ನವ ದೆಹಲಿ : ಭೂಗತ ದೊರೆ ದಾವೂದ್ ಇಬ್ರಾಹಿಮ್ ಹಾಗೂ ೨೬/೧೧ ಮುಂಬಯಿ ದಾಳಿಯ ರೂವಾರಿ ಹಫೀಜ್ ಸಯೀದ್‌ನನ್ನು ಎಲ್ಲಿ ಬಚ್ಚಿಟ್ಟಿದ್ದೀರಿ, ಅವರಿಬ್ಬರನ್ನು ಯಾವಾಗ ಭಾರತಕ್ಕೆ ಬಿಟ್ಟುಕೊಡುತ್ತಿರಿ ಎಂಬಿತ್ಯಾದಿ ಪ್ರಶ್ನೆಗೆ ಪಾಕಿಸ್ತಾನದ ಫೆಡರಲ್ ಇನ್ವೆಸ್ಟಿಗೇಷನ್ ಏಜೆನ್ಸಿ (ಎಫ್‌ಐಎ) ಮುಖ್ಯಸ್ಥ ಮೊಹ್ಸಿನ್ ಭಟ್ ಕಕ್ಕಾಬಿಕ್ಕಿಯಾದ ಪ್ರಸಂಗ ನವದೆಹಲಿಯಲ್ಲಿ ಮಂಗಳವಾರ ನಡೆದಿದೆ. ಇಂಟರ್‌ಪೋಲ್‌ನ (Interpol) ೯೦ನೇ ಮಹಾಸಭೆಯಲ್ಲಿ ಪಾಲ್ಗೊಂಡಿದ್ದ ಅವರಿಗೆ ಈ ಸವಾಲುಗಳಿಗೆ ಉತ್ತರ ನೀಡಲು ಸಾಧ್ಯವಾಗಲಿಲ್ಲ.
ಪ್ರಗತಿ ಮೈದಾನದಲ್ಲಿ ಭಾನುವಾರ ನಡೆದ ಇಂಟರ್‌ಪೋಲ್ ಮಹಾಸಭೆಗೆ ವಿಶ್ವದ ಹಲವು ದೇಶಗಳ ತನಿಖಾ ಸಂಸ್ಥೆಯ ಮುಖಸ್ಥರು ಆಗಮಿಸಿದ್ದರು. ಸಭೆಯ ನೇತೃತ್ವ ವಹಿಸಿದ್ದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಅಪರಾಧಿಗಳು, ಭಯೋತ್ಪಾದಕರು ಹಾಗೂ ಭ್ರಷ್ಟಾಚಾರಿಗಳಿಗೆ ತ್ವರಿತಗತಿಯಲ್ಲಿ ರೆಡ್ ಕಾರ್ನರ್ ನೋಟಿಸ್ ನೀಡುವಂತೆ ಸಲಹೆ ನೀಡಿದರು. ಈ ಸಭೆ ಮುಗಿಸಿ ವಾಪಸಾಗುತ್ತಿದ್ದ ಮೊಹ್ಸಿನ್ ಭಟ್ ಅವರಿಗೆ ಪತ್ರಕರ್ತರು ಪ್ರಶ್ನೆಗಳ ಸುರಿಮಳೆಗೈದರು.
ಭಾರತದಲ್ಲಿ ವಿಧ್ವಂಸಕ ಕೃತ್ಯ ಎಸಗಿರುವ ದಾವೂದ್ ಇಬ್ರಾಹಿಮ್ ಹಾಗೂ ಮುಂಬಯಿ ಭಯೋತ್ಪಾದನಾ ಪ್ರಕರಣದ ರೂವಾರಿಯನ್ನು ಎಲ್ಲಿ ಬಚ್ಚಿಟ್ಟಿದ್ದೀರಿ. ಅವರನ್ನು ಯಾವಾಗ ಭಾರಕ್ಕೆ ಬಿಟ್ಟುಕೊಡುತ್ತೀರಿ. ಅವರ ಕುರಿತು ಸುಳಿವು ನೀಡುವುದು ಯಾವಾಗ ಎಂದೆಲ್ಲ ಪ್ರಶ್ನೆಗಳನ್ನು ಕೇಳಿದ್ದಾರೆ. ಏಕಾಏಕಿ ಎದುರಾದ ಹಲವು ಸವಾಲುಗಳನ್ನು ನಿಭಾಯಿಸಲು ಸಾಧ್ಯವಾಗದ ಹಾಗೂ ಸಿದ್ಧತೆ ಮಾಡಿಕೊಂಡು ಬರದ ಅವರು ಬಾಯಿ ಮೇಲೆ ಬೆರಳಿಟ್ಟು ಸುಮ್ಮನಾದರು.
ಪತ್ರಕರ್ತರಿಗೆ ಬೆದರಿ ಡೈನಿಂಗ್ ಹಾಲ್‌ನಲ್ಲಿ ಕುಳಿತಿದ್ದರು
ಸಭೆ ನಡೆಯುವ ಮೊದಲು ಎಲ್ಲ ದೇಶಗಳ ತನಿಖಾ ಸಂಸ್ಥೆಗಳ ಅಧಿಕಾರಿಗಳು ನೇರವಾಗಿ ಸಭಾಂಗಣಕ್ಕೆ ಪ್ರವೇಶ ಮಾಡಿ ಆಸೀನರಾಗಿದ್ದರು. ಆದರೆ ಎಫ್‌ಐಎ ಮುಖ್ಯಸ್ಥ ಮೊಹ್ಸಿನ್ ಅವರು ಪತ್ರಕರ್ತರನ್ನು ಎದುರಿಸಲು ಕಷ್ಟವಾಗಬಹುದು ಎಂದು ಡೈನಿಂಗ್ ಹಾಲ್‌ನಲ್ಲಿಯೇ ಕುಳಿತರು. ಎಲ್ಲ ಅಧಿಕಾರಿಗಳಿಗೆ ಡೈನಿಂಗ್ ಹಾಲ್‌ನಲ್ಲಿ ಔತಣ ಕೂಟ ಏರ್ಪಡಿಸಲಾಗಿತ್ತು. ನೇರವಾಗಿ ಅಲ್ಲಿಗೆ ಬಂದ ಮೊಹ್ಸಿನ್ ಭಟ್ ಊಟ ಮಾಡಿಕೊಂಡು ಅಲ್ಲೇ ಕಾಲ ಕಳೆದರು. ಪ್ರಧಾನಿ ನರೇಂದ್ರ ಮೋದಿ ಅವರು ಸಭಾಂಗಣ ಪ್ರವೇಶ ಮಾಡಿದ ಬಳಿಕ ಒಳಗೆ ಹೋಗಿ ನಿಗದಿತ ಜಾಗದಲ್ಲಿ ಆಸೀನರಾದರು.
ಇದನ್ನೂ ಓದಿ | Interpol General Assmebly | ರೆಡ್ ಕಾರ್ನರ್ ನೋಟಿಸ್ ಪ್ರಕ್ರಿಯೆ ವೇಗಗೊಳಿಸಲು ಪ್ರಧಾನಿ ಆಗ್ರಹ