ಬೆಂಗಳೂರು: ಒಂದು ಅತ್ಯುತ್ತಮ ಪ್ರದರ್ಶನದ ಮೂಲಕ ಸ್ಟಾರ್ ಎನಿಸಿಕೊಂಡ ಕ್ರಿಕೆಟಿಗ ಇನ್ನೊಂದೆರಡು ದಿನಗಳಲ್ಲಿ ಖಳನಾಯಕನಾಗಬಲ್ಲ. ಮುಂದಿನ ಪಂದ್ಯದಲ್ಲಿ ಅದೇ ಮಾದರಿಯ ಪ್ರದರ್ಶನ ನೀಡದಿದ್ದರೆ ಅಥವಾ ತಂಡ ಸೋತರೆ ಅವರ ವಿರುದ್ಧ ದಾಳಿ ನಿರಂತರ. ಅದರಲ್ಲೂ ಈಗಿನ ಸೋಶಿಯಲ್ ಮೀಡಿಯಾ ಜಮಾನದಲ್ಲಿ ಕ್ರಿಕೆಟಿಗರು ಜನಪ್ರಿಯತೆ ಪಡೆದುಕೊಂಡಷ್ಟೇ ವೇಗದಲ್ಲಿ ಅಪಖ್ಯಾತಿಗೂ ಒಳಗಾಗುತ್ತಾರೆ. ಹೀಗಾಗಿ ಭಾರತ ತಂಡದ ಅಥವಾ ಐಪಿಎಲ್ನಲ್ಲಿ ಆಡುವ ಆಟಗಾರರು ಮಾನಸಿಕ ಸ್ಥಿತಿಯನ್ನು ಗಟ್ಟಿಯಾಗಿಟ್ಟುಕೊಳ್ಳಬೇಕಾಗಿದೆ. ಭಾರತ ತಂಡದಲ್ಲಿ ಇಂಥ ಪರಿಸ್ಥಿತಿಯನ್ನು ಅತಿ ಹೆಚ್ಚು ಎದುರಿಸುವುದು ವೇಗದ ಬೌಲರ್ ಮೊಹಮ್ಮದ್ ಸಿರಾಜ್. ಆರ್ಸಿಬಿಯ ಪಾಡ್ಕಾಸ್ಟ್ನಲ್ಲಿ ಅವರು ತಾವೆದುರಿಸಿದ ನಿಂದನೆಗಳ ಕುರಿತು ಮಾಹಿತಿ ನೀಡಿದ್ದಾರೆ.
2022ರ ಆವೃತ್ತಿಯಲ್ಲಿ ಆರ್ಸಿಬಿ ತಂಡ ಪ್ಲೇಆಫ್ ಹಂತದಲ್ಲಿ ನಿರ್ಗಮಿಸಿತ್ತು. ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಎಂಟು ವಿಕೆಟ್ಗಳ ಹೀನಾಯ ಸೋಲಿಗೆ ಒಳಗಾಗಿತ್ತು. ಆದರೆ, ಪಂದ್ಯದ ಸೋಲಿಗೆ ಹೆಚ್ಚು ಹೊಣೆ ಮಾಡಿದ್ದು ಮೊಹಮ್ಮದ್ ಸಿರಾಜ್. ಈ ಕುರಿತು ಪಾಡ್ಕಾಸ್ಟ್ನಲ್ಲಿ ಮಾತನಾಡಿದ ಮೊಹಮ್ಮದ್ ಸಿರಾಜ್, ಯಾವುದೇ ವ್ಯಕ್ತಿಯನ್ನು ಟೀಕೆ ಮಾಡುವುದು ಸುಲಭ. ಆದರೆ, ಆಟಗಾರನೊಬ್ಬನ ಹೋರಾಟ ಯಾರಿಗೂ ಗೊತ್ತಾಗುವುದಿಲ್ಲ| ಕೆಲವೊಂದು ಟೀಕೆಗಳನ್ನು ಸಹಿಸಲು ಕೂಡ ಸಾಧ್ಯವಿಲ್ಲ. ಆಟಗಾರನ ಉತ್ಸಾಹವೇ ಬತ್ತಿ ಹೋಗುವಂತಿರುತ್ತದೆ. ಯಾವುದೇ ಕಾರಣವಿಲ್ಲದ ಆಟಗಾರನೊಬ್ಬ ಟೀಕೆಗೆ ಒಳಗಾಗುವುದಕ್ಕೆ ಅರ್ಥವೇ ಇರುವುದಿಲ್ಲ. ಮುಂದೆ ಏನೆಂಬುದೇ ಗೊತ್ತಿರುವುದಿಲ್ಲ ಎಂದು ಅವರು ಸಿರಾಜ್ ಹೇಳಿಕೊಂಡಿದ್ದಾರೆ.
ಆಟೋ ಓಡಿಸು ಎಂದಿದ್ದರು
ಮೊಹಮ್ಮದ್ ಸಿರಾಜ್ ಅವರ ತಂದೆ ಆಟೋ ಚಾಲಕರಾಗಿದ್ದರು. ಪುತ್ರನಿಗಾಗಿ ಅವರಿಗೆ ಸಾಕಷ್ಟು ತ್ಯಾಗ ಮಾಡಿದ್ದರು. ಪ್ರತಿ ಪಂದ್ಯದಲ್ಲಿ ಆರ್ಸಿಬಿ ಅಥವಾ ಭಾರತ ತಂಡ ಸೋಲು ಕಂಡಾಗ ಸಿರಾಜ್ ವಿರುದ್ಧ ಈ ವಿಷಯವನ್ನೇ ಹಿಡಿದುಕೊಂಡು ಟೀಕೆ ಮಾಡುತ್ತಿದ್ದರು. ಕ್ರಿಕೆಟ್ ಬಿಟ್ಟು ಆಟೋ ಓಡಿಸು ಎಂದು ಬರೆಯುತ್ತಾರೆ.
ಒಂದು ದಿನ ನೀವು ಭಾರತ ತಂಡದ ಭವಿಷ್ಯದ ಆಟಗಾರ ಎಂದು ಹೊಗಳುತ್ತಾರೆ. ಮರು ದಿನವೇ ಆಟೋ ಓಡಿಸು ಎಂದು ತೆಗಳುತ್ತಾರೆ ಎಂಬುದಾಗಿ ಸಿರಾಜ್ ನೋವು ತೋಡಿಕೊಂಡಿದ್ದಾರೆ.
ಇದೇ ವೇಳೆ ಸಿರಾಜ್ ತಮಗೆ ಬೆಂಬಲ ಕೊಟ್ಟ ಎಲ್ಲರಿಗೂ ಧನ್ಯವಾದ ಹೇಳಿದ್ದಾರೆ. ನಿಮ್ಮ ಬೆಂಬಲಕ್ಕೆ ನಾನು ಋಣಿ. ಪ್ರತಿಯೊಂದು ಕ್ಷೇತ್ರದಲ್ಲೂ ಸೋಲು, ಗೆಲುವು ಎಂಬುದು ಇರುತ್ತದೆ. ಆದರೆ, ಸೋತವನ ಮೇಲೆ ಕಲ್ಲು ಎಸೆಯಬಾರದು ಎಂದು ಅವರು ಮನವಿ ಮಾಡಿದ್ದಾರೆ.