ಬರ್ಮಿಂಗ್‌ಹ್ಯಾಮ್ : ಕಾಮನ್ವೆಲ್ತ್ ಗೇಮ್ಸ್‌ನಲ್ಲಿ (CWG- 2022) ಭಾರತಕ್ಕೆ ಮೊದಲ ಬಂಗಾರದ ಪದಕ ಲಭಿಸಿದೆ. ಈ ಪದಕವನ್ನು ಸಂಪಾದಿಸಿದವರು ಟೋಕಿಯೊ ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ ವೇಟ್‌ಲಿಫ್ಟರ್ ಮೀರಾಬಾಯಿ ಚಾನು. ಮಹಿಳೆಯರ ೪೯ ಕೆ.ಜಿ ವಿಭಾಗದಲ್ಲಿ ಅವರು ಕಾಮನ್ವೆಲ್ತ್ ಕ್ರೀಡಾಕೂಟದ ದಾಖಲೆಯೊಂದಿಗೆ ಚಿನ್ನದ ಪದಕ ತಮ್ಮದಾಗಿಸಿಕೊಂಡರು. ಇದು ಪ್ರಸಕ್ತ ಆವೃತ್ತಿಯ ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಭಾರತಕ್ಕೆ ಲಭಿಸಿದ ಮೊದಲ ಬಂಗಾರದ ಪದಕ.
೨೭ ವರ್ಷದ ಭಾರತದ ಸ್ಟಾರ್ ವೇಟ್‌ಲಿಫ್ಟರ್ ಒಟ್ಟಾರೆ ೨೦೧ ಕೆ.ಜಿ ಭಾರ ಎತ್ತುವ ಮೂಲಕ ಸ್ವರ್ಣ ಪದಕ ಬಾಚಿಕೊಂಡರು. ಸ್ನ್ಯಾಚ್ ವಿಭಾಗದ ಮೊದಲ ಪ್ರಯತ್ನದಲ್ಲಿ ಸಲೀಸಾಗಿ ೮೪ ಕೆ.ಜಿ ಭಾರ ಎತ್ತಿದರು. ನಂತರದ ಅವಕಾಶದಲ್ಲಿ ಅವರು ೮8 ಕೆ.ಜಿ ಭಾರ ಎತ್ತುವ ಮೂಲಕ ಕಾಮನ್ವೆಲ್ತ್ ಗೇಮ್ಸ್ ನೂತನ ದಾಖಲೆ ಸೃಷ್ಟಿಸಿದರು. ಇದೇ ವೇಳೆ ಅವರು ತಮ್ಮ ರಾಷ್ಟ್ರೀಯ ದಾಖಲೆಯನ್ನು ಸರಿದೂಗಿಸಿಕೊಂಡರು. ಮೂರನೇ ಯತ್ನದಲ್ಲಿ ಅವರು ೯೦ ಕೆ.ಜಿ ಭಾರ ಎತ್ತುವ ಪ್ರಯತ್ನ ಮಾಡಿದರೂ ಅದು ಸಾಧ್ಯವಾಗಲಿಲ್ಲ.
ಅಂತೆಯೇ ಕ್ಲೀನ್ ಆಂಡ್ ಜರ್ಕ್ ವಿಭಾಗದ ಎರಡನೇ ಪ್ರಯತ್ನದಲ್ಲಿ ಅವರು ೧೧3 ಕೆ.ಜಿ ಭಾರವನ್ನು ಎತ್ತುವ ಮೂಲಕ ಒಟ್ಟಾರೆ ೨೦೧ ಕೆ.ಜಿ ಭಾರ ಎತ್ತಿ ಸ್ವರ್ಣ ಪದಕ ಗೆದ್ದರು. ಅಂತೆಯೇ ಕೊನೇ ಯತ್ನದಲ್ಲಿ ೧೧೫ ಕೆ.ಜಿ ಭಾರವನ್ನು ಎತ್ತಿ ಈ ವಿಭಾಗದಲ್ಲೂ ಕಾಮನ್ವೆಲ್ತ್ ಗೇಮ್ಸ್ ನೂತನ ದಾಖಲೆ ಸೃಷ್ಟಿಸಿದರು.
ಮೀರಾಬಾಯಿ ಚಾನು ೨೦೧೮ರ ಗೋಲ್ಡ್‌ಕೋಸ್ಟ್ ಕಾಮನ್ವೆಲ್ತ್ ಗೇಮ್ಸ್‌ನ ೪೯ ಕೆ.ಜಿ ವಿಭಾಗದಲ್ಲೂ ಚಿನ್ನದ ಪದಕ ಬಾಚಿಕೊಂಡಿದ್ದರು. ಟೋಕಿಯೊ ಒಲಿಂಪಿಕ್ಸ್‌ನ ಮೊದಲ ದಿನವೇ ಬೆಳ್ಳಿ ಗೆದ್ದ ಅವರು ಪ್ರಸಿದ್ಧಿ ಪಡೆದುಕೊಂಡಿದ್ದರು.
ಮೀರಾಬಾಯಿ ಚಾನು ಅವರ ಇದುವರೆಗಿನ ಸಾಧನೆಗಳು
ವರ್ಷ | ಪದಕ | ಕೂಟ |
2014 | ಬೆಳ್ಳಿ | ಕಾಮನ್ವೆಲ್ತ್ ಗೇಮ್ಸ್ |
2017 | ಚಿನ್ನ | ವಿಶ್ವ ಚಾಂಪಿಯನ್‌ಷಿಪ್ಸ್ |
2018 | ಚಿನ್ನ | ಕಾಮನ್ವೆಲ್ತ್ ಗೇಮ್ಸ್ |
2020 | ಒಲಿಂಪಿಕ್ಸ್ | ಒಲಿಂಪಿಕ್ಸ್ |
2022 | ಚಿನ್ನ | ಏಷ್ಯನ್ ಚಾಂಪಿಯನ್‌ಷಿಪ್ಸ್ |
2022 | ಚಿನ್ನ | ಕಾಮನ್ವೆಲ್ತ್ ಗೇಮ್ಸ್ |
ಇದನ್ನೂ ಓದಿ | CWG- 2022 | ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಭಾರತಕ್ಕೆ ಮೊದಲ ಪದಕ, ಬೆಳ್ಳಿ ಗೆದ್ದ ಸಂಕೇತ್ ಸರ್ಗರ್