರಾನ್ ಗ್ರೀನ್, ಟಿಮ್ ಡೇವಿಡ್, ಆಡಮ್ ಜಂಪಾ, ಪ್ಯಾಟ್ ಕಮಿನ್ಸ್, ಜೋಶ್ ಹ್ಯಾಜಲ್‌ವುಡ್, ಸೀನ್ ಅಬಾಟ್, ಆಸ್ಟನ್ ಅಗರ್.
ಪಂದ್ಯದ ವಿವರ
ಸ್ಥಳ: ಪಂಜಾಬ್ ಕ್ರಿಕೆಟ್ ಅಸೋಸಿಯೇಷನ್ ಐಎಸ್ ಬಿಂದ್ರಾ ಸ್ಟೇಡಿಯಮ್, ಮೊಹಾಲಿ, ಚಂಡಿಗಢ
ಸಮಯ: ರಾತ್ರಿ ೭.೩೦ಕ್ಕೆ
ನೇರ ಪ್ರಸಾರ : ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್‌ನಲ್ಲಿ ನೇರ ಪ್ರಸಾರ, ಡಿಸ್ನಿ ಹಾಟ್‌ಸ್ಟಾರ್‌ನಲ್ಲಿ ಲೈವ್ ಸ್ಟ್ರೀಮಿಂಗ್
ಇದನ್ನೂ ಓದಿ | IND vs AUS | ಎರಡು ಸಿಕ್ಸರ್ ಬಾರಿಸಿದರೆ ರೋಹಿತ್ ಶರ್ಮ ಪಾಲಾಗಲಿದೆ ಹೊಸ ವಿಶ್ವ ದಾಖಲೆ