Site icon Vistara News

Mohammed Shami: ಪಾಕಿಗಳ ಟೀಕೆಯ ಹೊಡೆತಕ್ಕೆ ಬೌನ್ಸರ್​ ಎಸೆತ ಮೊಹಮ್ಮದ್ ಶಮಿ

mohammed shami

ಮುಂಬಯಿ: ಈ ಬಾರಿಯ ವಿಶ್ವಕಪ್(icc world cup 2023)​ ಟೂರ್ನಿಯುದ್ದಕ್ಕೂ ಭಾರತ ತಂಡದ ಮತ್ತು ಆಟಗಾರರ ವಿರುದ್ಧ ಇಲ್ಲ ಸಲ್ಲದ ಆರೋಪಗಳನ್ನು ಮಾಡಿ ಟೀಕೆ ಮಾಡಿದ್ದ ಪಾಕಿಸ್ತಾನಕ್ಕೆ, ಟೀಮ್ ಇಂಡಿಯಾದ ಸ್ಟಾರ್​ ವೇಗಿ ಮೊಹಮ್ಮದ್​ ಶಮಿ(Mohammed Shami) ಅವರು ತಕ್ಕ ಉತ್ತರ ನೀಡಿದ್ದಾರೆ.

ವಿಶ್ವಕಪ್​ ಟೂರ್ನಿ ಮುಕ್ತಾಯದ ಬಳಿಕ ಪೂಮಾ ಇಂಡಿಯಾ ಕಾರ್ಯಕ್ರಮದಲ್ಲಿ ಮಾತನಾಡಿದ ಶಮಿ, ಸಂಕಷ್ಟದ ಸಮಯದಲ್ಲಿ ಉತ್ತಮ ಪ್ರದರ್ಶನ ನೀಡುವ ಕಡೆಗೆ ನಾನು ವಿಶ್ವಾಸ ಇಟ್ಟಿದ್ದೇನೆ ಎಂದು ಹೇಳುವ ಮೂಲಕ ಪಾಕಿಸ್ತಾನ ತಂಡದ ಮಾಜಿ ಕ್ರಿಕೆಟಿಗರ ಟೀಕೆಗೆ ಶಮಿ ಖಡಕ್ ಉತ್ತರ ನೀಡಿದ್ದಾರೆ.

ಪಾಕಿಸ್ತಾನದ ಮಾಜಿ ಆಟಗಾರರು ಭಾರತ ತಂಡ ತನ್ನ ಲಾಭಕ್ಕಾಗಿ ಬೇರೆ ಚೆಂಡುಗಳನ್ನು ಬಳಕೆ ಮಾಡುತ್ತಿದೆ, ಟಾಸ್​ ಫಿಕ್ಸಿಂಗ್​ ಸೇರಿ ಡಿಆರ್​ಎಸ್​ ರಿವ್ಯೂ ತಮಗೆ ಬೇಕಾದ ರೀತಿಯಲ್ಲಿ ತೋರಿಸುತ್ತಿದ್ದಾರೆ ಎಂದು ಆರೋಪ ಮಾಡಿದ್ದರು. ಇದಕ್ಕೆ ತಿರುಗೇಟು ನೀಡಿರುವ ಶಮಿ, ಅನಗತ್ಯವಾಗಿ ಕಾಲು ಕೆರೆದು ಜಗಳಕ್ಕೆ ಬರುವುದು ಪಾಕಿಸ್ತಾನದ ಹುಟ್ಟುಗುಣ. ಆಡಲು ಸಾಧ್ಯವಾಗದಿದ್ದಾಗ ಅಂಗಳ ಡೊಂಕು ಎಂದು ಹೇಳುವ ಮನಸ್ಥಿತಿ ಅವರದ್ದು. ಕ್ರಿಕೆಟ್‌ ಆಡದವರಿಗೂ ಕ್ರಿಕೆಟ್​ ನಿಯಮದ ಬಗ್ಗೆ ತಿಳಿಯುತ್ತದೆ. ಆದರೆ, ಕ್ರಿಕೆಟ್‌ ಆಡಿರುವವರೇ ಕೆಲ ಕೀಳು ಮಟ್ಟದ ಹೇಳಿಕೆ ನೀಡಿದರೆ ಹೇಗೆ? ಮಾಜಿ ಆಟಗಾರನಾಗಿ ನಾನು ಈ ರೀತಿ ಮಾತನಾಡಿದರೆ ಹೇಗೆ? ಇಲ್ಲ ಸಲ್ಲದ ಆರೋಪ ಮಾಡುವುದು ಸರಿಯಲ್ಲ ಎಂದು ಖಡಕ್​ ತಿರುಗೇಟು ನೀಡಿದ್ದಾರೆ.

ಇದನ್ನೂ ಓದಿ Mohammed Shami : ಒಳ್ಳೆಯವರು ಮಾತ್ರ ಗೆಲ್ತಾರೆ; ಶಮಿಯ ಪತ್ನಿ ಹೀಗೆ ಹೇಳಿದ್ದು ಯಾರಿಗೆ?

ದಾಖಲೆಗಾಗಿ ಆಡುವ ಆಟಗಾರ ನಾನಲ್ಲ

ಈ ಬಾರಿಯ ವಿಶ್ವಕಪ್​ ಟೂರ್ನಿಯಲ್ಲಿ ಅಮೋಘ ಬೌಲಿಂಗ್​ ಪ್ರದರ್ಶನ ತೋರುವ ಮೂಲಕ ಹಲವು ಶಮಿ ಅವರು ಹಲವು ದಾಖಲಗಳನ್ನು ಬರೆದಿದ್ದಾರೆ. ಇದೇ ವಿಚಾರವಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಶಮಿ, ಎಂದೂ ಕೂಡ ದಾಖಲೆಗಾಗಿ ಆಡುವ ಆಟಗಾರ ನಾನಲ್ಲ, ತಂಡಕ್ಕಾಗಿ ಆಡುವುದೇ ನನ್ನ ಪರಮೋಚ್ಛ ಗುರಿ ಎಂದು ಹೇಳಿದ್ದಾರೆ.

“ವಿಶ್ವಕಪ್​ನಲ್ಲಿ ನಾನು ಹಲವು ದಾಖಲೆಗಳನ್ನು ಬರೆದಿರಬಹುದು. ದಿಗ್ಗಜ ಆಟಗಾರರನ್ನು ಹಿಂದಿಕ್ಕಿದ್ದೇನೆ ಎಂಬ ಸಂಗತಿಯೂ ನನಗೆ ತಿಳಿದಿರಲಿಲ್ಲ. ಆದರೆ ವಿಶ್ವಕಪ್‌ನಲ್ಲಿ 40ಕ್ಕೂ ಹೆಚ್ಚು ವಿಕೆಟ್‌ ಪಡೆದಿದ್ದೇನೆ ಎಂಬುದು ನನ ಗಮನದಲ್ಲಿತ್ತು. ವೈಯಕ್ತಿಕ ದಾಖಲೆಗಳ ಬಗ್ಗೆ ನಾನು ಎಂದಿಗೂ ಯೋಚಿಸಿದವನಲ್ಲ. ನನ್ನ ಕೆಲಸ ಏನಿದ್ದರೂ ಉತ್ತಮವಾಗಿ ಬೌಲಿಂಗ್‌ ಮಾಡುವುದಷ್ಟೇ” ಎಂದರು.

ಇದನ್ನೂ ಓದಿ Mohammed Shami : ಪ್ರಧಾನಿ ಮೋದಿಗೆ ವಿಶೇಷ ಕೃತಜ್ಞತೆ ಸಲ್ಲಿಸಿದ ಮೊಹಮ್ಮದ್ ಶಮಿ

“ಯಾವುದೇ ಪಂದ್ಯಕ್ಕೂ ಮುನ್ನ ಪಿಚ್‌ ಹೇಗಿದೆ ಎಂದು ನಾನು ನೋಡುವುದಿಲ್ಲ. ಪರಿಶೀಲಿಸುವುದೂ ಇಲ್ಲ. ಪಿಚ್‌ ಹೇಗೆ ವರ್ತಿಸುತ್ತದೆ ಎಂದು ತಿಳಿಯಬೇಕಿದ್ದರೆ ನಾವು ಬೌಲಿಂಗ್‌ ಮಾಡಲೇ ಬೇಕು. ಈಗಿನ ಆಧುನಿಕ ತಂತ್ರಜ್ಞಾನದ ಬಗ್ಗೆ ನಾನು ಅಷ್ಟಾಗಿ ತಲೆಕೆಡಿಸಿಕೊಂಡಿಲ್ಲ. ಪಂದ್ಯದಲ್ಲಿ ಮೊದಲ ಓವರ್​ ನಡೆಸುವಾಗ ಪಿಚ್​ ಹೇಗೆ ವರ್ತಿಸುತ್ತದೆ ಎನ್ನುವುದು ನನಗೆ ತಿಳಿಯುತ್ತದೆ. ಇದಕ್ಕೆ ಅನುಗುಣವಾಗಿ ಬೌಲಿಂಗ್​ ನಡೆಸುತ್ತೇನೆ” ಎಂದು ತಮ್ಮ ಬೌಲಿಂಗ್​ ಸ್ಕಿಲ್​ನ ಅನುಭವವನ್ನು​ ಶಮಿ ಮನ ಬಿಚ್ಚಿ ಹೇಳಿಕೊಂಡರು.

ಈ ಬಾರಿಯ ವಿಶ್ವಕಪ್​ನಲ್ಲಿ ಶಮಿಯ ಸಾಧನೆ

ಈ ಬಾರಿ ವಿಶ್ವಕಪ್​ ಟೂರ್ನಿಯಲ್ಲಿ ಮೊಹಮ್ಮದ್‌ ಶಮಿ ಅವರ ಬೌಲಿಂಗ್​ ಸಾಧನೆ ಮರೆಯಲು ಸಾಧ್ಯವಿಲ್ಲ. ಕೇವಲ 7 ಪಂದ್ಯಗಳಲ್ಲಿ ಆಡಿದ್ದರೂ, ಮೊನಚಾದ ದಾಳಿಯಿಂದಾಗಿ ಎದುರಾಳಿ ತಂಡದಲ್ಲಿ ನಡುಕ ಹುಟ್ಟಿಸಿದ್ದರು. ನ್ಯೂಜಿಲ್ಯಾಂಡ್​ ವಿರುದ್ಧದ ಪಂದ್ಯದಲ್ಲಿ ಆಡುವ ಅವಕಾಶ ಪಡೆದ ಶಮಿ ಆ ಬಳಿಕ ಪ್ರತಿ ಪಂದ್ಯದಲ್ಲಿಯೂ ಗೆಲುವಿನ ಹೀರೊ ಆಗಿ ಮೆರೆದಾಡಿದ್ದರು. ನ್ಯೂಜಿಲ್ಯಾಂಡ್‌ ವಿರುದ್ಧ 5 ವಿಕೆಟ್‌ ಪಡೆದರು. ಇಂಗ್ಲೆಂಡ್‌ ವಿರುದ್ಧ ಭಾರತ ಕಡಿಮೆ ಸ್ಕೋರ್‌ ಗಳಿಸಿದ್ದರೂ ಶಮಿ ಮಾತ್ರ ತಮ್ಮ ಬೌಲಿಂಗ್​ ಸಾಹಸದಿಂದ 22 ರನ್‌ಗೆ 4 ವಿಕೆಟ್‌ ಪಡೆದು ಮಿಂಚಿದರು. ಲಂಕಾ ವಿರುದ್ಧ ಕೇವಲ 18 ರನ್‌ಗೆ 5 ವಿಕೆಟ್‌ ಪಡೆದರು. ದಕ್ಷಿಣ ಆಫ್ರಿಕಾ ವಿರುದ್ಧ 2 ವಿಕೆಟ್‌ ಪಡೆದರು. ನ್ಯೂಜಿಲ್ಯಾಂಡ್‌ ವಿರುದ್ಧ ನಡೆದ ಸೆಮಿಫೈನಲ್‌ನಲ್ಲಿ 7 ವಿಕೆಟ್‌ ಪಡೆದ ಶಮಿ ಹೊಸ ದಾಖಲೆಯನ್ನೇ ನಿರ್ಮಿಸಿದರು. ಫೈನಲ್​ ಪಂದ್ಯದಲ್ಲಿ 1 ವಿಕೆಟ್​ ಕಿತ್ತರು. ಒಟ್ಟಾರೆ 23 ವಿಕೆಟ್​ ಕಿತ್ತು ಟೂರ್ನಿಯಲ್ಲಿ ಅತ್ಯಧಿಕ ವಿಕೆಟ್​ ಕಿತ್ತ ಆಟಗಾರನಾಗಿ ಹೊರಹೊಮ್ಮಿದರು. 57ಕ್ಕೆ 7 ವಿಕೆಟ್​ ಗರಿಷ್ಠ ವೈಯಕ್ತಿಕ ಬೌಲಿಂಗ್​ ಸಾಧನೆ.

Exit mobile version