Site icon Vistara News

Mitchell Starc : ಗಂಡ ಐಪಿಎಲ್​, ಹೆಂಡತಿ ಡಬ್ಲ್ಯುಪಿಎಲ್​; ಇಬ್ಬರಿಗೂ ಸೇರಿ ಸಿಕ್ಕಿದ್ದು 25.5 ಕೋಟಿ!

Mitchel Starc

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಇತಿಹಾಸದಲ್ಲಿ ಅತಿ ಹೆಚ್ಚು ಬೆಲೆಗೆ ಮಾರಾಟವಾದ ಆಟಗಾರ ಎಂಬ ಹೆಗ್ಗಳಿಕೆಗೆ ಮಿಚೆಲ್ ಸ್ಟಾರ್ಕ್ ಪಾತ್ರರಾಗಿದ್ದಾರೆ. ಅವರನ್ನು ಕೋಲ್ಕೊತಾ ನೈಟ್​ ರೈಡರ್ಸ್ ತಂಡ 24.75 ಕೋಟಿ ರೂಪಾಯಿಗೆ ಖರೀದಿ ಮಾಡಿದೆ. ಈ ಮೂಲಕ ಅವರ ವಿಶೇಷ ಸಾಧನೆ ಮಾಡಿದ್ದಾರೆ. ಇದರ ಜತೆಗೆ ಅವರು ಮತ್ತೊಂದು ದಾಖಲೆಯನ್ನು ಮಾಡಿದ್ದಾರೆ. ಏನೆಂದರೆ ಅವರ ಪತ್ನಿ ಹಾಗೂ ಆಲ್​ರೌಂಡರ್​ ಅಲಿಸ್ಸಾ ಹೀಲಿ ಮಹಿಳೆಯರ ಐಪಿಎಲ್ ಎಂದೇ ಕರೆಯಲಾಗುವ ಡಬ್ಲ್ಯುಪಿಎಲ್​ನಲ್ಲಿ ಆಡುತ್ತಿದ್ದಾರೆ. ಈ ಮುಲಕ ಅವರು ಐಪಿಎಲ್ ಮತ್ತು ಡಬ್ಲ್ಯುಪಿಎಲ್​ನಲ್ಲಿ ಆಡಿದ ಮೊದಲ ಗಂಡ-ಹೆಂಡತಿ ಎಂಬ ದಾಖಲೆ ಮಾಡಿದ್ದಾರೆ. ಅಲಿಸಾ ಅವರು 70 ಲಕ್ಷ ರೂಪಾಯಿ ಪಡೆದುಕೊಂಡಿದ್ದಾರೆ. ಈ ಮೂಲಕ ಗಂಡ ಹೆಂಡತಿ ಸೇರಿಕೊಂಡು ಬಿಸಿಸಿಐ ಆಯೋಜಿತ ಟೂರ್ನಿಯಿಂದ 25.5 ಕೋಟಿ ರೂಪಾಯಿ ಪಡೆದುಕೊಂಡಂತಾಗಿದೆ.

ಸ್ಟಾರ್ಕ್ ಅವರ ಪತ್ನಿ ಅಲಿಸ್ಸಾ ಹೀಲಿಯನ್ನು ಯುಪಿ ವಾರಿಯರ್ಸ್ 2023ರ ಉದ್ಘಾಟನಾ ಡಬ್ಲ್ಯುಪಿಎಲ್ ಹರಾಜಿನಲ್ಲಿ 70 ಲಕ್ಷ ರೂ.ಗೆ ಖರೀದಿಸಿತ್ತು. ಗಂಡ-ಹೆಂಡತಿ ಜೋಡಿ ಈಗ ಐಪಿಎಲ್ ಮತ್ತು ಡಬ್ಲ್ಯುಪಿಎಲ್ ಆಡುವ ಮೊದಲ ಜೋಡಿಯಾಗಿದೆ.

ಮಿಚೆಲ್ ಸ್ಟಾರ್ಕ್ ಅವರು ಆಸ್ಟ್ರೇಲಿಯಾದ ನಾಯಕ ಪ್ಯಾಟ್ ಕಮಿನ್ಸ್ ಅವರನ್ನು 20.50 ಕೋಟಿ ರೂಪಾಯಿ ಪಡದುಕೊಂಡಿದ್ದ ದಾಖಲೆಯನ್ನು ಕೆಲವೇ ಕ್ಷಣಗಳಲ್ಲಿ ಹಿಮ್ಮೆಟ್ಟಿಸಿದ್ದಾರೆ. ಮುಂಬೈ ಇಂಡಿಯನ್ಸ್ ಆಸ್ಟ್ರೇಲಿಯಾದ ವೇಗಿಯನ್ನು ತೆಕ್ಕೆಗೆ ತೆಗೆದುಕೊಳ್ಳಲು ಸಿದ್ಧವಾಗಿತ್ತು. ಆದರೆ ಕೊನೆಯಲ್ಲಿ ಕೆಕೆಆರ್ ಮತ್ತು ಗುಜರಾತ್ ಟೈಟಾನ್ಸ್ ಭಯಂಕರ ಬಿಡ್ಡಿಂಗ್ ಮಾಡಿದವು. ಆದಾಗ್ಯೂ ದಂಪತಿಗಳ ನಡುವೆ ಸ್ಪಷ್ಟವಾದ ವೇತನ ವ್ಯತ್ಯಾಸವಿದೆ. ಮಿಚೆಲ್ ಸ್ಟಾರ್ಕ್ ಎಲ್ಲ ಪಂದ್ಯದಲ್ಲಿ ಆಡಿದರೆ ಪ್ರತಿ ಎಸೆತಕ್ಕೆ 73.66 ಲಕ್ಷ ಗಳಿಸಲಿದ್ದಾರೆ. ಇದು ಅವರ ಪತ್ನಿ ಅಲಿಸ್ಸಾ ಹೀಲಿ ಗಳಿಸುವ ಒಟ್ಟಾರೆ ಹಣಕ್ಕಿಂತ ಹೆಚ್ಚಾಗಿದೆ.

ಹೀಲಿಯ ಬಗ್ಗೆ ಹೇಳುವುದಾದರೆ, ಕಳೆದ ಋತುವಿನಲ್ಲಿ ಡಬ್ಲ್ಯುಪಿಎಲ್​ನಲ್ಲಿ ಅದ್ಭುತ ಪ್ರದರ್ಶನ ನೀಡಿದ ನಂತರ ಅವರನ್ನು ಯುಪಿ ವಾರಿಯರ್ಸ್ ಉಳಿಸಿಕೊಂಡಿದೆ. ಅವರು 9 ಪಂದ್ಯಗಳನ್ನು ಆಡಿದರು ಮತ್ತು 253 ರನ್ ಗಳಿಸಿದ್ದರು. ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ವಿರುದ್ಧ ಅವರು ಅಜೇಯ 96 ರನ್ ಗಳಿಸಿದರು.

ನಿರೀಕ್ಷೆಯಂತೆ ದೊಡ್ಡ ಮೊತ್ತ ಪಡೆದ ಡ್ಯಾರಿಲ್​ ಮಿಚೆಲ್

ನ್ಯೂಜಿಲ್ಯಾಂಡ್​ ತಂಡದ ಮಧ್ಯಮ ಕ್ರಮಾಂಕದ ಬ್ಯಾಟರ್​ ಮತ್ತು ಆಲ್​ರೌಂಡರ್​ ಆಗಿರುವ ಡ್ಯಾರಿಲ್​ ಮಿಚೆಲ್​ ಅವರಿಗೂ ದೊಡ್ಡ ಮೊತ್ತ ಸಿಗುವ ನಿರೀಕ್ಷೆ ಮಾಡಲಾಗಿತ್ತು. ಅದರಂತೆ ಅವರು ದೊಡ್ಡ ಮೊತ್ತ ಜೇಬಿಗಿಳಿಸಿದ್ದಾರೆ.14 ಕೋಟಿ ರೂ. ಮೊತ್ತಕ್ಕೆ ಹಾಲಿ ಚಾಂಪಿಯನ್​ ಚೆನ್ನೈ ಸೂಪರ್​ ಕಿಂಗ್ಸ್​ ತಂಡಕ್ಕೆ ಸೇಲ್​ ಆಗಿದ್ದಾರೆ

ಯಾವುದೇ ಹಂತದಲ್ಲಿಯೂ ತಂಡಕ್ಕೆ ಆಸರೆಯಾಗಿ ನಿಂತು ಪಂದ್ಯವನ್ನು ಗೆಲ್ಲಿಸುವ ಸಾಮರ್ಥ್ಯ ಇವರಿಗಿದೆ. ಈ ಬಾರಿಯ ಐಸಿಸಿ ಏಕದಿನ ವಿಶ್ವಕಪ್‌ನಲ್ಲಿಯೂ ಮಿಚೆಲ್​ ಗಮನಾರ್ಹ ಪ್ರದರ್ಶನ ತೋರಿದ್ದರು. 552 ರನ್​ ಬಾರಿಸಿ ವಿಶ್ವಕಪ್​ನಲ್ಲಿ ಅತ್ಯಧಿಕ ರನ್​ಗಳಿಸಿದ 5ನೇ ಆಟಗಾರನಾಗಿ ಹೊರಮೊಮ್ಮಿದ್ದರು.

ಇದನ್ನೂ ಓದಿ : IPL 2024 Auction : ವಿಂಡೀಸ್ ಬೌಲರ್​ಗಾಗಿ 11.50 ಕೋಟಿ ರೂ. ಖರ್ಚು ಮಾಡಿದ ಆರ್​ಸಿಬಿ!

ಹೆಡ್-ರಚಿನ್​ಗೆ ಸಿಗಲಿಲ್ಲ ದೊಡ್ಡ ಮೊತ್ತ

ಟ್ರಾವಿಸ್​ ಹೆಡ್ ಮತ್ತು ರಚಿನ್​ ರವೀಂದ್ರ ಅವರಿಗೆ ಈ ಬಾರಿಯ ಹರಾಜಿನಲ್ಲಿ ಕನಿಷ್ಠ 15 ಕೋಟಿ ಮೊತ್ತಕ್ಕೆ ಸೇಲ್​ ಆಗಬಹುದೆಂದು ನಿರೀಕ್ಷೆ ಮಾಡಲಾಗಿತ್ತು. ಅಲ್ಲದೆ ಉಭಯ ಆಟಗಾರರು ಹರಾಜಿನ ಹೈಲೆಟ್​ ಕೂಡ ಆಗಿದ್ದರು. ಆದರೆ ಈ ಎಲ್ಲ ನಿರೀಕ್ಷೆ ಹುಸಿಯಾಗಿದೆ. ಹಡ್​ ಕೇವಲ 6.80 ಕೋಟಿ ರೂ.ಗೆ ಸನ್​ರೈಸರ್ಸ್​ ಹೈದರಾಬಾದ್​ ತಂಡಕ್ಕೆ ಸೇಲ್​ ಆದರೆ, ರಚಿನ್​ ಅವರು 1.80 ಕೋಟಿ ರೂ.ಗೆ ಚೆನ್ನೈ ಸೂಪರ್​ ಕಿಂಗ್ಸ್​ ಸೇರಿದ್ದಾರೆ. ಅವರ ಮೂಲಬೆಲೆ 50 ಲಕ್ಷ ಆಗಿತ್ತು.

ಆಸ್ಟ್ರೇಲಿಯಾದ ಸ್ಟಾರ್​ ಅನುಭವಿ ಆಟಗಾರ ಸ್ಟೀವನ್​ ಸ್ಮಿತ್​ ಅವರು ಮೊದಲ ಸುತ್ತಿನ ಹರಾಜಿನಲ್ಲಿ ಅನ್​ ಸೋಲ್ಡ್​ ಆಗಿದ್ದಾರೆ. ಕಳೆದ ಬಾರಿಯೂ ಅವರನ್ನು ಯಾವುದೇ ತಂಡ ಖರೀದಿ ಮಾಡಿರಲಿಲ್ಲ. ಹೀಗಾಗಿ ಅವರು ಐಪಿಎಲ್​ ಕಾಮೆಂಟ್ರಿಯಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಆರ್​ಸಿಬಿಯ ಮಾಜಿ ಆಟಗಾರ ಹರ್ಷಲ್​ ಪಟೇಲ್​ ಅವರನ್ನು ಪಂಜಾಬ್​ ಕಿಂಗ್ಸ್​ ತಂಡ 11.75 ಕೋಟಿ. ರೂ ನೀಡಿ ಖರೀದಿ ಮಾಡಿದೆ.

ಇತ್ತೀಚೆಗೆ ಮುಕ್ತಾಯ ಕಂಡಿದ್ದ ಏಕದಿನ ವಿಶ್ವಕಪ್​ನಲ್ಲಿ ಉತ್ತಮ ಬೌಲಿಂಗ್​ ಪ್ರದರ್ಶಿಸಿದ್ದ ದಕ್ಷಿಣ ಆಫ್ರಿಕಾದ ಯುವ ಬೌಲರ್​ ಜೆರಾಲ್ಡ್ ಕೊಯೆಟ್ಜಿ ಅವರನ್ನು 5 ಕೋಟಿ ಮೊತ್ತ ನೀಡಿ ಮುಂಬೈ ಇಂಡಿಯನ್ಸ್​ ಖರೀದಿ ಮಾಡಿದೆ. ವೆಸ್ಟ್​ ಇಂಡೀಸ್​ನ ರೋಮನ್ ಪೊವೆಲ್ ಅವರನ್ನು ರಾಜಸ್ಥಾನ್​ ರಾಯಲ್ಸ್​ ತಂಡ 7.40 ಕೋಟಿ ರೂ. ನೀಡಿ ಖರೀದಿಸಿದೆ. ಅವರ ಮೂಲಬೆಲೆ 1 ಕೋಟಿ ಆಗಿತ್ತು. ಕಳೆದ ಬಾರಿ ಡೆಲ್ಲಿ ಕ್ಯಾಪಿಟಲ್ಸ್​ ಪರ ಆಡಿದ್ದರು.

Exit mobile version