ಕೆಲವು ದಿನಗಳ ಹಿಂದಷ್ಟೇ ಭಾರತ ತಂಡದ ಮಾಜಿ ಆಟಗಾರ ಅಮಿತ್ ಮಿಶ್ರಾ(amit mishra) ಅವರು ವಿರಾಟ್ ಕೊಹ್ಲಿ(Virat Kohli) ಬಗ್ಗೆ ಗಂಭೀರ ಆರೋಪವೊಂದನ್ನು ಮಾಡಿದ್ದರು. ಹಣ, ಅಂತಸ್ತು ಬಂದ ಮೇಲೆ ಕೊಹ್ಲಿ ಸಂಪೂರ್ಣ ಬದಲಾಗಿದ್ದಾರೆ ಎಂದು ಹೇಳಿದ್ದರು. ಇದೀಗ ಟೀಮ್ ಇಂಡಿಯಾದ ಪ್ರಧಾನ ವೇಗಿ ಮೊಹಮ್ಮದ್ ಶಮಿ(Mohammed Shami) ಕೂಡ ಪರೋಕ್ಷವಾಗಿ ಕೊಹ್ಲಿ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ.
ಸಂದರ್ಶವೊಂದರಲ್ಲಿ ಮಾತನಾಡಿದ ಶಮಿ, “2019ರ ಏಕದಿನ ವಿಶ್ವಕಪ್ನಲ್ಲಿ ನನ್ನನ್ನು ಕೇವಲ 4 ಪಂದ್ಯಗಳಲ್ಲಿ ಮಾತ್ರ ಆಡಿಸಲಾಯಿತು. ನಾನು 4 ಪಂದ್ಯಗಳಲ್ಲಿ ಬರೋಬ್ಬರಿ 13 ವಿಕೆಟ್ ಉರುಳಿಸಿದ್ದೆ. ಹ್ಯಾಟ್ರಿಕ್ ಕೂಟ ಕಿತ್ತಿದ್ದೆ. ಆದರೆ ನನನ್ನು ಕೇವಲ 4 ಪಂದ್ಯಗಳಿಗೆ ಸೀಮಿತ ಮಾಡಲಾಯಿತು. ಮುಂದಿನ ಪಂದ್ಯಗಳಲ್ಲಿ ಆಡುವ ಅವಕಾಶವನ್ನೇ ನೀಡಲಿಲ್ಲ. ಅಂದು ನನಗೆ ಅವಕಾಶ ನೀಡಿದ್ದರೆ, ಸೆಮಿಫೈನಲ್ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ನಾವು ಗೆಲ್ಲುತ್ತಿದ್ದೆವು. ನನ್ನ ಮೇಲೆ ತಂಡದ ನಾಯಕ ಹಾಗೂ ಕೋಚ್ಗೆ ನಂಬಿಕೆ ಇರಲಿಲ್ಲ” ಎಂದು ಹೇಳುವ ಮೂಲಕ ಅಂದು ಕೋಚ್ ಆಗಿದ್ದ ರವಿಶಾಸ್ತ್ರಿ(ravi shastri) ಮತ್ತು ನಾಯಕ ವಿರಾಟ್ ಕೊಹ್ಲಿ ವಿರುದ್ಧ ಪರೋಕ್ಷವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಾದದ ಶಸ್ತ್ರಚಿಕಿತ್ಸೆಗೆ(mohammed shami injury update) ಒಳಗಾಗಿ ಚೇತರಿಕೆ ಕಾಣುತ್ತಿರುವ ಶಮಿ ಕ್ರಿಕೆಟ್ಗೆ ಮರಳುವು ಸಿದ್ಧತೆಯಲ್ಲಿದ್ದಾರೆ. ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್ಸಿಎ)ಯಲ್ಲಿ ಬೌಲಿಂಗ್ ಅಭ್ಯಾಸ ಆರಂಭಿಸಿದ್ದಾರೆ. ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಶಮಿ ಅವರು ತಮ್ಮ ಮೊನಚಾದ ಬೌಲಿಂಗ್ ದಾಳಿಯ ಮೂಲಕ ಟೂರ್ನಿಯಲ್ಲಿಯೇ ಅತ್ಯಧಿಕ ವಿಕೆಟ್ ಪಡೆದ ಬೌಲರ್ ಎನಿಸಿಕೊಂಡಿದ್ದರು. ಆಡಿದ 7 ಪಂದ್ಯಗಳಲ್ಲಿ 24 ವಿಕೆಟ್ ಉರುಳಿಸಿದ್ದರು.
ಇದನ್ನೂ ಓದಿ Mohammed Shami: ಎನ್ಸಿಎಯಲ್ಲಿ ಬೌಲಿಂಗ್ ಅಭ್ಯಾಸ ಆರಂಭಿಸಿದ ಶಮಿ
ಚೇತರಿಕೆಯ ಹಾದಿಯಲ್ಲಿರುವ ಶಮಿ ಈ ವರ್ಷದ ಕೊನೆಯಲ್ಲಿ ಬಾಂಗ್ಲಾದೇಶದ ವಿರುದ್ಧ ತವರಿನಲ್ಲಿ ನಡೆಯುವ ಟೆಸ್ಟ್ ಸರಣಿಗೆ ಪುನರಾಗಮನ ಮಾಡುವ ನಿರೀಕ್ಷೆಯಲ್ಲಿದ್ದಾರೆ. ಗಾಯದಿಂದಾಗಿ ಶಮಿಗೆ ಈ ಬಾರಿ ಐಪಿಎಲ್ ಸೇರಿ ಮಹತ್ವದ ಟಿ20 ವಿಶ್ವಕಪ್ ಟೂರ್ನಿ ಕೈತಪ್ಪಿತ್ತು. ಕಳೆದ ವರ್ಷ ನಡೆದಿದ್ದ ಏಕದಿನ ವಿಶ್ವಕಪ್ ವೇಳೆ ಗಾಯಗೊಂಡಿದ್ದ ಶಮಿ, ಈ ಗಾಯವನ್ನು ಮರೆಮಾಚಿ ವಿಶ್ವಕಪ್ನಲ್ಲಿ ಅಮೋಘ ಬೌಲಿಂಗ್ ಪ್ರದರ್ಶನ ತೋರಿದ್ದರು.
ಕೆಲವು ದಿನಗಳ ಹಿಂದೆ ಅಮಿತ್ ಮಿಶ್ರಾ ಕೂಡ ಸಂದರ್ಶನದಲ್ಲಿ ಮಾತನಾಡುವಾಗ ʼನನಗೆ ವಿರಾಟ್ ಕೊಹ್ಲಿ ಆರಂಭದ ದಿನದಿಂದಲೂ ಗೊತ್ತು. ಆದರೆ ಅಂದು ಇದ್ದಂತಹ ಕೊಹ್ಲಿ ಈಗಿಲ್ಲ. ಹಣ, ಅಂತಸ್ತು ಬಂದ ಮೇಲೆ ಅವರು ಸಂಪೂರ್ಣ ಬದಲಾಗಿದ್ದಾರೆ. ನಮ್ಮಿಬ್ಬರ ನಡುವೆ ಮಾತುಕತೆ ಕೂಡ ನಿಂತಿದೆ. ಮೊದಲಿನಂತೆ ಅವರು ಈಗಿಲ್ಲ. ಇದಕ್ಕೆ ಅವರಿಗೆ ನೇಮ್ ಅಂಡ್ ಫೇಮ್ ಪ್ರಮುಖ ಕಾರಣ” ಎಂದು ಹೇಳಿದ್ದರು.