Site icon Vistara News

IPL 2024: ಐಪಿಎಲ್​ನಿಂದ ಹೊರಬಿದ್ದ ಮೊಹಮ್ಮದ್ ಶಮಿ; ಗುಜರಾತ್​ ತಂಡಕ್ಕೆ ಹಿನ್ನಡೆ

Mohammed Shami

ನವದೆಹಲಿ: ಟೀಮ್​ ಇಂಡಿಯಾದ ಹಿರಿಯ ಹಾಗೂ ಅನುಭವಿ ವೇಗಿ ಮೊಹಮ್ಮದ್ ಶಮಿ(Mohammed Shami) ಅವರು ಈ ಬಾರಿಯ ಐಪಿಎಲ್​ ಟೂರ್ನಿಯಿಂದ ಹೊರಗುಳಿಯಲಿದ್ದಾರೆ(Shami Ruled Out Of IPL) ಎಂದು ತಿಳಿದುಬಂದಿದೆ. ಶಮಿ ತಮ್ಮ ಎಡ ಪಾದದ ಗಾಯಕ್ಕೆ(Mohammed Shami Ankle Injury) ಲಂಡನ್​ನಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ ಎಂದು ಬಿಸಿಸಿಐ(BCCI) ಮೂಲಗಳು ತಿಳಿಸಿರುವುದಾಗಿ ಪಿಟಿಐ ಗುರುವಾರ ವರದಿ ಮಾಡಿದೆ.

ಕಳೆದ ವರ್ಷ ಭಾರತದ ಆತಿಥ್ಯದಲ್ಲಿ ನಡೆದ ಏಕದಿನ ವಿಶ್ವಕಪ್​ ಟೂರ್ನಿಯಲ್ಲಿ ಶಮಿ ತಮ್ಮ ಮೊನಚಾದ ಬೌಲಿಂಗ್​ ದಾಳಿಯಿಂದ ತಂಡಕ್ಕೆ ಹಲವು ಗೆಲುವು ತಂದುಕೊಟ್ಟಿದ್ದರು. ಆರಂಭಿಕ ಮೂರು ಪಂದ್ಯಗಳಲ್ಲಿ ಆಡುವ ಅವಕಾಶ ಸಿಗದಿದ್ದರೂ, ಆ ಬಳಿಕ ಆಡಿದ 7 ಪಂದ್ಯಗಳಲ್ಲಿ 24 ವಿಕೆಟ್‌ ಉರುಳಿಸಿ ಟೂರ್ನಿಯಲ್ಲಿ ಅತ್ಯಧಿಕ ವಿಕೆಟ್​ ಕಿತ್ತ ಬೌಲರ್​ ಎನಿಸಿಕೊಂಡಿದ್ದರು. ವಿಶ್ವಕಪ್​ ಬಳಿಕ ಶಮಿ ಗಾಯದ ಸಮಸ್ಯೆಯಿಂದ ಭಾರತ ಪರ ಆಡಿಲ್ಲ.

ಶಮಿ ಅವರು ವಿಶ್ವಕಪ್​ ವೇಳೆಯೇ ಪಾದದ ನೋವಿನಿಂದ ಬಳಲುತ್ತಿದ್ದರು. ಆದರೆ ಅವರು ಈ ಗಾಯಕ್ಕೆ ಚುಚ್ಚು ಮದ್ದು ತೆಗೆದುಕೊಂಡು ದೇಶಕ್ಕಾಗಿ ಆಡಿದ ವಿಚಾರ ತಡವಾಗಿ ಬೆಳಕಿಗೆ ಬಂದಿತ್ತು. ಇದಕ್ಕೆ ಜನರು ದೇಶವಾಸಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಇದೀಗ ಅವರು ಲಂಡನ್​ನಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದು ಮುಂದಿನ ತಿಂಗಳು ಆರಂಭಗೊಳ್ಳಲಿರುವ ಇಂಡಿಯನ್ ಪ್ರೀಮಿಯರ್ ಲೀಗ್​ನಿಂದ ಹೊರಗುಳಿಯಲಿದ್ದಾರೆ ಎಂದು ಬಿಸಿಸಿಐ ಮೂಲಗಳು ಪಿಟಿಐಗೆ ತಿಳಿಸಿವೆ. ಆದರೆ ಬಿಸಿಸಿಐ ಯಾವುದೇ ಅಧಿಕೃತ ಮಾಹಿತಿಯನ್ನು ಇದುವರೆಗೆ ನೀಡಿಲ್ಲ.

ಮೊಹಮ್ಮದ್ ಶಮಿ ಅವರು ಗುಜರಾತ್​ ಟೈಟಾನ್ಸ್​ ತಂಡದ ಆಟಗಾರನಾಗಿದ್ದು ಈ ಬಾರಿ ತಂಡವನ್ನು ಶುಭಮನ್​ ಗಿಲ್​ಮುನ್ನಡೆಸುತ್ತಿದ್ದಾರೆ. ಈ ಹಿಂದೆ ನಾಯಕನಾಗಿದ್ದ ಹಾರ್ದಿಕ್​ ಪಾಂಡ್ಯ ಮುಂಬೈ ತಂಡ ಸೇರಿದ್ದಾರೆ. ಉತ್ತಮ ಬೌಲಿಂಗ್​ ಫಾರ್ಮ್​ನಲ್ಲಿದ್ದ ಶಮಿ ಅವರು ಐಪಿಎಲ್​ನಿಂದ ಹಿಂದೆ ಸರಿದರೆ ಗುಜರಾತ್​ ತಂಡಕ್ಕೆ ಭಾರೀ ಹಿನ್ನಡೆಯಾಗುವುದು ಖಚಿತ. ಏಕೆಂದರೆ ಅನುಭವಿಯಾಗಿ ತಂಡದಲ್ಲಿದ್ದ ಏಕೈಕ ವೇಗಿ ಅವರಾಗಿದ್ದರು.​

ಇದನ್ನೂ ಓದಿ IND vs ENG 4th Test : ರಾಂಚಿ ಸ್ಟೇಡಿಯಂಗೆ ಬಿಗಿ ಭದ್ರತೆ; ಪ್ರೇಕ್ಷಕರಿಗೆ 2 ಹಂತದ ತಪಾಸಣೆ!

ಅರ್ಜುನ ಪ್ರಶಸ್ತಿ ಪಡೆದ ಶಮಿ


ಕಳೆದ ವರ್ಷ ನಡೆದ ಏಕದಿನ ವಿಶ್ವಕಪ್​ನಲ್ಲಿ ಅದ್ಭುತ ಪ್ರದರ್ಶನ ತೋರಿ ಆಡಿದ 7 ಪಂದ್ಯಗಳಲ್ಲಿ 24 ವಿಕೆಟ್‌ ಉರುಳಿಸಿ ಟೂರ್ನಿಯಲ್ಲಿ ಅತ್ಯಧಿಕ ವಿಕೆಟ್​ ಕಿತ್ತ ಬೌಲರ್​ ಎನಿಸಿಕೊಂಡಿದ್ದರು. ಅವರ ಈ ಸಾಧನೆಯನ್ನು ಪರಿಗಣಿಸಿ ಅವರಿಗೆ ದೇಶದ ಎರಡನೇ ಅತ್ಯುನ್ನತ ಕ್ರೀಡಾ ಗೌರವವಾದ ಅರ್ಜುನ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ದೆಹಲಿಯ ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಮೊಹಮ್ಮದ್ ಶಮಿ ಅರ್ಜುನ ಪ್ರಶಸ್ತಿ ಸ್ವೀಕರಿಸಿದ್ದರು.

ಮೊಹಮ್ಮದ್ ಶಮಿ ಭಾರತ ಪರ 64 ಟೆಸ್ಟ್ ಪಂದ್ಯಗಳಲ್ಲಿ 229 ವಿಕೆಟ್ ಪಡೆದಿದ್ದಾರೆ. 101 ಏಕದಿನ ಪಂದ್ಯಗಳಲ್ಲಿ 195 ವಿಕೆಟ್ ಪಡೆದಿದ್ದಾರೆ. 23 ಟಿ20 ಪಂದ್ಯಗಳಲ್ಲಿ 24 ವಿಕೆಟ್ ಪಡೆದಿದ್ದಾರೆ. ಸದ್ಯ ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಟೆಸ್ಟ್​ ಸರಣಿಯ ಮೊದಲೆರಡು ಪಂದ್ಯಗಳಿಂದ ಹೊರಗುಳಿದಿದ್ದ ಶಮಿ ಮೂರನೇ ಪಂದ್ಯಕ್ಕೆ ಲಭ್ಯರಾಗುವ ಸಾಧ್ಯತೆ ಇದೆ. ಏಕದಿನ ವಿಶ್ವಕಪ್​ ಬಳಿಕ ಶಮಿ ಭಾರತ ಪರ ಯಾವುದೇ ಸರಣಿ ಆಡಿಲ್ಲ.

Exit mobile version