ಡೆಹ್ರಾಡೂನ್: ಇತ್ತೀಚೆಗೆ ಮುಕ್ತಾಯಗೊಂಡ ವಿಶ್ವಕಪ್ ಟೂರ್ನಿಯಲ್ಲಿ ಅಮೋಘ ಬೌಲಿಂಗ್ ಪ್ರದರ್ಶನ ನೀಡುವ ಮೂಲಕ ಮೊಹಮ್ಮದ್ ಶಮಿ ಅವರು ದೇಶದ ಶತಕೋಟಿ ಜನರ ಮನಗೆದ್ದಿದ್ದಾರೆ. ಅವರ ಮೊನಚಾದ ಬೌಲಿಂಗ್, ಸೆಮಿಫೈನಲ್‌ನಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ಅದ್ಭುತ ಪ್ರದರ್ಶನದ ಕುರಿತು ಈಗಲೂ ಮೆಚ್ಚುಗೆ ವ್ಯಕ್ತವಾಗುತ್ತಿವೆ. ಇದರ ಬೆನ್ನಲ್ಲೇ, ಅಪಘಾತದ ಬಳಿಕ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದ ವ್ಯಕ್ತಿಯೊಬ್ಬರ ಪ್ರಾಣವನ್ನು ಉಳಿಸುವ ಮೂಲಕ ಮೊಹಮ್ಮದ್ ಶಮಿ ಅವರು ಮಾನವೀಯತೆ ಮೆರೆದಿದ್ದಾರೆ.
ಈ ಕುರಿತು ಮೊಹಮ್ಮದ್ ಶಮಿ ಅವರೇ ಇನ್‌ಸ್ಟಾಗ್ರಾಂನಲ್ಲಿ ವಿಡಿಯೊ ಅಪ್‌ಲೋಡ್ ಮಾಡುವ ಮೂಲಕ ಮಾಹಿತಿ ನೀಡಿದ್ದಾರೆ. “ಒಂದು ಜೀವ ಉಳಿಸಿದ ಖುಷಿ ನನ್ನದಾಯಿತು. ಈ ವ್ಯಕ್ತಿ ತುಂಬ ಅದೃಷ್ಟವಂತ. ಉತ್ತರಾಖಂಡದ ನೈನಿತಾಲ್ ಬಳಿ ಈಗಷ್ಟೇ ಕಾರೊಂದು ಬೆಟ್ಟದಿಂದ ಕೆಳಗೆ ಬಿತ್ತು. ಕಾರಿನಲ್ಲಿದ್ದ ವ್ಯಕ್ತಿಯನ್ನು ರಕ್ಷಣೆ ಮಾಡಲಾಗಿದೆ. ಇದರಿಂದ ಕಾರಿನಲ್ಲಿದ್ದ ವ್ಯಕ್ತಿಗೆ ಮರು ಜನ್ಮ ಸಿಕ್ಕಂತಾಗಿದೆ” ಎಂದು ಪೋಸ್ಟ್ ಮಾಡಿದ್ದಾರೆ. ಇದಕ್ಕೆ ಜನರು ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
“ಮೊಹಮ್ಮದ್ ಶಮಿ ಅವರು ಮೈದಾನದಲ್ಲಿ ಭಾರತ ತಂಡವನ್ನು ರಕ್ಷಿಸುತ್ತಾರೆ. ಹಾಗೆಯೇ, ಮೈದಾನದ ಹೊರಗೆ ದೇಶದ ಜನರನ್ನು ರಕ್ಷಿಸುತ್ತಾರೆ” ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ. “ಮೊಹಮ್ಮದ್ ಶಮಿ ಅವರೇ, ಇರೋ ಒಂದು ಹೃದಯವನ್ನು ಎಷ್ಟು ಬಾರಿ ಗೆಲ್ಲುತ್ತೀರಿ” ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ. “ಮೈದಾನದ ಹೊರಗಾಗಲಿ, ಮೈದಾನದ ಒಳಗಾಗಲಿ, ಮೊಹಮ್ಮದ್ ಶಮಿ ಹೀರೊ” ಎಂದು ಇನ್ನೊಬ್ಬರು ಪ್ರತಿಕ್ರಿಯಿಸಿದ್ದಾರೆ. ಹೀಗೆ ನೂರಾರು ಜನ ಮೊಹಮ್ಮದ್ ಶಮಿ ಅವರ ಮಾನವೀಯ ಗುಣವನ್ನು ಕೊಂಡಾಡಿದ್ದಾರೆ.
ಇದನ್ನೂ ಓದಿ: ಮೊಹಮ್ಮದ್ ಶಮಿ ಬೌಲಿಂಗ್ಗೆ ಯೋಗಿ ಫಿದಾ; ತವರಿನಲ್ಲಿ ಸ್ಟೇಡಿಯಂ ನಿರ್ಮಾಣ
ವಿಶ್ವಕಪ್‌ನಲ್ಲಿ ಅದ್ಭುತ ಬೌಲಿಂಗ್ ಪ್ರದರ್ಶನ
ಕೆಲ ದಿನಗಳ ಹಿಂದಷ್ಟೇ ಮುಕ್ತಾಯಗೊಂಡ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಮೊಹಮ್ಮದ್ ಶಮಿ ಅವರು 24 ವಿಕೆಟ್‌ಗಳನ್ನು ಪಡೆಯುವ ಮೂಲಕ ಟೂರ್ನಿಯಲ್ಲಿ ಅತ್ಯಧಿಕ ವಿಕೆಟ್ ತೆಗೆದುಕೊಂಡ ಬೌಲರ್ ಎನಿಸಿದರು. ಅದರಲ್ಲೂ, ಸೆಮಿಫೈನಲ್ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ಭಾರತ ತಂಡ ಗೆಲುವು ಸಾಧಿಸುವಲ್ಲಿ ಶಮಿ ನಿರ್ಣಾಯಕ ಪಾತ್ರ ನಿರ್ವಹಿಸಿದ್ದರು. ವಿಶ್ವಕಪ್ ಫೈನಲ್‌ನಲ್ಲಿ ಭಾರತ ತಂಡ ಸೋತು ನಿರಾಸೆ ಅನುಭವಿಸಿದ ಬಳಿಕ ಮೊಹಮ್ಮದ್ ಶಮಿ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅವರು ಸಂತೈಸಿದ್ದರು.
ಈ ಸಂಗತಿ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ