Site icon Vistara News

ರಣಜಿ ಟ್ರೋಫಿಯಲ್ಲಿ ತರಗೆಲೆಯಂತೆ ವಿಕೆಟ್​ ಉದುರಿಸಿದ ಮೊಹಮ್ಮದ್​ ಶಮಿ ಸಹೋದರ

Mohammed Shamis Brother

ಕಾನ್ಪುರ: ಮೊನಚಾದ ಬೌಲಿಂಗ್​ ಮೂಲಕ ಏಕದಿನ ವಿಶ್ವಕಪ್‌ನಲ್ಲಿ ಸರ್ವಾಧಿಕ ವಿಕೆಟ್ ಕಿತ್ತಿದ್ದ ಟೀಮ್ ಇಂಡಿಯಾ ವೇಗಿ ಮೊಹಮದ್ ಶಮಿ(Mohammed Shami) ಸಹೋದರ ಮೊಹಮದ್ ಕೈಫ್​(Mohammed Kaif) ಕೂಡ ಇದೀಗ ಘಾತಕ ಬೌಲಿಂಗ್​ ಮೂಲಕ ಸುದ್ದಿಯಾಗಿದ್ದಾರೆ. ದೇಶೀಯ ರಣಜಿ ಟ್ರೋಫಿ(Ranji Trophy) ಟೂರ್ನಿಯಲ್ಲಿ ಕೇವಲ ಕೇವಲ 14 ರನ್​ಗೆ 4 ವಿಕೆಟ್​ ಕಿತ್ತು ಶಮಿಯ ಹಾದಿಯನ್ನೇ ಹಿಡಿದಿದ್ದಾರೆ.

ಬಂಗಾಳ ರಾಜ್ಯ ತಂಡದ ಪರ ಚೊಚ್ಚಲ ಬಾರಿ ಕಣಕ್ಕಿಳಿದ 27 ವರ್ಷದ ಮೊಹಮದ್ ಕೈಫ್ ತಮ್ಮ ಮೊದಲ ಪಂದ್ಯದಲ್ಲೇ ಬ್ಯಾಟಿಂಗ್​ ಮತ್ತು ಬೌಲಿಂಗ್​ನಲ್ಲಿ ಉತ್ಕೃಷ್ಟ ಮಟ್ಟದ ಆಟ ಪ್ರದರ್ಶಿಸುವ ಮೂಲಕ ಗಮನ ಸೆಳೆದಿದ್ದಾರೆ. ಅವರ ಪ್ರದರ್ಶನ ಕಾಣುವಾಗ ಶಮಿಯಂತೆ ಮುಂದಿನ ದಿನಗಳಲ್ಲಿ ಟೀಮ್ ಇಂಡಿಯಾ ಪರ ಆಡಿದರೂ ಅಚ್ಚರಿಯಿಲ್ಲ. 2021ರಲ್ಲಿ ಲಿಸ್ಟ್ ‘ಎ’ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಕೈಫ್​ ವಿಜಯ್ ಹಜಾರೆ ಟ್ರೋಫಿಯಲ್ಲಿ ಆಡಿದ 7 ಪಂದ್ಯಗಳಲ್ಲಿ 12 ವಿಕೆಟ್ ಕಬಳಿಸಿದ್ದಾರೆ.

ಉತ್ತರ ಪ್ರದೇಶ ವಿರುದ್ಧದ ಪಂದ್ಯದಲ್ಲಿ ಬೆಂಗಾಲ್​ ತಂಡದ ಪರ ಆಡಲಿಳಿದ ಮೊಹಮದ್ ಕೈಫ್ ಬ್ಯಾಟಿಂಗ್​ ಮತ್ತು ಬೌಲಿಂಗ್​ನಲ್ಲಿ ಆಲ್​ರೌಂಡರ್​ ಪ್ರದರ್ಶನ ತೋರುವ ಮೂಲಕ ತಂಡಕ್ಕೆ ಮುನ್ನಡೆ ತಂದುಕೊಟ್ಟಿದ್ದಾರೆ. ಅವರ ಬೌಲಿಂಗ್​ ದಾಳಿಗೆ ನಲುಗಿದ ಉತ್ತರ ಪ್ರದೇಶ ಬ್ಯಾಟರ್​ಗಳು ಬಡ ಬಡನೆ ವಿಕೆಟ್​ ಕಳೆದುಕೊಂಡಿದ್ದಾರೆ. 5.5 ಓವರ್​ ಎಸೆದ ಕೈಫ್​ ಕೇವಲ 14 ರನ್​ ಬಿಟ್ಟುಕೊಟ್ಟು 4 ಪ್ರಮುಖ ವಿಕೆಟ್​ ಉಡಾಯಿಸಿದರು. ಎದುರಾಳಿ ಯುಪಿ ಕೇವಲ
60 ರನ್​ಗೆ ಸರ್ವಪತನ ಕಂಡಿತು.

ಇದನ್ನೂ ಓದಿ IND vs AFG: ಇಂದಿನ ಪಂದ್ಯದಲ್ಲಿ ಕೊಹ್ಲಿ ನಿರ್ಮಿಸಬಹುದಾದ ದಾಖಲೆಗಳ ಪಟ್ಟಿ ಹೀಗಿದೆ

​ಬ್ಯಾಟಿಂಗ್​ನಲ್ಲಿಯೂ ಮಿಂಚಿದ ಕೈಫ್​ 9ನೇ ಕ್ರಮಾಂಕದಲ್ಲಿ ಕ್ರೀಸ್​ಗಿಳಿದು 4 ಬೌಂಡರಿ ಮತ್ತು 2 ಸಿಕ್ಸರ್​ ನೆರವಿನಿಂದ ಅಜೇಯ 45 ರನ್​ ಬಾರಿಸಿದರು. ಅವರ ಸಮಯೋಚಿತ ಬ್ಯಾಟಿಂಗ್​ನಿಂದ ಬೆಂಗಾಲ್ ತಂಡ 188 ರನ್​ ಗಳಿಸಿತು. ದ್ವಿತೀಯ ಇನಿಂಗ್ಸ್​ ಆರಂಭಿಸಿದ ಯುಪಿಗೆ ಮತ್ತೆ ಮೊಹಮದ್ ಕೈಫ್ ಆಘಾತವಿಕ್ಕಿದ್ದಾರೆ. ದ್ವಿತೀಯ ಇನಿಂಗ್ಸ್​ನಲ್ಲಿಯೂ ಕೈಫ್​ 3 ವಿಕೆಟ್​ ಕಿತ್ತಿದ್ದಾರೆ. ಒಟ್ಟಾರೆ ಶಮಿಯಂತೆ ಅವರ ಸಹೋದರನೂ ಕ್ರಿಕೆಟ್​ನಲ್ಲಿ ಮಿಂಚಲು ಆರಂಭಿಸಿದ್ದಾರೆ.

ಮೆಚ್ಚುಗೆ ವ್ಯಕ್ತಪಡಿಸಿದ ಶಮಿ


ಸಹೋದರ ಕ್ರಿಕೆಟ್​ ಪ್ರದರ್ಶನಕ್ಕೆ ಮೊಹಮ್ಮದ್​ ಶಮಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. “ದೀರ್ಘ ಹೋರಾಟದ ನಂತರ ನೀವು ಬಂಗಾಲಕ್ಕೆ ರಣಜಿ ಟ್ರೋಫಿ ಕ್ಯಾಪ್ ಪಡೆದುಕೊಂಡಿದ್ದೀರಿ. ಚೀಯರ್ಸ್!! ಉತ್ತಮ ಸಾಧನೆ !! ಅಭಿನಂದನೆಗಳು, ನಾನು ನಿಮ್ಮ ಉತ್ತಮ ಭವಿಷ್ಯವನ್ನು ಬಯಸುತ್ತೇನೆ! ನಿಮ್ಮ ಶೇ. 100ರಷ್ಟು ಕಠಿಣ ಪರಿಶ್ರಮವನ್ನು ಮುಂದುವರಿಸಿ ಮತ್ತು ಉತ್ತಮವಾಗಿ ಆಡಿ. ನಿಮ್ಮ ಪ್ರದರ್ಶನ ಕಂಡು ನನಗೆ ಅಪಾರ ಸಂತಸವಾಗಿದೆ. ಇನ್ನು ದೊಡ್ಡ ಸಾಧನೆ ಮಾಡುವಂತ ಶಕ್ತಿ ಮತ್ತು ಸಾಮರ್ಥ್ಯವನ್ನು ದೇವರು ನಿಮಗೆ ಕರುಣಿಸಲಿ” ಎಂದು ಶಮಿ ಟ್ವಿಟರ್​ ಎಕ್ಸ್​ನಲ್ಲಿ ಮೆಚ್ಚುಗೆ ಸೂಚಿಸಿದ್ದಾರೆ.

Exit mobile version