Site icon Vistara News

Viral Video: ಅಫ್ರಿದಿ ಜತೆಗಿನ ಸಂಭ್ರಮಾಚರಣೆ ತಡೆದ ಬಾಬರ್​ ಅಜಂ

Miffed Babar Azam

ಕೋಲ್ಕೊತಾ: ಇಂಗ್ಲೆಂಡ್(ENG vs PAK)​ ವಿರುದ್ಧ ಶನಿವಾರ ನಡೆದ ವಿಶ್ವಕಪ್​ನ ಲೀಗ್​ ಪಂದ್ಯದಲ್ಲಿ ಪಾಕಿಸ್ತಾನ 93 ರನ್​ಗಳ ಸೋಲು ಕಂಡಿತು. ಆದರೆ ಈ ಪಂದ್ಯದಲ್ಲಿ ನಡೆದ ಬಾಬರ್​ ಅಜಂ(Babar Azam) ಅವರು ಶಾಹೀನ್​ ಅಫ್ರಿದಿ(Shaheen Afridi) ಮೇಲೆ ಮುನಿಸಿಕೊಂಡ ವಿಡಿಯೊ ವೈರಲ್(Viral Video)​ ಆಗಿದೆ.

ಸಂಭ್ರಮಾಚರಣೆ ಮಾಡದಂತೆ ತಡೆದ ಬಾಬರ್​

ಇಂಗ್ಲೆಂಡ್​ ತಂಡದ ಬ್ಯಾಟಿಂಗ್​ ಇನಿಂಗ್ಸ್​ ವೇಳೆ ಇಂಗ್ಲೆಂಡ್ ತಂಡ ಸ್ಟಾರ್ ಆಲ್​ ರೌಂಡರ್​​ ಬೆನ್ ಸ್ಟೋಕ್ಸ್ ವಿಕೆಟ್ ಪಡೆದ ನಂತರ ಶಾಹೀನ್ ಅಫ್ರಿದಿ ತಂಡದ ಸಹ ಆಟಗಾರರೊಂದಿಗೆ ಸಂಭ್ರಮಾಚರಣೆ ಮಾಡಲು ಮುಂದಾದರು. ಇದೇ ವೇಳೆ ನಾಯಕ ಬಾಬರ್​ ಅಜಂ ಅವರು ಅಫ್ರಿದಿ ಜತೆ ಸಂಭ್ರಮಿಸಲು ಮುಂದಾದ ಮೊಹಮ್ಮದ್​ ರಿಜ್ವಾನ್​ ಅವರನ್ನು ಎರಡೂ ಕೈಗಳಿಂದ ತಡೆದ್ದಾರೆ. ಇದು ಕ್ಯಾಮೆರದಲ್ಲಿ ಸ್ಪಷ್ಟವಾಗಿ ಸೆರೆಯಾಗಿದೆ. ಇದರ ವಿಡಿಯೊ ಇದೀಗ ಎಲ್ಲೆಡೆ ವೈರಲ್​ ಆಗಿದೆ.

ವಿಶ್ವಕಪ್ ಟೂರ್ನಿ ಆರಂಭಗೊಳ್ಳುವ ಮುನ್ನವೇ ಪಾಕಿಸ್ತಾನ ಕ್ರಿಕೆಟ್ ತಂಡದಲ್ಲಿ ಎಲ್ಲವೂ ಸರಿಯಿಲ್ಲ, ಎರಡು ಗುಂಪುಗಳಿವೆ ಎಂಬ ಮಾತುಗಳು ಕೇಳಿಬಂದಿದ್ದವು. ಏಷ್ಯಾಕಪ್​ ಟೂರ್ನಿಯ ವೇಳೆ ಒಂದು ಬಾರಿ ಡ್ರೆಸಿಂಗ್​ ರೂಮ್​ನಲ್ಲಿಯೂ ಗಲಾಟೆ ನಡೆದಿತ್ತು. ಈ ಘಟನೆ ಕೂಡ ಬಾರಿ ಸದ್ದು ಮಾಡಿತ್ತು. ಬೂದಿ ಮುಚ್ಚಿದ ಕೆಂಡದಂತಿದ್ದ ಈ ಗಲಾಟೆಯ ಮುಂದುವರಿದ ಭಾಗ ಇಂಗ್ಲೆಂಡ್​ ವಿರುದ್ಧದ ಪಂದ್ಯದಲ್ಲಿಯೂ ಮತ್ತೆ ಕಾಣಿಸಿಕೊಂಡಿತು. ಅಸಲಿಗೆ ಬಾಬರ್​ ಅವರು ಶಾಹೀನ್​ ಮೇಲೆ ಇಷ್ಟು ಸಿಟ್ಟಾಗಲು ಕಾರಣ ಏನೆಂದು ಇನ್ನಷ್ಟೇ ತಿಳಿಯಬೇಕಿದೆ.

ಇದನ್ನೂ ಓದಿ ICC World Cup 2023 : ಸೋತು ಸುಣ್ಣವಾಗಿ ವಿಶ್ವ ಕಪ್​ನಲ್ಲಿ ಆಟ ಮುಗಿಸಿದ ಪಾಕಿಸ್ತಾನ

ಡ್ರೆಸ್ಸಿಂಗ್​​ ರೂಮ್​ನಲ್ಲಿ ಕಿತ್ತಾಟ

ಏಷ್ಯಾ ಕಪ್​ ಟೂರ್ನಿಯಲ್ಲಿ ಪಾಕಿಸ್ತಾನ ತಂಡ ಶ್ರೀಲಂಕಾ(Pakistan vs Sri Lanka) ವಿರುದ್ಧ ಆಘಾತಕಾರಿ ಸೋಲು ಕಂಡು ಟೂರ್ನಿಯಿಂದ ಹೊರಬಿದ್ದಿತ್ತು, ಈ ಸೋಲಿನ ಬಳಿಕ ಪಾಕಿಸ್ತಾನ ಆಟಗಾರರು ಡ್ರೆಸ್ಸಿಂಗ್‌​ ರೂಮ್​ನಲ್ಲಿ(dressing room) ಕಿತ್ತಾಟ ನಡೆಸಿದ್ದರು. ಸೋಲಿನ ಬೇಸರದಲ್ಲಿದ್ದ ನಾಯಕ ಬಾಬರ್​ ಅಜಂ(babar azam) ಮೈದಾನದಲ್ಲೇ ತಾಳ್ಮೆ ಕಳೆದುಕೊಂಡಿದ್ದರು. ಡ್ರೆಸ್ಸಿಂಗ್‌​ ರೂಮ್​ಗೆ ತೆರಳಿದ್ದೇ ತಡ ಆಟಗಾರರ ಕಳಪೆ ಪ್ರದರ್ಶನಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದರು. ಮೊದಲು ನಿಮ್ಮನ್ನು ನೀವು ಸೂಪರ್‌ ಸ್ಟಾರ್‌ಗಳು ಎಂದುಕೊಳ್ಳುವ ಯೋಚನೆಯನ್ನು ತಲೆಯಿಂದ ಕಿತ್ತುಹಾಕಿ. ವಿಶ್ವಕಪ್‌ನಲ್ಲಿ ಸೋತರೆ ಯಾರೂ ನಿಮ್ಮನ್ನು ಸೂಪರ್‌ಸ್ಟಾರ್ ಎಂದು ಪರಿಗಣಿಸುವುದಿಲ್ಲ ಎಂದು ಹೇಳಿದ್ದರು.

Babar Azam was left furious in the dressing room after Pakistan's Asia Cup loss to Sri Lanka


ರೊಚ್ಚಿಗೆದ್ದಿದ್ದ ಶಾಹೀನ್​ ಅಫ್ರಿದಿ

ಬಾಬರ್​ ಅವರ ಈ ಮಾತಿನಿಂದ ರೊಚ್ಚಿಗೆದ್ದು ವೇಗಿ ಶಾಹೀನ್​ ಅಫ್ರಿದಿ(shaheen afridi) ‘ಕೊನೆಯ ಪಕ್ಷ ಯಾರೆಲ್ಲ ಚೆನ್ನಾಗಿ ಆಡಿದ್ದಾರೆ ಹಾಗೂ ಆಡಿಲ್ಲ ಎಂದು ನೇರವಾಗಿ ಹೇಳಿ. ಇದನ್ನು ಬಿಟ್ಟು ಅಡ್ಡಗೋಡೆಯ ಮೇಲೆ ದೀಪ ಇಡುವ ಕೆಲಸ ಮಾಡಬೇಡಿ’ ಎಂದು ತಿರುಗೇಟು ನೀಡಿದ್ದರು. ಬಳಿಕ ಮಾತಿಗೆ ಮಾತು ಬೆಳೆದು ಕೆಲ ಕಾಲ ಪರಿಸ್ಥಿತಿ ಕೈ ಮೀರಿಹೋಗುವ ಹಂತದಲ್ಲಿತ್ತು. ಈ ವೇಳೆ ವಿಕೆಟ್ ಕೀಪರ್ ಕಮ್​ ಬ್ಯಾಟರ್ ಮೊಹಮ್ಮದ್ ರಿಜ್ವಾನ್ ಮಧ್ಯ ಪ್ರವೇಶಿ ಉಭಯ ಆಟಗಾರರ ನಡುವಿನ ಮಾತಿನ ಸಮರವನ್ನು ತಣ್ಣಗೆ ಮಾಡಿದ್ದರು.

ನಾಯಕತ್ವದ ವಿಚಾರವೇ?

ವಿಶ್ವಕಪ್​ನಲ್ಲಿ ತಂಡ ಕಳಪೆ ಪ್ರದರ್ಶನ ತೋರಿದ ಕಾರಣ ಬಾಬರ್ ಅಜಂ ಅವರನ್ನು ನಾಯಕತ್ವದಿಂದ ಕೆಳಗಿಳಿಸುವ ಸಾಧ್ಯತೆಯಿದೆ ಎಂದು ಈಗಾಗಲೇ ವರದಿಯಾಗಿದೆ. ಈ ಸ್ಥಾನಕ್ಕೆ ಶಾಹೀನ್​ ಅಫ್ರಿದಿ ಆಯ್ಕೆಯಾಗುವ ಸಾಧ್ಯತೆ ಇದೆ ಎಂಬ ಮಾತುಗಳು ಕೂಡ ಕೇಳಿಬಂದಿದೆ. ಇದೇ ವಿಚಾರದಲ್ಲಿ ಬಾಬರ್​ ಮತ್ತು ಅಫ್ರಿದಿ ಕಿತ್ತಾಟ ನಡೆಸುತ್ತಿರುವಂತೆ ಕಾಣುತ್ತಿದೆ.

Exit mobile version