ಧರ್ಮಶಾಲಾ: ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ 5 ವಿಕೆಟ್ ವೇಗದ ಬೌಲರ್ ಮೊಹಮ್ಮದ್ ಶಮಿ (Mohammed Shami) ವಿಶ್ವ ಕಪ್ನಲ್ಲಿ ಒಂದಕ್ಕಿಂತ ಹೆಚ್ಚು ಬಾರಿ ಐದು ವಿಕೆಟ್ ಉರುಳಿಸಿದ ಭಾರತದ ಮೊದಲ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಪಂದ್ಯದಲ್ಲಿ ಶಮಿ ವಿಲ್ ಯಂಗ್, ರಚಿನ್ ರವೀಂದ್ರ, ಡ್ಯಾರಿಲ್ ಮಿಚೆಲ್, ಮಿಚೆಲ್ ಸ್ಯಾಂಟ್ನರ್ ಮತ್ತು ಮ್ಯಾಟ್ ಹೆನ್ರಿ ಅವರ ವಿಕೆಟ್ಗಳನ್ನು ಉರುಳಿಸಿದ್ದರು. ಶಮಿ 10 ಓವರ್ಗಳಲ್ಲಿ 54 ರನ್ ನೀಡಿ 5 ವಿಕೆಟ್ ಪಡೆಯುವ ಮೂಲಕ ಅಬ್ಬರದ ಬ್ಯಾಟಿಂಗ್ ನಡೆಸುತ್ತಿದ್ದ ನ್ಯೂಜಿಲ್ಯಾಂಡ್ ತಂಡಕ್ಕೆ ಕಡಿವಾಣ ಹಾಕಿದರು.
ಪವರ್ಪ್ಲೇ ಅವಧಿಯಲ್ಲಿ ಯಂಗ್ ಅವರನ್ನು ಔಟ್ ಮಾಡುವ ಮೂಲಕ ಶಮಿ ಭಾರತಕ್ಕೆ ಉತ್ತಮ ಆರಂಭವನ್ನು ನೀಡಿದರು. ಆರಂಭಿಕ ಸ್ಪೆಲ್ ನಂತರ ರಚಿನ್ ರವೀಂದ್ರ ಮತ್ತು ಡ್ಯಾರಿಲ್ ಮಿಚೆಲ್ ಭಾರತದ ಬೌಲಿಂಗ್ ದಾಳಿಯನ್ನು ಎದುರಿಸಿದರು. ಈ ವೇಳೆ ಭಾರತದ ನಾಯಕ ರೋಹಿತ್ ಶರ್ಮಾ ಅವರು ಶಮಿಯನ್ನು ಮತ್ತೆ ಬೌಲಿಂಗ್ ದಾಳಿಗೆ ಕರೆದರು. ಈ ವೇಳೆ ರವೀಂದ್ರ ಅವರನ್ನು 34 ನೇ ಓವರ್ನಲ್ಲಿ ಶಮಿ ಪೆವಿಲಿಯನ್ಗೆ ಕಳುಹಿಸಿದರು. ರವೀಂದ್ರ 87 ಎಸೆತಗಳಲ್ಲಿ 6 ಬೌಂಡರಿ ಮತ್ತು 1 ಸಿಕ್ಸರ್ ಬಾರಿಸಿ 75 ರನ್ ಗಳಿಸಿ ನಿರ್ಗಮಿಸಿದರು.
ನಂತರ ಅವರು 48ನೇ ನೇ ಓವರ್ ಮಿಚೆಲ್ ಸ್ಯಾಂಟ್ನರ್ ಅವರನ್ನು ಔಟ್ ಮಾಡಿ ಮೂರನೇ ವಿಕೆಟ್ ಪಡೆದರು. ಇದು ನ್ಯೂಜಿಲೆಂಡ್ ಕಳೆದುಕೊಂಡ ಏಳನೇ ವಿಕೆಟ್. ಮುಂದಿನ ಎಸೆತದಲ್ಲಿ, ಶಮಿ ಮ್ಯಾಟ್ ಹೆನ್ರಿಯನ್ನು ಸ್ವಿಂಗ್ ಎಸೆತದಿಂದ ಔಟ್ ಮಾಡಿದರು. ಲಾಕಿ ಫರ್ಗ್ಯೂಸನ್ ಅವರು ಶಮಿಗೆ ಹ್ಯಾಟ್ರಿಕ್ ಅವಕಾಶ ನಿರಾಕರಿಸಿದರು.
ಇನ್ನಿಂಗ್ಸ್ನ ಕೊನೇ ಓವರ್ನ ಎರಡನೇ ಎಸೆತದಲ್ಲಿ ಸೆಂಚುರಿಯನ್ ಡ್ಯಾರಿಲ್ ಮಿಚೆಲ್ ಅವರನ್ನು ಔಟ್ ಮಾಡುವ ಮೂಲಕ ಶಮಿ ತಮ್ಮ ಐದು ವಿಕೆಟ್ ಸಾಧನೆಯನ್ನು ಪೂರ್ಣಗೊಳಿಸಿದರು. ಮಿಚೆಲ್ 127 ಎಸೆತಗಳಲ್ಲಿ 130 ರನ್ ಗಳಿಸಿದ ನಂತರ ನಿರ್ಗಮಿಸಿದರು. 48 ವರ್ಷಗಳಲ್ಲಿ ಏಕದಿನ ವಿಶ್ವಕಪ್ನಲ್ಲಿ ಭಾರತದ ವಿರುದ್ಧ ಶತಕ ಬಾರಿಸಿದ ಮೊದಲ ಕಿವೀಸ್ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾದರು.
ಇದನ್ನೂ ಓದಿ : Rohit Sharma : ಗಾಯದ ನೋವಿಗೆ ಮೈದಾನವನ್ನೇ ಶಪಿಸಿದ ರೋಹಿತ್ ಶರ್ಮಾ
ರೋಹಿತ್ ಶರ್ಮಾ ಸಾಧನೆ
ಏಕದಿನ ಕ್ರಿಕೆಟ್ ಮಾದರಿಯಲ್ಲಿ ಒಂದು ವರ್ಷದ ಅವಧಿಯಲ್ಲಿ 50 ಸಿಕ್ಸರ್ ಬಾರಿಸಿದ ಭಾರತದ ಮೊದಲ ಬ್ಯಾಟರ್ ಎಂಬ ಹೆಗ್ಗಳಿಕೆಗೆ ರೋಹಿತ್ ಶರ್ಮಾ (Rohit Sharma) ಪಾತ್ರರಾಗಿದ್ದಾರೆ. ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ (ಎಚ್ಪಿಸಿಎ) ಕ್ರೀಡಾಂಗಣದಲ್ಲಿ ಟಾಮ್ ಲಾಥಮ್ ನೇತೃತ್ವದ ನ್ಯೂಜಿಲೆಂಡ್ ವಿರುದ್ಧದ ವಿಶ್ವಕಪ್ 2023ರ ಪಂದ್ಯದ ವೇಳೆ ಅವರು ಈ ಸಾಧನೆ ಮಾಡಿದ್ದಾರೆ. ಅವರು ಈ ಸಿಕ್ಸರ್ಗಾಗಿ 20 ಇನಿಂಗ್ಸ್ಗಳನ್ನು ಪಡೆದುಕೊಂಡಿದ್ದಾರೆ.
ನಾಗ್ಪುರ ಮೂಲದ ರೋಹಿತ್ ಎರಡನೇ ಓವರ್ನ ಕೊನೆಯ ಎಸೆತದಲ್ಲಿ ಮ್ಯಾಟ್ ಹೆನ್ರಿ ಅವರ ಎಸೆತಕ್ಕೆ ಮಿಡ್ ವಿಕೆಟ್ ಕಡೆಗೆ ಬೃಹತ್ ಸಿಕ್ಸರ್ ಹೊಡೆದ ಬಳಿಕ ಈ ಸಾಧನೆ ಮಾಡಿದರು. ಅವರು 2017ರಲ್ಲಿ ತಾವೇ ಸೃಷ್ಟಿಸಿದ್ದ 46 ಸಿಕ್ಸರ್ಗಳ ದಾಖಲೆಯನ್ನು ಅವರು ಮುರಿದಿದ್ದಾರೆ.
ಕ್ಯಾಲೆಂಡರ್ ವರ್ಷದಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ದಾಖಲೆ ಎಬಿ ಡಿವಿಲಿಯರ್ಸ್ ಹೆಸರಿನಲ್ಲಿದೆ. 2015ರಲ್ಲಿ ದಕ್ಷಿಣ ಆಫ್ರಿಕಾದ ಮಾಜಿ ಬ್ಯಾಟರ್ 18 ಇನ್ನಿಂಗ್ಸ್ಗಳಲ್ಲಿ 58 ಸಿಕ್ಸರ್ಗಳನ್ನು ಬಾರಿಸಿದ್ದರು. 2019ರಲ್ಲಿ 56 ಸಿಕ್ಸರ್ ಬಾರಿಸಿದ ಕ್ರಿಸ್ ಗೇಲ್ ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ.