Site icon Vistara News

Mohammed Shami: ಮೊಹಮ್ಮದ್‌ ಶಮಿಗೆ ಯಶಸ್ವಿ ಶಸ್ತ್ರಚಿಕಿತ್ಸೆ; ಫ್ಯಾನ್ಸ್‌ಗೆ ಹೇಳಿದ್ದಿಷ್ಟು

Mohammed Shami

Mohammed Shami undergoes successful heel operation, recovery to take time

ಲಂಡನ್:‌ ಭಾರತ ಕ್ರಿಕೆಟ್‌ ತಂಡದ ಅನುಭವಿ ವೇಗಿ, ಕಳೆದ ವಿಶ್ವಕಪ್‌ ಟೂರ್ನಿಯಲ್ಲಿ (World Cup 2023) ಮೊನಚಾದ ಪ್ರದರ್ಶನದ ಮೂಲಕವೇ ದೇಶದ ಗಮನ ಸೆಳೆದಿದ್ದ ಮೊಹಮ್ಮದ್‌ ಶಮಿ (Mohammed Shami) ಅವರು ಲಂಡನ್‌ನಲ್ಲಿ ಎಡಪಾದದ ಶಸ್ತ್ರಚಿಕಿತ್ಸೆಗೆ (Surgery) ಒಳಗಾಗಿದ್ದಾರೆ. ಯಶಸ್ವಿಯಾಗಿ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಕುರಿತು ಮೊಹಮ್ಮದ್‌ ಶಮಿ ಅವರೇ ಎಕ್ಸ್‌ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಿದ್ದು, ಅಭಿಮಾನಿಗಳಿಗೆ ಸಂದೇಶವನ್ನೂ ರವಾನಿಸಿದ್ದಾರೆ.

“ನಾನು ಯಶಸ್ವಿಯಾಗಿ ಪಾದದ ಸ್ನಾಯುರಜ್ಜು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದೇನೆ. ಸಂಪೂರ್ಣವಾಗಿ ಗುಣಮುಖನಾಗಲು ಒಂದಷ್ಟು ಸಮಯ ಬೇಕಾಗುತ್ತದೆ. ಆದರೆ, ಶೀಘ್ರದಲ್ಲೇ ಗುಣಮುಖನಾಗುವ ವಿಶ್ವಾಸವಿದೆ” ಎಂದು ಫೋಟೊಗಳ ಸಮೇತ ಮೊಹಮ್ಮದ್‌ ಶಮಿ ಪೋಸ್ಟ್‌ ಮಾಡಿದ್ದಾರೆ. ಇವರ ಪೋಸ್ಟ್‌ಗೆ ಸಾವಿರಾರು ಅಭಿಮಾನಿಗಳು ಪ್ರತಿಕ್ರಿಯಿಸಿದ್ದು, ಶೀಘ್ರವೇ ಗುಣಮುಖರಾಗಿ ಬನ್ನಿ ಎಂದು ಹಾರೈಸಿದ್ದಾರೆ.

ಕಳೆದ ವರ್ಷ ಭಾರತದ ಆತಿಥ್ಯದಲ್ಲಿ ನಡೆದ ಏಕದಿನ ವಿಶ್ವಕಪ್​ ಟೂರ್ನಿಯಲ್ಲಿ ಶಮಿ ತಮ್ಮ ಮೊನಚಾದ ಬೌಲಿಂಗ್​ ದಾಳಿಯಿಂದ ತಂಡಕ್ಕೆ ಹಲವು ಗೆಲುವು ತಂದುಕೊಟ್ಟಿದ್ದರು. ಆರಂಭಿಕ ಮೂರು ಪಂದ್ಯಗಳಲ್ಲಿ ಆಡುವ ಅವಕಾಶ ಸಿಗದಿದ್ದರೂ, ಆ ಬಳಿಕ ಆಡಿದ 7 ಪಂದ್ಯಗಳಲ್ಲಿ 24 ವಿಕೆಟ್‌ ಉರುಳಿಸಿ ಟೂರ್ನಿಯಲ್ಲಿ ಅತ್ಯಧಿಕ ವಿಕೆಟ್​ ಕಿತ್ತ ಬೌಲರ್​ ಎನಿಸಿಕೊಂಡಿದ್ದರು. ವಿಶ್ವಕಪ್​ ಬಳಿಕ ಶಮಿ ಗಾಯದ ಸಮಸ್ಯೆಯಿಂದ ಭಾರತ ಪರ ಆಡಿಲ್ಲ.

ಐಪಿಎಲ್‌ನಿಂದ ಹೊರಗೆ?

ಶಮಿ ಅವರು ವಿಶ್ವಕಪ್​ ವೇಳೆಯೇ ಪಾದದ ನೋವಿನಿಂದ ಬಳಲುತ್ತಿದ್ದರು. ಆದರೆ ಅವರು ಈ ಗಾಯಕ್ಕೆ ಚುಚ್ಚು ಮದ್ದು ತೆಗೆದುಕೊಂಡು ದೇಶಕ್ಕಾಗಿ ಆಡಿದ ವಿಚಾರ ತಡವಾಗಿ ಬೆಳಕಿಗೆ ಬಂದಿತ್ತು. ಇದಕ್ಕೆ ದೇಶವಾಸಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಇದೀಗ ಅವರು ಲಂಡನ್​ನಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದು ಮುಂದಿನ ತಿಂಗಳು ಆರಂಭಗೊಳ್ಳಲಿರುವ ಇಂಡಿಯನ್ ಪ್ರೀಮಿಯರ್ ಲೀಗ್​ನಿಂದ ಹೊರಗುಳಿಯಲಿದ್ದಾರೆ ಎಂದು ಬಿಸಿಸಿಐ ಮೂಲಗಳು ಪಿಟಿಐಗೆ ತಿಳಿಸಿವೆ. ಆದರೆ ಬಿಸಿಸಿಐ ಯಾವುದೇ ಅಧಿಕೃತ ಮಾಹಿತಿಯನ್ನು ಇದುವರೆಗೆ ನೀಡಿಲ್ಲ.

ಇದನ್ನೂ ಓದಿ: Dhruv Jurel: ಫಿಫ್ಟಿ ಬಾರಿಸಿ ತಂದೆಗೆ ಧ್ರುವ್‌ ಜುರೆಲ್ ಸೆಲ್ಯೂಟ್‌ ;‌ ಇವರ ತಂದೆ ಕಾರ್ಗಿಲ್‌ ಹೀರೊ

ಮೊಹಮ್ಮದ್ ಶಮಿ ಅವರು ಗುಜರಾತ್​ ಟೈಟಾನ್ಸ್​ ತಂಡದ ಆಟಗಾರನಾಗಿದ್ದು ಈ ಬಾರಿ ತಂಡವನ್ನು ಶುಭಮನ್​ ಗಿಲ್​ಮುನ್ನಡೆಸುತ್ತಿದ್ದಾರೆ. ಈ ಹಿಂದೆ ನಾಯಕನಾಗಿದ್ದ ಹಾರ್ದಿಕ್​ ಪಾಂಡ್ಯ ಮುಂಬೈ ತಂಡ ಸೇರಿದ್ದಾರೆ. ಉತ್ತಮ ಬೌಲಿಂಗ್​ ಫಾರ್ಮ್​ನಲ್ಲಿದ್ದ ಶಮಿ ಅವರು ಐಪಿಎಲ್​ನಿಂದ ಹಿಂದೆ ಸರಿದರೆ ಗುಜರಾತ್​ ತಂಡಕ್ಕೆ ಭಾರಿ ಹಿನ್ನಡೆಯಾಗುವುದು ಖಚಿತ. ಏಕೆಂದರೆ ಅನುಭವಿಯಾಗಿ ತಂಡದಲ್ಲಿದ್ದ ಏಕೈಕ ವೇಗಿ ಅವರಾಗಿದ್ದರು.​

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version