ಲಕ್ನೋ: ಇತ್ತೀಚೆಗೆ ಮುಕ್ತಾಯಗೊಂಡ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಅಮೋಘ ಬೌಲಿಂಗ್ ಪ್ರದರ್ಶನ ತೋರಿದ ಟೀಮ್ ಇಂಡಿಯಾದ ಸ್ಟಾರ್ ವೇಗಿ ಮೊಹಮ್ಮದ್ ಶಮಿ(Mohammed Shami) ಅವರ ಮನೆ ಮುಂದೆ ಜನಸಾಗರವೇ ಹರಿದು ಬಂದಿದೆ. ಶಮಿ ಅವರೊಂದಿಗೆ ಸೆಲ್ಫಿ ಮತ್ತು ಫೋಟೊ ತೆಗೆದುಕೊಳ್ಳಲು ಅವರ ಮನೆ ಮುಂದೆ ಸರತಿ ಸಾಲಿನಲ್ಲಿ ನಿಂತಿರುವ ಫೋಟೊ ಮತ್ತು ವಿಡಿಯೊ ವೈರಲ್ ಆಗಿದೆ.
ವಿಶೇಷ ಚೇತನರಿಗೆ ಸನ್ಮಾನ
ತಮ್ಮನ್ನು ನೋಡಲು ಬಂದ ವಿಶೇಷ ಚೇತನರಿಗೆ ಶಮಿ ಅವರು ಸಾಲು ಹೊದಿಸಿ ಸನ್ಮಾನ ಮಾಡಿದ್ದಾರೆ. ಅಲ್ಲದೆ ಅವರೊಂದಿಗೆ ಫೋಟೊ ತೆಗೆದುಕೊಂಡಿದ್ದಾರೆ. ಇದರ ವಿಡಿಯೊವನ್ನು ಶಮಿ ಅವರು ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಅಮೋಘ ಸಾಧನೆ
ವಿಶ್ವಕಪ್ ಟೂರ್ನಿಯಲ್ಲಿ ಶಮಿ ಅವರು ಕೇವಲ 7 ಪಂದ್ಯಗಳನ್ನು ಆಡಿ 24 ವಿಕೆಟ್‌ಗಳನ್ನು ಕಬಳಿಸಿ ಟೂರ್ನಿಯಲ್ಲಿ ಅತ್ಯಧಿಕ ವಿಕೆಟ್ ಕಿತ್ತ ಬೌಲರ್ ಎನಿಸಿಕೊಂಡಿದ್ದರು. ಎರಡು ಬಾರಿ ಐದು ವಿಕೆಟ್‌ಗಳು ಮತ್ತು ಒಂದು ಬಾರಿ ಏಳು ವಿಕೆಟ್ ಕಿತ್ತ ಸಾಧನೆ ಮಾಡಿದ್ದರು. ಶಮಿಯ ಘಾತಕ ಬೌಲಿಂಗ್ ಮುಂದೆ ಎದುರಾಳಿ ತಂಡದ ಬ್ಯಾಟರ್ಗಳು ರನ್ ಗಳಿಸಲು ಪರದಾಟ ನಡೆಸಿದ್ದರು.
ಇದನ್ನೂ ಓದಿ Mohammed Shami : ಐಸಿಸಿ ಪ್ರಶಸ್ತಿಗೆ ಮೊಹಮ್ಮದ್ ಶಮಿಯ ಹೆಸರು ನಾಮನಿರ್ದೇಶನ
ಮಾನವೀಯತೆ ಮೆರೆದಿದ್ದ ಶಮಿ
ಕೆಳ ದಿನಗಳ ಹಿಂದೆ ಅಪಘಾತದ ಬಳಿಕ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದ ವ್ಯಕ್ತಿಯೊಬ್ಬರ ಪ್ರಾಣವನ್ನು ಉಳಿಸುವ ಮೂಲಕ ಮೊಹಮ್ಮದ್ ಶಮಿ ಅವರು ಮಾನವೀಯತೆ ಮೆರೆದಿದ್ದರು. ಈ ಕುರಿತು ಮೊಹಮ್ಮದ್ ಶಮಿ ಅವರೇ ಇನ್‌ಸ್ಟಾಗ್ರಾಂನಲ್ಲಿ ವಿಡಿಯೊ ಅಪ್‌ಲೋಡ್ ಮಾಡುವ ಮೂಲಕ ಮಾಹಿತಿ ನೀಡಿದ್ದರು. “ಒಂದು ಜೀವ ಉಳಿಸಿದ ಖುಷಿ ನನ್ನದಾಯಿತು. ಈ ವ್ಯಕ್ತಿ ತುಂಬ ಅದೃಷ್ಟವಂತ. ಉತ್ತರಾಖಂಡದ ನೈನಿತಾಲ್ ಬಳಿ ಈಗಷ್ಟೇ ಕಾರೊಂದು ಬೆಟ್ಟದಿಂದ ಕೆಳಗೆ ಬಿತ್ತು. ಕಾರಿನಲ್ಲಿದ್ದ ವ್ಯಕ್ತಿಯನ್ನು ರಕ್ಷಣೆ ಮಾಡಲಾಗಿದೆ. ಇದರಿಂದ ಕಾರಿನಲ್ಲಿದ್ದ ವ್ಯಕ್ತಿಗೆ ಮರು ಜನ್ಮ ಸಿಕ್ಕಂತಾಗಿದೆ” ಎಂದು ಪೋಸ್ಟ್ ಮಾಡಿದ್ದರು. ಇದಕ್ಕೆ ಜನರು ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದರು.
“ಮೊಹಮ್ಮದ್ ಶಮಿ ಅವರು ಮೈದಾನದಲ್ಲಿ ಭಾರತ ತಂಡವನ್ನು ರಕ್ಷಿಸುತ್ತಾರೆ. ಹಾಗೆಯೇ, ಮೈದಾನದ ಹೊರಗೆ ದೇಶದ ಜನರನ್ನು ರಕ್ಷಿಸುತ್ತಾರೆ” ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ. “ಮೊಹಮ್ಮದ್ ಶಮಿ ಅವರೇ, ಇರೋ ಒಂದು ಹೃದಯವನ್ನು ಎಷ್ಟು ಬಾರಿ ಗೆಲ್ಲುತ್ತೀರಿ” ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ. “ಮೈದಾನದ ಹೊರಗಾಗಲಿ, ಮೈದಾನದ ಒಳಗಾಗಲಿ, ಮೊಹಮ್ಮದ್ ಶಮಿ ಹೀರೊ” ಎಂದು ಇನ್ನೊಬ್ಬರು ಪ್ರತಿಕ್ರಿಯಿಸಿದ್ದಾರೆ. ಹೀಗೆ ನೂರಾರು ಜನ ಮೊಹಮ್ಮದ್ ಶಮಿ ಅವರ ಮಾನವೀಯ ಗುಣವನ್ನು ಕೊಂಡಾಡಿದ್ದರು.