ಹೈದರಾಬಾದ್: ಖ್ಯಾತ ಕ್ರಿಕೆಟ್ ಆಟಗಾರ್ತಿ, ಭಾರತ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಮಿಥಾಲಿ ರಾಜ್ ಎಲ್ಲ ಮಾದರಿಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದಾರೆ. ಬುಧವಾರ ಟ್ವಿಟರ್ ಮೂಲಕ 39 ವರ್ಷದ ಮಿಥಾಲಿ ಈ ಘೋಷಣೆ ಮಾಡುವುದರೊಂದಿಗೆ 23 ವರ್ಷಗಳ ಅವರ ಕ್ರಿಕೆಟ್ ವೃತ್ತಿ ಬದುಕು ಕೊನೆಗೊಂಡಿದೆ.
ಇವರು 1999ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಟೆಸ್ಟ್, ಏಕದಿನ, ಟಿ20 ಒಳಗೊಂಡ ಎಲ್ಲ ಮಾದರಿಯ ಕ್ರಿಕೆಟ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದಲ್ಲದೆ, ನಾಯಕಿಯಾಗಿ ತಂಡವನ್ನು ಮುನ್ನಡೆಸಿದ್ದರು. ಮಿಥಾಲಿ ವಿದಾಯದೊಂದಿಗೆ ಭಾರತೀಯ ಮಹಿಳಾ ಕ್ರಿಕೆಟ್‌ನ ಯುಗವೊಂದು ಅಂತ್ಯವಾದಂತಾಗಿದೆ.
ಕ್ರಿಕೆಟ್ ಸಾಧನೆ:
ಮಿಥಾಲಿ ರಾಜ್ ಅವರು ಕ್ರಿಕೆಟ್ ಕ್ಷೇತ್ರದಲ್ಲಿ ʼಲೇಡಿ ತೆಂಡೂಲ್ಕರ್ʼ ಎಂದೇ ಹೆಸರಾದವರು. ಎಲ್ಲಾ ಮಾದರಿಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಭಾರತೀಯರ ಪಟ್ಟಿಯಲ್ಲಿ ಮಿಥಾಲಿ ಅವರದ್ದೇ ಅಗ್ರಸ್ಥಾನ. 2017ರ ವಿಶ್ವಕಪ್‌ನಲ್ಲಿ ಸತತ 7 ಅರ್ಧಶತಕ ಬಾರಿಸಿ ಹೊಸ ದಾಖಲೆಯನ್ನು ಬರೆದಿದ್ದರು. ವಿಶ್ವಕಪ್‌ನಲ್ಲಿ 1,000 ರನ್ ತಲುಪಿದ ಭಾರತದ ಮೊದಲ ಆಟಗಾರ್ತಿ. 109 ಪಂದ್ಯಗಳನ್ನು ಆಡಿರುವ ಮಿಥಾಲಿ ರಾಜ್ ಅತಿ ಹೆಚ್ಚು ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ ಕೀರ್ತಿಗೆ ಪಾತ್ರರಾದವರು.
2018ರ ಟಿ20 ಏಷಿಯಾ ಕಪ್‌ನಲ್ಲಿ 2000 ರನ್ ತಲುಪಿದ ಮೊದ ಆಟಗಾರ್ತಿ ಎಂಬ ಹಿರಿಮೆ ಇವರದ್ದು. ಅತಿ ಹೆಚ್ಚು ರನ್ ಗಳಿಸಿದ ದಾಖಲೆ ಹೊಂದಿರುವ ಇವರು ಭಾರತದ ಮಹಿಳಾ ಕ್ರಿಕೆಟದ ತಂಡದ ಶ್ರೇಷ್ಠ ಆಟಗಾರ್ತಿಯಾಗಿದ್ದಾರೆ. ಏಕದಿನ ಪಂದ್ಯದಲ್ಲಿ ಒಟ್ಟು 7 ಶತಕ ಹಾಗೂ 64 ಅರ್ಧಶತಕದೊಂದಿಗೆ 7805 ರನ್ ಗಳಿಸಿದ್ದಾರೆ. ಏಕದಿನ ಮಾದರಿಯಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಹೆಗ್ಗಳಿಕೆ ಇವರದು.
2005ರ ವಿಶ್ವಕಪ್‌ನಲ್ಲಿ ಮಿಥಾಲಿ ರಾಜ್ ಭಾರತ ತಂಡದ ನಾಯಕಿಯಾಗಿದ್ದರು. ಅವರ ನೇತೃತ್ವದಲ್ಲಿ ಭಾರತವು ಮೊತ್ತಮೊದಲಿಗೆ ವಿಶ್ವಕಪ್ ಫೈನಲ್ ತಲುಪಲು ಸಾಧ್ಯವಾಗಿತ್ತು. 2006ರಲ್ಲಿ ಟೆಸ್ಟ್ ಪಂದ್ಯದ ನಾಯಕಿಯಾಗಿ ಏಷ್ಯಾ ಕಪ್ ಗೆದ್ದು ಹೊಸ ಚರಿತ್ರೆ ಬರೆದರು.
ಮಿಥಾಲಿ ರಾಜ್ ಅವರ ಕ್ರಿಕೆಟ್ ಅನುಭವ ಹಾಗೂ ಸಾಧನೆಯ ಆಧಾರದ ಮೇಲೆ ಅವರಿಗೆ ಬ್ಯಾಟಿಂಗ್ ಮಾರ್ಗದರ್ಶನ ಮಾಡುವ ಜವಾಬ್ಧಾರಿಯನ್ನೂ ನಿಡಲಾಗಿತ್ತು. ಆಟಗಾರ್ತಿ ಹಾಗೂ ಕೋಚ್ ಆಗಿ ಕೂಡ ಇವರು ಕಾರ್ಯನಿರ್ವಹಿಸಿದ್ದಾರೆ.
ಮಿಥಾಲಿ ಜನಿಸಿದ್ದು ಜೋಧಪುರದಲ್ಲಿ. ಆದರೆ ಇವರು ಹೈದ್ರಾಬಾದ್ ನಿವಾಸಿಯಾಗಿದ್ದ ಕಾರಣದಿಂದ ಆಂಧ್ರಪ್ರದೇಶ ಕ್ರಿಕೆಟ್ ತಂಡವನ್ನು ಪ್ರತಿನಿಧಿಸಿದ್ದರು.
ಸ್ಟಾಟಿಸ್ಟಿಕ್ಸ್
ಕ್ರಿಕೆಟ್ ಮಾದರಿ | ಪಂದ್ಯ | ರನ್ |
ಟೆಸ್ಟ್ | 12 | 699 |
ಏಕದಿನ | 232 | 7,805 |
ಟಿ20 | 89 | 2,364 |
ಹೊಸ ಇನಿಂಗ್ಸ್:
ಕ್ರಿಕೆಟ್‌ಗೆ ವಿದಾಯ ಹೇಳಿದ ಮಿಥಾಲಿ ರಾಜ್ ʼಪ್ರತಿಯೊಂದು ಪಯಣಕ್ಕೂ ಒಂದು ಅಂತ್ಯವಿರುತ್ತದೆ. ಅದೇ ರೀತಿ ಇಂದು ನಾನು ಎಲ್ಲ ಮಾದರಿಯ ಕ್ರಿಕೆಟ್‌ಗೆ ವಿದಾಯ ಹೇಳುತ್ತಿದ್ದೇನೆ. ಈವರೆಗೆ ನಾನು ದೇಶದ ಗೆಲುವಿಗಾಗಿ ಪ್ರತಿಹೆಜ್ಜೆಯಲ್ಲೂ ನನ್ನ ಸಂಪೂರ್ಣ ಶಕ್ತಿಯಿಂದ ಆಡಿದ್ದೇನೆ. ಈಗ ವಿದಾಯ ಹೇಳುವ ಸಮಯ ಬಂದಿದೆ. ನನಗೆ ಅವಕಾಶ ನೀಡಿದ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಹಾಗೂ ಬಿಸಿಸಿಐನ ಎಲ್ಲ ಅಧಿಕಾರಿಗಳಿಗೆ ನಾನು ಆಭಾರಿ. ನನಗೆ ತಂಡದ ಆಟಗಾರ್ತಿಯಾಗಿ ಹಾಗೂ ನಾಯಕಿಯಾಗಿ ಕಾರ್ಯನಿರ್ವಹಿಸಲು ಅವಕಾಶ ನೀಡಿದ್ದಕ್ಕೆ ಧನ್ಯವಾದ. ನಾನು ನಿವೃತ್ತಿ ಪಡೆದರೂ ಕ್ರಿಕೆಟ್ ಬಿಡುವ ಮನಸ್ಸಿಲ್ಲ, ಭಾರತ ಮಹಿಳಾ ತಂಡಕ್ಕೆ ನಾನು ನನ್ನಿಂದ ಆಗುವ ಸಹಕಾರ ನೀಡಲು ಖುಷಿಪಡುತ್ತೇನೆ. ಈ ವರೆಗೆ ನನಗೆ ಪ್ರೀತಿ ತೋರಿದ, ಪ್ರೋತ್ಸಾಹ ನೀಡಿದ ಎಲ್ಲ ಅಭಿಮಾನಿಗಳಿಗೂ ನಾನು ಆಭಾರಿʼ ಎಂದು ಟ್ವೀಟ್ ಮಾಡಿದ್ದಾರೆ.
ಇದೇ ವೇಳೆ ಅನೇಕ ಗಣ್ಯರು ಮೀಥಾಲಿ ರಾಜ್ ಅವರ ಈ ನಿರ್ಧಾರವನ್ನು ಗೌರವಿಸಿ, ಅವರ ಮುಂದಿನ ಪಯಣಕ್ಕೆ ಶುಭಕೋರಿದ್ದಾರೆ.
ಪ್ರಶಸ್ತಿಗಳು:
ಇಸವಿ | ಪ್ರಶಸ್ತಿ |
2003: | ಅರ್ಜುನ ಪ್ರಶಸ್ತಿ |
2015: | ಪದ್ಮಶ್ರೀ |
2017: | ಯೂಥ್ ಸ್ಪೋರ್ಟ್ಸ್ ಐಕಾನ್ ಆಫ್ ಎಕ್ಸೆಲ್ಲನ್ಸ್ |
2017: | ಬಿಬಿಸಿ 100 ವುಮೆನ್ ಅವಾರ್ಡ್ |
2017: | ವಿಸ್ಡೆನ್ ಲೀಡಿಂಗ್ ವುಮನ್ ಕ್ರಿಕೆಟರ್ ಇನ್ ದಿ ವರ್ಲ್ಡ್ |
2021: | ಖೇಲ್ ರತ್ನ ಪ್ರಶಸ್ತಿ |
ಇದನ್ನೂ ಓದಿ: ಕ್ರಿಕೆಟ್‌ಗೆ ವಿದಾಯ ಹೇಳಲು ಹೊರಟ ಸೆಹ್ವಾಗ್‌ಗೆ ಧೈರ್ಯ ತುಂಬಿದ್ದು ಸಚಿನ್